ಸುದ್ದಿ ಸಂಕ್ಷೇಪ
ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ
ತುಮಕೂರು: ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಮಂಜುನಾಥ ಕಲಾಸಂಘದ ವತಿಯಿಂದ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗನಿರ್ದೇಶಕ ಎಲ್. ನಾಗರಾಜಾಚಾರ್ ಅವರ ನಿರ್ದೇಶನದಲ್ಲಿ ಸಂಪೂರ್ಣ ರಾಮಾಯಣ ನಾಟಕವನ್ನು ಕಲಾವಿದರು ಅಭಿನಯಿಸಿದರು. ನಾಟಕ ಉದ್ಘಾಟಿಸಿದ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್, ರಂಗಭೂಮಿಯ ದಿಗ್ಗಜರೆನಿಸಿದ ಡಾ.ಗುಬ್ಬಿ ವೀರಣ್ಣ ಅವರ ಹೆಸರಿನಲ್ಲಿ ನಿರ್ಮಿಸಿರುವ ಈ ರಂಗಮಂದಿರ ಅವರ ಹೆಸರನ್ನು ಉಳಿಸುವ ಕೆಲಸವನ್ನು ಮಾಡುತ್ತಿದ್ದು, ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗಿಂತ ಪೌರಾಣಿಕ ನಾಟಕಗಳಿಗೆ ಕಿಕ್ಕಿರಿದು ಪ್ರೇಕ್ಷಕರು ಸೇರುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ಜನಪ್ರತಿನಿಧಿಗಳು ಹೆಚ್ಚಿನ ರೀತಿಯಲ್ಲಿ ಬೆಂಬಲಿಸಬೇಕಾಗಿದೆ ಎಂದರು. ಕಿರುತೆರೆ ಕಲಾವಿದ ತೋವಿನಕೆರೆ ಹನುಮಂತೇಗೌಡ ಮಾತನಾಡಿ, ಕ್ಯಾಮೆರ ಮುಂದೆ ನಿರ್ದೇಶಕರು ಹೇಳಿಕೊಟ್ಟಿದ್ದನ್ನು ಎರಡು ಮೂರು ಟೇಕ್ ತೆಗೆದುಕೊಂಡು ಅಭಿನಯಿಸುವ ಟಿ.ವಿ, ಸಿನಿಮಾ ಕಲಾವಿದರಿಗಿಂತ ನೈಜ ಅಭಿನಯ ನೀಡುವ ರಂಗಭೂಮಿ ಕಲಾವಿದರು ನಿಜವಾದ ಕಲಾವಿದರು. ಇದು ಹೆಮ್ಮೆ ಪಡುವಂತಹ ವಿಚಾರ ಎಂದರು. ಕೊಪ್ಪಳ ಜಿಲ್ಲಾ ವಿಶೇಷ ಭೂ ಸ್ವಾಧೀನಾಧಿಕಾರಿ ವಿ.ಪಾತರಾಜು ಮಾತನಾಡಿ, ಸ್ವತಃ ಕಲಾವಿದನಾಗಿ ಹಲವಾರು ನಾಟಕಗಳಲ್ಲಿ ಅಭಿನಯಿಸುವ ಮೂಲಕ ಕಲೆಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಮುಂದುವರೆಸಿಕೊಂಡು ಹೋಗುವುದಾಗಿ ಹೇಳಿದರು. ವೇದಿಕೆಯಲ್ಲಿ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಪಾಂಡುರಂಗಶೆಟ್ಟಿ, ಗೌರವಾಧ್ಯಕ್ಷ ಸಿ.ವಿ. ಮಹದೇವಯ್ಯ, ರವಿ ಜಹಂಗೀರ್ ಉಪಸ್ಥಿತರಿದ್ದರು. ನಾಟಕದಲ್ಲಿ ಶ್ರೀರಾಮನ ಪಾತ್ರ ಮಾಡಿರುವ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಸದಸ್ಯ ಯೋಗಾನಂದಕುಮಾರ್, ಕೈಕೆಯ ಪಾತ್ರದಲ್ಲಿ ಹಿರಿಯ ಕಲಾವಿದೆ ಮಂಜುಳಾ, ಸೀತೆಯ ಪಾತ್ರದಲ್ಲಿ ಹೇಮ ಮತ್ತು ಲಕ್ಷ್ಮಣನ ಪಾತ್ರದಲ್ಲಿ ಭೀಮಣ್ಣ ಅಭಿಯಿಸಿದ್ದು, ಪ್ರೇಕ್ಷಕರು ಮನಮುಟ್ಟುವಂತಹ ಅಭಿನಯ ನೀಡಿ ರಂಜಿಸಿದರು.
