ತುಮಕೂರು

ಸುದ್ದಿ ಸಂಕ್ಷೇಪ

Published On :

ಲಗೇಜ್ ಆಟೋ ಡಿಕ್ಕಿ: ವ್ಯಕ್ತಿ ಸಾವು
ಶಿರಾ: ತಾಲೂಕಿನ ಮಾಗೋಡು ರಸ್ತೆಯಲ್ಲಿ ದೇವಸ್ಥಾನಕ್ಕೆಂದು ನಡೆದು ಹೋಗುತ್ತಿದ್ದ ಭಕ್ತರ ಮೇಲೆ ಲಗೇಜ್ ಆಟೋ ಒಂದು ಹಿಂಬದಿಯಿಂದ ಡಿಕ್ಕೆ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಹಲವರಿಗೆ ಗಾಯಗಳಾಗಿರುವ ಘಟನೆ ಮಾಗೋಡು ರಸ್ತೆಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಆಂಧ್ರದ, ಹಿಂದೂಪುರ ಜಿಲ್ಲೆಯ ಸಡ್ಲಪಲ್ಲಿ ಗ್ರಾಮದ ರಂಗಾರೆಡ್ಡಿ ಎಂದು ಗುರಿತಿಸಲಾಗಿದ್ದು, ಯರಗುಂಟೆಯ ರಂಗಮ್ಮ ಹಾಗೂ ಅವರ ಮಗಳು ಹಾಗೂ ಲಕ್ಷ್ಮಮ್ಮ ಎಂಬುವರು ಗಾಯಗೊಂಡವರಾಗಿದ್ದಾರೆ. ಆಟೋ ಚಾಲಕ ಸ್ಥಳದಲ್ಲಿಯೆ ವಾಹನ ಬಿಟ್ಟು ಪರಾರಿಯಾಗಿದ್ದು ಈ ಬಗ್ಗೆ ನಗರ ಠಾಣಾಧಿಕಾರಿಗಳು ಪ್ರಕರಣದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಎಐಸಿಸಿ ಫೆಸಿಲಿಟೇಟರ್ ಆಗಿ ರಫೀಕ್
ತುಮಕೂರು: 2014 ರ ಆಂಧ್ರಪ್ರದೇಶ ವಿಧಾನಸಭಾ, ಲೋಕಸಭಾ ಚುನಾವಣೆಗಳಿಗೆ ಎಐಸಿಸಿ ಫೆಸಿಲಿಟೇಟರ್ ಆಗಿ ತುಮಕೂರು ಶಾಸಕ ಡಾ. ರಫೀಕ್ ಅಹಮದ್ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ ನೇಮಕ ಮಾಡಿ ಆದೇಶಿಸಿದ್ದಾರೆ. ನಲಗೊಂದ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಅಲ್ಲಿನ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸುವುದು, ಅಭ್ಯರ್ಥಿಗಳನ್ನು ಗುರುತಿಸುವ ಜವಾಬ್ದಾರಿಯನ್ನು ರಫೀಕ್ ಅವರಿಗೆ ನೀಡಲಾಗಿದೆ.
ಉಚಿತ ಸೈಕಲ್ ವಿತರಣೆ ಇಂದು
ಕೊರಟಗೆರೆ: ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಜ.6 ರಂದು ವಾರ್ಷಿಕೋತ್ಸವ ಹಾಗೂ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮವನ್ನು ಶಾಸಕ ಪಿ.ಆರ್. ಸುಧಾಕರಲಾಲ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ವಿವಿಧ ಗಣ್ಯರು ಭಾಗವಹಿಸಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ಕ್ರೀಡೋತ್ಸವ, ಸಮವಸ್ತ್ರ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.  
ಕಾಯಿಯೊಳಗೆ ಒಂದು ಕಾಯಿ!
