ಚಿಕ್ಕಪ್ಪಯ್ಯ ಮೂರ್ಖ ಹೇಳಿಕೆ ನಿಲ್ಲಿಸಲಿ: ಯಾದವ ಜಾಗೃತಿ ವೇದಿಕೆ
ತುಮಕೂರು: ನಿವೃತ್ತ ಐಎಫ್ಎಸ್ ಅಧಿಕಾರಿ ಹಾಗೂ ಕಾಡುಗೊಲ್ಲ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷರಾದ ಚಿಕ್ಕಪ್ಪಯ್ಯ ಮೂರ್ಖ, ಗೊಂದಲದ ಹೇಳಿಕೆ ನೀಡುವುದನ್ನು ಕೂಡಲೇ ನಿಲ್ಲಿಸುವಂತೆ ತುಮಕೂರು ಜಿಲ್ಲಾ ಯಾದವ ಜಾಗೃತ ವಿದ್ಯಾರ್ಥಿ ವೇದಿಕೆ ಒತ್ತಾಯಿಸಿದೆ.
ಈ ಕುರಿತು ವೇದಿಕೆ ಹೇಳಿಕೆ ನೀಡಿದ್ದು, ಕಾಡುಗೊಲ್ಲರ ಹಿತರಕ್ಷಣಾ ಸಮಿತಿಯ ಹೆಸರಿನಡಿ ಕೆಲ ವ್ಯಕ್ತಿಗಳು ವೈಯಕ್ತಿಕ ಹಿತಾಸಕ್ತಿಗಾಗಿ ಇಡೀ ಗೊಲ್ಲ ಸಮುದಾಯವನ್ನೇ ಮೂಲೆಗುಂಪು ಮಾಡುವಂತಹ ಹೇಳಿಕೆಗಳನ್ನು ನೀಡುತ್ತಿದ್ದು, ಅದರಲ್ಲಿ ಚಿಕ್ಕಪ್ಪಯ್ಯನವರೂ ಸೇರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇಡೀ ಗೊಲ್ಲ ಸಮುದಾಯ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮೊದಲಿನಿಂದಲೂ ಹಿಂದುಳಿದಿದ್ದು, ಇಂದಿಗೂ ಸಹ ಈ ಸಮಸ್ಯೆಗಳಿಂದ ಹೊರ ಬರಲಾಗದೆ ನರಳುತ್ತಿದೆ. ಜನಾಂಗದ ಕೆಲ ವ್ಯಕ್ತಿಗಳ ಹೋರಾಟ ಮತ್ತು ಸರ್ಕಾರದ ಸಹಕಾರದಿಂದ ಗೊಲ್ಲ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಎಲ್ಲ ರೀತಿಯ ಯತ್ನಗಳು ನಡೆದಿವೆ. ಈ ಸಂದರ್ಭದಲ್ಲಿ ಇಲ್ಲ-ಸಲ್ಲದ ಹೇಳಿಕೆಗಳನ್ನು ನೀಡಿ, ಸರ್ಕಾರ ಹಾಗೂ ಜನಾಂಗವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುವ ಯಾರೇ ಆದರೂ ಅವರನ್ನು ವೇದಿಕೆ ಖಂಡಿಸುತ್ತದೆ. ಗೊಂದಲ ಸೃಷ್ಟಿಸುವುದನ್ನು ನಿಲ್ಲಿಸದಿದ್ದರೆ, ಯಾದವ ವಿದ್ಯಾರ್ಥಿ ವೇದಿಕೆ ಜಿಲ್ಲಾದ್ಯಂತ ಪ್ರತಿಭಟನೆ ನಡೆಸುತ್ತದೆ ಎಂದು ಸಂಘದ ಅಧ್ಯಕ್ಷ ಬಿ. ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಸುಳ್ಳು ಹೇಳಿದ್ದಾರೆ: ಕಾಡುಗೊಲ್ಲ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಚಿಕ್ಕಪ್ಪಯ್ಯ ರಾಜ್ಯದ ಗೊಲ್ಲ ಜನಾಂಗದ ಸ್ಥಿತಿ-ಗತಿ ಅರ್ಥಮಾಡಿಕೊಳ್ಳದೆ ಯಾರೋ ಸಂಶೋಧನೆ ನಡೆಸಿದ ಅಂಕಿ-ಅಂಶಗಳನ್ನು ಅವರಿಂದ ಪಡೆದು ಪತ್ರಿಕಾ ಹೇಳಿಕೆ ಕೊಟ್ಟು, ಸ್ವತಃ ನಮ್ಮ ಸಮಿತಿಯಿಂದಲೇ ಸಮೀಕ್ಷೆ ನಡೆಸಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ. ಚಿಕ್ಕಪ್ಪಯ್ಯ ಮೂರ್ಖ ಹೇಳಿಕೆಗಳನ್ನು ನೀಡುವುದನ್ನು ಕೂಡಲೇ ನಿಲ್ಲಿಸಲಿ ಎಂದು ವೇದಿಕೆ ಒತ್ತಾಯಿಸಿದೆ.
