ಶೆಟ್ಟಿಹಳ್ಳಿ ಕೆಳ ಸೇತುವೆ ಗೊಂದಲದ ಗೂಡು
ಕನ್ನಡಪ್ರಭ ವಾರ್ತೆ , ತುಮಕೂರು , ಜ.7
ನಗರದ ಶೆಟ್ಟಿಹಳ್ಳಿ ರೇಲ್ವೆ ಗೇಟ್ ಬಳಿ ನಿರ್ಮಿಸುತ್ತಿರುವ ಕೆಳಸೇತುವೆ ಕೆಲವು ದಿನಗಳಿಂದ ಗೊಂದಲದ ಗೂಡಾಗಿದೆ.
ಈ ಸಂಬಂಧ ಶೆಟ್ಟಿಹಳ್ಳಿ ರೇಲ್ವೆ ಕೆಳಸೇತುವೆ ನಿರ್ಮಾಣ ಹೋರಾಟ ಸಮಿತಿಯು ಈ ಬಗ್ಗೆ ಮಾಹಿತಿ ಕಲೆ ಹಾಕಲು ರೇಲ್ವೆ ಎಂಜಿನಿಯರ್ ಸಂಪತ್ ಕುಮಾರ್ ಹಾಗೂ ಟೂಡಾ ಕಚೇರಿಗೆ ಭೇಟಿ ನೀಡಿತು.
ಈ ಸಂದರ್ಭದಲ್ಲಿ ರೇಲ್ವೆ ಇಲಾಖೆಯು ಟೂಡಾಗೆ ಕೆಳಸೇತುವೆ ಕಾಮಗಾರಿಯ ನಕ್ಷೆಯನ್ನು ಹಸ್ತಾಂತರಿಸಿದ್ದು ಅದನ್ನು ಟೂಡಾ ಕೂಡ ಅನುಮೋದಿಸಿದೆ. ಈ ಕಾಮಗಾರಿಗೆ ಸುಮಾರು 4 ಕೋಟಿ 32 ಲಕ್ಷ ರು.ಗಳನ್ನು ಟೂಡಾ ರೇಲ್ವೆ ಇಲಾಖೆಗೆ ಹಸ್ತಾಂತರಿಸಿದೆ.
ಈ ಟೆಂಡರ್ ಕೋಟೇಶ್ವರ ರಾವ್ ಎಂಬ ಗುತ್ತಿಗೆದಾರರಿಗೆ ಆಗಿದ್ದು ಕಾರ್ಯ ಪ್ರಾರಂಭವಾಗಿದೆ. ಇದರಲ್ಲಿ ರೇಲ್ವೆಗೆ ಸಂಬಂದಿಸಿದಂತೆ ರೇಲ್ವೆ ಜಾಗದ ಮಧ್ಯಭಾಗದಿಂದ ಸೋಮೇಶ್ವರದ ಕಡೆಗೆ 75 ಮೀಟರ್ ಹಾಗೂ ಶೆಟ್ಟಿಹಳ್ಳಿ ಕಡೆಗೆ 175 ಮೀಟರ್ ಅಂದರೆ ಈಗಿರುವ ರಸ್ತೆ ಡಿವೈಡರ್ ಇರುವ ಜಾಗದವರೆವಿಗೂ ರೇಲ್ವೆ ಇಲಾಖೆಯ ಗುತ್ತಿಗೆದಾರರಿಗೆ ರಸ್ತೆ ನಿರ್ಮಾಣ ಕಾಮಗಾರಿ ನೀಡಲಾಗಿದೆ.
ಆದರೆ ಇದರಲ್ಲಿ ಆಸ್ತಿದಾರರ ಪರಿಹಾರದ ಹಣವಾಗಲೀ, ಸಂಪರ್ಕ ರಸ್ತೆ ನಿರ್ಮಿಸಲು ಬೇಕಾಗಿರುವ ಹಣವಾಗಲೀ ಸೇರಿರುವುದಿಲ್ಲ. ಇದನ್ನು ಜಿಲ್ಲಾಡಳಿತವೇ ಭರಿಸಬೇಕು ಎಂದು ಸಮಿತಿ ತಿಳಿಸಿದೆ.
ತಕರಾರಿಲ್ಲ: ಕೆಳಸೇತುವೆ ನಿರ್ಮಾಣಕ್ಕೆ ಜಾಗ ಬಿಟ್ಟುಕೊಡಲು ಯಾವ ಆಸ್ತಿದಾರರ ತಕರಾರೂ ಇಲ್ಲ, ಅದರೆ ಪರಿಹಾರ ಹಣದ ಬಗ್ಗೆ ಮಾತ್ರ ಸಂದಾನ ನಡೆಯಬೇಕಿದೆ ಎಂದು ಟೂಡಾ ಆಯುಕ್ತರು ಸ್ಪಷ್ಟೀಕರಿಸಿದರು. ಆಸ್ತಿದಾರರಿಗೆ ಪರಿಹಾರ ಹಣ ಶೀಘ್ರವೇ ಹಣ ನೀಡಿ ರೇಲ್ವೆ ಇಲಾಖೆಯ ಕಾಮಗಾರಿ ಮುಗಿಯುವುದರೊಳಗಾಗಿ ಸಂಪರ್ಕ ರಸ್ತೆಗಳ ಕಾಮಗಾರಿಗೆ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಬೇಕೆಂದು ಹೋರಾಟ ಸಮಿತಿಯು ತಿಳಿಸಿತು.
