ಕಂಠೀರವ ಸ್ಟುಡಿಯೋ ಸ್ಥಾಪಿಸಿದ ಕೀರ್ತಿ ಕರಿಬಸವಯ್ಯನವರಿಗೆ: ಷಡಕ್ಷರ ಶ್ರೀ
ಕ.ಪ್ರ.ವಾರ್ತೆ ತಿಪಟೂರು ಜ.20
ಕನ್ನಡನಾಡಿನ ರಂಗಭೂಮಿ ಮತ್ತು ಚಲನಚಿತ್ರ ರಂಗಗಳಲ್ಲಿ ಅಪಾರ ಆಸಕ್ತ್ತಿ ಹೊಂದಿ, ಕಲೆ ಉಳಿಸಿ ಬಳೆಸುವ ಮಹದಾಸೆಯಿಂದ ಕನ್ನಡ ಚಲನ ಚಿತ್ರ ರಂಗ ಪರರಾಜ್ಯವನ್ನು ಅವಲಂಬಿಸಿದ್ದ ಅಂದಿನ ಕಾಲದಲ್ಲೇ ಬೆಂಗಳೂರಿನಲ್ಲಿ ಬೃಹತ್ತಾದ ಕಂಠೀರವ ಸ್ಪುಡಿಯೋವನ್ನು ಸ್ಥಾಪಿಸಿದ ಧೀಮಂತ ವ್ಯಕ್ತಿ ತಿಪಟೂರಿನ ಟಿ.ಎಸ್. ಕರಿಬಸವಯ್ಯ ಎಂದು ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ತಿಳಿಸಿದರು.
ನಗರದ ಷಡಕ್ಷರ ಮಠದಲ್ಲಿ ಆಯೋಜಿಸಿದ್ದ ಕರಿಬಸವಯ್ಯನವರ ಜನ್ಮಶತಮಾನೋತ್ಸವ ಸಮಾರಂಭವನ್ನು ಆಚರಿಸುವ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕರಿಬಸವಯ್ಯನವರು ನಾಟಕರತ್ನ ಗುಬ್ಬಿ ವೀರಣ್ಣನವರ ಸಖ್ಯ ಸಂಪಾದಿಸಿ ಅವರನ್ನೇ ಕಲಾ ಗುರುವಾಗಿ ಸ್ವೀಕರಿಸಿ ರಂಗಭೂಮಿಯಲ್ಲಿ ಪಳಗಿ ರಾಜ್ಯದಾದ್ಯಂತ ಕಲೆಯನ್ನು ಬಿತ್ತರಿಸಿದವರು. ಅನಂತರ ಸಿನಿಮಾ ರಂಗಕ್ಕೆ ವಾಲಿ ಚಿತ್ರ ನಿರ್ಮಾಣಕ್ಕೆಂದೇ ಮದರಾಸಿಗೆ ಹೋಗಬೇಕಾಗಿದ್ದು, ಅಂದಿನ ಪರಿಸ್ಥಿತಿ ಸಮಸ್ಯೆಗಳನ್ನು ಅರಿತುಕೊಂಡು ಮನದಲ್ಲಿ ದೃಢಸಂಕಲ್ಪ ಮಾಡಿ ಸುಸಜ್ಜಿತವಾದ ಕಂಠೀರವ ಸ್ಟುಡಿಯೋವನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅಂತಹ ಮಹಾನ್ ಸಾಧಕನನ್ನು ಅಂದಿನಿಂದ ಇಂದಿನವರೆವಿಗೂ ಸರ್ಕಾರವಾಗಲೀ, ಚಿತ್ರೋದ್ಯಮವಾಗಲೀ ಸ್ಮರಿಸುತ್ತಿಲ್ಲದಿರುವುದು ನೋವಿನ ಸಂಗತಿ. ಸ್ಟಡಿಯೋದ ಒಂದು ಕಲ್ಲಿನಲ್ಲಿ ಅವರ ಹೆಸರು ಇರುವುದು ಬಿಟ್ಟರೆ ಇವರ ಬಗ್ಗೆ ಮತ್ತೇನೂ ಅಲ್ಲಿ ಇಲ್ಲ. ಫೆ. 7ರಂದು ಅವರ ಜನ್ಮದಿನೋತ್ಸವ ಇರುವುದರಿಂದ ಸರ್ಕಾರ ಸ್ಟುಡಿಯೋದಲ್ಲಿ ಅವರ ಸ್ಮಾರಕ ಸ್ಥಾಪಿಸಿ ಚಲನಚಿತ್ರ ಮಂಡಳಿ ಸಹಕಾರದೊಂದಿಗೆ ಅದ್ಧೂರಿಯಾಗಿ ಅವರ ಜನ್ಮ ಶತಮಾನೋತ್ಸವ ಆಚರಿಸಬೇಕೆಂದು ಒತ್ತಾಯಿಸಿದರು.
ಎಸ್.ವಿ.ಪಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಕೆ.ರಾಜಶೇಖರ್ ಮಾತನಾಡಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವೆಗಳಿಗೆ ತೊಡಗಿಸಿಕೊಂಡಿದ್ದ ಕರಿಬಸವಯ್ಯನವರು ಕಲಾವಿದರ ಜೊತೆಗೆ ಅಶಕ್ತ ಕಲಾವಿದರ ಆಶ್ರಯದಾತರಾಗಿದ್ದರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರಾದ ಹೇಮಲತಾ, ರಾಮಯ್ಯ, ಕಿರುತೆರೆ ನಟ ದಯಾನಂದ ಸಾಗರ್, ಹಿರಿಯರಾದ ಟಿ.ಎನ್. ಪರಮಶಿವಯ್ಯ ಮತ್ತು ಉಪನ್ಯಾಸಕ ಕೆ.ಎನ್. ರೇಣುಕಯ್ಯ ಕರಿಬಸವಯ್ಯನವರ ಕಲಾ ಸೇವೆ ಕುರಿತು ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

