'ಆನ್ಲೈನ್' ವಿರುದ್ಧ ಬೀದಿಗಿಳಿದ ವಿದ್ಯಾರ್ಥಿಗಳು
ಕುಣಿಗಲ್: ವೃತ್ತಿಪರ ಶಿಕ್ಷಣ ವಿಷಯಗಳಲ್ಲಿ ಆನ್ಲೈನ್ ಪದ್ಧತಿ ಮೂಲಕ ಸೀಟು ಹಂಚಿಕೆ ಕ್ರಮ ವಿರೋಧಿಸಿ ವಿದ್ಯಾರ್ಥಿಗಳು ಮಂಗಳವಾರ ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಕುವೆಂಪು ನಗರದ ಬಿಜಿಎಸ್ ಕಾಲೇಜು, ಮಹಾತ್ಮ ಗಾಂಧಿ ಕಾಲೇಜಿನ ವಿಜ್ಞಾನ ಶಿಕ್ಷಣ ವಿಭಾಗದ ನೂರಾರು ವಿದ್ಯಾರ್ಥಿಗಳು, ಎಬಿವಿಪಿ ಜಿಲ್ಲಾ ಸಂಚಾಲಕ ತೇಜಮೂರ್ತಿ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಸರ್ಕಾರ ಸಿಇಟಿ. ಸೀಟು ಹಂಚಿಕೆ ಬಗ್ಗೆ ನಡೆಸುತ್ತಿರುವ ಆನ್ಲೈನ್ ಪದ್ಧತಿ ವಿರೋಧಿಸಿ ಘೋಷಣೆ ಕೂಗಿದರು. ನಂತರ ತಾಲೂಕು ಕಚೇರಿಗೆ ಆಗಮಿಸಿ ಸಭೆ ನಡೆಸಿದರು.
ತೇಜಮೂರ್ತಿ ಮಾತನಾಡಿ, ಸರ್ಕಾರದ ಈ ಅವೈಜ್ಞಾನಿಕ ಪದ್ಧತಿಯಿಂದಾಗಿ ವೃತ್ತಿಪರ ಶಿಕ್ಷಣದಲ್ಲಿ ತಾಂತ್ರಿಕ, ವೈದ್ಯಕೀಯ ವ್ಯಾಸಂಗಕ್ಕೆ ಸೀಟು ಬಯಸುವ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಬಹಳಷ್ಟು ಅನ್ಯಾಯವಾಗುತ್ತಿದೆ. ಸಿಇಟಿಯ ಕೆಲವರು ಕಾಲೇಜು ಅಡಳಿತ ಮಂಡಳಿಯವರೊಂದಿಗೆ ಶಾಮೀಲಾಗಿ ಹಲವು ಅಕ್ರಮಗಳನ್ನು ನಡೆಸುವ ಕಾರಣ ಅರ್ಹ ಹಾಗೂ ರಾಜ್ಯದ ವಿದ್ಯಾರ್ಥಿಗಳಿಗೆ ಬಹಳಷ್ಟು ವಂಚನೆಯಾಗುತ್ತಿದೆ. ಆನ್ಲೈನ್ ಸೀಟು ಹಂಚಿಕೆ ಪದ್ಧತಿ ಕೈಬಿಡುವಂತೆ ಆಗ್ರಹಿಸಿ ತಹಸೀಲ್ದಾರ್ ಶಂಭುಲಿಂಗಯ್ಯ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಮಂಜುನಾಥ್, ಮುನಿರಾಜು,ದಾಸೇಗೌಡ ಇತರರು ಇದ್ದರು.
