ಸೂಲಗಿತ್ತಿ ನರಸಮ್ಮಗೆ ಸನ್ಮಾನ
ತುರುವೇಕೆರೆ: ಸಾವಿರಾರು ಮಂದಿಗೆ ಉಚಿತವಾಗಿ ಪ್ರಸೂತಿ ಮಾಡಿಸಿರುವ ವಯೋಶ್ರೇಷ್ಠ ಸನ್ಮಾನ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ಅವರನ್ನು ತಾಲೂಕು ಗ್ರಾಮ ಸಹಾಯಕರ ಸಂಘದ ವತಿಯಿಂದ ಸತ್ಕರಿಸಲಾಯಿತು. ಪಟ್ಟಣದ ಬೇಟೆರಾಯಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ನಡೆದ ಸಭೆಯಲ್ಲಿ ನರಸಮ್ಮ ಸೇವೆಯನ್ನು ಬಣ್ಣಿಸಲಾಯಿತು. ಹಣದ ಗಳಿಕೆಯೇ ಇಂದು ಪ್ರಧಾನವಾಗಿರುವ ಈ ಕಾಲದಲ್ಲಿ ನರಸಮ್ಮ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಎಲ್ಲಾ ಸ್ತರದ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಜಿಲ್ಲಾ ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ್ ಹೇಳಿದರು.
ಇದೇ ವೇಳೆ ಸೂಲಗಿತ್ತಿ ನರಸಮ್ಮ ಅವರನ್ನು ಬ್ರಹ್ಮಕುಮಾರಿ ಸಮಾಜದ ಸದಸ್ಯರೂ ಅಭಿನಂದಿಸಿದರು. ತಾಲೂಕು ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಶಿವಣ್ಣ, ಜಿಲ್ಲಾ ಸಂಘದ ಉಪಾಧ್ಯಕ್ಷ ರಘು, ರಾಜು, ಸಂಘಟನಾ ಕಾರ್ಯದರ್ಶಿ ಡಿ.ಆರ್.ನಂಜಪ್ಪ, ತಿಮ್ಮಪ್ಪ, ಹೊನ್ನಪ್ಪ ಇತರರು ಭಾಗವಹಿಸಿದ್ದರು.
ತೆಂಗು ಬೇಸಾಯ ಪ್ರಾತ್ಯಕ್ಷಿಕೆ ಇಂದು
ತಿಪಟೂರು: ತಾಲೂಕಿನ ಬಿದರೆಗುಡಿ ಕಾವಲ್ನ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಘದ ವತಿಯಿಂದ ಇಂದು ಮತ್ತು ನಾಳೆ ತೆಂಗಿನಲ್ಲಿ ಸುಧಾರಿತ ಬೇಸಾಯ ಕ್ರಮಗಳು ಮತ್ತು ಮರ ಹತ್ತುವ ಸಾಧನ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತುರುವೇಕೆರೆ ತಾಲೂಕಿನ ರೈತರಿಗೆ ತೆಂಗಿನಲ್ಲಿ ಉತ್ಪಾದನಾ ತಾಂತ್ರಿಕತೆ, ಮಣ್ಣು, ನೀರು ಹಾಗೂ ತ್ಯಾಜ್ಯ ನಿರ್ವಹಣೆ ಕುರಿತು ವಿವಿಧ ವಿಷಯ ತಿಳಿಸಲಾಗುವುದು ಹಾಗೂ ಮರ ಹತ್ತುವ ಸಾಧನ ಉಪಯೋಗಿಸಿ ತೆಂಗಿನ ಮರ ಹತ್ತುವ ಕೌಶಲ್ಯವನ್ನೂ ತಿಳಿಸಿಕೊಡಲಾಗುವುದು. ಕೇಂದ್ರದ ಮುಖ್ಯಸ್ಥ ಡಾ.ಜಿ.ಎಂ.ಸುಜಿತ್, ಕೃಷಿ ವಿಜ್ಞಾನಿಗಳಾದ ಡಾ.ನಾಗಪ್ಪದೇಸಾಯಿ, ಡಾ.ಶ್ರೀನಿವಾಸ್, ಡಾ.ಶಂಕರ್, ಡಾ.ಮಮತಾ, ಡಾ.ರೂಪಾ ಬಿ.ಪಾಟೀಲ್, ಡಾ.