ಸುದ್ದಿ ಸಂಕ್ಷೇಪ
ಜಿ.ಎಸ್.ಎಸ್ಗೆ ಶ್ರದ್ಧಾಂಜಲಿ
ತಿಪಟೂರು: ಪಟ್ಟಣದ ಎಸ್.ಕೆ.ವಿ.ಎಸ್.ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ, ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳು ಒಂದು ನಿಮಿಷ ಮೌನ ಆಚರಿಸಿದರು.
ಈ ವೇಳೆ ಮಾತನಾಡಿದ ಪ್ರಾಂಶುಪಾಲ ಎಸ್. ಶ್ರೀಧರ್ ಮಾತನಾಡಿ ರಾಷ್ಟ್ರಕವಿಯಾಗಿದ್ದ ಜಿ.ಎಸ್.ಎಸ್. ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದು, ಅವರ ನಿಧನದಿಂದ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾದರ ನಷ್ಟವುಂಟಾಗಿದೆ ಎಂದರು.
ಉಪನ್ಯಾಸಕ ಎಲ್. ಮಹಲಿಂಗಪ್ಪ ಮಾತನಾಡಿ ಜಿ.ಎಸ್.ಎಸ್ ಅವರು ತಾವು ಕಂಡ ನವಜೀವನ ಕನಸನ್ನು ತಮ್ಮ ಭಾವಗೀತೆಗಳ ಮೂಲಕ ಕನ್ನಡಿಗರ ಎದೆ ತುಂಬುವಂತೆ ಹಾಡಿ ಹಣತೆ ಹಚ್ಚಿದ್ದರು. ಇಂದು ಅವರು ಆ ಕತ್ತಲೆಗೆ ಜಾರಿದ್ದಾರೆ. ಅವರ ಆದರ್ಶಗಳು ಸರ್ವಕಾಲಿಕವಾಗಿ ಹಚ್ಚ ಹಸಿರಾಗಿವೆ. ಹೊಸಗನ್ನಡ ಸಾಹಿತ್ಯದ ಯಾವುದೇ ಪಂಥಗಳಿಗೆ ತನ್ನನ್ನು ಸೀಮತಗೊಳಿಸಿಕೊಳ್ಳದೆ ಎಲ್ಲರ ಜೊತೆಗೆ ಸಮನ್ವಯತೆಯನ್ನು ಸಾಧಿಸಿದ್ದು, ಅವರ ವೈಶಿಷ್ಟ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ.ಅವರ ಆತ್ಮಕ್ಕೆ ಶಾಂತಿಸಿಗಲೆಂದರು.
ರಂಗಾಪುರ ಶ್ರೀಗಳ ಉತ್ಸವ
ತಿಪಟೂರು: ತಾಲೂಕಿನ ಕಸಬಾ ಹೋಬಳಿ ಹೊಸಹಳ್ಳಿ ಗ್ರಾಮದಲ್ಲಿರುವ ದುಂಡದ ಶ್ರೀ ಬೊಮ್ಮಲಿಂಗೇಶ್ವರಸ್ವಾಮಿ ಕಲ್ಯಾಣೋತ್ಸವ ಹಾಗೂ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ಉತ್ಸವವು ವಿಜೃಂಭಣೆಯಿಂದ ಜರುಗಿತು.
ಶ್ರೀ ಸ್ವಾಮಿಗೆ ಗಂಗಾಪೂಜೆ, ರುದ್ರಾಭಿಷೇಕ ಕಲಶ ಸ್ಥಾಪನಾ ಹಾಗೂ ವಿಧಿವತ್ತಾದ ಶಾಸ್ತ್ರೋಕ್ತ ಕಾರ್ಯಕ್ರಮಗಳೊಂದಿಗೆ ಶ್ರೀ ಬೊಮ್ಮಲಿಂಗೇಶ್ವರಸ್ವಾಮಿ ಮತ್ತು ಶ್ರೀ ಪಾರ್ವತಮ್ಮನವರ ಕಲ್ಯಾಣೋತ್ಸವ, ಮೆರವಣಿಗೆ ನಡೆಯಿತು.