ವೇಳಾಪಟ್ಟಿ ಬದಲು ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಕುಣಿಗಲ್: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತರಗತಿಗಳ ವೇಳಾಪಟ್ಟಿ ಬದಲಾವಣೆ ಮಾಡಿರುವುದನ್ನು ವಿರೋಧಿಸಿದ ವಿದ್ಯಾರ್ಥಿಗಳು ಮಂಗಳವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಹಿಂದೆ ತರಗತಿಗಳನ್ನು ಬೆಳಗ್ಗೆ 10.30ರಿಂದ 4.30ರವರೆಗೆ ನಡೆಸಲಾಗುತ್ತಿತ್ತು. ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಕೆಲವು ತಾಂತ್ರಿಕ ಕಾರಣಗಳಿಂದ ದ್ವಿತೀಯ ಮತ್ತು ಅಂತಿಮ ಪದವಿ ತರಗತಿಗಳನ್ನು ಬೆಳಗ್ಗೆ 9.00ರಿಂದ 12.30, ಪ್ರಥಮ ಪದವಿ ತರಗತಿಗಳನ್ನು 12.30ರಿಂದ 4.30ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಈ ವೇಳಾಪಟ್ಟಿ ಬದಲಾವಣೆಯಿಂದ ಗ್ರಾಮಾಂತರ ಪ್ರದೇಶದಿಂದ ಪಟ್ಟಣಕ್ಕೆ ಪದವಿ ವ್ಯಾಸಂಗಕ್ಕೆ ಬರುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿ ಮಂಗಳವಾರ ಬೆಳಗ್ಗೆ ಕಾಲೇಜು ಪ್ರಾರಂಭಕ್ಕೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ತರಗತಿಗಳನ್ನು ಬಹಿಷ್ಕರಿಸಿ ಆಕಾಶ್, ನಾಗೇಶ್ ಸಮ್ಮಖದಲ್ಲಿ ಪ್ರತಿಭಟನೆ ನಡೆಸಿದರು.ಪ್ರತಿಭಟನಾ ನಿರತ ವಿದ್ಯಾರ್ಥಿಗಳು ತಾಲೂಕಿನಾದ್ಯಂತ ಇರುವ ಏಕಮಾತ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ತಾಲೂಕಿನ ಗಡಿ ಭಾಗ ಸೇರಿದಂತೆ ಇತರೆ ಭಾಗದಿಂದ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಬೆಳಗ್ಗೆ 9ಕ್ಕೆ ತರಗತಿಗಳು ಪ್ರಾರಂಭವಾಗುವುದರಿಂದ ಗ್ರಾಮೀಣ ವಿದ್ಯಾರ್ಥಿಗಳು ಬರಲು ಬಸ್ ಸೇರಿದಂತೆ ಸಾರಿಗೆ ವ್ಯವಸ್ಥೆ ಇಲ್ಲದೆ ತೊಂದರೆ ಉಂಟಾಗುತ್ತಿದೆ. ಬೆಳಗ್ಗೆ 9ಕ್ಕೆ ಕಾಲೇಜಿಗೆ ಬರಲು ತಿಂಡಿ ಇಲ್ಲದೆ ಬರುವಂತ ಸ್ಥಿತಿ ಇದೆ. ಗ್ರಾಮಾಂತರ ವಿದ್ಯಾರ್ಥಿಗಳ ಸಮಸ್ಯೆ ಕಾಲೇಜಿನ ಬೋಧಕ ವರ್ಗಕ್ಕೆ ಅನುಕೂಲವಾಗುತ್ತಿಲ್ಲ. ಕೆಲವೇ ಕೆಲವು ಉಪನ್ಯಾಸಕರ ಅನುಕೂಲಕ್ಕೆ ಈ ರೀತಿ ವೇಳಾಪಟ್ಟಿ ಬದಲಾವಣೆ ಮಾಡಿ ಗ್ರಾಮೀಣ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮೊಟಕು ಮಾಡುವಂತ ಸ್ಥಿತಿಗೆ ಕಾರಣವಾಗಿದ್ದಾರೆ ಎಂದು ದೂರಿದರು. ಪ್ರಾಚಾರ್ಯೆ ಡಾ.ಶಶಿಕಲಾ ಮಾತನಾಡಿ, 2014-15ನೇ ಸಾಲಿಗೆ 1800 ವಿದ್ಯಾಥಿಗಳು ದಾಖಲಾಗಿದ್ದಾರೆ. 36 ಕೊಠಡಿಗಳ ಅಗತ್ಯತೆ ಇದ್ದು, ಕೇವಲ 21 ಕೊಠಡಿಗಳಿವೆ. 15 ಕೊಠಡಿಗಳ ಕೊರತೆ ಇದೆ. ವೇಳಾಪಟ್ಟಿ ಬದಲಾವಣೆ ಸಾಧ್ಯವಿಲ್ಲ. ಪೋಷಕರು, ವಿದ್ಯಾರ್ಥಿಗಳು ಸಹಕರಿಸುವಂತೆ ಮನವಿ ಮಾಡಿದರು. ಆದರೆ, ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರೆಸಿದ್ದು, ವಿಷಯ ತಿಳಿದ ತಾಪಂ ಪ್ರಭಾರ ಅಧ್ಯಕ್ಷ ಬಿ.ಎನ್.ಜಗದೀಶ್ ಆಗಮಿಸಿ ವಿದ್ಯಾರ್ಥಿ ಹಾಗೂ ಪ್ರಾಂಶುಪಾಲರೊಂದಿಗೆ ಚರ್ಚಿಸಿ, ಶಾಸಕರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾಲೇಜು ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುವರೆಗೂ ಹಳೇ ವೇಳಾಪಟ್ಟಿಯಂತೆ ತರಗತಿ ನಡೆಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.
