ಚಿರತೆ ದಾಳಿ; ರೈತನಿಗೆ ತೀವ್ರ ಗಾಯ
ತುರುವೇಕೆರೆ: ತಾಲೂಕಿನ ಕಡೇಹಳ್ಳಿ ಬಳಿಯ ಇಳ್ಳೇನಹಳ್ಳಿ ಕಾವಲ್ನ ಪೊದರೆಯಲ್ಲಿ ಅವಿತು ಕುಳಿತಿದ್ದ ಚಿರತೆ ರೈತನ ಮೇಲೆ ದಾಳಿ ಮಾಡಿದ ಘಟನೆ ವರದಿಯಾಗಿದೆ.
ಕಡೇಹಳ್ಳಿ ಗ್ರಾಮದ ನಂಜುಂಡಯ್ಯ(40) ಕೂಲಿಗಾಗಿ ಇಳ್ಳೇನಹಳ್ಳಿ ಕಾವಲ್ನ ಲಕ್ಷ್ಮಣ ಎಂಬುವವರ ತೋಟದಲ್ಲಿದ್ದ ಸೀಬೇ ಗಿಡಗಳಿಗೆ ನೀರು ಹಾಕಲು ಶನಿವಾರ ಮಧ್ಯಾಹ್ನ ತೆರಳಿದ್ದಾರೆ. ಆ ವೇಳೆ ನಂಜುಂಡಯ್ಯನವರೊಂದಿಗೆ ಬಂದಿದ್ದ ಅವರ ಸಾಕುನಾಯಿ ಪೊದೆಯ ಕಡೆ ನೋಡುತ್ತಾ ಬೊಗಳತೊಡಗಿದೆ. ನಾಯಿ ವಿಪರೀತವಾಗಿ ಬೊಗಳುವುದನ್ನು ಗಮನಿಸಿದ ನಂಜುಂಡಯ್ಯ ನಾಯಿ ಮುಖ ಮಾಡಿ ಬೊಗಳುತ್ತಿದ್ದ ಪೊದರಿನ ಕಡೆ ತೆರಳುತ್ತಿದ್ದಂತೆ ಪೊದೆಯೊಳಗೆ ಅಡಗಿ ಕುಳಿತಿದ್ದ ಚಿರತೆ ದಿಢೀರನೇ ನಂಜುಂಡಯ್ಯನವರ ಮೇಲೆ ದಾಳಿ ಮಾಡಿದೆ. ಚಿರತೆ ನಂಜುಂಡಯ್ಯನವರ ತಲೆ ಹಾಗೂ ಕಿವಿಯನ್ನು ಕಚ್ಚಿ ಗಾಯಗೊಳಿಸಿದೆ. ದಾಳಿ ಮಿತಿ ಮೀರಿದಾಗ ಪ್ರಾಣಭಯವನ್ನೂ ಲೆಕ್ಕಿಸದ ನಂಜುಂಡಯ್ಯ ಚಿರತೆಯ ಬಾಯಿಗೆ ಕೈಯನ್ನು ಹಾಕಿ ಚಿರತೆಗೂ ಗಾಯ ಮಾಡಿದ್ದಾರೆ. ತೀವ್ರವಾಗಿ ಘಾಸಿಗೊಂಡ ಚಿರತೆ ಓಡಿ ಹೋಗಿದೆ.
ಗಾಯಗೊಂಡ ನಂಜುಂಡಯ್ಯನನ್ನು ಗಮನಿಸಿದ ಅಕ್ಕಪಕ್ಕದ ಜಮೀನಿನಲ್ಲಿದ್ದ ಜನರು ಬಂದು ಸಂತೈಸಿದ್ದಾರೆ. ಕೂಡಲೇ 108ಕ್ಕೆ ಕರೆ ಮಾಡಿ ನಂಜುಂಡಯ್ಯನವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಕಿವಿ ಹಾಗೂ ತಲೆಗೆ ತೀವ್ರ ಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಚಿಕಿತ್ಸೆ ನೀಡಿದ ಡಾ.ಗಾಯತ್ರಿ ತಿಳಿಸಿದ್ದಾರೆ.
ಕ್ರಮಕ್ಕೆ ಆಗ್ರಹ: ಇತ್ತೀಚೆಗೆ ಗ್ರಾಮಾಂತರ ಪ್ರದೇಶದಲ್ಲಿ ಚಿರತೆಯ ಕಾಟ ಅತಿಯಾಗಿದೆ. ತಮ್ಮ ಗ್ರಾಮದ ಸಮೀಪವೇ ಇರುವ ಗೋಣಿತುಮಕೂರು, ದೇವಿಹಳ್ಳಿ, ನಡುವನಹಳ್ಳಿ ಮೊದಲಾದ ಕಡೆ ಚಿರತೆಯ ಕಾಟ ಇದ್ದು ಅರಣ್ಯ ಇಲಾಖಾ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಚಿರತೆಯನ್ನು ಸೆರೆಹಿಡಿಯಬೇಕು ಎಂದು ತಾಲೂಕು ಪಂಚಾಯ್ತಿಯ ಮಾಜಿ ಸದಸ್ಯ ಹಾಗೂ ತಾಲೂಕು ಪಡಿತರ ವಿತರಕರ ಸಂಘದ ಅಧ್ಯಕ್ಷ ಕಡೇಹಳ್ಳಿ ರಾಮಚಂದ್ರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ನಂಜುಂಡಯ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

