ರಾಷ್ಟ್ರೀಯ ಸುರಕ್ಷತೆ ಕಡೆಗಣನೆ
ಕ.ಪ್ರ. ವಾರ್ತೆ ತುಮಕೂರು ಫೆ.19
ರಾಷ್ಟ್ರೀಯ ಸುರಕ್ಷತೆ ಕಡೆಗಣಿಸಲ್ಪಟ್ಟಿದ್ದು, ಬಹುತೇಕ ಎಲ್ಲ ಸರ್ಕಾರಗಳು ಈ ವಿಷಯದಲ್ಲಿ ಒಂದೇ ಧೋರಣೆ ಹೊಂದಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ ಎಂದು ತುಮಕೂರಿನ ಹಿರಿಯ ವಕೀಲ ಹಾಗೂ ಜಿಲ್ಲಾ ಸಿರಿಗನ್ನಡ ವೇದಿಕೆ ಗೌರವಾಧ್ಯಕ್ಷ ಎಸ್.ವಿ. ರವೀಂದ್ರನಾಥ ಠಾಗೂರ್ ವಿಷಾದಿಸಿದರು.
ತುಮಕೂರಿನ ಮಾರುತಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಎಬಿವಿಪಿ ವತಿಯಿಂದ ಏರ್ಪಾಟಾಗಿದ್ದ ರಾಷ್ಟ್ರೀಯ ಸುರಕ್ಷತೆ, ವೀಸಾ ವಿಷಯ ಕುರಿತ ಯುವ ಸಮೂಹ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.
ಅವಕಾಶ ಸಲ್ಲ: ವಿಶೇಷವಾಗಿ ಬಾಂಗ್ಲಾ, ಪಾಕಿಸ್ತಾನ, ಚೀನಾ ಗಡಿ ಭಾಗಗಳಿಂದ ನುಸುಳುಕೋರರು ಲಕ್ಷ-ಲಕ್ಷ ಸಂಖ್ಯೆಯಲ್ಲಿ ಆಗಮಿಸಿ, ಇಲ್ಲೇ ವಾಸ್ತವ್ಯ ಹೂಡಿರುವುದನ್ನು ನಿತ್ಯ ಮಾಧ್ಯಮಗಳು ಪ್ರಸಾರ ಮಾಡುತ್ತಲೇ ಇವೆ. ರಾಜಕೀಯ ಕಾರಣಗಳು, ಮತಬ್ಯಾಂಕ್ ಆಸೆಗಾಗಿ ವಿದೇಶಿ ನಿರಾಶ್ರಿತರನ್ನು ದೇಶದಲ್ಲೇ ಉಳಿಯಲು ಅವಕಾಶ ಕೊಡುವುದು ಸಲ್ಲದು ಎಂದ ಠಾಗೂರ್, ಇದರಿಂದ ಮತ್ತಷ್ಟು ಅನಾಹುತವಾಗುವ ಮೊದಲು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಭಾರತ ಸ್ವಾತಂತ್ರ್ಯಾ ನಂತರ 1965 ರವರೆಗೆ ಆಯಾಯ ರಾಜ್ಯಗಳೇ (ಗಡಿ ಪ್ರದೇಶದ ರಾಜ್ಯಗಳು) ಭಾರತದ ನೆರೆ ದೇಶಗಳಿಂದ ತಮ್ಮ ಗಡಿಗಳನ್ನು ಕಾಯ್ದುಕೊಳ್ಳುವ ಪದ್ಧತಿಯಿತ್ತು. ನಂತರ ನೆರೆ ರಾಷ್ಟ್ರಗಳ ಉಪಟಳವನ್ನು ಹತ್ತಿಕ್ಕಲು, ರಾಷ್ಟ್ರೀಯ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಬಿಎಸ್ಎಫ್ (ಬಾರ್ಡರ್ ಸೆಕ್ಯೂರಿಟಿ ಫೋರ್ಸ್) ರಚಿಸಲಾಯಿತು. ಈ ಬಿಎಸ್ಎಫ್ನ್ನು ಸೆಂಟ್ರಲ್ ಆರ್ಮಡ್ ಫೋರ್ಸ್ ಅಡಿ ಡಿ.1. 