ಲಾರಿಯ ಮೇಲೆ ಬಿದ್ದ ತಡೆಗೋಡೆ, ಸಾಲು ಸಾಲು ನಿಂತ ವಾಹನಗಳು
ಕ.ಪ್ರ.ವಾರ್ತೆ , ತುರುವೇಕೆರೆ , ಜ.7
ರೇಲ್ವೆ ಹಳಿಗೆ ಅನಾಹುತವಾಗದಿರಲಿ ಎಂದು ರೇಲ್ವೆ ಸೇತುವೆಯ ಕೆಳಗೆ ಹಾಕಲಾಗುವ ಕಬ್ಬಿಣದ ತಡೆಗೋಡೆ ಲಾರಿಯ ಮೇಲೆ ಬಿದ್ದ ಪರಿಣಾಮ ಯಾವುದೇ ವಾಹನಗಳು ಸಾಗಲು ಸಾಧ್ಯವಾಗದೇ ನೂರಾರು ವಾಹನಗಳು ಸಾಲು ಸಾಲಾಗಿ ನಿಂತ ಘಟನೆ ಸಮೀಪದ ಬಾಣಸಂದ್ರದಲ್ಲಿ ನಡೆದಿದೆ.
ಸೋಮವಾರ ರಾತ್ರಿ ಕೆಬಿ ಕ್ರಾಸ್ನಿಂದ ಇದ್ದಿಲನ್ನು ತುಂಬಿಕೊಂಡು ತಮಿಳುನಾಡಿನ ಕೊಯಮತ್ತೂರಿಗೆ ತೆರಳುತ್ತಿದ್ದ ಲಾರಿಗೆ ರೇಲ್ವೆ ಹಳಿಯಿಂದ ಸುಮಾರು 100 ಮೀಟರ್ ಅಂತರದಲ್ಲಿ ನಿರ್ಮಿಸಲಾಗುತ್ತಿದ್ದ ಕಬ್ಬಿಣದ ತಡೆಗೋಡೆ ಲಾರಿಯ ಮೇಲ್ಭಾಗದಲ್ಲಿ ತುಂಬಲಾಗಿದ್ದ ಇದ್ದಿಲಿನ ಸರಕಿಗೆ ಸಿಲುಕಿಕೊಂಡಿದೆ. ಸೋಮವಾರ ಸಾಯಂಕಾಲವಿನ್ನೂ ತಡೆಗೋಡೆಯ ನಿರ್ಮಾಣ ಮಾಡಲಾಗುತ್ತಿತ್ತು. ಕಬ್ಬಿಣದ ಸರಳುಗಳನ್ನು ಭದ್ರ ಪಡಿಸದ ಹಿನ್ನೆಲೆಯಲ್ಲಿ ಇಡೀ ತಡೆಗೋಡೆ ಲಾರಿಯ ಮೇಲ್ಭಾಗದ ಮೇಲೆ ಕುಳಿತುಕೊಂಡಿದೆ. ಲಾರಿ ಸುಮಾರು 100 ಮೀಟರ್ ಚಲಿಸಿದಾಗ ರೇಲ್ವೆಯ ಹಳಿಗೆ ತಗುಲಿ ಮುಂದೆ ಚಲಿಸದಂತಾಗಿದೆ. ಆಗಲೇ ಲಾರಿಯ ಚಾಲಕನಿಗೆ ತನ್ನ ಲಾರಿಯ ಮೇಲೆ ಕಬ್ಬಿಣದ ತಡೆ ಗೋಡೆ ಬಿದ್ದಿದೆ ಎಂದು ಅರಿವಾಗಿದೆ.
