ತುಮಕೂರು

ದೂರದ ರಾಹುಲ್, ಮೋದಿ ನೋಡಿ ತೀರ್ಮಾನ ಬೇಡ: ಕುಮಾರಸ್ವಾಮಿ

Published On :

ತುಮಕೂರು: ದೂರದ ರಾಹುಲ್, ಮೋದಿ ನೋಡಿ ತೀರ್ಮಾನ ಮಾಡಬೇಡಿ ಮಹಾಜನಗಳೇ. ಜನಪರ ಕಾರ್ಯಕ್ರಮ, ನೀರಾವರಿ, ರೈತಪರ ಕಾಳಜಿ, ನಾಡು-ನುಡಿಗಾಗಿ ಕಾಳಜಿಯಿಟ್ಟುಕೊಂಡು ಕೆಲಸ ಮಾಡುತ್ತಿರುವ ಜೆಡಿಎಸ್ನತ್ತ ನೋಡಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದರು.
ಅವರು ತುಮಕೂರಿನಲ್ಲಿ ಜೆಡಿಎಸ್ ರಾಜ್ಯ ಮಹಿಳಾ ಸಮಾವೇಶದಲ್ಲಿ ಮಾತನಾಡಿ, ಶಾಶ್ವತ ನೀರಾವರಿ, ಕುಡಿಯುವ ನೀರಿನ ವಿಷಯದಲ್ಲಿ ಕಪಟ ನಾಟಕವಾಡುತ್ತಿರುವ ಕಾಂಗ್ರೆಸ್, ಬಿಜೆಪಿ ಎರಡೂ ಒಂದೇ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನಪರ ಕಾಳಜಿ ಹೊಂದಿರುವ ಜೆಡಿಎಸ್ ಬೆಂಬಲಿಸುವಂತೆ, ಅತ್ಯಧಿಕ ಸೀಟು ಗೆಲ್ಲಿಸಲು ಸಹಕರಿಸುವಂತೆ ಮನವಿ ಮಾಡಿದರು.
ನರೇಂದ್ರ ಮೋದಿ, ರಾಹುಲ್ಗಾಂಧಿ ಅವರು ಯಾವ ವಿಷಯ ಚರ್ಚೆ ಮಾಡುತ್ತಿದ್ದಾರೆ ಎಂಬುದು ಗಮನಾರ್ಹ. ಅವರಿಬ್ಬರ ಭಾಷಣಗಳಲ್ಲಿ ಪಕ್ಷ ಅಧಿಕಾರಕ್ಕೆ ತರುವುದಕ್ಕಷ್ಟೇ ಪ್ರಾಮುಖ್ಯತೆ. ಆದರೆ ಕಾರ್ಯಕ್ರಮ ಕುರಿತಂತೆ ಸ್ಪಷ್ಟ ಮಾಹಿತಿಯಿಲ್ಲ. ವಾಜಪೇಯಿಯವರಲ್ಲಿದ್ದ ಗುಣ ನರೇಂದ್ರ ಮೋದಿಯಲ್ಲಿಲ್ಲ. ಗುಜರಾತ್ ಗಲಭೆ ಮೋದಿಯವರನ್ನು ಗೌರವಿಸಲು ಸಾಲದೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ರಾಜ್ಯ ಬಿಜೆಪಿ ಇಂದು ಮೋದಿಯವರ ಹೆಸರೇಳಿ ಮತ ನೀಡಿ ಎಂದು ಬೇಡುತ್ತಿದೆ. ಕಳೆದ 5 ವರ್ಷಗಳ ಬಿಜೆಪಿ ಸಾಧನೆ ನೋಡಿ ಮತ ನೀಡಿ ಎಂದು ಹೇಳುವ ಧೈರ್ಯ, ನೈತಿಕತೆ ಕರ್ನಾಟಕ ಬಿಜೆಪಿಗಿಲ್ಲವೇ? ಎಂದು ಲೇವಡಿ ಮಾಡಿದರು.
