ಇಸ್ಲಾಂ ಧರ್ಮದಲ್ಲಿ ಭಯೋತ್ಪಾದನೆಗೆ ಅವಕಾಶ ಇಲ್ಲ
ಕ.ಪ್ರ.ವಾರ್ತೆ , ಕುಣಿಗಲ್ , ಜ.14
ಇಸ್ಲಾಂ ಧರ್ಮದಲ್ಲಿ ಭಯೋತ್ಪಾದನೆಗೆ ಅವಕಾಶ ಇಲ್ಲ. ಧರ್ಮದ ಹೆಸರಿನಲ್ಲಿ ಕೆಲವರು ಮಾಡುವ ಕುಕೃತ್ಯದಿಂದ, ಶಾಂತಿಯ ಮೂಲ ತತ್ವದಲ್ಲಿ ಸ್ಥಾಪಿತವಾದ ಇಸ್ಲಾಂ ಧರ್ಮಿಯರನ್ನು ಇಂದು ಇತರರು ಅನುಮಾನಿಸಿ ನೋಡುವಂತಾಗಿರುವುದು ಖೇದಕರ ಎಂದು ಪುರಸಭೆ ಮಾಜಿ ಅಧ್ಯಕ್ಷ, ಮಜ್ಲಿಸೇ ಶೂರಾ ತಾಲೂಕು ಸಮಿತಿ ಮಾಜಿ ಅಧ್ಯಕ್ಷ ರೆಹಮಾನ್ ಷರೀಫ್ ತಿಳಿಸಿದರು.
ಮಂಗಳವಾರ ಸಂಜೆ, ಕೋಟೆ ಪ್ರದೇಶದ ರಝಾ ಎಜುಕೇಶನಲ್ ಅಂಡ್ ವೆಲ್ಫೇರ್ ಟ್ರಸ್ಟ್ ಮತ್ತು ಮಜ್ಲಿಸೇ ಅತಾವುರ್, ಮಜ್ಲಿಸೇ ಇಸ್ಲಾಮಿಯ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಪ್ರದೇಶದ ಉರ್ದುಶಾಲೆಯ ಅವರಣದಲ್ಲಿ ಹಮ್ಮಿಕೊಳ್ಳಲಾದ ಈದ್ ಮಿಲಾದ್ ಉತ್ಸವವಕ್ಕೆ ಚಾಲನೆ ನೀಡಿ ಮಾತನಾಡಿ, ಇಸ್ಲಾಂ ಧರ್ಮದ ಸ್ಥಾಪಕರಾದ ಹಜರತ್ ಪೈಗಂಬರ್ ಅವರ ಪವಿತ್ರ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಜನತೆಗೆ ಶಾಂತಿ. ಸೌಹಾರ್ದ ಬಾಳ್ವೆ, ಗುರು, ಹಿರಿಯರನ್ನು ಗೌರವಿಸಿ ಬಾಳ್ವೆ ನಡೆಸುವುಂತ ಹಲವು ಮಾನವೀಯ ಮೌಲ್ಯಗಳ ಸಾರಾಂಶದ ತತ್ವಗಳನ್ನು ಹೊಂದಿರುವ ಇಸ್ಲಾಂ ಧರ್ಮ ಸ್ಥಾಪಕರಾದ ಹಜರತ್ ಅವರು ಎಲ್ಲಿಯೂ ಹಿಂಸೆ, ಕ್ರೌರ್ಯದ ಬಗ್ಗೆ ತಿಳಿಸಿಲ್ಲ.
ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವಂತ ತತ್ವಗಳನ್ನು, ತಮ್ಮ ಜೀವಿತಾವಧಿಯುದ್ದಕ್ಕೂ 1200 ವರ್ಷಗಳ ಹಿಂದೆಯೆ ಪ್ರತಿಪಾದಿಸಿದ ಹಜರತ್ ಅವರ ಸಂದೇಶ ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ. ಸದಾ ಧರ್ಮದ ನೆರಳಲ್ಲಿ ನಡೆದು, ಸಮಾಜದಿಂದ ತಾವು ಗಳಿಸಿದ ಪೈಕಿ ಕೆಲವಷ್ಟನ್ನಾದರೂ ಸಮಾಜದ ಏಳಿಗೆಗೆ ಕಾಣಿಕೆ ನೀಡಬೇಕು. ದೀನ ದಲಿತರ ಸೇವೆಗೆ ತೊಡಗುವ ನಿಟ್ಟಿನಲ್ಲಿ, ಸದಾ ಶಾಂತಿಯನ್ನು ಕಾಪಾಡಿಕೊಂಡೇ ಬರಬೇಕೆಂದು ಸಾರಿರುವ ಹಜರತ್ ಅವರ ಸಂದೇಶ, ತತ್ವಗಳನ್ನು ಸಮಾಜದಲ್ಲಿ ಕಿಂಚಿತ್ತು ಅಳವಡಿಸಿಕೊಂಡರೂ, ಎಲ್ಲರೂ ಶಾಂತಿ, ನೆಮ್ಮದಿಯಿಂದ ಬಾಳಬಹುದೆಂದರು.
ಕೋಟೆ ಪ್ರದೇಶದಲ್ಲಿನ ಪ್ರಾರ್ಥನ ಮಂದಿರದಿಂದ ವಿವಿಧ ಧಾರ್ಮಿಕ ಸ್ತಬ್ಧ ಚಿತ್ರಗಳನ್ನು ಹೊಂದಿದ ಹಲವು ವಾಹನಗಳಲ್ಲಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ನೂರಾರು ಬಾಂಧವರು ಪಾಲ್ಗೊಂಡಿದ್ದರು. ಪ್ರಮುಖರಾದ ಖಾಜವಲಿ, ಇಂತಿಯಾಜಿ ತಾಲೀಬ್ ಪಾಷ, ನಾಸೀರ್ಪಾಷಾ, ಶಾಬಾಜ್, ಪುರಸಭೆ ಸದಸ್ಯ ದಸ್ತಗೀರ್ ಇತರರು ಉಪಸ್ಥಿತರಿದ್ದರು. ಮುಖ್ಯರಸ್ತೆಯಲ್ಲಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಪಿಎಸೈ ಗುರುಪ್ರಸಾದ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

