ವಿವಾದದ ವಿವಿಗೆ ದಶಕದ ಸಂಭ್ರಮ
ಉಗಮ ಶ್ರೀನಿವಾಸ್
ತುಮಕೂರು: ಜಿಲ್ಲೆಗೊಂದು ವಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಮುಂದೆ ವಿವಾದದ ವಿವಿ ಎಂಬ ಕುಖ್ಯಾತಿಗೆ ಒಳಗಾದ ತುಮಕೂರು ವಿವಿಗೆ ಭರ್ತಿ 10 ವರ್ಷ ಸಂದಿದೆ.
10 ವರ್ಷಗಳ ಹಿಂದೆ ಅಂದಿನ ಉನ್ನತ ಶಿಕ್ಷಣ ಸಚಿವ ಡಾ. ಜಿ. ಪರಮೇಶ್ವರ್ ಅವರು ಈ ವಿವಿಯನ್ನು ಮಂಜೂರು ಮಾಡಿದ್ದರು. ಆರಂಭಿಕವಾಗಿ ಎಂ.ಜಿ. ರಸ್ತೆಯ ಅಂಬೇಡ್ಕರ್ ಭವನವನ್ನೇ ಆಡಳಿತ ಕಚೇರಿಯನ್ನಾಗಿ ಮಾಡಲಾಗಿತ್ತು. ಬಳಿಕ ದೇವರಾಯನದುರ್ಗ ಬಳಿ 300 ಕ್ಕೂ ಹೆಚ್ಚು ಎಕರೆ ಜಾಗವನ್ನು ವಿವಿಗೆ ನೀಡಲಾಗಿತ್ತು. ಆದರೆ ಅರಣ್ಯದಲ್ಲಿ ವಿವಿಗೆ ಜಾಗ ನೀಡಬಾರದೆಂದು ಕೆಲವರು ಕೋರ್ಟ್ ಮೊರೆ ಹೋಗಿದ್ದರಿಂದ ಜಾಗ ನೆನಗುದಿಗೆ ಬಿತ್ತು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 10 ವರ್ಷಗಳ ಸುದೀರ್ಘ ಅವಧಿಯಲ್ಲಿ ಇನ್ನೂ ವಿವಿಗೆ ಜಾಗ ಮಂಜೂರು ಆಗಿಲ್ಲ.
ಮೊದಲ ವಿಸಿ: ತುಮಕೂರು ವಿವಿಯ ಸಂಸ್ಥಾಪಕ ಕುಲಪತಿ ಡಾ. ಓ. ಅನಂತರಾಮಯ್ಯ ಅವರನ್ನು ನೇಮಕಗೊಂಡರು. ಅವರ ಅವಧಿಯಲ್ಲಿ ವಿವಿಗೆ ಜಾಗ ಪಡೆದುಕೊಳ್ಳಲು ಸರ್ಕಾರದ ಜತೆ ಸುದೀರ್ಘ ಮಾತುಕತೆ ನಡೆಸಿದರು. ಕಡೆಗೂ ಬಿದರೆಕಟ್ಟೆ ಕಾವಲ್ನಲ್ಲಿ ಸರ್ಕಾರ ಜಾಗ ನೋಡಿದರೂ ಮತ್ತೆ ಹಲವಾರು ಕಾರಣಗಳಿಗಾಗಿ ಆ ಜಾಗ ದಕ್ಕಲೇ ಇಲ್ಲ. ಹೀಗಾಗಿ ತುಮಕೂರಿನ ತುಂಬೆಲ್ಲಾ ವಿವಿ ತರಗತಿಗೆ ಕಟ್ಟಡಗಳನ್ನು ಬಾಡಿಗೆ ಪಡೆದರು. ಹೀಗಾಗಿ ಮೊಬೈಲ್ ವಿವಿ ಎಂದು ಹೆಸರು ಗಳಿಸಿತು. ಕುಲಪತಿ ಡಾ. ಓ. ಅನಂತರಾಮಯ್ಯ ಅವರು ತಮ್ಮ ಅಧಿಕಾರವಧಿಯ ಕಡೆಯಲ್ಲಿ ತುಮಕೂರು ಸರ್ಕಾರಿ ಕಾಲೇಜನ್ನು ವಿವಿಗೆ ಸಂಯೋಜಿಸಿಕೊಂಡರು.
