ಸರ್ವೆಗೆ ಬಂದಿದ್ದ ಜೀಪು ತಡೆದು ಗ್ರಾಮಸ್ಥರ ಪ್ರತಿಭಟನೆ
ಕ.ಪ್ರ.ವಾರ್ತೆ , ಪಾವಗಡ , ಜ,18
ಮರಳು ನೀತಿ ಹಿನ್ನೆಲೆಯಲ್ಲಿ ಸರ್ವೆಗೆ ಬಂದಿದ್ದ ಜೀಪು ತಡೆದ ಗ್ರಾಮಸ್ಥರು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡು ಅಧಿಕಾರಿಗಳನ್ನು ವಾಪಸು ಕಳುಹಿಸಿದ ಘಟನೆ ಶನಿವಾರ ನಾಗಲಮಡಿಕೆಯಲ್ಲಿ ನಡೆದಿದೆ.
ಸರ್ಕಾರ ಜಾರಿ ಮಾಡಿದ ಮರಳು ನೀತಿ ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಮರಳು ಸಾಗಣಿಕೆಗೆ ಪಾಯಿಂಟ್ ಸರ್ವೆ ಮಾಡಲು ಗಣಿ ಮತ್ತು ಭೂ ವಿಜ್ಞಾನ ಕೇಂದ್ರದ ಅಧಿಕಾರಿಗಳ ತಂಡ ನಾಗಲಮಡಿಕೆ ಗ್ರಾಮಕ್ಕೆ ಆಗಮಿಸಿತ್ತು. ನಾಗಲಮಡಿಕೆ ಗ್ರಾಪಂ ವ್ಯಾಪ್ತಿಯ ತಿಮ್ಮಮ್ಮನಹಳ್ಳಿ ಗ್ರಾಮದ ಉತ್ತರ ಪಿನಾಕಿನಿ ನದಿ ತೀರಕ್ಕೆ ತೆರಳುತ್ತಿದ್ದಂತೆ ಜಮಾಯಿಸಿದ ನೂರಾರು ಮಂದಿ ತಿಮ್ಮನಹಳ್ಳಿಯ ಗ್ರಾಮಸ್ಥರು ಸರ್ವೆಗೆ ತೆರಳುತ್ತಿದ್ದ ತಂಡದ ಜೀಪು ತಡೆದು ಮುಂದಕ್ಕೆ ಹೋಗದಂತೆ ತಡೆದು ಇಲ್ಲಿ ಪಾಯಿಂಟ್ ಮಾಡಲು ನಾವು ಬಿಡುವುದಿಲ್ಲವೆಂದು ಪ್ರತಿಭಟಿಸಿದರು.
ಪೊಲೀಸ್ ಬಂದೋಬಸ್ತಿನ ಮೇರೆಗೆ ಪ್ರತಿಭಟನೆ ಶಾಂತಿ ರೀತಿಯಾಗಿ ನಡೆಯಿತು. ನಂತರ ನಾಗಲಮಡಿಕೆ ಗ್ರಾಮಕ್ಕೆ ತೆರಳಿ ಅಧಿಕಾರಿಗಳು ಮತ್ತು ಗ್ರಾಮಸ್ಥರು ಸಭೆ ನಡೆಸಿದರು.