ಶಿವಪ್ಪ ನಾಯಕ ಹಾಗೂ ಇತರೆ ನುರಿತ ತಜ್ಞರಿಂದ 20 ಜನ ಯುವ ರೈತರಿಗೆ ತರಬೇತಿ ಕೊಡಲಾಗುವುದು. ಹಿಂದಿನ ತರಬೇತಿಯಲ್ಲಿ ಭಾಗವಹಿಸಿ ಮರ ಹತ್ತುವ ಯಂತ್ರ ಉಪಯೋಗಿಸಿ ಮರ ಹತ್ತುವ ಕೌಶಲ್ಯತೆ ಹೊಂದಿರುವ ತುರುವೇಕೆರೆ ತಾಲೂಕಿನ ನಟರಾಜ್ ಅವರಿಂದ ಮರ ಹತ್ತುವ ಕೌಶಲ್ಯತೆಯನ್ನೂ ಇದೇ ವೇಳೆ ಹೇಳಿಕೊಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಿಲ್ಲಾ ಯುವ ಜೆಡಿಎಸ್ ಸಮಾಲೋಚನೆ
ತುಮಕೂರು: ಇಲ್ಲಿನ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಗುರುವಾರ ಯುವ ಜನತಾದಳ ಸಭೆ ಏರ್ಪಡಿಸಲಾಗಿತ್ತು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ಬೆಳ್ಳಿ ಲೋಕೇಶ್ ಸಮ್ಮುಖದಲ್ಲಿ ಸಭೆ ನಡೆಯಿತು. ಜಿಪಂ ಅಧ್ಯಕ್ಷೆ ಸಾಕಮ್ಮ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹುಚ್ಚಯ್ಯ, ಜೆಡಿಎಸ್ ಮುಖಂಡರಾದ, ಚಂದ್ರಬಾಬು, ವೆಂಕಟೇಶ್ಗೌಡ, ಮಹಿಳಾ ಘಟಕದ ಲಕ್ಷ್ಮಮ್ಮ, ಲೋಕೇಶ್, ಮುಜಾಯಿದ್, ಅನ್ಸರ್ ಹಾಗೂ ಪಾಲಿಕೆ ಸದಸ್ಯ ಬಾಲಕೃಷ್ಣ, ಪ್ರೆಸ್ ರಾಜಣ್ಣ ಮತ್ತು ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಬಂದಿದ್ದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಜಿಲ್ಲೆಯ ಎಲ್ಲಾ ಶಾಸಕರು, ತಾಪಂ ಅಧ್ಯಕ್ಷರು ಹಾಗೂ ಪಕ್ಷದ ಹಿರಿಯ ಮುಖಂಡರೊಂದಿಗೆ ಸಭೆ ಸೇರಿ ಚರ್ಚಿಸಿ ಸೂಕ್ತ ಪದಾಧಿಕಾರಿಗಳನ್ನು ಅಲ್ಲಿನ ತಾಲೂಕು, ಹೋಬಳಿ ಹಾಗೂ ವಾರ್ಡ್ಗಳಿಗೆ ನೇಮಿಸಲಾಗುವುದು ಎಂದು ಯುವ ಜಿಲ್ಲಾಧ್ಯಕ್ಷ ಬೆಳ್ಳಿ ಲೋಕೇಶ್ ಸಭೆಯಲ್ಲಿ ಮಾತನಾಡಿ ತಿಳಿಸಿದರು.
ಚೇಳೂರು ವ್ಯಕ್ತಿಯ ಅನುಮಾನಾಸ್ಪದ ಸಾವು
ಚೇಳೂರು: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಗೌರಿಪುರ ಗ್ರಾಮದಲ್ಲಿ ಗುಬ್ಬಯ್ಯ(55) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಸಂಬಂಧ ಮೃತನ ಪುತ್ರ ಸಿದ್ದರಾಜು ಎಂಬಾತ ಚೇಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಚೇಳೂರು ಪೊಲೀಸ್ ಠಾಣೆಯ ಪಿಎಸ್ಐ ರವಿಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಸಿಪಿಐ ಕುಮಾರಪ್ಪ ಭೇಟಿ ನೀಡಿ ಸ್ಥಳ ಪರೀಶೀಲಿಸಿದ್ದಾರೆ.
