ತುಮಕೂರು

ಸವಲತ್ತು ಸದುಪಯೋಗಪಡಿಸಿಕೊಳ್ಳಿ: ಉಪವಿಭಾಗಾಧಿಕಾರಿ ಬಿ. ಸಿಂಧು

Published On :

ತಿಪಟೂರು: ಸರ್ಕಾರವು ನೀಡುತ್ತಿರುವ ಸವಲತ್ತುಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಸದುಪಯೋಗಪಡಿಸಿಕೊಂಡು ಶಿಕ್ಷಣದ ಕಡೆ ಹೆಚ್ಚು ಗಮನಹರಿಸಬೇಕೆಂದು ಉಪವಿಭಾಗಾಧಿಕಾರಿ ಬಿ. ಸಿಂಧು ತಿಳಿಸಿದರು.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಬೈಸಿಕಲ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರವು ಸೈಕಲ್‌ಗಳನ್ನು ಉಚಿತವಾಗಿ ನೀಡುತ್ತಿದ್ದು, ಸೈಕಲ್‌ಗಳನ್ನು ಮನೆಬಳಕೆಗೆ ಉಪಯೋಗಿಸದೆ ಶಾಲೆಗೆ ಬಂದು ಹೋಗಲು ಮಾತ್ರ ಉಪಯೋಗಿಸಬೇಕು. ಶಾಲೆಗೆ ದೂರದಿಂದ ಬರವ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದರಲ್ಲದೆ ಗೈರು ಹಾಜರಾಗದಂತೆ ಶಾಲೆಗೆ ಬರಬೇಕೆಂದು ತಿಳಿಸಿದರು. ಎಸ್.ಡಿ.ಎಂಸಿ. ಅಧ್ಯಕ್ಷ ಮಾರುತಿ ಶಾಲೆಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಒದಗಿಸಿಕೊಡಬೇಕೆಂದು ಮನವಿ ಮಾಡಿದರು. ನಗರಸಭಾ ಸದಸ್ಯರಾದ ಎಚ್.ಸಿ. ನಾಗರಾಜು,ಅನ್ನಪೂರ್ಣಮ್ಮ ಪಟೇಲ್ ಮೂರ್ತಿ, ಬಿ.ಆರ್.ಸಿ. ಕಾಂತರಾಜು, ಸಿ.ಆರ್.ಪಿ. ಟಿ.ಕೆ.ಪಟ್ಟಾಭಿರಾಮು, ಎಸ್.ಡಿ. ಎಂ.ಸಿ ಉಪಾಧ್ಯಕ್ಷ ಶಿವಲಿಂಗಯ್ಯ ಮತ್ತಿತರರಿದ್ದರು.  ಶಿಕ್ಷಕರಾದ ರಾಧ ಸ್ವಾಗತಿಸಿ, ಚನ್ನಬಸವಯ್ಯ ನಿರೂಪಿಸಿ, ಜಿ.ಟಿ. ಲಕ್ಷ್ಮಯ್ಯ ವಂದಿಸಿದರು.
ವಿದ್ಯೆಯಿಂದ ಜೀವನ ಹಸನು: ಶಾಸಕ ಕೃಷ್ಣಪ್ಪ
ತುರುವೇಕೆರೆ: ಚಿಕ್ಕ ವಯಸ್ಸಿನಲ್ಲಿ ವಿದ್ಯೆಗೆ ಗಮನ ನೀಡಿದರೆ ಮುಂದಿನ ಬದುಕು ಹಸನಾಗುತ್ತದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ಪಟ್ಟಣ ಪಂಚಾಯ್ತಿ ವತಿಯಿಂದ 2013-14 ನೇ ಸಾಲಿನ ಎಸ್‌ಎಫ್‌ಸಿ ನಿಧಿ ಹಾಗೂ ಸಾಮಾನ್ಯ ನಿಧಿಯ ಅಡಿ ವಿದ್ಯಾರ್ಥಿಗಳಿಗೆ ನೀಡಲಾದ ಪ್ರೋತ್ಸಾಹ ಧನ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರತಿಭಾವಂತರಾದ 65 ವಿದ್ಯಾರ್ಥಿಗಳಿಗೆ ಶೇ. 22.5 ರ ನಿಧಿಯಲ್ಲಿ ಸುಮಾರು 2.50 ಲಕ್ಷ ರು.ಗಳು, ಹಿಂದುಳಿದ ವರ್ಗಗಳ 68 ಬಡ ವಿದ್ಯಾರ್ಥಿಗಳಿಗೆ ಸಾಮಾನ್ಯ ನಿಧಿಯಲ್ಲಿ ಸುಮಾರು 2.85 ಲಕ್ಷ ರು.ಗಳನ್ನು ಹಾಗೂ ವಿಕಲ ಚೇತನರಿಗೆ ನೀಡಲಾಗುವ ಶೇಕಡಾ 3 ರ ಅನುದಾನದಲ್ಲಿ 18 ಮಂದಿಗೆ ಸುಮಾರು 50 ಸಾವಿರ ರು.ಗಳ ಚೆಕ್ ಅನ್ನು ನೀಡಿದರು. ಸರ್ಕಾರ ಸಮಾಜದಲ್ಲಿರುವ ಸಮಸ್ತ ಜನರಿಗೂ ಸೌಲಭ್ಯಗಳನ್ನು ನೀಡುತ್ತದೆ. ಅದರ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಜನೆ ಮಾಡಿಕೊಳ್ಳಿ ಎಂದು ಎಂ.ಟಿ.ಕೃಷ್ಣಪ್ಪ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.  
ಪಟ್ಟಣ ಪಂಚಾಯ್ತಿ ಸದಸ್ಯರಾದ ಶ್ರೀನಿವಾಸ್, ಕೆ.ಟಿ.ಶಿವಶಂಕರ್, ನೇತ್ರಾವತಿ ರಂಗಸ್ವಾಮಿ, ನವ್ಯ ಪ್ರಕಾಶ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಕುಮಾರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜಣ್ಣ, ಯೋಜನಾಧಿಕಾರಿ ದೇವರಾಜು ಭಾಗವಹಿಸಿದ್ದರು.
