ತುಮಕೂರು

ಚಿ.ನಾ.ಹಳ್ಳಿ ತಾಲೂಕು ಸಾಹಿತ್ಯ ಸಮ್ಮೇಳನ ವಿಶಿಷ್ಟ ಆಚರಣೆಗೆ ಸಿದ್ಧತೆ

Published On :

ತುಮಕೂರು: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ 6 ನೇ ತಾಲೂಕು ಸಾಹಿತ್ಯ ಸಮ್ಮೇಳನ ವಿಭಿನ್ನ ಆಚರಣೆಗೆ ಸಿದ್ಧತೆ ನಡೆದಿದೆ. ಸಾಂಪ್ರದಾಯಿಕ ಜಾಡಿನಿಂದ ಹೊರ ಬಂದು ಸಾಹಿತ್ಯ ಸಮ್ಮೇಳನವನ್ನು ಫೆ. 22-23 ರಂದು ನಡೆಸಲು ತೀರ್ಮಾನಿಸಲಾಗಿದೆ.
ಮಾಮೂಲಿನಂತೆ ನಡೆಯುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಚಿ.ನಾ.ಹಳ್ಳಿ ಸಾಹಿತ್ಯ ಸಮ್ಮೇಳನದಲ್ಲಿ ಕೈ ಬಿಡಲಾಗಿದೆ. ಜೀವನದ ಮೂಲಾಧಾರವಾಗಿರುವ ಕೃಷಿ ಸಂಸ್ಕೃತಿ ನಿಲಕ್ಷ್ಯಕ್ಕೊಳಗಾಗಿರುವ ಸಂದರ್ಭದಲ್ಲಿ ಕೃಷಿ ಪರಿಕರಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವುದು ಸಮ್ಮೇಳನದ ವಿಶೇಷತೆಯಾಗಿದೆ. ಶ್ರಮ ಜೀವಿ ವರ್ಗ ಪ್ರತಿಬಿಂಬಿಸುವಂತೆ ಸಮ್ಮೇಳನ ಆಯೋಜಿಸಲಾಗುವುದು. ಸಮ್ಮೇಳನವನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಕೊಂಡೊಯ್ಯಲು ತೀರ್ಮಾನಿಸಿರುವುದು ಮತ್ತೊಂದು ವಿಶೇಷವಾಗಿದ್ದು, ಗೋಷ್ಠಿಗಳಲ್ಲಿ ರಾಜ್ಯದ ಖ್ಯಾತ ಸಾಹಿತಿ, ಚಿಂತಕರ ದಂಡೇ ನೆರೆಯುವುದು ಇನ್ನೊಂದು ವಿಶೇಷ.
ತಾಲೂಕು ಕಸಾಪ ಸಮ್ಮೇಳನ ಉದ್ಘಾಟಿಸಲು ಜ್ಞಾನಪೀಠ ಪ್ರಶಸ್ತಿ ಪುರಸೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಆಗಮಿಸುತ್ತಿರುವುದು ಇನ್ನೊಂದು ವಿಶೇಷ. ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನ ನೆನಪಿಸುವಂತಿವೆ
ತಾಲೂಕು ಸಮ್ಮೇಳನದ ಗೋಷ್ಠಿಗಳು. ಫೆ. 22 ರಂದು ಮಧ್ಯಾಹ್ನ 2 ಗಂಟೆಗೆ ಸಮ್ಮೇಳನದ ಪ್ರಧಾನ ವಿಚಾರ ಸಂಕಿರಣಕ್ಕೆ ಚಾಲನೆ ನೀಡಲಾಗುವುದು. ಗೋಷ್ಠಿ 1 ರಲ್ಲಿ ಸಾಮಾಜಿಕ ಸವಾಲುಗಳು - ಎದುರಿಸುವ ದಾರಿಗಳು ಕುರಿತ ವಿಚಾರ ಸಂಕಿರಣದಲ್ಲಿ ಕವಿ ಹಾಗೂ ಸಂಸ್ಕೃತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಬೆಂಗಳೂರು ವಿವಿ ಇತಿಹಾಸ ಪ್ರಾಧ್ಯಾಪಕಿ ಡಾ. ವಸು ಮಳಲಿ ಹಾಗೂ ಸಾಮಾಜಿಕ ಚಿಂತಕ ಪ್ರೊ. ಕೆ. ದೊರೈರಾಜ್ ವಿಷಯ ವಿಸ್ತರಿಸಲಿದ್ದಾರೆ. ಸಹ ಚಿಂತನೆಯನ್ನು ನವೋದಯ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಬಿ.ಎಸ್. ಬಸವಲಿಂಗಯ್ಯ, ಚಿಂತಕ ಚೇಳೂರು ವೆಂಕಟೇಶ್ ನಡೆಸಲಿದ್ದಾರೆ. ಅಧ್ಯಕ್ಷತೆಯನ್ನು ರಾಜಕೀಯ ವಿಶ್ಲೇಷಕ ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ವಹಿಸಲಿದ್ದಾರೆ.