ನರೇಂದ್ರಬಾಬು ವಿಜಯೋತ್ಸವ
ತುರುವೇಕೆರೆ: ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ನರೇಂದ್ರಬಾಬು ವಿಜೇತರಾದ ್ಡಹಿನ್ನೆಲೆಯಲ್ಲಿ ಅವರ ಬೆಂಬಲಿಗರು ತಮ್ಮ ಮುಖಂಡ ಗೆಲವು ಸಾಧಿಸಿದ್ದರಿಂದ ವಿಜಯೋತ್ಸವ ಆಚರಿಸಿದರು. ಪಟ್ಟಣದ ಬಾಣಸಂದ್ರ ರಸ್ತೆಯ ಚೌಕದಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಣೆ ಮಾಡಿ ಸಂಭ್ರಮಿಸಿದರು. ನರೇಂದ್ರಬಾಬು ಸಹೋದರ ರವಿ, ಕಾರ್ಯಕರ್ತರಾದ ಹುಲ್ಲೇಕೆರೆ ರವಿಕುಮಾರ್, ಚೆಂಡೂರು ಪುರದ ರಾಜಗೋಪಾಲ್, ಬಾಣಸಂದ್ರದ ರಂಗೇಗೌಡ, ಪ್ರಕಾಶ್, ನಟರಾಜು ಮತ್ತಿತರರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.
ಗೃಹಿಣಿ ಆತ್ಮಹತ್ಯೆ
ಪಾವಗಡ: ಜೀವನದಲ್ಲಿ ಜಿಗುಪ್ಸೆಗೊಂಡ ಹಿನ್ನಲೆಯಲ್ಲಿ ಪಟ್ಟಣದ ದಂತ ವೈದ್ಯರೊಬ್ಬರ ಪತ್ನಿ ತಮ್ಮ ಮನೆಯಲ್ಲಿನ ಫ್ಯಾನ್ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಗುರುವಾರ ಮಧ್ಯಾಹ್ನ ಪಾವಗಡ ಸಮೀಪದ ನೆಲಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ನೇಣಿಗೆ ಶರಣಾಗಿ ಪ್ರಾಣ ಕಳೆದುಕೊಂಡ ದುರ್ದೈವಿ ದಂತ ವೈದ್ಯ ಡಾ. ಎಚ್. ಸುಧಾಕರರೆಡ್ಡಿ ಎಂಬುವರ ಪತ್ನಿ ನಂದಿನಿ (21). ಪಾವಗಡ ಪಟ್ಟಣದಲ್ಲಿ ಜನನಿ ದಂತ ಕ್ಲಿನಿಕ್ ತೆರೆದು ಸೇವೆ ಮಾಡುತ್ತಿದ್ದ ನೆಲಗಾನಹಳ್ಳಿ ಗ್ರಾಮದ ಡಾ. ಸುಧಾಕರರೆಡ್ಡಿ ಎಂಬುವರು 2 ವರ್ಷದ ಹಿಂದೆ ಪಾವಗಡ ಪಟ್ಟಣದ ನಂದಿನಿ ಎಂಬುವರನ್ನು ವಿವಾಹವಾಗಿದ್ದರು. ಜೀವನದಲ್ಲಿ ಜಿಗುಪ್ಸೆ ಹಿನ್ನಲೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇವರಿಗೆ 8ತಿಂಗಳ ಮಗುವಿದೆ.