'ಖಾಲಿ ಕೈಲಿ ಲೋಕೋಪಯೋಗಿ ಇಲಾಖೆ'
ಕ.ಪ್ರ.ವಾರ್ತೆ , ತುರುವೇಕೆರೆ , ಜ.10
ತಾಲೂಕಿನ ಬಹುತೇಕ ರಸ್ತೆಗಳು ಗುಂಡಿ ಬಿದ್ದು ಹೋಗಿದೆ. ಜನರು ಪ್ರತಿ ದಿನ ಆಳುವ ಜನಪ್ರತಿನಿಧಿಗಳನ್ನು ಹಾಗೂ ಅಧಿಕಾರಿಗಳನ್ನು ಹಿಡಿಶಾಪ ಹಾಕುತ್ತಾ ಸಾಗುತ್ತಿದ್ದಾರೆ.  ತಾಲೂಕಿಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಯಾವುದೇ ಕಾಮಗಾರಿ ಆಗುತ್ತಿಲ್ಲ ಎಂದು ತಾಲ್ಲೂಕು ಪಂಚಾಯ್ತಿಯ ಅಧ್ಯಕ್ಷ ಜಿ.ಎಂ.ಲಕ್ಷ್ಮೀಕಾಂತ್, ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎನ್.ಶಿವರಾಜು ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಮಹಲಿಂಗಯ್ಯ ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದಯಾನಂದ್ ಅವರನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕಿನಲ್ಲಿ  ಶಾಸಕರು ಶಿಫಾರಸು ಮಾಡಿರುವ ರಸ್ತೆಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಸಿಕ್ಕಿಲ್ಲ. ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಗೀತಾ ರಾಜಣ್ಣ ಅವರು ಸರ್ಕಾರದೊಂದಿಗೆ ವ್ಯವಹರಿಸಿ ತಮ್ಮ ಕ್ಷೇತ್ರವಾದ ಸಿಎಸ್ ಪುರ ವ್ಯಾಪ್ತಿಗೇ ಹೆಚ್ಚು ಹಣವನ್ನು ಬಿಡುಗಡೆ ಮಾಡಿಸಿಕೊಂಡಿದ್ದಾರೆ. ತುರುವೇಕೆರೆ ವಿಧಾನ ಸಭಾ ಕ್ಷೇತ್ರಕ್ಕೆ ಸಿಎಸ್ ಪುರ ಸೇರಲ್ಪಟ್ಟರೂ ತಾಲೂಕಿಗೆ ಯಾವುದೇ ಕಾಮಗಾರಿಯನ್ನು ನೀಡಿಲ್ಲದಿರುವುದು ವಿಷಾದನೀಯ ಎಂದು ಕಿಡಿಕಾರಿದರು.   ಬಿಜೆಪಿ ಮುಖಂಡರಾದ ಅರಳೀಕೆರೆ ಶಿವಯ್ಯ, ರಾಮಚಂದ್ರು ಇದ್ದರು.
ಕುಡಿಯುವ ನೀರಿನ ಸಮಸ್ಯೆ: ಶಾಶ್ವತ ಪರಿಹಾರಕ್ಕೆ ಮನವಿ
ಚನ್ನರಾಯಪಟ್ಟಣ: ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ತಾಲೂಕಿನ ಮಟ್ಟನವಿಲೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಾಸಕ ಬಾಲಕೃಷ್ಣ ಅವರಲ್ಲಿ ಮನವಿ ಮಾಡಿದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಮಟ್ಟನವಿಲೆಗೆ ಆಗಮಿಸಿದ ಸಂದರ್ಭದಲ್ಲಿ ಪ್ರೌಢಶಾಲೆ ವಿದ್ಯಾರ್ಥಿ ಮುಖಂಡರುತಮಗೆ ಶಾಶ್ವತ ಕುಡಿಯುವ ನೀರು ನೀಡುವ ಯೋಜನೆಯನ್ನು ಕಲ್ಪಿಸಿಕೊಡಬೇಕಾಗಿ ಮನವಿ ಮಾಡಿದರು.
ಶಾಲಾ ಆವರಣದಲ್ಲಿದ್ದ ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋಗಿದ್ದು, ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಅರ್ಧ ಕಿ.ಮೀ ನಿಂದ ನೀರು ತರಬೇಕಿದ್ದು, ಊಟದ ನಂತರ ಕೈ ಹಾಗೂ ತಟ್ಟೆಗಳನ್ನು ತೊಳೆಯಲು ಸಮಸ್ಯೆಯಾಗಿದ್ದು, ಗ್ರಾಮದ ಮಧ್ಯಭಾಗದಲ್ಲಿರುವ ಬೋರ್‌ವೆಲ್ ಬಳಿಗೆ ಬರಬೇಕಾಗಿದೆ.
ವಿದ್ಯಾರ್ಥಿಗಳ ಮನವಿಗೆ ಶಾಸಕರು ಸದ್ಯದಲ್ಲಿಯೇ ಶಾಲಾ ಅಕ್ಕಪಕ್ಕದಲ್ಲಿರುವ ಸರ್ಕಾರಿ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ಶಾಶ್ವತ ಯೋಜನೆಯನ್ನು ಕಲ್ಪಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.