ಚಿಕ್ಕಪ್ಪಯ್ಯ ಮೂಲತಃ ಆಂಧ್ರಪ್ರದೇಶದವರು. ಐಎಫ್ಎಸ್ ನಿಮಿತ್ತ ಕರ್ನಾಟಕದಲ್ಲಿ ನೆಲೆಯೂರಿ, ನಿವೃತ್ತರಾಗಿದ್ದಾರೆ. ಚಿಕ್ಕಪ್ಪಯ್ಯನವರಿಗೆ ಕರ್ನಾಟಕದ ಗೊಲ್ಲ ಸಮುದಾಯದ ಸ್ಥಿತಿಗತಿ ಬಗ್ಗೆ ಕಾಳಜಿಯಿದ್ದಿದ್ದರೆ, ಆಂಧ್ರ ಪ್ರದೇಶದ ಮಡಕಶಿರಾದಲ್ಲಿ ಯಾದವ ಜನಾಂಗದ ವಿದ್ಯಾರ್ಥಿ ನಿಲಯ ಏಕೆ ಸ್ಥಾಪಿಸಿದರು. ಕರ್ನಾಟಕದಲ್ಲೇ ಸ್ಥಾಪಿಸಬಹುದಿತ್ತಲ್ಲ ಎಂದು ವೇದಿಕೆ ಮಾರ್ಮಿಕವಾಗಿ ಪ್ರಶ್ನಿಸಿದೆ.
ಚಿಕ್ಕಪ್ಪಯ್ಯನವರ ಗೊಂದಲದ ಹೇಳಿಕೆ ಖಂಡಿಸಿ ನಡೆದ ಸಭೆಯಲ್ಲಿ ಯಾದವ ಸೇನೆ ಕಾರ್ಯದರ್ಶಿ ಜಯಪ್ರಕಾಶ್, ಯಾದವ ಜಾಗೃತಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ರಂಗನಾಥ್, ಯಾದವ ವಿದ್ಯಾರ್ಥಿ ಯುವ ಸೇನೆಯ ಅಧ್ಯಕ್ಷ ಮಂಜುನಾಥ್ ಯಾದವ್, ಯಾದವ ಹಿತರಕ್ಷಣಾ ಸಮಿತಿಯ ಉಪಾಧ್ಯಕ್ಷ ಲಕ್ಷ್ಮೀನಾರಾಯಣ್, ಯಾದವ ವಿದ್ಯಾರ್ಥಿ ಜಾಗೃತಿ ವೇದಿಕೆಯ ಸಂಘಟನಾಕಾರ ಸತೀಶ್, ತುಮಕೂರು ತಾಲೂಕು ಯಾದವ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷ ಮಾಲಿಂಗ ಯಾದವ್, ವಿಜಯಕುಮಾರ್ ಚಿ.ನಾ. ಹಳ್ಳಿ, ಮಹೇಶ್ ಶಿರಾ, ಸುರೇಶ್ ಕುಣಿಗಲ್, ಕುಮಾರಸ್ವಾಮಿ ತಿಪಟೂರು, ಹನುಮಂತರಾಜು, ಪಾವಗಡ, ಶಂಕರಪ್ಪ ಮಧುಗಿರಿ, ನಾಗರಾಜು ಗುಬ್ಬಿ, ವೀರೇಶ್ ಕುಣಿಗಲ್, ರಾಮಚಂದ್ರ ಕೊರಟಗರೆ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