ರಾತ್ರಿ ಹಿಂದಕ್ಕೂ ಹೋಗಲಾರದೇ, ಮುಂದಕ್ಕೂ ಹೋಗಲಾರದ ಸ್ಥಿತಿಯಲ್ಲಿ ಲಾರಿ ಇತ್ತು. ಇದರಿಂದಾಗಿ ಯಾವುದೇ ವಾಹನ ಚಲಿಸಲು ಸಾಧ್ಯವಾಗಿಲ್ಲ. ಈ ರಸ್ತೆ ಹುಮ್ನಾಬಾದ್ - ಶ್ರೀರಂಗಪಟ್ಟಣದ ಪ್ರಮುಖ ರಾಜ್ಯ ಹೆದ್ದಾರಿಯೂ ಆಗಿದ್ದು ನೂರಾರು ವಾಹನಗಳು ರಾತ್ರಿಯಿಂದಲೇ ಸಾಲುಗಟ್ಟಿ ನಿಂತಿದ್ದವು. ಬೆಳಿಗ್ಗೆ ರೇಲ್ವೆ ಪೊಲೀಸರು, ಸ್ಥಳೀಯ ಪೊಲೀಸರು ಹಾಗೂ ಸಾರ್ವಜನಿಕರ ನೆರವಿನೊಂದಿಗೆ ಕ್ರೇನ್ ಮೂಲಕ ಲಾರಿಯ ಮೇಲಿದ್ದ ಕಬ್ಬಿಣದ ತಡೆಗೋಡೆಯನ್ನು ತೆಗೆಯಲಾಯಿತು. ತದ ನಂತರವೇ ಸುಗಮ ಸಂಚಾರವಾಗಲು ಸಾಧ್ಯವಾಯಿತು. ಅದುವರೆಗೂ ಹೊಸಳ್ಳಿ ಮಾರ್ಗವಾಗಿ ವಾಹನಗಳು ಸಾಗಿದವು. ಆ ಮಾರ್ಗದಲ್ಲಿಯೂ ವಾಹನ ಸಂಚಾರ ದಟ್ಟಣೆ ಜಾಸ್ತಿಯಾಗಿ ಅಲ್ಲೂ ವಾಹನ ಸಂಚಾರವಾಗಲಿಲ್ಲ.
ಗುತ್ತಿಗೆದಾರರ ನಿರ್ಲಕ್ಷಕ್ಕೆ ಆಕ್ಷೇಪ: ರೇಲ್ವೆ ಹಳಿಗೆ ಸುಮಾರು 100 ಮೀಟರ್ ಅಂತರದಲ್ಲಿ ನಿರ್ಮಿಸಲಾಗುತ್ತಿದ್ದ ಕಬ್ಬಿಣದ ತಡೆ ಗೋಡೆ ನಿರ್ಮಾಣವನ್ನು ಸೋಮವಾರವಷ್ಟೇ ಕೈಗೆತ್ತಿಕೊಳ್ಳಲಾಗಿತ್ತು. ತಡೆಗೋಡೆ ನಿರ್ಮಾಣದ ಸಂಬಂಧ ಯಾವುದೇ ಫಲಕವನ್ನಾಗಲೀ ಅಥವಾ ಯಾವುದೇ ವ್ಯಕ್ತಿಗಳನ್ನು ಸ್ಥಳದಲ್ಲಿ ಇರಿಸದೇ ಕರ್ತವ್ಯ ನಿರ್ಲಕ್ಷ ಮಾಡಿದ್ದರಿಂದಲೇ ಈ ಅನಾಹುತ ಸಂಭವಿಸಲು ಸಾಧ್ಯವಾಯಿತು ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು. ಲಾರಿ ದಾರಿ ಮಧ್ಯೆ ನಿಂತ ಪರಿಣಾಮ ಯಾವುದೇ ವಾಹನಗಳು ಓಡಾಡಲಿಲ್ಲ. ಪರಿಣಾಮವಾಗಿ ರೈಲಿನಿಂದ ಬಂದ ಪ್ರಯಾಣಿಕರು ಹಾಗೂ ಕೆಬಿ ಕ್ರಾಸ್ - ತುರುವೇಕೆರೆಯಿಂದ ಬೇರೆಡೆ ಹೋಗುವ ಪ್ರಯಾಣಿಕರು ಪರದಾಡಬೇಕಾಯಿತು.
ರೇಲ್ವೇ ಪೊಲೀಸ್ನ ಎಎಸ್ಐ ಪುಟ್ಟಸ್ವಾಮಿ ಹಾಗೂ ದಂಡಿನ ಶಿವರ ಪೊಲೀಸರು ಸೂಕ್ತ ಭದ್ರತೆ ಒದಗಿಸಿದ್ದರು. ಯಾವುದೇ ಅನಾಹುತ ಸಂಭವಿಸಲಿಲ್ಲ. ಬೇರೆಡೆ ಹೋಗಲು ಹಿಂದಕ್ಕೆ ಸಾಗುತ್ತಿದ್ದ ಲಾರಿಯೊಂದು ದಾರಿಯ ಬದಿಯಲ್ಲಿ ಹೂತು ಹೋದ ಪ್ರಸಂಗವೂ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