ಸರ್ಕಾರಿ ಸವಲತ್ತು ಸದುಪಯೋಗವಾಗಲಿ
ಕುಣಿಗಲ್: ಸರ್ಕಾರ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಉಚಿತ ಸೈಕಲ್ ವಿತರಣೆ ಸೇರಿದಂತೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಯೋಜನೆಗಳು ಶೈಕ್ಷಣಿಕ ವರ್ಷದ ಪ್ರಾರಂಭಕ್ಕೆ ನೀಡಿದರೆ ಉದ್ದೇಶ ಸಾರ್ಥಕವಾಗುತ್ತದೆ,ಆದರೆ ವರ್ಷಾಂತ್ಯದಲ್ಲಿ ಕೊಡುವುದು ಯಾವುದಕ್ಕೂ ಪ್ರಯೋಜನವಿಲ್ಲ ಎಂದು ಶಾಸಕ ಡಿ.ನಾಗರಾಜಯ್ಯ ತಿಳಿಸಿದರು. ಪಟ್ಟಣದ ಮಹಾತ್ಮಗಾಂಧಿ ಪ.ಪೂ.ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬ್ಲಾಕ್ ಕಲಿಕೋತ್ಸವ ಹಾಗೂ ಉಚಿತ ಬೈಸಿಕಲ್
ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರವು ಕೈಗೊಳ್ಳುವ ಯೋಜನೆಗಳು ಕೇವಲ ನೆಪಮಾತ್ರಕ್ಕೆ ಇರಬಾರದು, ಅವುಗಳು ಪರಿಪೂರ್ಣವಾಗಿ ಅನುಷ್ಠಾನವಾಗಿ ಮೂಲ ಉದ್ದೇಶ ಈಡೇರಿಸುವಂತಾಗಬೇಕಿದೆ. ಇನ್ನೇನು ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಕೊನೆಗೊಳ್ಳುತ್ತಿದ್ದು ಈಗ ಸೈಕಲ್ ವಿತರಣೆಗೆ ಮುಂದಾಗಿರುವುದು ಯಾವುದಕ್ಕೂ ಪ್ರಯೋಜನವಾಗದು ಎಂದರು.
ತಾಪಂ ಅಧ್ಯಕ್ಷೆ ತೇಜಸ್ವಿನಿ ಕಾರ್ಯಕ್ರಮ ಉದ್ಘಾಟಿಸಿದ್ದು, ಬಿಆರ್ಸಿ ಗುಲ್ಜಾರ್ ಆಹಮದ್ ಪ್ರಾಸ್ತಾವಿಕ ಭಾಷಣ ಮಾಡಿದರು. ತಾಪಂ ಇಒ ಶಂಕರಪ್ಪ, ಪ್ರಾಚಾರ್ಯ ಕುಮಾರಯ್ಯ, ಪ್ರೊ. ಮಮತಾಮಣಿ, ಬಿಇಒ ಸಿದ್ದಯ್ಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೃಷ್ಣ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ರವಿಕುಮಾರ್, ಗೋಪಾಲ್, ಪುರಸಭೆ ಸದಸ್ಯ ಮಂಜು ಉಪಸ್ಥಿತರಿದ್ದರು,
ಸಮಸ್ಯೆಗೆ ಸ್ಪಂದಿಸುವೆ: ಕೆ.ಜೆ.ಜಾರ್ಜ್
ಪಾವಗಡ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಸಂಘಟಿತರಾಗಿ ಪಕ್ಷ ಬಲಪಡಿಸಿ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಕಾರ್ಯಕರ್ತರಿಗೆ ಕರೆ ನೀಡಿದರು. ತಿರುಮಣಿ ಪೊಲೀಸ್ ಠಾಣೆಯ ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮ ನೆರೆವೇರಿಸಿದ ನಂತರ ಪಟ್ಟಣದ ಕಾಂಗ್ರೆಸ್ ಕಚೇರಿಗೆ ಆಗಮಿಸಿ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ಇಲ್ಲಿನ ಕುಡಿವ ನೀರಿನ ಸಮಸ್ಯೆ, ಬಡವರ ಬವಣೆ ಸೇರಿದಂತೆ ಸದಾ ಬರಕ್ಕೆ ತುತ್ತಾಗಿರುವ ಈ ತಾಲೂಕಿನ ಜ್ವಲಂತ ಸಮಸ್ಯೆಗಳ ಬಗ್ಗೆ ಸಿಎಂ ಬಳಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಮಾಜಿ ಸಚಿವ ವೆಂಕಟರಮಣಪ್ಪ, ಹಿರಿಯ ಮುಖಂಡರಾದ ತಾಳೇಮರದಹಳ್ಳಿ ನರಸಿಂಹಯ್ಯ, ಜಿ.ಎಸ್.ಧರ್ಮಪಾಲ್, ಜಿಪಂ ಮಾಜಿ ಅಧ್ಯಕ್ಷ ಜಂಪಯ್ಯ, ಎಚ್.ವಿ.ವೆಂಕಟೇಶ್, ಸುದೇಶ್ಬಾಬು ಮತ್ತಿತರರು ಉಪಸ್ಥಿತರಿದ್ದರು.
