ತುಮಕೂರು

ಸರ್ಕಾರಿ ಆಸ್ಪತ್ರೆ ಹೊರಗುತ್ತಿಗೆ ನೌಕರರ ಕಾಯಂಗೆ ಆಗ್ರಹ

Published On :

ಕ.ಪ್ರ.ವಾರ್ತೆ     ತುಮಕೂರು     ಜ.6
ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ಕಾಯಂಗೊಳಿಸಲು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ವತಿಯಿಂದ ಮೆರವಣಿಗೆ ನಡೆಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕಳೆದ 10-15 ವರ್ಷಗಳಿಂದ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ತಾಲೂಕು ಕೇಂದ್ರದ ಸಾರ್ವಜನಿಕ ಆಸ್ಪತ್ರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಂಬುಲೆನ್ಸ್ ಚಾಲಕರಾಗಿ, ನಾನ್ ಕ್ಲಿನಿಕಲ್ ನೌಕರರು, ನರ್ಸ್‌ಗಳಾಗಿ, ಜವಾನರಾಗಿ, ಸೆಕ್ಯೂರಿಟಿಯಾಗಿ, ಹೊರಗುತ್ತಿಗೆ, ಗುತ್ತಿಗೆ, ಹಾಗೂ ಯೂಸರ್ಸ್ ಫಂಡ್ ಅಡಿಯಲ್ಲಿ ಒಂದು ಸಾವಿರ, ಎರಡು ಸಾವಿರ, ಮೂರು ಸಾವಿರ ರು.ಗಳಿಗೆ ದುಡಿಸಿಕೊಳ್ಳಲಾಗುತ್ತಿದೆ. ತಿಂಗಳ ಮೊದಲ ವಾರದಲ್ಲಿ ವೇತನ ಸಿಗದೆ, ಗುತ್ತಿಗೆದಾರ ಸಂಬಳ ನೀಡಿದಾಗ ಮಾತ್ರ ಪಡೆಯುವಂತಾಗಿದೆ. ರಾಜ್ಯದಲ್ಲಿ ಹೊರಗುತ್ತಿಗೆ, ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರು ಸರ್ಕಾರದ ಕಾಯಂ ನೌಕರರ ಕೆಲಸಕ್ಕಿಂತ ಹೆಚ್ಚು, ಹಗಲು-ರಾತ್ರಿಯೆನ್ನದೆ ದುಡಿಯುವಂತಾಗಿದೆ ಎಂದು ಸಿಐಟಿಯು ತಿಳಿಸಿದೆ.
ಸೌಲಭ್ಯಗಳಿಲ್ಲ: ದುಡಿಯುವ ಸಂದರ್ಭದಲ್ಲಿ ಆಂಬುಲೆನ್ಸ್ ಚಾಲಕ, ನಾನ್ ಕ್ಲಿನಿಕ್ ನೌಕರರಿಗೆ ಅನಾಹುತ ಸಂಭವಿಸಿದರೆ, ಸರ್ಕಾರಿ ನೌಕರರಿಗೆ ಸಿಗುವ ಯಾವುದೇ ಸೌಲಭ್ಯಗಳು ಇಲ್ಲವಾಗಿವೆ. ಸರ್ಕಾರ ಇಪಿಎಫ್, ಇಎಸ್‌ಐ ಸೌಲಭ್ಯಗಳನ್ನು ಜಾರಿಗೊಳಿಸಿದ್ದರೂ, ಸೌಲಭ್ಯಗಳು ಕೇವಲ ದಾಖಲೆಗಳಿಗಷ್ಟೇ ಸೀಮಿತವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದು, ಕೆಳಕಂಡ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದೆ.
ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು.
ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಖಾಲಿ ಇರುವ ಡಿ ಗ್ರೂಪ್ ಹುದ್ದೆಗೆ ಹೊರ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರಿಗೆ ಅವಕಾಶ ಕಲ್ಪಿಸಬೇಕು. ಎಲ್ಲ ನೌಕರರಿಗೆ ಇಎಸ್‌ಐ ಹಾಗೂ ಪಿಎಫ್ ವಿಮಾ ಸೌಲಭ್ಯವನ್ನು ಕಲ್ಪಿಸಬೇಕು. ನೌಕರರಿಗೆ ಸಮರ್ಪಕ ವೇತನ, ಪಿಎಫ್, ವಿಮಾ ಸೌಲಭ್ಯ ಒದಗಿಸಬೇಕು. ಸಮರ್ಪಕವಾಗಿ ವೇತನ, ಇತರೆ ಸೌಲಭ್ಯ ನೀಡದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಗುತ್ತಿಗೆದಾರರ ಕಿರುಕುಳ ಕೂಡಲೇ ನಿಲ್ಲಬೇಕು. ಹೆಚ್ಚಿನ ಕೆಲಸಕ್ಕೆ ಓಟಿ ನೀಡಬೇಕು.
ಕನಿಷ್ಠ ಕೂಲಿ ಕಾಯ್ದೆಯಡಿ ನಿಗದಿತ ಕೂಲಿ ನೀಡಬೇಕು. ವಾಹನ ಭದ್ರತೆಯ ಹೆಸರಲ್ಲಿ ಚಾಲಕರಿಂದ ಅಫಿಡವಿಟ್ ಕೈ ಬಿಡಬೇಕು. ಅಪಘಾತ ಸಂಭವಿಸಿದರೆ ಸರ್ಕಾರವೇ ಅದರ ಹೊಣೆ ಹೊರಬೇಕು. ಎಲ್ಲ ನೌಕರರಿಗೆ ಕಡ್ಡಾಯವಾಗಿ ಪಿಎಫ್ ಜಾರಿಗೊಳಿಸಬೇಕು ಹಾಗೂ ಪ್ರತಿ ತಿಂಗಳ ಮೊದಲ ವಾರದಲ್ಲೇ ಸಂಬಳ ನೀಡಬೇಕು.
ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಗುತ್ತಿಗೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ನೌಷಾದ್ ಸೆಹಗನ್, ರಾಜ್ಯ ಉಪಾಧ್ಯಕ್ಷ ಯೋಗಣ   ,  ತುಮಕೂರು ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.