2 ನೇ ಗೋಷ್ಠಿ ಅಂದು ಸಂಜೆ 4 ಗಂಟೆಗೆ ಏರ್ಪಾಟಾಗಿದೆ. ಕರ್ನಾಟಕದ ಸಾಂಸ್ಕೃತಿಕ ಸವಾಲುಗಳು - ಸ್ತೀ ನೋಟ ಕುರಿತಂತೆ ವಿಶೇಷ ಸಂವಾದ ನಡೆಯಲಿದೆ. ಸಂಸ್ಕೃತಿ ಚಿಂತಕಿ ಹಾಗೂ ಕುವೆಂಪು ವಿವಿ ಕುಲಸಚಿವೆ ಡಾ. ಮಲ್ಲಿಕಾ ಘಂಟಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಚಿಂತಕಿ ಪ್ರೊ. ತಾರಿಣಿ ಶುಭದಾಯಿನಿ, ಕವಯತ್ರಿ ಅಕ್ಷತಾ ಹುಂಚದಕಟ್ಟೆ, ಪರಿಸರ ಚಿಂತಕಿ ಪ್ರೊ. ಎನ್. ಇಂದಿರಮ್ಮ ಸಂವಾದ ವಿಸ್ತರಿಸಲಿದ್ದಾರೆ. ಸಂವಾದಕ್ಕೆ ಚಾಲನೆ ನೀಡಿ ಮುನ್ನೋಟ ನೀಡಲಿದ್ದಾರೆ ಕವಯತ್ರಿ, ನ್ಯಾಯವಾದಿ ವಿ.ಕೆ. ಸಂಜ್ಯೋತಿ. ಸಂಜೆ 5-45 ಕ್ಕೆ ಕವಿ ಮೇಳ ಏರ್ಪಾಟಾಗಿದ್ದು, ಅಧ್ಯಕ್ಷತೆಯನ್ನು ಕವಿ ಹಾಗೂ ಸಂಸ್ಕೃತಿ ಚಿಂತಕ ಪ್ರೊ. ಕೆ.ಬಿ. ಸಿದ್ದಯ್ಯ ವಹಿಸಲಿದ್ದಾರೆ. ಕವಿ ಎಸ್. ಗಂಗಾಧರಯ್ಯ ಕಾವ್ಯ ಚಿಂತನೆ ನಡೆಸಲಿದ್ದಾರೆ.
