ತುಮಕೂರು

ಶಿವಯೋಗಿಸ್ವಾವು ಗೆಲ್ಲಿಸಿ ಕೊಡಿ: ಸಿಟಿ ರವಿ ಮನವಿ

Published On :

ಮಧುಗಿರಿ: ಆಗ್ನೇಯ ಪದವೀಧರ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಡಾ. ಶಿವಯೋಗಿಸ್ವಾವು 3ನೇ ಬಾರಿ  ಸ್ಪರ್ಧಿಸಿದ್ದು ಯಾವುದೇ ರೀತಿ ಕಳಂಕವಿಲ್ಲದೆ ಕೆಲಸ ಮಾಡಿರುವ ಇವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಕೊಡಬೇಕು ಎಂದು ಮತದಾರರಲ್ಲಿ  ಶಾಸಕ ಸಿ.ಟಿ. ರವಿ ಮನವಿ ಮಾಡಿದರು.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಶಿವಯೋಗಿಸ್ವಾವು ಪರ ಮತ ಯಾಚಿಸಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟಷ್ಟು ಆದ್ಯತೆ ಈ ರಾಜ್ಯದಲ್ಲಿ ಯಾವುದೇ ಸರ್ಕಾರ ನೀಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ರಾಜ್ಯದಲ್ಲಿ 1 ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮಾತ್ರ ಇತ್ತು. ಇದನ್ನು ಮನಗಂಡ ಬಿಜೆಪಿ ಸರ್ಕಾರ ರಾಜ್ಯದಲ್ಲಿ 14 ಹೊಸ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ತೆರೆದು ಎಲ್ಲ ವರ್ಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದೆ. ಬೆಳಗಾವಿ, ದಾವಣಗೆರೆ ಸೇರಿದಂತೆ 6 ಕಡೆ  ವಿವಿ  ತೆರೆದಿದೆ. ಮೂರೂವರೆ ಸಾವಿರ ಕೋಟಿ ಶಿಕ್ಷಣ ಕ್ಷೇತ್ರದ ಬಜೆಟ್‌ನ್ನು 18 ಸಾವಿರ ಕೋಟಿ ರು.ಗೆ ಹೆಚ್ಚಿಸಿದ್ದು ಬಿಜೆಪಿ ಸರ್ಕಾರ. ಬೀದರ್‌ನಲ್ಲಿ ಹೊಸ ಪಶು ವಿವಿ ಸ್ಥಾಪಿಸಿ ನೂತನ ವರ್ಗಾವಣೆ ನೀತಿ ಜಾರಿಗೆ ತಂದಿದೆ. ಆದರೆ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿವರೆಗೆ ರಾಜ್ಯವನ್ನಾಳಿದ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಗಳು ಖಾಸಗಿ ಕಾಲೇಜು ಬೆಳಸಿದರೆ ಹೊರೆತು ಒಂದೇ ಒಂದು ಎಂಜಿನಿಯರಿಂಗ್ ಕಾಲೇಜು ತೆರೆಯಲಿಲ್ಲ ಇವರ ಹೆಗ್ಗಳಿಕೆ ಯಾವುದು ಇಲ್ಲ  ಎಂದು ರವಿ  ಆರೋಪಿಸಿದರು.
ರಾಜ್ಯದ ಸಿದ್ದು ಸರ್ಕಾರಕ್ಕೆ ಅಭಿವೃದ್ಧಿ ವಿಚಾರದಲ್ಲಿ ಗೊತ್ತು, ಗುರಿ ಎರಡು ಇಲ್ಲ. ಕೇವಲ ತಾತ್ಕಾಲಿಕ ಓಟ್‌ಬ್ಯಾಂಕ್ ಹೊರತು ಪಡಿಸಿ ದೂರ ದೃಷ್ಟಿ ಯೋಜನೆ, ಕಲ್ಪನೆ ಸಿದ್ದು ಸರ್ಕಾರಕ್ಕಿಲ್ಲ ಎಂದು ಲೇವಡಿ ಮಾಡಿದ ರವಿ ಸುವರ್ಣ ಭೂಮಿ, ಸುವರ್ಣ ಗ್ರಾಮ ಯೋಜನೆಗೆ ಬಿಡಿಗಾಸು ಕೊಟ್ಟಿಲ್ಲ ಕೇವಲ ಸಮಾಜ ಒಡೆದು ಓಟು ಬ್ಯಾಂಕ್ ರೂಪಿಸುವಲ್ಲಿ ಮಗ್ನವಾಗಿದೆ. ನಮ್ಮ ರಾಜ್ಯಕ್ಕೆ ಮೆಡಿಕಲ್ ಸೀಟು ಕಡಿಮೆ ಮಾಡುತ್ತಿದೆ. ಎಲ್ಲವನ್ನು ಜಾತಿ ನೆಲೆಯಲ್ಲಿ ನೋಡುತ್ತಿದೆ. ಈ ಸರ್ಕಾರದ ಸಾಧನೆ, ಯೋಜನೆಗಳು ಕೂಡ ಜಾತಿ ಆಧಾರದ ಮೇಲಿವೆ ಎಂದು ದೂರಿದರು.
ಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಗಿರೀಶ್, ತಾ. ಪ್ರಧಾನ ಕಾರ್ಯರ್ಶಿ ಮಲ್ಲಿಕಾರ್ಜುನಸ್ವಾಮಿ, ಬಿ.ಪಿ.ನಾರಾಯಣ್, ತಿಮ್ಮಪ್ಪ, ನಾಗೇಂದ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.