ಪ್ರತಿಭಾನ್ವಿತರ ಹಿತ ರಕ್ಷಿಸಲು ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಎಬಿವಿಪಿ ಪ್ರತಿಭಟನೆ
ತುಮಕೂರು: ರಾಜ್ಯ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿ ಹಾಗೂ ಬಡ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರಕ್ಷಿಸಲು ಆ ಗ್ರಹಿಸಿ ಎಬಿವಿಪಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ತುಮಕೂರಿನ ಶಿವಕುಮಾರ ಸ್ವಾಮಿ ವೃತ್ತದ ಬಳಿ ಸಮಾವೇಶಗೊಂಡ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ರಾಜ್ಯ ಶಿಕ್ಷಣ ಸಚಿವರ ಪ್ರತಿಕೃತಿ ದಹಿಸಿದರು.
ಬಳಿಕ ಮಾತನಾಡಿದ ಪ್ರತಿಭಟನಾಕಾರರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನಗೆ ನೀಡಿರುವ ಜವಾಬ್ದಾರಿ ಹಾಗೂ ಪಾರದರ್ಶಕ ನ್ಯಾಯಯುತ ಕೌನ್ಸಲಿಂಗ್ ಮೂಲಕ ಬಡ-ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರಿ ಕೋಟಾದ ಸೀಟು ಹಂಚಿಕೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಎಂಬಿಬಿಎಸ್, ಎಂಜಿನಿಯರಿಂಗ್, ಬಿಎಸ್ಸಿ (ಅಗ್ರಿ), ವೆಟರ್ನರಿ ಹೀಗೆ ಸುಮಾರು 1 ಲಕ್ಷಕ್ಕೂ ಹೆಚ್ಚಿನ ಸೀಟುಗಳನ್ನು ಯುಜಿಸಿಇಟಿ ಯಲ್ಲಿ ಹಂಚಲಾಗುತ್ತಿದೆ ಎಂದಿದ್ದಾರೆ. ಆಯುರ್ವೇದಿಕ್ ಕೌನ್ಸಿಲಿಂಗ್ ದಿನಾಂಕ ನಿಗದಿಯಾಗದೇ ಇರುವುದರಿಂದ ಆಯುರ್ವೇದ ಪ್ರವೇಶ ಬಯಸುವ ವಿದ್ಯಾರ್ಥಿಗಳು ಪ್ರಸ್ತುತ ಪಡೆದಿರುವ ಸೀಟುಗಳನ್ನು ಹಿಂದಿರುಗಿಸುತ್ತಾರೆ. ಆದ್ದರಿಂದ ಪ್ರಸ್ತುತ ಪಡೆದಿರುವ ಸೀಟುಗಳು ಇತರೆ ವಿದ್ಯಾರ್ಥಿಗಳಿಗೂ ದೊರೆಯದೇ ಬ್ಲಾಕ್ ಆಗಿರುತ್ತವೆ ಎಂದು ಎಬಿವಿಪಿ ಆಗ್ರಹಿಸಿದೆ. ಕಟ್ಟ ಕಡೆಯ ಅಂತಕ್ಕೆ ಕೌನ್ಸಿಲಿಂಗಗೆ ಬಂದರೂ ಕಳೆದ ಬಾರಿಗಿಂತ ಸುಮಾರು 1650 ಕ್ಕೂ ಹೆಚ್ಚಿನ ಮೆಡಕಲ್ ಸೀಟುಗಳು ಪ್ರಕಿಯೆಯಲ್ಲಿ ಬಂದಿಲ್ಲ. ಆದ್ದರಿಂದ ಎಲ್ಲಾ ಮೆಡಿಕಲ್ ಸೀಟುಗಳನ್ನು ತಕ್ಷಣವೇ ಸಿಇಟಿಯ ಏಪ್ರಿಲ್ 17, 2014 ರ ಸುತ್ತಿನಲ್ಲಿ ಸೇರಿಸಬೇಕು ಎಂದಿದ್ದಾರೆ.
ಮನೆಗೆ ನುಗ್ಗಿ ಚಿನ್ನ, ನಗದು ಕಳ್ಳತನ
ತುರುವೇಕೆರೆ: ಪಟ್ಟಣದ ಸುಬ್ರಹ್ಮಣ್ಯ ಬಡಾವಣೆಯಲ್ಲಿನ ನಿವಾಸಿ ಹಬೀಬುಲ್ಲಾ ಖಾನ್ ಅವರ ಮನೆಗೆ ರಾತ್ರಿ ನುಗ್ಗಿರುವ ಕಳ್ಳರು ಮನೆಯಲ್ಲಿದ್ದ ನಗದು ಹಾಗೂ ಚಿನ್ನದ ಆಭರಣವನ್ನು ದೋಚಿದ್ದಾರೆ.