ಮಹಿಳಾ ಪರ ಕಾಳಜಿ ಜೆಡಿಎಸ್ನದ್ದು: ಮಹಿಳೆಯರ ಪರ ಕಾರ್ಯಕ್ರಮಗಳನ್ನು ರೂಪಿಸಿದ್ದು, ಸಾರಾಯಿ, ಲಾಟರಿ ನಿಷೇಧಿಸಿದ್ದು, ಮಹಿಳಾ ಮೀಸಲು ಜಾರಿಗೊಳಿಸಿದ್ದು ಜೆಡಿಎಸ್. ಕುಟುಂಬ ಹಾಳಾಗುವುದನ್ನು ತಪ್ಪಿಸಲು ಲಾಟರಿ ನಿಷೇಧಿಸಿದ್ದು ತಾವು. ಆದರೆ ಇಂದು ಸಿಎಂ ಸಿದ್ದರಾಮಯ್ಯ ಮತ್ತೆ ಸಾರಾಯಿಗೆ ಅನುಮತಿ ನೀಡುವ ಮಾತನಾಡುತ್ತಿದ್ದಾರೆ. ಕಾರಣ ಮದ್ಯದ ಬೆಲೆ 100-120ಕ್ಕೆ ಏರಿಕೆಯಾಗಿರುವುದಂತೆ. ಈ ಬೆಲೆ ಏರಿಕೆಗೆ ಕಾರಣ ಕೂಡ ಅವರೇ ಎಂಬುದನ್ನು ಮರೆತಿದ್ದಾರೆ. ಸಾರಾಯಿಯನ್ನು ಮತ್ತೆ ಜಾರಿಗೆ ತರುವ ಚಿಂತನೆ ಹರಿಬಿಡುವ ಮೂಲಕ ತಾಯಂದಿರ ನೆಮ್ಮದಿ ಭಂಗಕ್ಕೆ ಸಜ್ಜಾಗುತ್ತಿದ್ದಾರೆ ಎಂದು ಕಿಡಿ ಕಾರಿದರು.
ತುಮಕೂರಿನಲ್ಲಿ ಲಾಟರಿ ದಂಧೆ ಪತ್ತೆ ಹಚ್ಟಿದ ಪೊಲೀಸರಿಗೆ 9 ಸಾವಿರ ಬಹುಮಾನ ಘೋಷಿಸಲಾಗಿದೆ. ಅಂದರೆ ಲಾಟರಿ ಇನ್ನೂ ಜೀವಂತವಾಗಿದೆ ಎಂದರ್ಥವಲ್ಲವೇ? ಇದಕ್ಕೆ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ನೇರ ಹೊಣೆಯಲ್ಲವೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಹೇಮಾವತಿ ನೀರಿನ ವಿಷಯದಲ್ಲಿ ದೇವೇಗೌಡ, ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆ ಎಂದು ವಿನಾ ಕಾರಣ ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ ದಿ. ವೈ.ಕೆ. ರಾಮಯ್ಯನವರಿಗೆ ಗೊತ್ತಿತ್ತು, ಹೇಮಾವತಿ ತುಮಕೂರಿಗೆ ಬರಲು ಯಾರು ಕಾರಣ ಎಂದು. ಎತ್ತಿನಹೊಳೆ ಯೋಜನೆಯನ್ನು ಕಳೆದ ಒಂದೂವರೆ ವರ್ಷದ ಹಿಂದೆಯೇ ಜಾರಿ ಮಾಡುವ ಭರವಸೆ ನೀಡಿದ್ದವರು ಈಗೆಲ್ಲಿದ್ದಾರೆ? ತೆಂಗಿನ ನುಸಿಪೀಡೆ ವಿರುದ್ಧ ಜನ ಜಾಗೃತಿ ಮೂಡಿಸಿ, ಹೋರಾಟ ಮಾಡುತ್ತಲೇ ಬಂದಿರುವುದು ತಮ್ಮ ಜೆಡಿಎಸ್. ಕಾಲುಬಾಯಿ ರೋಗಕ್ಕೆ ಜಾನುವಾರುಗಳು ಬಲಿಯಾಗುತ್ತಿದ್ದರೂ ಮೂಕಪ್ರೇಕ್ಷಕರಂತೆ ಇದ್ದ ಸರ್ಕಾರವನ್ನು ಬಡಿದೆಬ್ಬಿಸಿದ್ದು ತಾವು. ಆದರೆ ಸತ್ತಿರುವ ರಾಸುಗಳಿಗೆ ಸರಿಯಾಗಿ ಪರಿಹಾರ ವಿತರಣೆಯಾಗಿಲ್ಲ. ಇದನ್ನು ನೋಡಿದರೆ ಗೊತ್ತಾಗುವುದಿಲ್ಲವೇ ಕಾಂಗ್ರೆಸ್ ಸರ್ಕಾರದ ರೈತ ಪರ ಕಾಳಜಿ ಎಷ್ಟೆಂದು ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.