ನಾಳೆ ಸಂಪಿಗೆ ಶ್ರೀನಿವಾಸ ವೈಕುಂಠ ಏಕಾದಶಿ
ಕ.ಪ್ರ. ವಾರ್ತೆ , ತುರುವೇಕೆರೆ , ಜ. 9
ತಾಲೂಕಿನ ಸುಪ್ರಸಿದ್ಧ ಸಂಪಿಗೆ ಶ್ರೀನಿವಾಸ ದೇವಾಲಯಸನ್ನಿಧಿಯಲ್ಲಿ ಜ.11 ರಂದು ವೈಭವೋಪೇತವಾಗಿ ವೈಕುಂಠ ಏಕಾದಶಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಹೋತ್ಸವ ಸಮಿತಿ ಮುಖಂಡ ಸಂ.ಕೃ. ಶ್ರೀಧರ್ ತಿಳಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.11 ರಂದು ನಡೆಯಲಿರುವ ವೈಕುಂಠ ಏಕಾದಶಿಯಂದು ಸಪ್ತದ್ವಾರುಖಾಂತರ ವೈಕುಂಠ ನಾರಾಯಣ ಅಲಂಕಾರ ಸೇವೆಯನ್ನು ಮಾಡಲಾಗುವುದು. ಆ ದ್ವಾರಗಳ ಮೂಲಕವೇ ಸ್ವಾಮಿಯವರ ದರ್ಶನವನ್ನು ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗ್ಗೆ 6 ರಿಂದ ರಾತ್ರಿ 9.30 ರವರೆಗೆ ದೇವರ ದರ್ಶನ ಏರ್ಪಡಿಸಲಾಗಿದೆ. ಸಾಯಂಕಾಲ 4 ರಿಂದ 6 ರ ವರೆಗೆ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಡಿ ದೇವರ ನಾಮಗಳು, ಜಾನಪದ ಗೀತೆಗಳು ಹಾಗೂ ಭರತ ನಾಟ್ಯ ಕಲಾ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಸಂಜೆ 6 ರಿಂದ ಜಾನಪದ ಕೋಗಿಲೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಬಾನಂದೂರು ಕೆಂಪಯ್ಯ ಮತ್ತು ಸಂಗಡಿಗರಿಂದ ಜಾನಪದ-ಭಕ್ತಿ ಸಿಂಚನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ರಾತ್ರಿ 9 ಕ್ಕೆ ಗುಬ್ಬಿ ತಾಲೂಕಿನ ಸುಂಕಾಪುರದ ಕೆಂಚುರಾಯಸ್ವಾಮಿಯ ವಿಶೇಷ ಉತ್ಸವ ನಡೆಯಲಿದೆ. ದಾಸಪ್ಪ ಮತ್ತು ಸಂಗಡಿಗರಿಂದ ಸಾಮೂಹಿಕ ಶಂಖ ಉದ್ಘೋಷ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀಧರ್ ತಿಳಿಸಿದರು.
ಈ ಸಂಪಿಗೆಯ ಶ್ರೀನಿವಾಸ ದೇವಾಲಯ ತಾಲ್ಲೂಕಿನ ಪ್ರಮುಖ ಮುಜರಾಯಿ ದೇವಾಲಯವಾಗಿದೆ. ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯಿರುವ ಈ ದೇವಾಲಯಕ್ಕೆ ರಾಜ್ಯದ ವಿವಿಧ ಪ್ರದೇಶಗಳಲ್ಲೂ ಸಹ ಶ್ರೀನಿವಾಸ ದೇವರ ಭಕ್ತಾದಿಗಳು ಇದ್ದಾರೆ. 11 ರಂದು ನಡೆಯಲಿರುವ ವೈಕುಂಠ ಏಕಾದಶಿಗೆ ಬರುವ ಸುಮಾರು 20 ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ಪ್ರಸಾದ ಹಾಗೂ ಸಿಹಿ ತಿನಿಸಿನ ವ್ಯವಸ್ಥೆ ಮಾಡಲಾಗಿದೆ. ತುರುವೇಕೆರೆ ಮತ್ತು ನಿಟ್ಟೂರಿನಿಂದ ಕೆಎಸ್ಆರ್ಟಿಸಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ತಾಲೂಕಿನ 50 ಕ್ಕೂ ಹೆಚ್ಚಿನ ಭಜನಾ ಮಂಡಲಿಗಳು ಬೆಳಗ್ಗೆ 6 ರಿಂದ ರಾತ್ರಿ 9.30 ರವರೆಗೂ ನಿರಂತರ ಭಜನೆ ಮಾಡಲಿವೆ ಎಂದು ಶ್ರೀಧರ್ ವಿವರಿಸಿದರು. ಸಮಿತಿ ಮುಖಂಡರಾದ ಶ್ರೀನಿವಾಸ್ ಮೂರ್ತಿ, ಬಸವರಾಜು ಹಾಗೂ ಶಿವಲಿಂಗಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