1965 ರಲ್ಲಿ ಅಸ್ತಿತ್ವಕ್ಕೆ ತರಲಾಗಿದೆ. ಬಿಎಸ್ಎಫ್ ನಲ್ಲಿ 2,40,000 ಪರ್ಸನಲ್ಗಳು, 186 ಬೆಟಾಲಿಯನ್ ಗಳಾಗಿ ಹಂಚಿಕೆಯಾಗಿ ಭಾರತದ ಗಡಿ ಕಾಯುವಲ್ಲಿ ನಿರತವಾಗಿವೆ. ಇದು ಜಗತ್ತಿನ ಅತಿ ದೊಡ್ಡ ಸಂಖ್ಯೆಯ ಗಡಿ ರಕ್ಷಣಾ ಪಡೆಯಾಗಿದೆ. ಸ್ಥಾಪಕ ಕೆ.ಎಫ್. ರುಸ್ತುಂಜೀ ಮೊದಲ ಮಹಾನಿರ್ದೇಶಕರಾಗಿದ್ದಾರೆ. ಗೃಹಖಾತೆ ಅಡಿಯಲ್ಲಿ ಬರುವ ಬಿಎಸ್ಎಫ್ನಲ್ಲಿ ಕರ್ತವ್ಯನಿರತ ಮಹಿಳಾ ಪಡೆಯೂ ಇದೆ. ಯುದ್ಧ, ತುರ್ತು ಪರಿಸ್ಥಿತಿ ಇತರೆ ಸಮಯಗಳಲ್ಲಿ ಬಿಎಸ್ಎಫ್ ತನ್ನ ಕಾರ್ಯಕ್ಷಮತೆಯಿಂದ ದೇಶದ ನಾಗರಿಕರ ಪ್ರಾಣ, ಆಸ್ತಿ-ಪಾಸ್ತಿಗಳನ್ನು ಕಾಪಾಡಿರುವ ಉದಾಹರಣೆಗಳನ್ನು ಠಾಗೂರ್ ನೀಡಿದರು.
20 ಕ್ಕೂ ಹೆಚ್ಚು ರೀತಿಯ ವೀಸಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಾಲ್ತಿಯಲ್ಲಿದ್ದು ವಿದೇಶಕ್ಕೆ ತೆರಳಲು ವೀಸಾ ಅತ್ಯಗತ್ಯವಾಗಿದೆ. ಆಯಾಯಾ ದೇಶಗಳ ನಿಯಮ ಪಾಲನೆಯ ಷರತ್ತಿನೊಡನೆ ತಾತ್ಕಾಲಿಕವಾಗಿಯಾಗಲಿ ಅಥವಾ ದೀರ್ಘಾವಧಿಯಲ್ಲಾಗಲೀ ನೆಲೆಸಲು ಸಿಗುವ ಅನುಮತಿ ಪತ್ರವೇ ವೀಸಾ ಎಂದು ಠಾಗೂರ್ ತಿಳಿಸಿದರು.
ನೈತಿಕತೆಯ ಗಡಿ ಮುಖ್ಯ: ದೇಶದ ಗಡಿಯಷ್ಟೇ ನೈತಿಕತೆಯ ಗಡಿಯೂ ಮುಖ್ಯ. ದೇಶದ ಗಡಿ ವಿದೇಶಿ ಶತ್ರುಗಳನ್ನು ತಡೆಗಟ್ಟಬಹುದಾದರೆ, ನೈತಿಕತೆ ಸ್ವದೇಶಿ ಶತ್ರುಗಳಿಗೆ ಎಚ್ಚರಿಕೆ ನೀಡುವ ಬ್ರಹ್ಮಾಸ್ತ್ರವಾಗಿದೆ. ಆದರೆ ಇಂದು ನೈತಿಕತೆಯನ್ನು ಬಹುತೇಕ ಕಡೆಗಣಿಸಲಾಗುತ್ತಿದ್ದು, ಸ್ವಾರ್ಥದ ಪರಮಾವಧಿ ತಲುಪಲಾಗಿದೆ. ಇಂದಿನ ಶೈಕ್ಷಣಿಕ ಪದ್ಧತಿ ಕೇವಲ ಮಾಹಿತಿಗಳನ್ನು ಒದಗಿಸುವ ವ್ಯವಸ್ಥೆಯಾಗಿ ಬದಾಲಾಗಿದ್ದು, ಸೃಜನಾತ್ಮಕ ವ್ಯಕ್ತಿತ್ವವನ್ನು ರೂಪಿಸುವಲ್ಲಿ, ಪೂರ್ಣ ವಿಫಲವಾಗಿದೆ. ಪರಿಣಾಮ ನೈತಿಕತೆಯ ಗಡಿ ಮಾಯವಾಗಿದೆ. ನಾಗರಿಕರು
