ತುಮಕೂರು

ನಗರಕ್ಕೆ 24 ಗಂಟೆ ಕುಡಿಯುವ ನೀರು

Published On :

ತುಮಕೂರು: ತುಮಕೂರು ನಗರಕ್ಕೆ ವರ್ಷದ 365 ದಿನ, ದಿನದ 24 ಗಂಟೆ ನಿರಂತರ ಕುಡಿಯುವ ನೀರು ಸರಬರಾಜು ಮಾಡಲು ಕೇಂದ್ರದ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆಯಿಂದ ಯೋಜನೆ ಮಂಜೂರಾಗಿದ್ದು, ಲೋಕಸಭಾ ಚುನಾವಣೆಯ ನಂತರ ಯೋಜನೆಗೆ ಚಾಲನೆ ದೊರೆಯಲಿದೆ ಎಂದು ತುಮಕೂರು ನಗರ ಶಾಸಕ ಡಾ.ಎಸ್.ರಫೀಕ್ ಅಹಮದ್ ತಿಳಿಸಿದರು.
ಅವರು ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕರಾದ ನಂತರ ನಗರವನ್ನು ಎಲ್ಲ ವಿಭಾಗದಿಂದಲೂ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೇಂದ್ರಕ್ಕೆ ಹಲವು ಯೋಜನೆಗಳಿಂದ ಅನುದಾನ ಕೋರಿ
ಮನವಿ ಸಲ್ಲಿಸಿದ್ದೇನೆ. ಕೇಂದ್ರದ ಸಣ್ಣ ಮತ್ತು ಮದ್ಯಮ ಪಟ್ಟಣಗಳ ಮೂಲಭೂತ ಅಭಿವೃದ್ಧಿ ಯೋಜನೆಯಡಿಯಲ್ಲಿ ನಗರಕ್ಕೆ ಕುಡಿಯುವ ನೀರು ಯೋಜನೆಗೆ 200.09 ಕೋಟಿ ರು. ಮಂಜೂರಾತಿ ದೊರೆತಿದೆ. ಈಗಾಗಲೇ ರಾಜ್ಯ ಸರ್ಕಾರಕ್ಕೆ ಈ ಹಣ ಬಂದಿದ್ದು, ಶೀಘ್ರದಲ್ಲಿಯೇ ನಗರದ ನಾಗರಿಕರಿಗೆ ನಿರಂತರ ಕುಡಿಯುವ ನೀರು ಯೋಜನೆಗೆ ಚಾಲನೆ ದೊರೆಯಲಿದೆ ಎಂದರು.
ನೀರಿಗೆ ಬರ ಇಲ್ಲ: ತುಮಕೂರು ನಗರದಲ್ಲಿ ಕುಡಿಯುವ ನೀರಿಗೆ ಈ ಬೇಸಿಗೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಉದ್ಬವಿಸದು ಹೇಮಾವತಿ ನಾಲೆಯಿಂದ ಅಗತ್ಯವಾಗಿರುವ ನೀರನ್ನು ಬುಗುಡನಹಳ್ಳಿ ಕೆರೆಯಲ್ಲಿ ಸಂಗ್ರಹಿಸಲಾಗಿದೆ. ಜತೆಗೆ ನೀರಿನ ಸಮಸ್ಯೆ ಬರದಂತೆ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ನೀರಿನ ಸಮಸ್ಯೆ ಎದುರಾಗಲಾರದು ಎಂದು ತಿಳಿಸಿದರು.
2005-16 ರಿಂದ ಮೆಡಿಕಲ್ ಕಾಲೇಜು: ತುಮಕೂರು ನಾಗರೀಕರ ಬಹುದಿನದ ಬೇಡಿಕೆಯಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜು 2015-16 ನೇ ಸಾಲಿನಿಂದ ಪ್ರಾರಂಭಿಸಲು ಭಾರತೀಯ ವೈದ್ಯಕೀಯ ಮಂಡಳಿ ಅನುಮತಿ ನೀಡಿದ್ದು, ಅರ್ಜಿ ಸಲ್ಲಿಸಲಾಗುವುದು ಎಂದರು.
ಈ ಬಾರಿಯ ಬಜೆಟ್ನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಬಜೆಟ್ನಲ್ಲಿ ಅನುಮೋದನೆ ಮಾಡಲಾಗಿದೆ. ಅಗತ್ಯವಾಗಿರುವ ಮೂಲಭೂತ ಸೌಲಭ್ಯಗಳಿಗಾಗಿ 200 ಕೋಟಿ ರೂ. ಸರ್ಕಾರ ಬಿಡುಗಡೆ ಮಾಡಲಿದ್ದು, ಪ್ರಾರಂಭಿಕವಾಗಿ 29 ಕೋಟಿ ರೂ. ಬಿಡುಗಡೆ ಮಾಡಲಿದೆ ಎಂದು ಹೇಳಿದರು.
ಈ ಹಿಂದಿನ ಸರ್ಕಾರದಲ್ಲಿ ಮೆಡಿಕಲ್ ಕಾಲೇಜಿಗೆ ಮಂಜೂರಾತಿಗೆ ನೀಡಲಾಗಿತ್ತು. ಆದರೆ ಆಯವ್ಯಯದಲ್ಲಿ ಕಾಲೇಜು ಸ್ಥಾಪನೆಗೆ ಹಣವನ್ನು ಮೀಸಲಿಟ್ಟಿರಲಿಲ್ಲ. ಅಲ್ಲದೆ ಭಾರತೀಯ ವೈದ್ಯಕೀಯ ಪರಿಷತ್ಗೆ ಸೂಕ್ತ ದಾಖಲೆಗಳನ್ನೂ ನೀಡಿರಲಿಲ್ಲ. ಆದರೆ ಈಗ ಸರ್ಕಾರ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದು, ಭಾರತೀಯ ವೈದ್ಯಕೀಯ ಪರಿಷತ್ಗೆ ಅಗತ್ಯವಾದ ಮಾಹಿತಿ ಒದಗಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.
ರಾಜೀವ್ ಆವಾಸ್ ಯೋಜನೆ: ತುಮಕೂರು ನಗರದಲ್ಲಿ ವಸತಿ ಹೀನರಿಗೆ ವಸತಿ ಕಲ್ಪಿಸುವ ಉದ್ಧೇಶದಿಂದ 1200 ಮನೆಗಳನ್ನು ತುಮಕೂರಿನ ದಿಬ್ಬೂರಿನಲ್ಲಿ ನಿರ್ಮಾಣ ಮಾಡಲಾಗುವುದು. ಈ ಹಿಂದಿನ ಸರ್ಕಾರದ ಯೋಜನೆ
ಇದಾಗಿದ್ದು, ಈ ಮನೆಗಳ ನಿರ್ಮಾಣ 68 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುವುದು. ಬರುವ ಫೆ.28 ರಂದು ಶಂಕುಸ್ಥಾಪನೆ ಕಾರ್ಯ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಶಂಕುಸ್ಥಾಪನೆ ನೆರವೇರಿಸುವರು  ಎಂದರು. ಇದೇ ರೀತಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಕಟ್ಟಡ ಉದ್ಘಾಟನೆ ಕೂಡ ನೆರವೇರಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಮೇಯರ್ ಗೀತಾ ರುದ್ರೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಎನ್. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಜಕಣಾಚಾರ್, ಕಾಂಗ್ರೆಸ್ ಮುಖಂಡರಾದ ವೇಣುಗೋಪಾಲ್ ಮೊದಲಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.