ಹುಳಿಯಾರಿನಲ್ಲಿ ಪಿಂಚಣಿ ಅದಾಲತ್
ಚಿಕ್ಕನಾಯಕನಹಳ್ಳಿ: ತಾಲೂಕಿನ ಹುಳಿಯಾರು ಹೋಬಳಿ ಹುಳಿಯಾರಿನಲ್ಲಿ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಗ್ರೇಡ್-2 ತಹಸೀಲ್ದಾರ್ ಪುಟ್ಟರಾಮಯ್ಯ ತಿಳಿಸಿದ್ದಾರೆ. ಜ.7ರಂದು ಬೆಳಿಗ್ಗೆ 11 ಗಂಟೆಗೆ ಹುಳಿಯಾರಿನ ಅಟಲ್ ಜನಸ್ನೇಹಿ ಕಚೇರಿ ಮುಂಭಾಗ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿಗಳಾದ ಸಿಂಧು ಭಾಗವಹಿಸಲಿದ್ದಾರೆ. ಈ ಅದಾಲತ್ನಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳಾದ ಮಾಸಾಶನ, ವಿಧವಾ ವೇತನ, ಅಂಗವಿಕಲ ವೇತನ, ಪಡಿತರ ಕಾರ್ಡ್, ಮುಂತಾದ ಯೋಜನೆಗಳ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಮಾಸಾಶನಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸುವವರು ಈ ಅದಾಲತ್ನಲ್ಲಿ ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ.
ಏಡ್ಸ್ ಜಾಗೃತಿ ಶಿಬಿರ ಉದ್ಘಾಟನೆ
ತಿಪಟೂರು: ಪಟ್ಟಣದ ಶಾರದ ನಗರದಲ್ಲಿರುವ ಶ್ರೀ ಚಂದನ ಮಹಿಳಾ ಸ್ವ-ಸಹಾಯ ಸಂಘ ಹಾಗೂ ಜನ ಶಿಕ್ಷಣ ಸಂಸ್ಥೆ ಇವರ ಸಹಯೋಗದಲ್ಲಿ ಡ್ರೆಸ್ ಮೇಕಿಂಗ್ ಡಿಸೈನ್ ಮತ್ತು ಬ್ಯುಟೀಶಿಯನ್ ಕಲಿಯುವವರಿಗೆ ಹಾಗೂ ಏಡ್ಸ್ ದಿನಾಚರಣೆ ಅಂಗವಾಗಿ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಸುಕನ್ಯ ಕಾರ್ಯಕ್ರಮ ಉದ್ಘಾಟಿಸಿ ಸಂಸ್ಥೆಯು ನೀಡುತ್ತಿರುವ ತರಬೇತಿಗಳನ್ನು ಮಹಿಳೆಯರು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲೀಕರಣ ಹೊಂದಬೇಕೆಂದರು.
ಸಾರ್ವಜನಿಕ ಆಸ್ಪತ್ರೆಯ ಏಡ್ಸ್ ಆಯೋಗ ಕಮಿಟಿ ಕೌನ್ಸಿಲರ್ ಆದ ಉಮೇಶ್ ಏಡ್ಸ್ ಮತ್ತು ಕ್ಷಯ ರೋಗದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮಾಧಿಕಾರಿ ಜಯಮ್ಮ ತರಬೇತಿಯ ಹಂತಗಳು ಹಾಗೂ ಕಲಿಕೆ, ಗಳಿಕೆಯ ಬಗ್ಗೆ ವಿವರಿಸಿದರು.