ಫೆ. 23 ರಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕದ ರಾಜಕೀಯ-ಸಾಮಾಜಿಕ ಬಿಕ್ಕಟ್ಟುಗಳು (ಸಾಹಿತ್ಯ, ಸಿನಿಮಾ, ರಂಗಭೂಮಿ ನೋಟ) ಕುರಿತು ವಿಚಾರ ಸಂಕಿರಣ ಏರ್ಪಾಟಾಗಿದೆ. ಸಂಸ್ಕೃತಿ ವಿಮರ್ಶಕ ಹಾಗೂ ಕತೆಗಾರ
ಕನ್ನಡ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ. ಮೊಗಳ್ಳಿ ಗಣೇಶ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಿನಿಮಾ ನಿರ್ದೇಶಕ ಹಾಗೂ ಕಥೆಗಾರ ಕೃಷ್ಣ ಮಾಸಡಿ ಸಿನಿಮಾ  ನೋಟ ನೀಡಲಿದ್ದಾರೆ. ರಂಗ ನಿರ್ದೇಶಕ  ನಟರಾಜ ಹೊನ್ನವಳ್ಳಿ ರಂಗ ನೋಟ ನೀಡಲಿದ್ದಾರೆ. ಕವಿ ಹಾಗೂ ನಾಟಕಕಾರ ಡಾ.ಕೆ.ವೈ. ನಾರಾಯಣಸ್ವಾಮಿ ನಾಟಕಕಾರನ ನೋಟ ನೀಡಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ 4 ನೇ ಗೋಷ್ಠಿ ಏರ್ಪಾಟಾಗಿದೆ. ಸಮಕಾಲೀನ ಕರ್ನಾಟಕದಲ್ಲಿ ಮಾಧ್ಯಮಗಳ ಪಾತ್ರ ಕುರಿತು ಮುಕ್ತ ಸಂವಾದ ಏರ್ಪಾಟಾಗಿದೆ. ಪತ್ರಕರ್ತ, ರಾಜಕೀಯ ವಿಶ್ಲೇಷಕ ಪ್ರೊ. ರವೀಂದ್ರ ರೇಷ್ಮೆ, ಸುವರ್ಣ ನ್ಯೂಸ್ನ ಲಕ್ಷ್ಮಣ ಹೂಗಾರ್, ಪತ್ರಕರ್ತರಾದ ಉಗಮ ಶ್ರೀನಿವಾಸ್, ಕೆ. ಕರಿಸ್ವಾಮಿ, ಸಂಸ್ಕೃತಿ ಚಿಂತಕ ಡಾ. ರಘುಪತಿ ಸಂವಾದದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಸಂವಾದಕ್ಕೆ ಚಾಲನೆ ನೀಡಿ ಮುನ್ನೋಟ ನೀಡಲಿದ್ದಾರೆ ಸುವರ್ಣ ನ್ಯೂಸ್ನ ಬಿ.ಸಿ. ಭಾನುಮತಿ. ಮಧ್ಯಾಹ್ನ 2 ಗಂಟೆಗೆ ಹೊಸ ಕರ್ನಾಟಕವನು ಕಟ್ಟೋಣ - ಮುನ್ನೋಟ ಗೋಷ್ಠಿ ಏರ್ಪಾಟಾಗಿದೆ. ಯುವ ರಾಜಕೀಯ ಮುಖಂಡ ರವಿಕೃಷ್ಣಾರೆಡ್ಡಿ, ಸಂಸ್ಕೃತಿ ಚಿಂತಕ  ಆಣೆಕಟ್ಟೆ ವಿಶ್ವನಾಥ್, ಅರ್ಥಶಾಸ್ತ್ರಜ್ಞ ಎಸ್.ಆರ್. ಕೇಶವ, ಮಾಹಿತಿ ತಂತ್ರಜ್ಞಾನ ವಿಶ್ಲೇಷಕ ಎನ್.ಎ.ಎಂ. ಇಸ್ವಾಯಿಲ್ ಕವಿ, ಕೃಷ್ಣಮೂರ್ತಿ ಬಿಳಿಗೆರೆ ಪಾಲ್ಗೊಳ್ಳಲ್ಲಿದ್ದಾರೆ. ಅಧ್ಯಕ್ಷತೆಯನ್ನು ದಲಿತ ಚಳವಳಿಯ ಮುಖಂಡ ಮಾವಳ್ಳಿ ಶಂಕರ್ ವಹಿಸಲಿದ್ದಾರೆ.
ಸಂಜೆ 4 ರಿಂದ 5 ರವರೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಾಟಾಗಿದೆ.
ಸಮಾರೋಪ ಸಮಾರಂಭ ಸಂಜೆ 5-15 ಕ್ಕೆ ಏರ್ಪಾಟಾಗಿದೆ. ಚಿಂತಕ, ನಟ, ಪ್ರಾಧ್ಯಾಪಕ  ಪ್ರೊ.ಜಿ. ಕೆ. ಗೋವಿಂದರಾವ್ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕವಿ ಡಾ.ಎಲ್. ಹನುಮಂತಯ್ಯ ಪಾಲ್ಗೊಳ್ಳಲ್ಲಿದ್ದಾರೆ. ಅಧ್ಯಕ್ಷತೆಯನ್ನು ತಾಕಸಾಪ ಉಪಾಧ್ಯಕ್ಷೆ ಪುಷ್ಪಾ ಶಿವಣ್ಣ ವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.