ವೈಚಾರಿಕ ಕರ್ನಾಟಕ ನಿರ್ಮಿಸೋಣ...
ಕನ್ನಡಪ್ರಭ ವಾರ್ತೆ ತುಮಕೂರು ಫೆ.22
ವೈಚಾರಿಕ ಕರ್ನಾಟಕವನ್ನು ನಿರ್ಮಿಸುವ ಕಡೆ ಕಾರ್ಯಪ್ರವೃತ್ತರಾಗುವ ಆಶಯವನ್ನು ಡಾ. ನಟರಾಜ್ ಹುಳಿಯಾರ್ ವ್ಯಕ್ತಪಡಿಸಿದರು.
ಅವರು ಚಿಕ್ಕನಾಯಕನಹಳ್ಳಿಯಲ್ಲಿ ನಡೆದ 6ನೇ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಮೇಲಿನಂತೆ ನುಡಿದರು. ಇವತ್ತು ನಾವು ವೈಚಾರಿಕ ಕರ್ನಾಟಕವನ್ನು ಕಟ್ಟುವ ಕನಸಿಗೆ ಮತ್ತೆ ಮರಳಿದ್ದೇವೆ. ಈ ಹಂತದಲ್ಲಿ ನಮ್ಮ ಎಳೆಯ ಹುಡುಗ, ಹುಡುಗಿಯರ ವ್ಯಕ್ತಿಪ್ರಜ್ಞೆ ನೆಲೆಯಲ್ಲೂ ವೈಚಾರಿಕತೆಯ ಸ್ಫೋಟವಾಗುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ವೈಚಾರಿಕ ಕರ್ನಾಟಕವನ್ನು ರೂಪಿಸಬೇಕಾಗುತ್ತದೆ ಎಂದು ತಿಳಿಸಿದರು.
ವಚನ ಸಾಹಿತ್ಯದ ಬಿಡಿಬಿಡಿ ಒಳನೋಟಗಳಿಂದ ಅಥವಾ ಕುವೆಂಪು, ಕಾರಂತ, ಲಂಕೇಶ್ ಥರದವರ ಒಂದೊಂದು ಬರಹದಿಂದ ವಿಚಾರವಂತರಾದ ಲಕ್ಷಾಂತರ ಮಂದಿ ಕನ್ನಡ ನಾಡಿನಲ್ಲಿದ್ದಾರೆ. ಆದ್ದರಿಂದ ಸಾಹಿತ್ಯದ ಮೂಲಕ ವೈಚಾರಿಕ ಸ್ಫೋಟವನ್ನು ಉಂಟು ಮಾಡುವ ಮಹತ್ವದ ಮಾರ್ಗವನ್ನು ನಾವು ಮರೆಯಬಾರದು ಎಂದರು. ಕಳೆದ ಹಲವು ದಶಕಗಳ ನಡುವೆ ಕರ್ನಾಟಕದಲ್ಲೂ ಅನೇಕ ವೈಚಾರಿಕ ಬದಲಾವಣೆಗಳಾದವು. ಈ
ಸಕಾರಾತ್ಮಕ ಬದಲಾವಣೆಗಳ ಹಿಂದೆ ಸಮಾಜವಾದಿ, ದಲಿತ, ರೈತ, ಸ್ತ್ರೀವಾದಿ ಹಾಗೂ ಜಾತ್ಯತೀತ ಚಳವಳಿಗಳ ಕೊಡುಗಡೆಯ ಜತೆಗೆ ಕನ್ನಡ ಸಾಹಿತ್ಯದ ಪಾಲು ದೊಡ್ಡದಿದೆ ಎಂದರು.
ಮನಸ್ಸು ಮಾಗುತ್ತದೆ: ನವೋದಯ ಸಾಹಿತ್ಯದಿಂದ ನಮ್ಮ ಮನಸ್ಸು ಮಾಗುತ್ತದೆ. ವಿಶಾಲವಾಗುತ್ತದೆ, ಕ್ಷುದ್ರತೆಯನ್ನು ಮೀರುವುದನ್ನು ಕಲಿಸುತ್ತದೆ. ನವ್ಯ ಸಾಹಿತ್ಯದಿಂದ ನಮ್ಮನ್ನು ನಾವು ಪರೀಕ್ಷೆ ಮಾಡಿಕೊಳ್ಳುವ, ನಡೆ ನುಡಿಗಳ ನಡುವಿನ ಕ್ರೌರ್ಯ ಹಾಗೂ ದಲಿತರ ಎಣೆಯಿಲ್ಲದ ದುಃಖವನ್ನು ದಲಿತ ಸಾಹಿತ್ಯದ ಮೂಲಕ ಅರಿಯತೊಡಗುತ್ತೇವೆ. ಬಂಡಾಯ ಸಾಹಿತ್ಯದಿಂದ ವಿವಿಧ ಜನವರ್ಗಗಳ ಯಾತನೆ ಹಾಗೂ ಪ್ರತಿಭಟನೆ ನಮ್ಮೊಳಗೆ ಇಳಿಯತೊಡಗುತ್ತದೆ ಎಂದು ವಿಶ್ಲೇಷಿಸಿದರು.