ಕಲಿಕಾರ್ತಿಗಳು ತಾವೇ ಹೊಲಿಗೆ ಮಾಡಿರುವ ಡಿಸೈನ್ ಬಟ್ಟೆಗಳು ಮತ್ತು ಹೇರ್ ಸ್ಟೈಲ್, ಮೇಕಪ್ ಹಾಗೂ ಸ್ಯಾರಿ ಡಿಸೈನ್ ಪ್ರದರ್ಶನ ನೀಡಿದರು. ನಂತರ ಕಲಿಕಾರ್ತಿಗಳಿಗೆ ಹಣೆಬೊಟ್ಟು, ಮ್ಯೂಜಿಕಲ್ ಚೇರ್ ಮತ್ತು ಚರ್ಚಾಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ವಸಂತ ಮತ್ತು ಕಲ್ಯಾಣಮ್ಮ ಪ್ರಾರ್ಥಿಸಿ, ಶ್ರೀ ಚಂದನ ಮಹಿಳಾ ಸಂಘದ ಅಧ್ಯಕ್ಷೆ ವಿಮಲ ರಮೇಶ್ ನಿರೂಪಿಸಿ, ಅನುಪಮ ರಮೇಶ್ ಸ್ವಾಗತಿಸಿ, ಪಿ.ರಮೇಶ್ ವಂದಿಸಿದರು.
'ಮಹಿಳೆಯ ಅಧಿಕಾರ ಅನ್ಯರು ಚಲಾಯಿಸುವಂತಾಗದಿರಲಿ'
ತುಮಕೂರು,: ಸ್ಥಿತ್ಯಂತರ ಕಾಲಘಟ್ಟವನ್ನು ಕ್ರಮಿಸುತ್ತಿರುವ ಮಹಿಳೆಯ ಸಾಧನೆಯ ಹಿಂದೆ ಪುರುಷನಿರಬೇಕೇ ಹೊರತು ಆಕೆಯ ಅಧಿಕಾರವನ್ನು ಅನ್ಯರು ಚಲಾಯಿಸುವಂತಾಗಬಾರದು ಎಂದು ಪತ್ರಕರ್ತ ಎಸ್. ನಾಗಣ್ಣ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಸಿದ್ಧಗಂಗಾ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸಂಸ್ಕೃತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಂವಿಧಾನದಲ್ಲಿ ಮಹಿಳೆಗೆ ಸಮಾನ ಅವಕಾಶ ದೊರೆತಿರುವ ಈ ಸಂದರ್ಭದಲ್ಲಿ ಮಹಿಳೆಯರು ತಮ್ಮ ಹಕ್ಕನ್ನು ಸ್ವತಃ ಚಲಾಯಿಸುವಂತಾಗಬೇಕು. ಅದನ್ನು ಆಕೆಯ ಸಮೀಪವರ್ತಿ ಪುರುಷರಾರು ಕಸಿದುಕೊಳ್ಳಲು ಆಕೆ ಬಿಡಬಾರದು. ಭವ್ಯ ಭಾರತದ ನಿರ್ಮಾಣದಲ್ಲಿ ಯುವಕರು ವಿಶ್ಲೇಷಣೆಯಲ್ಲಿ ತೊಡಗಿ ಸೂಕ್ತರಿಗೆ ಅಧಿಕಾರ ನೀಡುವ ಹೊಣೆಗಾರಿಕೆಯನ್ನು ಹೊರಬೇಕು ಎಂದರು. ಇಂದಿನ ಪಠ್ಯವಿಷಯಗಳು ಪಠ್ಯ ಮತ್ತು ಜೀವನಕ್ಕೆ ಅಗಾಧವಾದ ಅಂತರವನ್ನು ಉಂಟು ಮಾಡಿವೆ. ಆದ್ದರಿಂದ ವೃತ್ತಿ-ಪ್ರವೃತ್ತಿಗಳನ್ನು ಒಂದಕ್ಕೊಂದು ಬೆಸೆಯುವ ಅಗತ್ಯತೆ ಇಂದು ಯುವಕರ ಮುಂದಿದೆ ಎಂದು ತಿಳಿಸಿದರು.
