ಅರೆಖುಷ್ಕಿ ಬೆಳೆಗೆ ನೀರು ಬಳಸಿಕೊಳ್ಳಿ: ಸಚಿವ ಟಿ.ಬಿ. ಜಯಚಂದ್ರ ಸೂಚನೆ
ತುಮಕೂರು: ತುಮಕೂರು ಜಿಲ್ಲೆ ಬರಗಾಲದಿಂದ ಕೂಡಿದ್ದು, ಕುಡಿಯುವ ನೀರಿನ ಅಭಾವವಿದೆ. ಹೀಗಾಗಿ ಅರೆಖುಷ್ಕಿ ಬೆಳೆಗಳಿಗೆ ಮಾತ್ರ ನೀರನ್ನು ಬಳಸಿಕೊಳ್ಳುವಂತೆ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ.
ಸದ್ಯ ತುಂಬಿರುವ ಕೆರೆಗಳಿಂದ ಮುಂಬರುವ ಬೇಸಿಗೆಯನ್ನು ಗಮನದಲ್ಲಿರಿಸಿಕೊಂಡು, ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ನೀರನ್ನು ಉಳಿಸಿಕೊಂಡು, ಉಳಿದ ನೀರನ್ನು ಅರೆಖುಷ್ಕಿ ಬೆಳೆಯನ್ನು ಬೆಳೆಯಲು ಅನುವಾಗುವಂತೆ ಆಯಾ ಕೆರೆಗಳ ನೀರಾವರಿ ಸಲಹಾ ಸಮಿತಿಯಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಸಚಿವ ಟಿ.ಬಿ.ಜಯಚಂದ್ರ ಅವರು ತಿಳಿಸಿದ್ದಾರೆ.
ಪ್ರಸ್ತುತವರ್ಷ ಮಳೆಯ ಪ್ರಮಾಣ ಕಡಿಮೆ ಇದೆ. ಜಿಲ್ಲೆಯ 9 ತಾಲೂಕುಗಳಲ್ಲಿ ಬರಗಾಲ ಇದೆ. ಮುಂಬರುವ ಬೇಸಿಗೆಯನ್ನು ಗಮನದಲ್ಲಿಟ್ಟುಕೊಂಡು ಜನ ಜಾನುವಾರುಗಳಿಗೆ ಬೇಕಾಗುವ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕಿದೆ. ನಂತರ ಉಳಿದ ನೀರನ್ನು ಅರೆಖುಷ್ಕಿ ಬೆಳೆ ಬೆಳೆಯಲು ಆಯಾ ಕೆರೆಗಳ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರಾದ ಸಂಬಂಧಿಸಿದ ಉಪವಿಭಾಗಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸಚಿವರು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರಿಗೆ ಸೂಚಿಸಿದ್ದಾರೆ.
ತುರುವೇಕೆರೆ ತಾಲೂಕಿನ ಜನ ಜಾನುವಾರುಗಳಿಗೆ ಮೇವು ಹಾಗೂ ಆಹಾರದ ಕೊರತೆ ಇದ್ದು, ಕೆರೆಗಳು ತುಂಬಿರುವುದರಿಂದ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಒದಗಿಸಿದಲ್ಲಿ ಜನರಿಗೆ ಆಹಾರ ಮತ್ತು ದನಕರುಗಳಿಗೆ ಮೇವು ಒದಗಿಸಲು ಸಹಾಯವಾಗುವುದಾಗಿ ತಿಪಟೂರು ತಾಲೂಕಿನ ನೊಣವಿನ ಕೆರೆ, ಅಲ್ಬೂರು ಕೆರೆ, ವಿಘ್ನಸಂತೆ ಕೆರೆ, ಗಂಗನಘಟ್ಟ ಕೆರೆ, ಬಜಗೂರು ಕೆರೆ, ಕೈದಾಳ ಕೆರೆ, ಸಾಸಲಹಳ್ಳಿ ಕೆರೆ ಹಾಗೂ ತುರುವೇಕೆರೆ ತಾಲ್ಲೂಕು ವ್ಯಾಪ್ತಿಯ ಮಲ್ಲಘಟ್ಟ ಕೆರೆ, ತುರುವೇಕೆರೆ ಕೆರೆ, ಮಾಯಸಂದ್ರ ಕೆರೆ, ಕೊಂಡಜ್ಜಿ ಕೆರೆ ಹಾಗೂ ಕೋಳಾಲ ಕೆರೆಗಳಿಂದ ಬೆಳೆಗಳಿಗೆ ನೀರು ಒದಗಿಸುವಂತೆ ರೈತರು ಕೋರಿದ್ದಾರೆ. ಈ ನಿಟ್ಟಿನಲ್ಲಿ ಕೆರೆಗಳ ನೀರಾವರಿ ಸಲಹಾ ಸಮಿತಿಯ ಉಪವಿಭಾಗಾಧಿಕಾರಿಗಳು ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಸಚಿವರು ಸೂಚಿಸಿದ್ದಾರೆ. ಸಭೆಯಲ್ಲಿ ತಿಪಟೂರು ಶಾಸಕರಾದ ಷಡಕ್ಷರಿ, ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ, ತಿಪಟೂರು ಉಪವಿಭಾಗಾಧಿಕಾರಿ ಸಿಂಧೂ, ನೀರಾವರಿ ಇಲಾಖೆ ಅಧಿಕಾರಿಗಳು, ಹೇಮಾವತಿ ಮುಖ್ಯ ಎಂಜಿನಿಯರ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಮನವಿ: ತುಂಬಿರುವ ಕೆರೆಗಳಲ್ಲಿನ ನೀರನ್ನು ಅತಿ ಹೆಚ್ಚು ಮುತುವರ್ಜಿಯಿಂದ, ಎಚ್ಚರಿಕೆಯಿಂದ ಬಳಸುವಂತೆ ಹಾಗೂ ನೀರು ಪೋಲಾಗದಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿಯವರು ರೈತರಲ್ಲಿ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

