ತುಮಕೂರು

ಗ್ಯಾಸ್, ಪೆಟ್ರೋಲ್ ದರ ಏರಿಕೆಗೆ ಬಿಜೆಪಿ ಆಕ್ರೋಶ, ಪ್ರತಿಭಟನೆ

Published On :

ಪಾವಗಡ: ಗ್ಯಾಸ್, ಪೆಟ್ರೋಲ್ ದರ ಹಾಗೂ ದಿನ ಬಳಕೆ ವಸ್ತುಗಳ ಮೇಲೆ ಬೆಲೆ ಏರಿಕೆ ಸೇರಿದಂತೆ ಯುಪಿಎ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಬುಧವಾರ ತಾಲೂಕು ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು.
ದಿನ ಬಳಕೆ ವಸ್ತುಗಳು ಮತ್ತು ವಾರಕ್ಕೊಮ್ಮೆ ಗ್ಯಾಸ್ ದರ ಏರಿಕೆ ಜನಸಾಮಾನ್ಯರ ಮೇಲೆ ನಿತ್ಯ ಆಗುತ್ತಿರುವ ಹೊರೆ ಹಿನ್ನೆಲೆಯಲ್ಲಿ ಬೆಳಿಗ್ಗೆ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಘೋಷಣೆಗಳನ್ನು ಮೊಳಗಿಸುವ ಮೂಲಕ ತಾಲೂಕು ಕಚೇರಿ ಬಳಿ ಆಗಮಿಸಿ ಯುಪಿಎ ಸರ್ಕಾರ ನೀತಿಯನ್ನು ಉಗ್ರವಾಗಿ ಖಂಡಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ತಾ.ಅಧ್ಯಕ್ಷ ವಕೀಲ ಮುರಳೀಧರ್ ಮಾತನಾಡಿ ಯುಪಿಎ ಸರ್ಕಾರ ಭ್ರಷ್ಟಚಾರದಿಂದ ಕೂಡಿದ್ದು ದಿನೇ ದಿನೇ ದಿನ ಬಳಿಕೆ ವಸ್ತುಗಳು ಮತ್ತು ವಾರಕ್ಕೊಮ್ಮೆ ಅಡಿಗೆ ಸಿಲೆಂಡರ್ ಗ್ಯಾಸ್ ದರ ಏರಿಕೆ ಹಾಗೂ ಸಿಲೆಂಡರ್ ಗ್ಯಾಸ್‌ಗೆ ಪ್ರತಿ ತಿಂಗಳು ಸರ್ಕಾರ ನೀಡುವ ಸಹಾಯ ಧನ ವಿಳಂಬದಿಂದಾಗಿ ದೇಶದ ಜನತೆ ತತ್ತರಿಸಿ ಹೋಗಿದ್ದಾರೆ. ಕೇಂದ್ರ ಸರ್ಕಾರದ ನೀತಿಯ ವಿರುದ್ಧ ನಿತ್ಯ ಛೀಮಾರಿ ಹಾಕುತ್ತಿದ್ದಾರೆಂದು ಅವರು ಆರೋಪಿಸಿದರು.
ಗ್ಯಾಸ್ ಹಾಗೂ ದಿನ ಬಳಿಕೆ ವಸ್ತುಗಳ ಮೇಲೆ ವಿಧಿಸಿದ ದರ ಕೂಡಲೇ ಹಿಂಪಡೆದು ಶ್ರೀಸಾಮಾನ್ಯರ ಜೀವನಕ್ಕೆ ಅನುಕೂಲ ಕಲ್ಪಿಸಬೇಕು. ಕೂಡಲೇ ತಮ್ಮ ಜನ ವಿರೋಧಿ ಧೋರಣೆಗಳನ್ನು ಬದಲಾಯಿಸದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ದೇಶಾದ್ಯಂತ ಉಗ್ರ ಪ್ರತಿಭಟನೆ ನಡೆಸುವ ಅನಿವಾರ್ಯತೆ ಇದೆ ಎಂದು ಅವರು ಎಚ್ಚರಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ.ಗಿರೀಶ್ ಮಾತನಾಡಿ ಪೆಟ್ರೋಲ್ ದರ ಸೇರಿದಂತೆ ಯುಪಿಎ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಜನ ಆಕ್ರೋಶ ಭರಿತರಾಗಿದ್ದು ಸಾಮಾನ್ಯರ ನೆಮ್ಮದಿ ಜೀವನಕ್ಕೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. ಅಭಿವೃದ್ಧಿ ಚಿಂತಕ ನರೇಂದ್ರ ಮೋದಿ ದೇಶದ ಅತ್ಯುತ್ತಮ ನಾಯಕರಾಗಿದ್ದು ಅವರನ್ನು ಪ್ರಧಾನಿ ಮಾಡಲೇ ಬೇಕ, ಇದಕ್ಕೆ ಎಲ್ಲರು ಶ್ರಮಿಸಬೇಕಾದ ಅಗತ್ಯವಿದೆ. ದೇಶಾದ್ಯಂತ ಬದಲಾವಣೆ ಸೂಚನೆಗಳು ಈಗಾಗಲೇ ವ್ಯಕ್ತವಾಗಿದ್ದು ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುವುದು ಖಂಡಿತವೆಂದರು.
ಸಮಸ್ಯೆಗಳ ನಿವಾರಣೆಗೆ ಈ ಭಾಗದ ಸಂಸದ ಜನಾರ್ದನಸ್ವಾಮಿ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಮತ್ತೆ ಆಯ್ಕೆ ಮಾಡಬೇಕೆಂದು ಮುಖಂಡ ಶಿವಕುಮಾರ್ ಸಾಕೇಲ್ ತಿಳಿಸಿದರು.
ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ, ಯುವ ಮೋರ್ಚ ಅಧ್ಯಕ್ಷ ರವಿ, ಎಸ್‌ಸಿ ಮೋರ್ಚ ಅಧ್ಯಕ್ಷ ಉಪ್ಪಾರಹಳ್ಳಿ ರವಿ ಕುಮಾರ್, ಪಕ್ಷದ ತಾ.ಬಿಸಿಎಂ ಅಧ್ಯಕ್ಷ ದವಡಬೆಟ್ಟ ಪೂಜಾರಪ್ಪ ಇತರರು ಕೇಂದ್ರ ಸರ್ಕಾರ ನೀತಿ ಬಗ್ಗೆ ಕಿಡಿಕಾರಿದರು.
ತಹಸೀಲ್ದಾರ್ ಅಲ್ತಾಫ್ ಪಾಷಗೆ ಅವರಿಗೆ ಮನವಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.