ಸಂಸ್ಥೆಯ ಸಂಸ್ಥಾಪಕರಾದ ಡಾ. ಶಿವಕುಮಾರ ಮಹಾಸ್ವಾಮಿಗಳವರು ಕಾರ್ಯಕ್ರಮ ಉದ್ಘಾಟಿಸಿದರು. ಸಮಾರೋಪ ಭಾಷಣ ಮಾಡಿದ ರಾಜ್ಯ ಸಂಗೀತ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕ ಯಶವಂತ ಹಳಿಬಂಡಿಯವರು ಸಂಸ್ಕೃತಿ ಎಂದರೆ ಸಾಂಪ್ರದಾಯಿಕ ಬೇರಿನ ಮೇಲೆ ಆಧುನಿಕ ವಿಚಾರಧಾರೆಗಳ ಕವಲು ಹೊಂದಿರುವ ಒಂದು ವಿಶಾಲ ವೃಕ್ಷ. ಪಠ್ಯೇತರ ಚಟುವಟಿಕೆಗಳು ಮನುಷ್ಯನ ಘನತೆ ಹಾಗೂ ವ್ಯಕ್ತಿತ್ವವನ್ನು ಇಮ್ಮಡಿಗೊಳಿಸುತ್ತವೆ ಎಂದು ನುಡಿದರು.
ನಾಳೆ ಉಚಿತ ತಪಾಸಣಾ ಶಿಬಿರ
ಕೊರಟಗೆರೆ: ತಾಲೂಕಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕಿನ ಶತಮಾನೋತ್ಸವದ ಪ್ರಯುಕ್ತ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಗಿರಿಜಾ ದಂತ ಚಿಕಿತ್ಸಾಲಯ, ತುಮಕೂರಿನ ಕೌಶಲ್ ದಂತ ಚಿಕಿತ್ಸಾಲಯ, ವಾಸನ್ ಐ ಕೇರ್ ವತಿಯಿಂದ ಶನಿವಾರ ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೊರಟಗೆರೆ ಶಾಖೆಯ ಬ್ಯಾಂಕಿನ ಆವರಣದಲ್ಲಿ ಉಚಿತ ದಂತ, ಬಾಯಿ, ಹಗೂ ಕಣ್ಣಿನ ತಪಾಸಣಾ ಶಿಬಿರವನ್ನು ಏರ್ಪಡಿಸಲಾದೆ. ಶಿಬಿರದಲ್ಲಿ ನುರಿತ ದಂತ ತಜ್ಞ ಡಾ. ಮಂಜುನಾಥ್ .ಪಿ, ಡಾ.ಆಶಾ, ಬಿ ಹಾಗೂ ವಾಸನ್ ಐ ಕೇರ್ನ ನುರಿತ ತಜ್ಞರು ಪಾಲ್ಗೊಳ್ಳಲಿದ್ದಾರೆ.
ಉತ್ತಮ ಶೌಚಾಲಯ ವ್ಯವಸ್ಥೆ ಅಗತ್ಯ
ಕೊರಟಗೆರೆ: ವಿದ್ಯಾರ್ಥಿಗಳಿಗೆ ಉತ್ತಮ ಶೌಚಾಲಯ ವ್ಯವಸ್ಥೆ ಇರಬೇಕು. ಇದಕ್ಕಾಗಿ ಸರ್ಕಾರ ಇನ್ನೂ ಹೆಚ್ಚಿನ ಅನುದಾನ ನೀಡಬೇಕು ಎಂದು ಶಾಸಕ ಪಿ.ಆರ್. ಸುಧಾಕರ್ ಲಾಲ್ ತಿಳಿಸಿದರು. ಪದವಿ ಕಾಲೇಜಿನಲ್ಲಿ 10 ಲಕ್ಷ ರು. ಮೌಲ್ಯದ ವಿದ್ಯಾರ್ಥಿನಿಯರ ಶೌಚಾಲಯ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