ತಿಪಟೂರು: ತಾಲೂಕಿನ ಪ್ರಸಿದ್ದ ಯಾತಾಕ್ಷೇತ್ರ ಕೆರೆಗೋಡಿ-ರಂಗಾಪುರ ಶ್ರೀಮಠದ ಹಿರಿಯ ಶ್ರೀಗಳೊಬ್ಬರ ಗದ್ದುಗೆ ಪೂಜೆಗಾಗಿ ತುರುವೇಕೆರೆ ತಾಲೂಕಿನ ದಂಡಿನಶಿವರ ಭಕ್ತರೊಬ್ಬರು ತೆಂಗಿನಕಾಯಿ ತಂದಿದ್ದರು. ಕಾಯಿಯನ್ನು ಪೂಜೆಗಾಗಿ ಅರ್ಚಕರು ಒಡೆದಾಗ ಒಂದು ತೆಂಗಿನಕಾಯಿಯೊಳಗಡೆಯೇ ಮತ್ತೊಂದು ಕಾಯಿ ಬೆಳೆದುಕೊಂಡಿತ್ತು.! ಮೂಲ ತೆಂಗಿನಕಾಯಿಯೊಳಗಡೆ ಮತ್ತೊಂದು ಕಾಯಿ ಚಿಪ್ಪಿನ ಸಮೇತ ಹುಲುಸಾಗಿ ಬೆಳೆದುಕೊಂಡಿರುವುದನ್ನು ನೋಡಿದ ಗುರುಪರದೇಶಿಕೇಂದ್ರ ಸ್ವಾಮೀಜಿ ಇಂತಹ ವಿಸ್ಮಯಗಳೆಲ್ಲಾ ದೈವಲೀಲೆಯೇ ಸರಿ ಎಂದರು.
ತಿಪ್ಪಯ್ಯ ನೇಮಕ
ಪಾವಗಡ: ಜಿಲ್ಲಾಧ್ಯಕ್ಷ ಪುಟ್ಟರಾಜ್ ಸ್ವಯಂ ನಿವೃತ್ತರಾದ ಹಿನ್ನಲೆಯಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆ ಜಿಲ್ಲಾಧ್ಯಕ್ಷರಾಗಿ ತಾ. ಜಾಜೂರಾಯನಹಳ್ಳಿ ಎಚ್‌ಪಿಎಸ್ ಶಾಲೆಯ ತಿಪ್ಪಯ್ಯ ನೇಮಕಗೊಂಡಿದ್ದಾರೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಶಾಖೆ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಪುಟ್ಟರಾಜ್ ಎಂಬುವರು ಇತ್ತೀಚೆಗೆ ಸ್ವಯಂ ನಿವೃತ್ತರಾದ ಕಾರಣ ಚುನಾಯಿತ ಜಿಲ್ಲಾ ಕಾರ್ಯಕಾರಿ ಸಮಿತಿ 12ಮಂದಿ ಪೈಕಿ 10ಮಂದಿ ಸದಸ್ಯರು  ತಿಪ್ಪಣ್ಣ ಅವರನ್ನು ಅಧ್ಯಕ್ಷರ ಹುದ್ದೆಗೆ ಬೆಂಬಲಿಸಿದರು. ಈ ಹಿನ್ನೆಲೆಯಲ್ಲಿ ಅವರನ್ನು ನೇಮಕ ಮಾಡಿರುವುದಾಗಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಕಾರ್ಯಕಾರಣಿ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಿದೆ. ಸಂಘದ ಅದ್ಯಕ್ಷರ ಸ್ಥಾನ ಪಡೆಯುವುದರಲ್ಲಿ ಕಳೆದ 15ವರ್ಷಗಳಿಂದ ಪಾವಗಡ ತಾಲೂಕು ವಂಚಿತವಾಗುತ್ತಿದ್ದು ಮಧುಗಿರಿ ಶೈಕ್ಷಣಿಕ ಜಿಲ್ಲೆ ಜಿಲ್ಲಾ ಶಾಖೆಯ ಅಧ್ಯಕ್ಷರ ಸ್ಥಾನ ಪಾವಗಡಕ್ಕೆ ತಾಲೂಕಿನ ತಿಪ್ಪಣ್ಣ ಅವರಿಗೆ ಲಭಿಸಿರುವುದಕ್ಕೆ ಸಂಘದ ಚುನಾಯಿತ ನಿರ್ದೇಶಕರು ಹಾಗೂ ಶಿಕ್ಷಕರಾದ ಸಿ.ಕೆ.ಪುರ ಹನುಮಂತರಾಯಪ್ಪ, ವಿ.ರಾಮಾಂಜಿ  ಆನಂದ್, ಓಬಳೇಶ್, ನೆರಳೇಕುಂಟೆ ಶ್ರೀನಿವಾಸ್ ಮುಂತಾದವರು ಹರ್ಷ ವ್ಯಕ್ತಪಡಿಸಿ ನೂತನ ಅಧ್ಯಕ್ಷ ತಿಪ್ಪಣ್ಣ ಅವರನ್ನು ಅಭಿನಂಧಿಸಿದ್ದಾರೆ.
ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ
ತುಮಕೂರು: ತುರುವೇಕೆರೆಯಲ್ಲಿ ಫೆಬ್ರವರಿ 10 ಹಾಗೂ 11 ರಂದು ನಡೆಯಲಿರುವ 10 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಕವಿ ದೊಡ್ಡರಂಗೇಗೌಡರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಸೋಮು ಭಾಸ್ಕರಾಚಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಗುಬ್ಬಿ ತಾಲೂಕು ಕಸಾಪ ಅಧ್ಯಕ್ಷ ಗುಬ್ಬಿ ರಾಜೇಶ್ ದೊಡ್ಡರಂಗೇಗೌಡರ ಹೆಸರನ್ನು ಸೂಚಿಸಿದರು. ಇತರೆ ಎಲ್ಲಾ ತಾಲೂಕು ಅಧ್ಯಕ್ಷರು ಅನುಮೋದಿಸಿದರು.
ಸುಶೀಲಾಗೆ ಸಾಹಿತ್ಯ ಸಕ್ಕರೆ ಪ್ರಶಸ್ತಿ
ತುರುವೇಕೆರೆ: ಮಂಡ್ಯ ಜಿಲ್ಲೆ ದುದ್ದ ಹೋಬಳಿ ಬೆಟ್ಟಹಳ್ಳಿಯ  ಕನ್ನಡ ವಿಕಸನ ಕೇಂದ್ರ ಹಾಗೂ ಮನೀಷ್ ಪ್ರಕಾಶನದ ಆಶ್ರಯದಲ್ಲಿ ಬೆಂಗಳೂರಿನ ಚಾಮರಾಜ ಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಕರ್ನಾಟಕ ಸಿಂಹ ಡಾ. ವಿಷ್ಣುವರ್ಧನ್ ಅವರ ಪುಣ್ಯ ತಿಥಿಯ ಅಂಗವಾಗಿ ನಡೆದ ರಾಜ್ಯ ಮಟ್ಟದ ಕವಿಗೋಷ್ಠಿ, ಪುಸ್ತಕ ಬಿಡುಗಡೆ ಮತ್ತು ಸನ್ಮಾನ ಸಮಾರಂಭದಲ್ಲಿ ಕಿರು ಕವಿತೆಗಳ ರಚನೆಕಾರರಾಗಿರುವ ಎಂ.ಎಸ್.ಸುಶೀಲಾ ಅವರಿಗೆ ಸಾಹಿತ್ಯ ಸಕ್ಕರೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಅವರು ತಾಲೂಕಿನ ಮಾರಪ್ಪನಹಳ್ಳಿಯ ನಿವಾಸಿಯಾಗಿದ್ದಾರೆ. ಸದ್ಯ ಕಿಬ್ಬನಹಳ್ಳಿಯ ಹೇಮಾವತಿ ಇಲಾಖೆಯಲ್ಲಿ ಶೀಘ್ರಲಿಪಿಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಇದೇ ವೇಳೆ 5 ಮಂದಿಗೆ ಸಾಹಿತ್ಯ ಶಿಲ್ಪಿ, 5 ಮಂದಿಗೆ ಸಾಹಿತ್ಯ ಸ್ನೇಹ ಜೋಡಿ, 10 ಮಂದಿಗೆ ಸಾಹಿತ್ಯದ ಸಕ್ಕರೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಹಿತಿ ಡಾ. ಟಿ.ಎಚ್.ಆಂಜನಪ್ಪ ನವರಿಗೆ ಕನ್ನಡದ ಕಳಸ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ವಿಕಸನ ಕೇಂದ್ರದ ಅಧ್ಯಕ್ಷ ಬಿ.ವಿಜಯಕುಮಾರ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನಿಂಗೇಗೌಡ ರ ನೇತೃತ್ವದಲ್ಲಿ  ಸಮಾರಂಭ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.