ಹಬೀಬುಲ್ಲಾ ಖಾನ್ ಕುಟುಂಬದ ಸದಸ್ಯರೊಬ್ಬರು ಹಿರಿಯೂರಿನಲ್ಲಿ ಅಪಘಾತಕ್ಕೀಡಾಗಿದ್ದರು. ಇವರನ್ನು ಪಟ್ಟಣದ ಮತ್ತೊಂದು ಬಡಾವಣೆಗೆ ಕರೆತರಲಾಗಿತ್ತು. ಅಪಘಾತಕ್ಕೀಡಾಗಿದ್ದವರನ್ನು ನೋಡುವ ಸಲುವಾಗಿ ಸೋಮವಾರ ರಾತ್ರಿ 8.30ರ ಸುಮಾರಿಗೆ ಹಬೀಬುಲ್ಲಾ ಕುಟುಂಬದವರು ಮನೆಗೆ ಬೀಗ ಹಾಕಿಕೊಂಡು ತೆರಳಿದ್ದರು. ರಾತ್ರಿ ಸುಮಾರು 2.30ರ ವೇಳೆಯಲ್ಲೂ ಮಗುವಿಗೆ ಹಾಲು ತರಲು ಮನೆಯವರು ಬಂದು ಹೋಗಿದ್ದಾರೆ. ಆ ವೇಳೆ ಯಾವುದೇ ಕಳ್ಳತನವಾಗಿರಲಿಲ್ಲ.
ಮಂಗಳವಾರ ಬೆಳಗ್ಗೆ ಅಕ್ಕಪಕ್ಕದ ಮನೆಯವರು ಮನೆಯ ಬಾಗಿಲು ತೆಗೆದಿದ್ದರೂ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ್ದಾರೆ. ಮನೆಯ ಹಿಂಭಾಗದಲ್ಲಿ ಮನೆಗೆ ಸಂಬಂಧಿಸಿದ ಕೆಲವು ಕಾಗದ ಪತ್ರಗಳು ಬಿದ್ದಿದ್ದವು. ಇದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಮನೆ ಬಳಿ ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮನೆಯವರಿಗೆ ಸುದ್ದಿ ಮುಟ್ಟಿಸಲಾಗಿದೆ. ಕುಟುಂಬದ ಸದಸ್ಯರು ಮನೆಗೆ ಬಂದು ನೋಡಿದಾಗ 2 ಬೀರುಗಳನ್ನು ಒಡೆದಿರುವ ಕಳ್ಳರು ಬೀರುವಿನಲ್ಲಿದ್ದ ಸುಮಾರು 50 ಸಾವಿರ ನಗದು, ಸುಮಾರು 75 ಗ್ರಾಂ ನಷ್ಟು ಬಂಗಾರದ ಒಡವೆಯನ್ನು ದೋಚಿದ್ದಾರೆ. ಸ್ಥಳಕ್ಕೆ ಸಿಪಿಐ ನಿರಂಜನ್ ಕುಮಾರ್, ಎಸೈ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಸ್ವಾತಂತ್ರ್ಯೋತ್ಸವ ಆಚರಣೆಗೆ ಸಿದ್ಧತೆ
ತುಮಕೂರು: ಈ ಬಾರಿ ಜಿಲ್ಲಾಡಳಿತದ ವತಿಯಿಂದ ಆ.15ರಂದು ವಿಜೃಂಭಣೆಯ ಸ್ವಾತಂತ್ರ್ಯೋತ್ಸವ ಆಚರಿಸಲು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಸ್ವಾತಂತ್ರ್ಯೋತ್ಸವದ ಯಶಸ್ಸಿಗೆ ಸ್ವಾಗತ ಸಮಿತಿ, ಪರೇಡ್ ಸಮಿತಿ, ಕವಾಯತು ಸಮಿತಿ, ಕ್ರೀಡಾಂಗಣ ಸಮಿತಿ, ಕ್ರೀಡಾ ಸಮಿತಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಿತಿ ಹಾಗೂ ಮತ್ತಿತರ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳ ಮೇಲುಸ್ತುವಾರಿಗಾಗಿ ನೇಮಿಸಲಾದ ನಿಯೋಜಿತ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಸೂಚಿಸಿದರು. ಸ್ವಾತಂತ್ರ್ಯೋತ್ಸವ ದಿನದಂದು ಬೆಳಗ್ಗೆ 9 ಗಂಟೆಗೆ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಲಿದ್ದು, ವಿವಿಧ ಕವಾಯತುಗಳಿಂದ ಧ್ವಜವಂದನೆ ಸ್ವೀಕರಿಸಿ ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಲಿದ್ದಾರೆ.
ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ವಿವಿಧ ಗಣ್ಯರು, ಸಾಧಕರನ್ನು ಆಹ್ವಾನಿಸಬೇಕು. ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ಎಲ್ಲ ವಸತಿ ನಿಲಯಗಳಲ್ಲಿ ಅಂದು ಬೆಳಗ್ಗೆ ಕಡ್ಡಾಯವಾಗಿ ಧ್ವಜಾರೋಹಣ ನೆರವೇರಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