ಲಾರಿ- ಟೆಂಪೋ ಡಿಕ್ಕಿ: ವ್ಯಕ್ತಿ ಸಾವು
ಹೆಬ್ಬೂರು: ಲಾರಿ ಮತ್ತು ಟೆಂಪೋ ನಡುವೆ ಡಿಕ್ಕಿ ಸಂಭವಿಸಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಸಮೀಪದ ಬಳಗೆರೆ ಗ್ರಾಮದಲ್ಲಿ ಭಾನುವಾರ ನಡೆದಿದೆ. ಆಂಧ್ರಪ್ರದೇಶದ ಚಿತ್ತೂರಿನ ರಾಘವ ಸಾವನ್ನಪ್ಪಿದ ದುರ್ದೈವಿ. ಲಾರಿ ಮೈಸೂರಿನಿಂದ ಸಿಮೆಂಟ್ ಅನ್ಲೋಡ್ ಮಾಡಿ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ಸುದೀಂದ್ರ, ಪೆದ್ದಣ್ಣ, ಶ್ರೀರಾಮುಲು, ಮೂರ್ತಪ್ಪ ಗಾಯಗೊಂಡಿದ್ದಾರೆ.
ವಿದ್ಯಾರ್ಥಿಗಳಿಗೆ ಕ್ರಿಕೆಟ್ ಪಂದ್ಯಾವಳಿ
ಹಾಸನ: ರಾಜ್ಯ ಕ್ರಿಕೆಟ್ ಸಂಸ್ಥೆಯ ಶಿವಮೊಗ್ಗ ವಲಯ (ಶಿವಮೊಗ್ಗ, ಹಾಸನ ಹಾಗೂ ಚಿಕ್ಕಮಗಳೂರು) ಪ್ರತಿ ವರ್ಷದಂತೆ ಈ ವರ್ಷವೂ ಪ್ರಸ್ತುತ ಸಾಲಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕೆಎಸ್ಸಿಎ ಅಂತರ ಶಾಲಾ ಕ್ರಿಕೆಟ್ ಪಂದ್ಯಾವಳಿ ನಡೆಸಲು ಇಚ್ಛಿಸಲಾಗಿದೆ ಎಂದು ಸಂಸ್ಥೆಯ ಸಂಚಾಲಕರು ತಿಳಿಸಿದ್ದಾರೆ. ಕೆಎಸ್ಸಿಎ ಅಂತರ ಶಾಲಾ ಕ್ರಿಕೆಟ್ ಪಂದ್ಯಾವಳಿಯು ಶಿವಮೊಗ್ಗ ವಲಯದಲ್ಲಿ ಇರುವ ಪ್ರೌಢಶಾಲೆಯ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರನ್ನು ಹೆಚ್ಚಿನ ತರಬೇತಿ ಹಾಗೂ ಉನ್ನತ ದರ್ಜೆ ಕ್ರಿಕೆಟ್ ಆಟಗಾರರನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ಈ ಪಂದ್ಯಾವಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಛಿಸುವ ಜಿಲ್ಲೆಯ ಪ್ರೌಢಶಾಲಾ ತಂಡದವರು ತಂಡದ ವಿವರ, ಶಾಲೆಯ ಪ್ರಾಂಶುಪಾಲರು ಅಥವಾ ಮುಖ್ಯೋಪಾಧ್ಯಾಯರ ದೃಢೀಕರಣ ಪತ್ರದೊಂದಿಗೆ ಜ. 13ರೊಳಗಾಗಿ ಸಂಚಾಲಕರಾದ ಡಿ.ಅಶೋಕ್ ಕುಮಾರ್ ಅವರಿಗೆ ತಲುಪಿಸಲು ಕೋರಲಾಗಿದೆ. ಪಂದ್ಯಾವಳಿಯ ದಿನಾಂಕವನ್ನು ನಂತರ ತಿಳಿಸಲಾಗುವುದು. ಹೆಚ್ಚಿನ ವಿವರಗಳಿಗೆ ಮೊ. 9448653746 ಸಂಪರ್ಕಿಸಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