ಇದಕ್ಕೆ ಬೇಕಾಗುವ ಹಣವನ್ನು ಮಹಾನಗರ ಪಾಲಿಕೆಗೆ ಬರುವ 100 ಕೋಟಿ ರು.ಗಳಲ್ಲಿ ಮೀಸಲಿರಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ಆಯುಕ್ತರಿಗೆ ತಿಳಿಸಲಾಯಿತು. ರೇಲ್ವೆ ಎಂಜಿನಿಯರ್ ಸಂಪತ್ ಕುಮಾರ್ ಹಾಗೂ ಟೂಡಾ ಎಂಜಿನಿಯರ್ ನಾಗರಾಜ್ ಅವರು ಈ ಸಂದರ್ಭದಲ್ಲಿ ಹೋರಾಟ ಸಮಿತಿಗೆ ಸಹಕರಿಸಿದರು. ನಿಯೋಗದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಕೆ.ವಿ.ಪ್ರಕಾಶ್, ಗೌರವಾಧ್ಯಕ್ಷ ಎನ್. ಸತ್ಯನಾರಾಯಣ್, ಉಪ್ಪಾಧ್ಯಕ್ಷ ಟಿ.ಬಿ. ಜಗದೀಶ್, ಎನ್. ಸತೀಶ್, ಕಾರ್ಯದರ್ಶಿ ಟಿ.ಪಶುಪತಿ ಮುಂತಾದವರು ಹಾಜರಿದ್ದರು.
ತೆರೆವುಗೊಳಿಸಲು ಮನವಿ: ತುಮಕೂರು ನಗರದಲ್ಲಿ ಶೆಟ್ಟಿಹಳ್ಳಿ ರೇಲ್ವೆ ಗೇಟ್ ಬಳಿ ಕೆಳಸೇತುವೆ ಕಾಮಗಾರಿ ಪ್ರಾರಂಭವಾಗಿರುವುದರಿಂದ ಈ ಭಾಗದ ಸಾರ್ವಜನಿಕರಿಗೆ ಸಂಚರಿಸಲು ಬಹಳಷ್ಟು ತೊಂದರೆ ಆಗುತ್ತಿದೆ ಎಂದು ಹೋರಾಟ ಸಮಿತಿ ತಿಳಿಸಿದೆ.
ಏಕೆಂದರೆ ಉಪ್ಪಾರಹಳ್ಳಿ ರೇಲ್ವೆ ಗೇಟ್ ದಿಢೀರನೆ ಮುಚ್ಚಿರುವುದು ನುಂಗಲಾರದ ತುತ್ತಾಗಿದೆ. ಬಳಷ್ಟು ಜನರು ಸೋಮೇಶ್ವರ ಪುರಂ, ಎಸ್.ಐ.ಟಿ , ಗಂಗೋತ್ರಿನಗರದ ಕಡೆ ಸಂಚರಿಸುವವರು ಈ ಗೇಟ್ ಮುಖಾಂತರ ಹಾದು ಹೋಗುತ್ತಿದ್ದರು. ಆದರೆ ಅವೈಜ್ನಾನಿಕವಾಗಿ ಅಪೂರ್ಣವಾಗಿ ನಿರ್ಮಾಣವಾಗಿರುವ ಉಪ್ಪಾರಹಳ್ಳಿ ರೇಲ್ವೆ ಮೇಲ್ಸೇತುವೆ ಕಿರಿದಾಗಿದ್ದು ಎರಡು ವಾಹನಗಳು ಏಕ ಕಾಲದಲ್ಲಿ ಸಂಚರಿಸಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಎತ್ತಿನ ಗಾಡಿ, ಜಟಕಾ ಗಾಡಿ, ಟ್ರ್ಯಾಕ್ಟರ್ ಮುಂತಾದವುಗಳು ಸಂಚರಿಸುವಾಗ ಅದರ ಹಿಂದೆಯೇ ಹೋಗಿ ದಡ ಸೇರಬೇಕಾಗಿದೆ. ಇಂತಹ ಸಂದರ್ಭವಿರುವುದನ್ನು ಗಮನಿಸಿಯೂ ಯಾವೊಬ್ಬ ಜನಪ್ರತಿನಿಧಿಯೂ ಗೇಟ್ ಮುಚ್ಚುವಾಗ ತಡೆಯುವ ಪ್ರಯತ್ನ ಪಡದ ಫಲವಾಗಿ ಈಗ ಸಾರ್ವಜನಿಕರು ನೋವನ್ನು ಅನುಭವಿಸುವಂತಾಗಿದೆ.