ಇದೇ ಸಂದರ್ಭದಲ್ಲಿ ಸರ್ವೆ ತಂಡವನ್ನು ಉದ್ದೇಶಿಸಿ ಮಾತನಾಡಿದ ಗ್ರಾಪಂ ಸದಸ್ಯ ನರಸಿಂಹಪ್ಪ, ತಿರುಮಣಿ ಸೇರಿದಂತೆ ನಾಗಲಮಡಿಕೆ ಗ್ರಾಪಂ ವ್ಯಾಪ್ತಿ ಸದಾ ಬರ ಹಾಗೂ ನಕ್ಸಲ್ ಪೀಡಿತ ಪ್ರದೇಶ. ಅಲ್ಲದೇ ಆಳುವ ಸರ್ಕಾರಗಳು ಅಭಿವೃದ್ಧಿ ಹಿನ್ನೆಲೆಯಲ್ಲಿ ಏನೇ ಅಶ್ವಾಸನೆ ನೀಡಿದರೂ ಯಾವುದೇ ಭರವಸೆ ಇದುವರೆವಿಗೂ ಈಡೇರಿಲ್ಲ. ನಿತ್ಯ ಮರಳು ಸಾಗಣಿಕೆಯಿಂದ ಅಂತರ್ಜಲ ಕುಸಿದು ಈ ಭಾಗದ ರೈತರು ಸಂಕಷ್ಟ ಅನುಭವಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜೈಲಿಗೆ ಹಾಕಿದರೂ ಪರವಾಗಿಲ್ಲ ಮರಳು ಸಾಗಣಿಕೆಗೆ ನಾವು ಅವಕಾಶ ನೀಡುವುದಿಲ್ಲವೆಂದು ಕಿಡಿಕಾರಿದರು.
ಮುಖಂಡ ಕೆ.ಬಿ.ನಾಗರಾಜ್ ಮಾತನಾಡಿ ಬೂಗಡೂರು, ಪೆಂಡ್ಲಿಜೀವಿ, ಉಪ್ಪಾರಹಳ್ಳಿ, ತಿಮ್ಮಮ್ಮನಹಳ್ಳಿ, ತಪಗಾನದೊಡ್ಡಿ ಸೇರಿದಂತೆ ಈ ಭಾಗದ ರೈತರ ಕೊಳವೆ ಬಾವಿಗಳಲ್ಲಿ ಸಮೃದ್ಧ ನೀರು ಬರುವುದರಿಂದ ರೈತರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಮರಳು ಸಾಗಣಿಕೆಯಿಂದ ಅಂತರ್ಜಲ ಕುಸಿತವಾಗಿ ಮತ್ತೆ ರೈತರು ತೊಂದರೆಯಾಗುವ ಸಾಧ್ಯತೆಗಳಿದ್ದು ನಗರ ಪ್ರದೇಶಗಳಿಂದ ವಾಪಸಾದ ಕೂಲಿ ಕಾರ್ಮಿಕರು ಮತ್ತೆ ವಲಸೆ ಹೋಗುವ ಅನಿವಾರ್ಯತೆ ಬರಬಹುದು ಎಂದರು.
ಮರಳು ಸಾಗಣಿಕೆ ಮಾಡಬಾರೆಂದು ಆಗ್ರಹಿಸಿ ಗಣಿ ಮತ್ತು ಭೂ ವಿಜ್ಞಾನ ತಂಡಕ್ಕೆ ರೈತರು ಮನವಿಯನ್ನು ನೀಡಿದರು.
ಮುಖಂಡ ಮಲ್ಲಾರೆಡ್ಡಿ, ಗೋಪಿ, ಸದಸ್ಯ ಸಣ್ಣ ನರಸಿಂಹಪ್ಪ,ವಳ್ಳೂರು ನಾಗೇಶ್,ಹುಸೇನ್ಪುರ ನರಸರೆಡ್ಡಿ,ತಿಮ್ಮಮ್ಮನಹಳ್ಳಿ ರಾಮಶೆಟ್ಟಿ,ಕ್ರಷ್ಣಮೂರ್ತಿ,ಶೇಖರಪ್ಪ ಅಕ್ಕಲಪ್ಪ,ಸಂಜೀವಪ್ಪ ಮುಂತಾವರು ಪ್ರತಿಭಟನೆಯ ನೇತ್ರತ್ವ ವಹಿಸಿದ್ದರು.ಇದೇ ಸಂದರ್ಭದಲ್ಲಿ ಸಿಪಿಐ ಎಂ.ಎಂ.ಪಾಷ,ತಿರುಮಣಿ ಪಿಎಸ್ಐ ಸುರೇಶ್ ಕುಮಾರ್,ಲೋಕಪಯೋಗಿ ಇಲಾಖೆಯ ಎಂಜಿನಿಯರ್ಗಳಾದ ಅನಿಲ್ ಕುಮಾರ್ ಇತೆರೆ ಅಧಿಕಾರಿಗಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

