ತುಮಕೂರು

ನಿಮ್ಮೊಂದಿಗೆ ನಾವಿದ್ದೇವೆ

Published On :

ತುಮಕೂರು: ಮಹಿಳೆಯರ ಸುರಕ್ಷತೆಗೆ ಪೊಲೀಸ್ ಇಲಾಖೆ ಹಲವಾರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಮಹಿಳೆಯರು ಭಯ ಪಡುವ ಅಗತ್ಯವಿಲ್ಲ ಎಂಬ ಅಭಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ ಗುಪ್ತಾ ನೀಡಿದ್ದಾರೆ.
ನಗರದ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮಹಿಳಾ ಸುರಕ್ಷತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯದ ಬೇರೆ ಕಡೆಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ ನಮ್ಮ ಜಿಲ್ಲೆಯಲ್ಲಿ ಸಂಪೂರ್ಣ ನಿಯಂತ್ರಣದಲ್ಲಿದೆ. ಇದೇ ಸ್ಥಿತಿ ಮುಂದುವರೆಯಬೇಕೆಂದರೆ ಮಹಿಳೆಯರು ಪೊಲೀಸರೊಂದಿಗೆ ಸಂಪೂರ್ಣ ಸಹಕಾರ ನೀಡುವುದರ ಜೊತೆಗೆ ಪೊಲೀಸ್ ಇಲಾಖೆಯ ಮಹಿಳಾ ಸುರಕ್ಷತೆಗಾಗಿ ಕೈಗೊಂಡಿರುವ ಹಲವು ಯೋಜನೆಗಳನ್ನು ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಮಹಿಳಾ ಸಂರಕ್ಷಣೆಗಾಗಿ ಜಿಲ್ಲಾ ಪೊಲೀಸ್ ವತಿಯಿಂದ ಪ್ರತಿ ಠಾಣಾ ವ್ಯಾಪ್ತಿಯಲ್ಲಿರುವ ಮಹಿಳಾ ಹಾಸ್ಟೆಲ್‌ಗಳು,ಪಿಜಿಗಳಿಗೆ ವಾರದಲ್ಲಿ ಒಂದು ದಿನ ಮಹಿಳಾ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಹಾಸ್ಟೆಲ್‌ಗಳಲ್ಲಿ ವಾಸವಿರುವ ಮಹಿಳೆಯರೊಂದಿಗೆ ಮಾತುಕತೆ ನಡೆಸಲಿದೆ. ಈ ವೇಳೆ ಮಹಿಳೆಯರು ಮುಕ್ತವಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾಗಿದೆ. ಈ ವಿಷಯವನ್ನು ತಮ್ಮ ಸಂಬಂಧಿಕರಿಗೆ ತಿಳಿಸಬೇಕೆಂದು ರಮನ ಗುಪ್ತಾ ಕೋರಿದರು.
ಮಹಿಳೆಯರ ಸುರಕ್ಷತೆಗಾಗಿ ಪಿಸಿಆರ್ ವಾಹನವನ್ನು ಇನ್ನು ಮುಂದೆ ಬಳಕೆ ಮಾಡಲಾಗುವುದು. ಶಾಲಾ ಕಾಲೇಜು ಬಿಡುವ ವೇಳೆ, ಮಹಿಳೆಯರು ಕೆಲಸ ಮಾಡುವ ತಾಣಗಳಲ್ಲಿ ಸಂಜೆ, ರಾತ್ರಿ ವೇಳೆ ಸಂಚರಿಸುವ ಈ ವಾಹನದಲ್ಲಿ ಅಳವಡಿಸಿರುವ ಹಿಡನ್ ಕ್ಯಾಮೆರಾದಿಂದ ಪೊಲೀಸ್ ಕಂಟ್ರೋಲ್ ರೂಂನಲ್ಲಿಯೇ ಕುಳಿತು ಅಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಗಮನಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಇದೇ ರೀತಿಯ ಮೂರು ವಾಹನಗಳು ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸಂಚರಿಸಲಿವೆ ಎಂದರು.