ನಂಬಿಕೆ ಬೆಳೆಲಿಕೊಳ್ಳಬೇಕು: ಹಾಗೆಯೇ ಸ್ತ್ರೀವಾದಿ ಸಾಹಿತ್ಯವನ್ನು ಓದುತ್ತಾ ಸ್ತ್ರೀಯರು ತಮ್ಮ ಹಕ್ಕಿನ ಅರಿವು ಪಡೆದುಕೊಳ್ಳುತ್ತಾರೆ. ಪುರುಷರಲ್ಲಿ ಸ್ತ್ರೀಯರನ್ನು ಸಮಾನವಾಗಿ ಕಾಣಬೇಕೆಂಬ ಪ್ರಜ್ಞೆ ಬೆಳೆಯತೊಡಗುತ್ತದೆ ಎಂದರು. ಸಾಹಿತ್ಯ ಕೃತಿಗಳು ಮೆಲ್ಲಮೆಲ್ಲಗೆ ಪ್ರತಿ ವ್ಯಕ್ತಿಯ ಒಳಗಿಳಿದು ಪ್ರಜ್ಞೆಯನ್ನು ಬದಲಿಸುವ ಈ ಅನನ್ಯ ಪರಿಯ ಬಗ್ಗೆ ಇವತ್ತು ನಾವೆಲ್ಲಾ ಇನ್ನಷ್ಟು ನಂಬಿಕೆ ಬೆಳೆಸಿಕೊಳ್ಳಬೇಕಾಗುತ್ತದೆ. ಅದರಲ್ಲೂ ಸಮೂಹ ಮಾಧ್ಯಮಗಳ ಅವಸರ ಹಾಗೂ ಅಬ್ಬರಗಳ ಈ ಕಾಲದಲ್ಲಿ ಈ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾಗುತ್ತದೆ ಎಂದರು.
ಕರ್ನಾಟಕದಲ್ಲಿ ಮತೀಯತೆ, ಕಂದಾಚಾರಗಳ ವಿರುದ್ಧ ಮತ್ತೊಂದು ಸುತ್ತಿನ ವೈಚಾರಿಕ ಮುಖಾಮುಖಿ ಆರಂಭವಾಗಿದೆ. ಈ ಅರ್ಥಪೂರ್ಣ ಕಥನದಲ್ಲಿ ಹೊಸ ತಲೆಮಾರಿನ ಲೇಖಕ, ಲೇಖಿಯರು ದೊಡ್ಡ ಮಟ್ಟದಲ್ಲಿ ಭಾಗಿಯಾಗಿ ವೈಚಾರಿಕ ಕರ್ನಾಟಕ ರೂಪಿಸಬೇಕಾಗಿದೆ ಎಂದರು.
ಸಾಮಾಜಿಕ ಚಳವಳಿಗಳ ಮೂಲಕ ಸಾಮಾಜಿಕ ಚಲನೆ, ವೈಚಾರಿಕ ಚಳವಳಿಗಳ ಮೂಲಕ ಮಾನವ ಪ್ರಜ್ಞೆಯ ಆರೋಗ್ಯಕರ ವಿಕಾಸ ಎಂಬ ಸರಳ ಸತ್ಯವನ್ನು ನಾವು ಒತ್ತಿಹೇಳಬೇಕಾಗುತ್ತದೆ ಎಂದರು.
ಹೆಡೆ ಎತ್ತಿದ ಠೇಂಕಾರ: ನಾವಿರುವ ಈ ಕಾಲವನ್ನು ಜಗತ್ತಿನಲ್ಲಿ ತೆರೆಯುಗ ಎಂದು ಕರೆಯುತ್ತಾರೆ. ಈ ತೆರೆ ಯುಗದಲ್ಲಿ ಯಥಾಸ್ಥಿತಿವಾದಿಗಳು ಕಂದಾಚಾರವನ್ನು ಮಾರುಕಟ್ಟೀಕರಣ ಮಾಡುವ ದೊಡ್ಡ ಹುನ್ನಾರ ಶುರು ಮಾಡಿದ್ದಾರೆ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಠೇಂಕಾರ ಹೆಡೆಯೆತ್ತಿದೆ ಎಂದರು.