ಸಂಸದರನ್ನು ಸಮಿತಿಯವರು ಭೇಟಿ ಮಾಡಿದಾಗ ಆಡಿಟ್ ಅಬ್ಜಕ್ಷನ್ ಅಗಿದೆ ಎಂದು ತಿಳಿಸಿರುತ್ತಾರೆ. ಆದರೆ ಅದನ್ನು ಸಂಸದರು ರೇಲ್ವೆ ಮಂತ್ರಿಗಳಾದ ಅದರಲ್ಲೂ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆಯವರೊಂದಿಗೆ ಚರ್ಚಿಸಿ ಮತ್ತೆ ಸಂಚಾರಕ್ಕೆ ಅನುವು ಮಾಡಿಕೊಡುವುದು ಅಸಾಧ್ಯದ ಕೆಲಸವೇನೂ ಅಲ್ಲ ಎಂದಿದ್ದಾರೆ.
ಹೋರಾಟ ಸಮಿತಿಯು ಈ ಬಗ್ಗೆ ಅನೇಕ ಬಾರಿ ತುಮಕೂರು ನಗರ ಶಾಸಕರು, ಸಂಸದರನ್ನು ಭೇಟಿ ಮಾಡಿ ಮತ್ತೆ ಸಂಚಾರಕ್ಕೆ ಅನುವು ಮಾಡಿಕೊಡಲು ಪ್ರಯತ್ನಿಸುತ್ತಿದೆ. ಆದರೆ ಇದು ಆಡಳಿತಾತ್ಮಕವಾಗಿ ಸಾಧ್ಯವಾಗದೇ ಇದ್ದರೂ ಮಾನವೀಯತೆಯ ದೃಷ್ಟಿಯಿಂದ ಕೊನೇ ಪಕ್ಷ ಶೆಟ್ಟಿಹಳ್ಳಿ ಕೆಳಸೇತುವೆ ನಿರ್ಮಾಣ ಪೂರ್ಣ ಗೊಳ್ಳುವವರೆಗೂ ಸಂಚಾರಕ್ಕೆ ಬಿಟ್ಟುಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ಹೋರಾಟ ಸಮಿತಿ ವಿನಂತಿಸಿದೆ.
ಇಂದು ಉಪ್ಪಾರಹಳ್ಳಿ ರೇಲ್ವೆ ಗೇಟ್ ಓಪನ್
ತುಮಕೂರು: ಕಳೆದ 10 ದಿನಗಳಿಂದ ಏಕಾಏಕಿ ಮುಚ್ಚಾಲಾಗಿದ್ದ ಉಪ್ಪಾರಹಳ್ಳಿ ರೈಲ್ವೆ ಗೇಟನ್ನು ಜ.8 ರಂದು ಬೆಳಗ್ಗೆ 10-30 ಕ್ಕೆ ಮತ್ತೆ ತೆರೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಶೆಟ್ಟಿಹಳ್ಳಿ ರೇಲ್ವೆ ಕೆಳಸೇತುವೆ ಕಾಮಗಾರಿ ಆರಂಭವಾದ ಹಿನ್ನೆಲೆಯಲ್ಲಿ ಉಪ್ಪಾರಹಳ್ಳಿ ರೇಲ್ವೇ ಗೇಟ್ ಮೂಲಕ ಈ ಭಾಗದ ಜಯನಗರ, ಮಾರುತಿ ನಗರ, ಶೆಟ್ಟಿಹಳ್ಳಿ ಹಾಗೂ ಉಪ್ಪಾರಹಳ್ಳಿ, ವಿಜಯನಗರದ ಕಡೆ ಜನತೆ, ವಾಹನ ಸವಾರರು ಸಂಚರಿಸುತ್ತಿದ್ದರು. ಉಪ್ಪಾರಹಳ್ಳಿ ರೈಲ್ವೆ ಗೇಟ್ ಏಕಾಏಕಿ ಮುಚ್ಚಿದ್ದರಿಂದ ಈ ಭಾಗದ ಜನತೆಗೆ ತೊಂದರೆಯಾಗಿತ್ತು. ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಷಫಿ ಅಹಮದ್, ನಗರಸಭಾ ಸದಸ್ಯ ಪಟೇಲ್ ನಾಗರಾಜರಾವ್ ಹಾಗೂ ಹೋರಾಟ ಸಮಿತಿ ಪದಾಧಿಕಾರಿಗಳು ರೇಲ್ವೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದ ಹಿನ್ನೆಲೆಯಲ್ಲಿ ಜ. 8 ರಂದು ಬೆಳಗ್ಗೆ 10-30 ಕ್ಕೆ ಉಪ್ಪಾರಹಳ್ಳಿ ರೈಲ್ವೆ ಗೇಟ್ ತೆರೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