ಮಹಿಳೆಯರ ಸುರಕ್ಷತೆಗಾಗಿಯೇ ವಿಶೇಷವಾಗಿ ಕಳೆದ ಎಂಟು ತಿಂಗಳ ಹಿಂದೆಯೇ ಈ ಹೊಸ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ತರಲಾಗಿದೆ. ಇದರ ಬಳಕೆ ಮಾಡಿಕೊಳ್ಳಬೇಕು. ಇದೇ ರೀತಿ ಇ-ರಕ್ಷಾ ಯೋಜನೆ ಮಹಿಳೆಯರು ಅಗತ್ಯ ಬಿದ್ದಾಗ 9480801900 ನಂಬರ್‌ಗೆ ತಾವು ಇದ್ದ ಜಾಗದಿಂದಲೇ ಎಸ್‌ಎಂಎಸ್ ಮೂಲಕ ದೂರು ನೀಡಿದರೆ ಒಂದು ವಾರದಲ್ಲಿ ಸಮಸ್ಯೆ ಕುರಿತು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಎಸ್‌ಎಂಎಸ್ ಮೂಲಕವೇ ತಿಳಿಸಲಾಗುವುದು. ಅಲ್ಲದೆ ದೂರು ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಈ ವ್ಯವಸ್ಥೆ ಮೂಲಕ ಬರುವ ಪ್ರತಿ ದೂರನ್ನು ಖುದ್ದು ನಾನೇ ಪರಿಶೀಲಿಸುತ್ತಿದ್ದು ಇದರ ಬಳಕೆಯನ್ನು ಜಿಲ್ಲೆಯ ಮಹಿಳೆಯರು ಮಾಡಿಕೊಳ್ಳಬೇಕು ಎಂದರು.
37 ಠಾಣೆಗಳಲ್ಲಿ ನಾಗರಿಕ ಸಮಿತಿ ಸಭೆ
ಜಿಲ್ಲೆಯ 37 ಠಾಣೆಯಲ್ಲಿ ತಿಂಗಳಿಗೊಂದು ನಾಗರಿಕ ಸಮಿತಿ ಸಭೆ ನಡೆಸಿ ವಿಶೇಷವಾಗಿ ಮಹಿಳಾ ಸಮಸ್ಯೆಗಳ ಬಗ್ಗೆ ಒತ್ತು ನೀಡಲು ನಿರ್ಧರಿಸಲಾಗಿದೆ. ಅಲ್ಲದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಹಿಳಾ ಡೆಸ್ಕ್ ತೆರೆದಿದ್ದು ಮಹಿಳೆಯರು ಖುದ್ದಾಗಿ ಬಂದು ದೂರು ನೀಡಬಹುದು ಎಂದರು.
ಸ್ವಯಂ ರಕ್ಷಣೆ ತರಬೇತಿ
ಮಹಿಳೆಯರಿಗಾಗಿ ಜಿಲ್ಲಾ ಪೊಲೀಸ್ ವತಿಯಿಂದ ಸ್ವಯಂ ರಕ್ಷಣೆಯ ತರಬೇತಿ ನೀಡಲಾಗುವುದು. ಐವತ್ತು ಮಹಿಳೆಯರು ಒಟ್ಟಿಗೆ ಪಟ್ಟಿ ನೀಡಿದರೆ ನಮ್ಮ ಡಿಆರ್ ಮೈದಾನದಲ್ಲಿ ಒಂದು ವಾರಗಳ ಕಾಲ ಬೆಳಗ್ಗೆ 2 ಗಂಟೆ, ಸಂಜೆ 2 ಗಂಟೆ ತರಬೇತಿ ನೀಡಲಾಗುವುದು. ತಜ್ಞರ ಉಪನ್ಯಾಸದ ಜತೆಗೆ ಸ್ವಯಂ ರಕ್ಷಣಾ ಕಲೆಯನ್ನು ಕಲಿಸಿಕೊಡಲಾಗುವುದು. ಇದಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. 18 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರು ಭಾಗವಹಿಸಬಹುದಾಗಿದೆ. ಇದರ ಜತೆಗೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಮಹಿಳೆಯರಿಗೆ ಉಪನ್ಯಾಸ, ಸಂವಾದ ಏರ್ಪಡಿಸುವ ಮೂಲಕ ಅಗತ್ಯ ಮಾಹಿತಿ ನೀಡಲಾಗುವುದು ಎಂದರು. ಇಷ್ಟೆಲ್ಲಾ ಕಾರ್ಯಕ್ರಮಗಳ ಜತೆಗೆ ಸಂಘ ಸಂಸ್ಥೆಗಳು, ಕೈಗಾರಿಕೋದ್ಯಮಿಗಳ ನೆರವಿನೊಂದಿಗೆ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಮಹಿಳಾ ಸಂಘಗಳು ತಮ್ಮ ಬಡಾವಣೆಗಳಲ್ಲಿ ಇರುವ ಸೂಕ್ಷ್ಮ ಪ್ರದೇಶಗಳ ಮಾಹಿತಿ ನೀಡಿ ಸಹಕರಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ತುಮಕೂರು ನಗರ ಡಿವೈಎಸ್ಪಿ ಜಗದೀಶ್, ಮೈತ್ರಿ ಮಹಿಳಾ ಬಳಗದ ರಾಜೇಶ್ವರಿ ಪ್ರಭು ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.