ಸಾವಿರ ವರ್ಷಗಳ ಕನ್ನಡ ಸಾಹಿತ್ಯದ ಒಟ್ಟು ಬೆಳಕಿನಲ್ಲಿ ಹಾಗೂ ಕರ್ನಾಟಕದ ಆರೋಗ್ಯಕರ ಚಳವಳಿಗಳ ಸತ್ವದ ಮೂಲಕ ಜಾತಿಭೇದ, ಲಿಂಗಭೇದ, ಧರ್ಮಭೇದ ಹಾಗೂ ವರ್ಗಭೇದಗಳಿಲ್ಲದ ಸಮಾನತೆಯ ವೈಚಾರಿಕ ಕರ್ನಾಟಕಮೊಂದನ್ನು ರೂಪಿಸೋಣ. ಕರ್ನಾಟಕದ ಹೊಸ ತಲೆಮಾರು ಈ ದಿಕ್ಕಿನಲ್ಲಿ ಒಂದು ದಿಟ್ಟ ನಿರ್ಧಾರ ಮಾಡಿ ಹೊರಟರೆ ಈ ಗುರಿ ಇಲ್ಲೇ ನಮ್ಮ ಕಣ್ಣಳತೆಯಲ್ಲೇ ಇರುತ್ತದೆ ಎಂದು ತಿಳಿಸಿದರು.
ಸಾಹಿತ್ಯದ ನಿರಂತರ ಸಖ್ಯ ಅಗತ್ಯ
ತುಮಕೂರು: ಸಾಹಿತ್ಯದ ನಿರಂತರ ಸಖ್ಯದಿಂದ ಪಡೆದ ಎಲ್ಲಾ ಬಗೆಯ ಸೂಕ್ಷ್ಮತೆಯನ್ನು ನಮ್ಮ ಚಳವಳಿಗಳಿಗೆ, ವೃತ್ತಿಗಳಿಗೆ ತರಬೇಕು ಎಂದು ನಟರಾಜ್ ಹುಳಿಯಾರ್ ಅಭಿಪ್ರಾಯಪಟ್ಟರು. ಅವರು ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು. ನಮ್ಮ ಚಿಂತನೆಯ ಜ್ಞಾನ ನಮ್ಮ ರೈತರಿಗೆ, ದುಡಿಯುವ ವರ್ಗಕ್ಕೆ, ರಾಜಕಾರಣಕ್ಕೆ ತಲುಪಬೇಕಾಗುತ್ತದೆ.
90 ರ ದಶಕದಲ್ಲಿ ಕರ್ನಾಟಕದಲ್ಲಿ ಬಹುತೇಕ ಚಿಂತಕ, ಚಿಂತಕಿಯರು ಜಾಗತೀಕರಣದ ಬಗ್ಗೆ ಅಸ್ಪಷ್ಟವಾಗಿ ಯೋಚಿಸುತ್ತಿದ್ದಾಗ ನಮ್ಮ ಶ್ರೇಷ್ಠ ಬುದ್ಧಿಜೀವಿ ನಾಯಕರಾದ ಎಂ.ಡಿ. ನಂಜುಂಡಸ್ವಾಮಿಯವರ ಹಳ್ಳಿಗಳ ಹಾಗೂ ರೈತರ ದೃಷ್ಟಿಯಿಂದ ಜಾಗತೀಕರಣವನ್ನು ವಿಶ್ಲೇಷಿಸಿ ಜಗತ್ತು ಜಾಗತೀಕರಣವನ್ನು ಹೇಗೆ ಎದುರಿಸಬೇಕು ಎಂಬುದನ್ನು ಹೇಳಿಕೊಟ್ಟರು ಎಂದರು. ಎಂ.ಡಿ. ನಂಜುಂಡಸ್ವಾಮಿ ಅವರು ಆವತ್ತು ನಿರ್ವಹಿಸಿದ ಈ ಬೌದ್ಧಿಕ ಕರ್ತವ್ಯ ನಾವು ಪಡೆಯುವ ಹೊಸ ಲೋಕಜ್ಞಾನಗಳು ಸಮುದಾಯದ ಉಳಿವಿಗಾಗಿ ಹರಿದು ಬರಬೇಕು ಎಂದರು. ಬಿ.ಕೃಷ್ಣಪ್ಪನವರ ಜೊತೆಜೊತೆಗೆ ದಲಿತ ಚಿಂತಕರು, ಕಾರ್ಯಕರ್ತರು, ದಲಿತ ಚಿಂತನೆಯನ್ನು ಹಬ್ಬಿಸಿದ ರೀತಿಯಿಂದ ಕೂಡ ಇಲ್ಲಿ ವೈಚಾರಿಕತೆ ನೆಲೆಯೂರಿತು ಎಂಬುದನ್ನು ನಾವು ಮರೆಯಬಾರದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