ಅಸ್ತಿತ್ವಕ್ಕಾಗಿ, ಮೂಲಭೂತ ಸೌಲಭ್ಯಗಳಿಗಾಗಿ ಸ್ವಾತಂತ್ರ್ಯಾ ನಂತರದ 6 ದಶಕಗಳ ನಂತರವೂ ಬಡಿದಾಡುವ ಸಂದರ್ಭ ಇಂದಿಗೂ ದೇಶದಲ್ಲಿರುವುದು ದೌಭಾರ್ಗ್ಯದ ಸಂಗತಿ. ಇಂತಹ ದುಸ್ಥಿತಿಯಲ್ಲಿ ಸಮಾಜ, ರಾಷ್ಟ್ರೀಯತೆ, ಗಡಿ ಕುರಿತಂತೆ ಸಾಮಾನ್ಯ ಜನತೆ ಚಿಂತಿಸಲು ಹೇಗೆ ಸಾಧ್ಯ ಎಂದು ಠಾಗೂರ್ ಮಾರ್ಮಿಕವಾಗಿ ಪ್ರಶ್ನಿಸಿದರು. ಜಾತಿ, ಧರ್ಮವೇ ಮುಖ್ಯವಾಗಿದೆ: ಗಡಿ ಪ್ರದೇಶದಲ್ಲಿ ಯೋಧರು ಜಾತಿ, ಧರ್ಮ ಸೇರಿದಂತೆ ಯಾವುದನ್ನೂ ಲೆಕ್ಕಿಸದೆ, ಪ್ರಾಣ ಪಣಕ್ಕಿಟ್ಟು ದಿನ ನಿತ್ಯ ಜೀವನ ಸಾಗಿಸುತ್ತಿದ್ದರೆ, ದೇಶದೊಳಗಡೆ ಜಾತಿ, ಧರ್ಮದ ಸಂಘರ್ಷ
ದಿನೇ-ದಿನೇ ವಿಪರೀತವಾಗುತ್ತಿದೆ. ಇದೊಂದು ಆತಂಕಕಾರಿ ಸಂಗತಿಯಾಗಿದ್ದು, ದೇಶದ ಆಂತರಿಕ ಭದ್ರತೆಗೆ ಸವಾಲೊಡ್ಡುವಂತಹ ವಿಷಯವಾಗಿದೆ. ಸ್ವಜನ ಪಕ್ಷಪಾತ, ಮನರಂಜನೆಯೇ ಜೀವನದ ಗುರಿ ಎಂದು ಭ್ರಮಿಸಿ ಸಾಗುತ್ತಿರುವುದು ಪುರಾತನ ನಾಗರಿಕತೆಯುಳ್ಳ ಭಾರತದ ದುರಂತವೇ ಸರಿ. ನೈತಿಕತೆಗೂ ಶಿಕ್ಷಣಕ್ಕೂ ಸಂಬಂಧವೇ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಣ ವ್ಯವಸ್ಥೆ ಕೇವಲ ಮಾಹಿತಿ ಸಂಗ್ರಹಕ್ಕಷ್ಟೇ ಒತ್ತು ನೀಡಿ, ಸೀಮಿತ ಆಲೋಚನೆ, ಮನೋಸ್ಥಿತಿ ಸೃಷ್ಟಿಸುತ್ತಿರುವ ಇಂದಿನ ಶಿಕ್ಷಣ, ಅನೈತಿಕತೆಯನ್ನು ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂಬ ಅನುಮಾನ ಕಾಡುತ್ತಿದೆ. ಆಸೆ ಬುರುಕುತನ, ಕೊಳ್ಳು ಬಾಕುತನದ ಇಂದಿನ ಜೀವನ ವಿಧಾನ ಕೌಟುಂಬಿಕ ವ್ಯವಸ್ಥೆ ದೇಶಕ್ಕೆ ಸವಾಲಾಗಿದ್ದು, ಆರೋಗ್ಯ, ಆಯುಷ್ಯವನ್ನು ಬಲಿತೆಗೆದುಕೊಳ್ಳುತ್ತಿದೆ ಎಂದು ಠಾಗೂರ್ ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ಕೆ.ಎಂ. ವೆಂಕಟೇಶ್ ಮಾತನಾಡಿ, ಯುವ ಪೀಳಿಗೆಯ ಜವಾಬ್ದಾರಿ, ಸಾಮಾಜಿಕ ಹೊಣೆಗಾರಿಕೆ ಕುರಿತಂತೆ ಮಾತನಾಡಿದರು. ವೇದಿಕೆಯಲ್ಲಿ ಅಮರೀಶ್, ರವಿಕುಮಾರ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ನಾಗರಿಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

