ಸುದ್ದಿ ಸಂಕ್ಷೇಪ
ಅರ್ಥಪೂರ ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆ
ತುಮಕೂರು: ಜ. 26 ರಂದು ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಅರ್ಥಪೂರ ವಾಗಿ ಆಚರಿಸಲಿದ್ದು, ಈ ಸಂಬಂಧ ಸಕಲ ಸಿದ್ಧತೆಯನ್ನು ಕೈಗೊಳ್ಳುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ ಕರೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಭಾರತ ಗಣರಾಜ್ಯೋತ್ಸವ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ, ಅಂದಿನ ದಿನಾಚರಣೆಯಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಕ್ರೀಡಾಪಟುಗಳಿಗೆ ಸನ್ಮಾನ ಮತ್ತು ಭ್ರಷ್ಟಾಚಾರ ರಹಿತ ಅತ್ಯುತ್ತಮ ಸೇವೆಗೈದ ಸರ್ಕಾರಿ ಅಧಿಕಾರಿ, ನೌಕರರಿಗೆ ಸರ್ವೋತ್ತಮ ಪ್ರಶಸ್ತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ನೀಡಲಿದ್ದು, ಪ್ರಶಸ್ತಿಗೆ ಅರ್ಹ ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಹೊಣೆಗಾರಿಕೆ ಆಯ್ಕೆ ಸಮಿತಿಯ ಮುಂದಿದ್ದು, ಸಮಿತಿಯು ಶೀಘ್ರವೇ ಸಭೆ ಸೇರಿ ಆಯ್ಕೆ ಪ್ರಕ್ರಿಯೆಯನ್ನು ಇತ್ಯರ್ಥಗೊಳಿಸುವಂತೆ ತಿಳಿಸಿದರು. ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ನೌಕರರು ಅಂದಿನ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಅವರು ಈ ಸಂದರ್ಭ ತಿಳಿಸಿದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ನಕುಲ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಹೊಸರುಚಿ ಪ್ರಾತ್ಯಕ್ಷಿಕೆ ಉದ್ಘಾಟನೆ
ಚೇಳೂರು: ನಾಗರಿಕತೆ ಬೆಳೆದಂತೆ ಜನರಲ್ಲಿ ಹೊಸಹೊಸದನ್ನು ಬಯಸುವುದು ಜನರ ಬಯಕೆ. ಆದರೆ ಅದಕ್ಕೆ ತಕ್ಕಂತೆ ಹೊಸರುಚಿ ವಿಶೇಷ ಅಡುಗೆ ತಯಾರಿಸುವುದನ್ನು ಜನರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಒಕ್ಕೂಟದ ಅಧ್ಯಕ್ಷೆ ಶಿವಮ್ಮ ತಿಳಿಸಿದರು. ಅವರು ಚೇಳೂರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಹಿಳಾ ವಿಕಾಸ ಸಹಯೋಗದೊಂದಿಗೆ ಆಯೋಜಿಸಿದ್ದ ಹೊಸರುಚಿ ಪ್ರಾತ್ಯಕ್ಷಿಕೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಮನೆಗಳಲ್ಲಿ ಪ್ರತಿನಿತ್ಯವು ಅಡುಗೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಅದನ್ನು ಬದಲಾವಣೆ ಮಾಡಿ ರುಚಿರುಚಿಯಾದ ಅಡುಗೆ ಮಾಡಿಕೊಂಡು ಅದರ ರುಚಿಯನ್ನು ಸವಿಯುವುದು ಸರಿ. ಆದರೆ ಇದರ ಬಗ್ಗೆ ಎಲ್ಲ ಮಹಿಳೆಯರಿಗೂ ತಿಳಿಸಿ ಅವರೂ ಸಹ ಹೊಸ ರುಚಿ ಅಡುಗೆಯನ್ನು ಮಾಡುವುದರ ಬಗ್ಗೆ ತಿಳುವಳಿಕೆ ಮುಖ್ಯ. ಅಂತಹ ಕಾರ್ಯಕ್ರಮಗಳನ್ನು ಮಹಿಳಾ ಜ್ಞಾನವಿಕಾಸ ಯೋಜನೆಯಡಿಯಲ್ಲಿ ವಿವಿಧ ತರಹದ ಅಡುಗೆ ಮಾಡುವುದು ಅದನ್ನು ಎಲ್ಲಾರಿಗೂ ತಿಳಿಸುವುದು ವಿಶೇಷವಾಗಿರುತ್ತದೆ ಎಂದರು. ಈ ಸಂಸ್ಥೆಯಲ್ಲಿ ಮಹಿಳೆಯರಿಗೆ ವಿವಿಧ ತರಹದ ಕಾರ್ಯಕ್ರಮಗಳನ್ನು ಮಾಡಿ ಕುಟುಂಬದ ಆರ್ಥಿಕ ಗುಣಮಟ್ಟವನ್ನು ಹೆಚ್ಚಿಸಲು ಎಲ್ಲರಿಗೂ ತಿಳಿಸುವಂತ ಕಾರ್ಯಗಳು ನಡೆಯುತ್ತವೆ ಎಂದರು.