19 ರಿಂದ ಪಲ್ಸ್ ಪೋಲಿಯೋ
ತುಮಕೂರು: ಜಿಲ್ಲೆಯಲ್ಲಿ ಜ.19 ರಿಂದ 22 ರವರೆಗೆ ಮೊದಲನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚನ್ನಮಲ್ಲಯ್ಯ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಚಾಲನಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಸಭೆಗೆ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ 0-5 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಿದ್ದು, ಇದಕ್ಕಾಗಿಯೇ 1198 ಬೂತ್ ಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 0-5ರೊಳಗಿನ -17006, ಗುಬ್ಬಿ 21573, ಕೊರಟಗೆರೆ -15304, ಕುಣಿಗಲ್ -25235, ಮಧುಗಿರಿ -27732, ಪಾವಗಡ -29205, ಶಿರಾ -35324, ತಿಪಟೂರು -18543, ತುಮಕೂರು -67860, ತುರುವೇಕೆರೆ -12330 ಸಂಖ್ಯೆಯ ಮಕ್ಕಳಿಗೆ ಲಸಿಕೆ ಹಾಕಲಿದ್ದು, 4510 ಲಸಿಕೆ ಹಾಕುವವರು, 246 ಮೇಲ್ವಿಚಾರಕರು ಪೋಲಿಯೋ ಕಾರ್ಯಕ್ರಮದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.
ಅವಧಿ ವಿಸ್ತರಣೆ
ತುಮಕೂರು: ಕರಾರಸಾ ನಿಗಮದ ವತಿಯಿಂದ ಅಂಗವಿಕಲರಿಗೆ ರಿಯಾಯತಿ ದರದಲ್ಲಿ ವಿತರಿಸಲಾದ ಬಸ್ಪಾಸ್ಗಳ ಅವಧಿ ಡಿ.31ಕ್ಕೆ ಮುಗಿದಿದ್ದು, ಸದರಿ ಪಾಸ್ಗಳನ್ನು ಫೆ.28 ರವರೆಗೆ ಮಾನ್ಯತೆ ಮಾಡಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಇಂದು ಮುಖ್ಯ ಶಿಕ್ಷಕರ ಸಭೆ
ತುಮಕೂರು: 2013-14 ನೇ ಸಾಲಿನಲ್ಲಿ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಶೈಕ್ಷಣಿಕ ಸಮಾವೇಶವನ್ನು ತುಮಕೂರಿನ ಸಿದ್ದಗಂಗಾ ಡಿಇಡಿ ಕಾಲೇಜಿನಲ್ಲಿ ಜ. 10 ರಂದು ಏರ್ಪಡಿಸಲಾಗಿದೆ ಎಂದು ತುಮಕೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆ ಉತ್ತಮಪಡಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದ್ದು, ತಪ್ಪದೇ ಹಾಜರಾಗುವಂತೆ ಕೋರಲಾಗಿದೆ.