ಎರಡನೇ ವಿಸಿ: ಅನಂತರಾಮಯ್ಯ ಅವರ ನಿವೃತ್ತಿ ಬಳಿಕ ಬಂದದ್ದು ಡಾ. ಎಸ್.ಸಿ. ಶರ್ಮ. ಬೆಂಗಳೂರಿನ ಆರ್ವಿ ಕಾಲೇಜಿನಲ್ಲಿದ್ದ ಶರ್ಮಾ ಅವರು ಅಂಬೇಡ್ಕರ್ ಭವನದಿಂದ ತುಮಕೂರಿನ ವಿಜ್ಞಾನ ಮತ್ತು ಕಲಾ ಕಾಲೇಜಿಗೆ ಕಟ್ಟಡವನ್ನು ಸ್ಥಳಾಂತರಿಸಿದರು. ಅವರ ಅವಧಿಯಲ್ಲಿ ಶರ್ಮಾ ಅವರು ಜಾಗದ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ. ಬದಲಾಗಿ ವಿಜ್ಞಾನ, ಕಲಾ ಕಾಲೇಜಿನ ವ್ಯಾಪ್ತಿಗೆ ಒಳಪಟ್ಟಿದ್ದ ಸುಮಾರು 70 ಎಕರೆ ಜಾಗದಲ್ಲಿ ಖಾಸಗಿಯವರ ನೆರವಿನಿಂದ ಒಂದಷ್ಟು ಕಟ್ಟಡಗಳನ್ನು ಕಟ್ಟಿದರು. ಇದು ವಿವಾದಕ್ಕೂ ಕಾರಣವಾಯಿತು.
ಹಾಲಿ ಕುಲಪತಿ: ಡಾ. ಶರ್ಮಾ ಅವರು ನಿವೃತ್ತಿಯಾದ ಬಳಿಕ ಈ ಜಾಗಕ್ಕೆ ಬಂದಿರುವವರು ಪ್ರೊ. ಎ.ಎಚ್. ರಾಜಾಸಾಬ್. ಶರ್ಮಾ ಅವರು ಕುಲಪತಿಯಾಗಿದ್ದಾಗ ಪ್ರತಿ ದಿನವೂ ಒಂದಲ್ಲಾ ಒಂದು ವಿವಾದ ನಡೆಯುತ್ತಲೇ ಇತ್ತು. ಆದರೆ ರಾಜಾಸಾಬ್ ಬಂದ ಬಳಿಕ ವಿವಾದಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿದೆ. ಹೊಸ ಹೊಸ ಚಿಂತನೆಗಳಿಗೆ ಅವಕಾಶ ಸಿಗುತ್ತಿದೆ. ವಿವಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಯೋಜನೆಯನ್ನು ಇಟ್ಟುಕೊಂಡಿದ್ದಾರೆ.
ಲೋಗೋ ಬದಲು
ಈ ಮೊದಲು ಡಾ. ಓ. ಅನಂತರಾಮಯ್ಯ ಅವರು ವಿವಿಗೆ ಸಿದ್ಧಪಡಿಸಿದ್ದ ಲೋಗೋವನ್ನು ಬದಲಾಯಿಸಿ ಹೊಸ ಲೋಗೋವನ್ನು ಶರ್ಮಾ ಅವರು ಸಿದ್ಧಪಡಿಸಿದರು. ಈ ಲೋಗೋ ಕ್ಕೆ ಭಾರಿ ವಿರೋಧ ವ್ಯಕ್ತವಾಯಿತು. ಈ ಹಿಂದೆ ಇದ್ದ ಲೋಗೋ ತುಮಕೂರಿನ ಸಾಂಸ್ಕೃತಿಕ ಸ್ಥಿತಿಗತಿಯನ್ನು ಬಿಂಬಿಸುತ್ತಿತ್ತು. ಬದಲಾದ ಲೋಗ ದಲ್ಲಿ ಅದ್ಯಾವುದೂ ಇಲ್ಲ. ಹೀಗಾಗಿ ಹೊಸ ಲೋಗೋ ಬೇಡವೇ ಬೇಡವೆಂದು ಪತ್ರ ಚಳವಳಿ ಆಯ್ತು. ಗಲಾಟೆ ಆಯ್ತು. ಆದರೆ ಕುಲಪತಿ ಶರ್ಮಾ ಯಾವುದಕ್ಕೂ ಜಗ್ಗದೇ ಹೊಸ ಲೋಗೋ ಅಸ್ತಿತ್ವಕ್ಕೆ ತಂದರು. ಇದರ ಮಧ್ಯೆ ಪಿಜಿ ಕೋರ್ಸ್ಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿತಗೊಳಿಸುವ ಕಾರ್ಯಕ್ಕೆ ಮುಂದಾದರು. ಇದು ದೊಡ್ಡ ಗಲಾಟೆಗೆ ನಾಂದಿಯಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