11ಕ್ಕೆ ಸಂಕ್ರಾಂತಿ ಕವಿಗೋಷ್ಠಿ
ತುಮಕೂರು: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ನೆಚ್ಚಿನ ರೇಡಿಯೋ ಸಿದ್ಧಾರ್ಥ 90.8 ಎಫ್.ಎಂ ಸಮುದಾಯ ಬಾನುಲಿಯು ಕವಿಗೋಷ್ಠಿ ನಡೆಸಲು ಉದ್ದೇಶಿಸಿದೆ.
ಈ ಕವಿಗೋಷ್ಠಿಯಲ್ಲಿ ಸಂಕ್ರಾಂತಿ ಹಬ್ಬ ಅಥವಾ 2014 ನೇ ವರ್ಷದಲ್ಲಿನ ಆಶಯಗಳ ಕುರಿತು ಸ್ವರಚಿತ ಕವನಗಳನ್ನು ಓದುವವರಿಗೆ ಆದ್ಯತೆ ನೀಡಲಾಗುವುದು.
ಉದ್ದೇಶಿತ ಈ ಕವಿಗೋಷ್ಠಿಯನ್ನು ಇದೇ ಶನಿವಾರ ಅಂದರೆ ಜ.11 ರಂದು ಮಧ್ಯಾಹ್ನ 2 ಗಂಟೆಗೆ ಸಮುದಾಯ ಬಾನುಲಿ ಕೇಂದ್ರದಲ್ಲಿ ಏರ್ಪಡಿಸಲಾಗಿದೆ. ಆಸಕ್ತರು ಒಂದುದಿನ ಮುಂಚಿತವಾಗಿ ನೋಂದಾಯಿಸಿಕೊಳ್ಳತಕ್ಕದ್ದು. ನಮ್ಮ ಸಂಪರ್ಕ ಸಂಖ್ಯೆಗಳು 0816-2201342 ಕರೆ ಮಾಡಬೇಕಾದ ಸಮಯ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ.
ಧ್ವನಿ ಮುದ್ರಿತ ಈ ಕವಿಗೋಷ್ಠಿಯನ್ನು ಸಂಕ್ರಾಂತಿ ಹಬ್ಬದಂದು ಪ್ರಸಾರ ಮಾಡಲಾಗುವುದು.
ನಾಳೆ ನಗರಾಭಿವೃದ್ಧಿ ಸಚಿವರ ಪ್ರವಾಸ
ತುಮಕೂರು: ರಾಜ್ಯ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಅವರು ಜನವರಿ 8 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು. ಅಂದು ಬೆಳಿಗ್ಗೆ 10.30 ಕ್ಕೆ ತುಮಕೂರಿಗೆ ಆಗಮಿಸುವ ಸಚಿವರು, ಬೆಳಿಗ್ಗೆ 11 ಗಂಟೆಗೆ ತುಮಕೂರು ಮಹಾನಗರ ಪಾಲಿಕೆ ಕಚೇರಿಗೆ ಭೇಟಿ ನೀಡುವರು. ಮಧ್ಯಾಹ್ನ 2.30 ಗಂಟೆಗೆ ತುಮಕೂರಿನ ಟೂಡಾ ಸಭಾಂಗಣದಲ್ಲಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವರು. ನಂತರ ಸಂಜೆ 4 ಗಂಟೆಗೆ ತುಮಕೂರು ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಕೈಗೆತ್ತಿಕೊಂಡಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಮಾಡುವರು. ಸಂಜೆ 7 ಗಂಟೆಗೆ ತುಮಕೂರಿನಿಂದ ಬೆಂಗಳೂರಿಗೆ ನಿರ್ಗಮಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