ಶಿಕ್ಷಕರ ಜೇಷ್ಟತಾ ಅರ್ಹತಾ ಪಟ್ಟಿ
ತುಮಕೂರು: 1-1-2014 ರಲ್ಲಿದ್ದಂತೆ ಪದವಿ, ಬಿಇಡಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಸೇವಾ ನಿರತ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದದ ಜೇಷ್ಟತಾ ಪಟ್ಟಿಯನ್ನು ಸಿದ್ಧಪಡಿಸಲು ಶಿಕ್ಷಕರಿಂದ ಪ್ರಸ್ತಾವನೆ ಆಹ್ವಾನಿಸಲಾಗಿದೆ. ಜಿಲ್ಲಾ ವ್ಯಾಪ್ತಿಯ ಸೇವಾ ನಿರತ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದದ ಜಿಲ್ಲಾವಾರು, ವಿಷಯವಾರು ಜೇಷ್ಟತಾ ಅರ್ಹತಾ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಅಥವಾ ಪಟ್ಟಿಯಲ್ಲಿ ಹೆಸರು ಕೈಬಿಟ್ಟಿದ್ದಲ್ಲಿ, ಅಥವಾ ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಅರ್ಹ ಶಿಕ್ಷಕರು, ಇದೇ ತಿಂಗಳ 15 ರೊಳಗೆ ತಮ್ಮ-ತಮ್ಮ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪೂರಕ ದಾಖಲೆಯೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸಲು ತಿಳಿಸಿದೆ. ಅವಧಿ ಮೀರಿ ಬಂದ ಆಕ್ಷೇಪಣೆಗಳನ್ನು ಮಾನ್ಯ ಮಾಡುವುದಿಲ್ಲ. ಆಕ್ಷೇಪಣೆ ಪರಿಶೀಲಿಸಿ, ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ತುಮಕೂರು ದಕ್ಷಿಣ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಶಿಕ್ಷಕರಿಗೆ ಸನ್ಮಾನ
ತುಮಕೂರು: 2012-13 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತುಮಕೂರು ತಾಲೂಕು ವ್ಯಾಪ್ತಿಯಲ್ಲಿ ದ್ವಿತೀಯ ಭಾಷೆ ಇಂಗ್ಲಿಷ್ನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಹಾಗೂ ಇಂಗ್ಲಿಷ್ ನಲ್ಲಿ ಶೇ. 100 ಫಲಿತಾಂಶ ಬರಲು ಕಾರಣರಾಗಿರುವ ಶಿಕ್ಷಕರಿಗೆ ಇಂಗ್ಲಿಷ್ ಟೀಚರ್ಸ್ ಫೋರಂ ನಿಂದ ಅಭಿನಂದಿಸಲಾಗುವುದು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮಾಹಿತಿಯನ್ನು ಮುಖ್ಯೋಪಾಧ್ಯಾಯರ ದೃಢೀಕರಣದೊಂದಿಗೆ ಜ. 11 ರೊಳಗೆ ಆರ್.ಎಸ್. ಮನೋಹರ, ಜಂಟಿ ಕಾರ್ಯದರ್ಶಿ, ಇಂಗ್ಲಿಷ್ ಟೀಚರ್ಸ್ ಫೋರಂ, ಎಂಪ್ರೆಸ್ ಬಾಲಕಿಯರ ಪಪೂ ಕಾಲೇಜು, ತುಮಕೂರು, 9448840273, ಸಂಪರ್ಕಿಸುವಂತೆ ಕಾರ್ಯದರ್ಶಿ ಆರ್. ಸೋಮಶೇಖರ್, ಅಧ್ಯಕ್ಷ ಎಂ.ವಿ. ನಂಜಪ್ಪ ಕೋರಿದ್ದಾರೆ.
ವಿವೇಕಾನಂದ ಕಪ್ ಪಂದ್ಯಾವಳಿ
ಚಿಕ್ಕನಾಯಕನಹಳ್ಳಿ: ದೇಶದಲ್ಲಿ ಆತಂಕ ಪರಿಸ್ಥಿತಿಯಲ್ಲಿದ್ದು, ದೇಶವನ್ನು ಅಪಾಯದಿಂದ ಪಾರು ಮಾಡಲು ಯುವ ಜನತೆಯಿಂದ ಮಾತ್ರ ಸಾಧ್ಯ ಎಂದು ಮಾಜಿ ಶಾಸಕ .ಎಸ್.ಕಿರಣ್ಕುಮಾರ್ ಕಿವಿಮಾತು ಹೇಳಿದರು. ಗುರುವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಸ್ವಾಮಿ ವಿವೇಕಾನಂದ ಕಪ್ ಕ್ರಿಕೆಟ್ ಟೂರ್ನಿ ಉದ್ಘಾಟಿಸಿ ಅವರು ಮಾತನಾಡಿದರು. ಜಿಪಂ ಸದಸ್ಯ ಹೆಚ್.ಬಿ.ಪಂಚಾಕ್ಷರಿ, ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿದರು. ನಗರ ಬಿಜೆಪಿ ಮಾಜಿ ಅಧ್ಯಕ್ಷ ಸಿ.ಎಸ್.ಈಶ್ವರಭಾಗವತ್, ಸಿ.ಎಲ್.ಜಯದೇವ್, ಕುಡುರೆಗಾಡಿ ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

