ದೈಹಿಕ ಅರ್ಹತಾ ಪರೀಕ್ಷೆ ನಿಷ್ಪಕ್ಷಪಾತವಾಗಿ ನಡೆಸಿ ಡಿಸಿ ಸತ್ಯಮೂರ್ತಿ
ಕನ್ನಡಪ್ರಭ ವಾರ್ತೆ, ತುಮಕೂರು, ಜೂ.20
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜೂನ್ 28 ರಂದು ಅಬಕಾರಿ ರಕ್ಷಕರ ಹುದ್ದೆಗೆ ನಡೆಯಲಿರುವ ದೈಹಿಕ ಅರ್ಹತಾ ಪರೀಕ್ಷೆಯನ್ನು ಸುಗಮವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಶಾರೀರಿಕ ದಾರ್ಢ್ಯತೆ ಮತ್ತು ದೈಹಿಕ ಅರ್ಹತಾ ಸಮಿತಿಯ ಅಧ್ಯಕ್ಷರೂ ಆದ ಕೆ.ಎಸ್. ಸತ್ಯಮೂರ್ತಿ ತಾಕೀತು ಮಾಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಬಕಾರಿ ರಕ್ಷಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಶಾರೀರಿಕ ದಾರ್ಢ್ಯತೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ ಸಮಿತಿಯ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ಲೋಕಸೇವಾ ಆಯೋಗದಿಂದ ಅಬಕಾರಿ ರಕ್ಷಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ ಪರೀಕ್ಷೆ ಸಂದರ್ಭ ಸಕಲ ಸಿದ್ದತೆಗಳೊಂದಿಗೆ ಸಮಿತಿಯ ಸದಸ್ಯ ಅಧಿಕಾರಿಗಳು ಇತರೆ ಸಿಬ್ಬಂದಿಯೊಂದಿಗೆ ಖುದ್ದಾಗಿ ಹಾಜರಾಗುವಂತೆ ಅವರು ಸೂಚಿಸಿದರು.
ಮಹಾತ್ಮಗಾಂಧಿ ಮೈದಾನದಲ್ಲಿ ದೈಹಿಕ ಅರ್ಹತಾ ಪರೀಕ್ಷೆಗಾಗಿ 100 ಮೀಟರ್,200 ಮೀಟರ್ ಮತ್ತು 800 ಮೀಟರ್ ಓಟಕ್ಕೆ ನಿಖರವಾದ ಅಳತೆ ಮಾಡಿ, ಟ್ರ್ಯಾಕ್ ಗುರುತುಗಳನ್ನು ಹಾಕುವುದು. ಸ್ಟಾಪ್ವಾಚ್, ಅಳತೆ ಟೇಪ್, ಎತ್ತರ ಜಿಗಿತ, ಉದ್ದಜಿಗಿತ ಮತ್ತು ಗುಂಡು ಎಸೆತ ಪರೀಕ್ಷೆಗಾಗಿ ಮೈದಾನವನ್ನು ಸಿದ್ಧಗೊಳಿಸತಕ್ಕದ್ದು, ಅರ್ಹತಾ ಪರೀಕ್ಷೆಗಾಗಿ ತೂಕ, ಎತ್ತರ ಮತ್ತು ಎದೆ ಅಳತೆಗಾಗಿ ಅವಶ್ಯವಿರುವ ಉತ್ತಮ ಪರಿಕರಗಳನ್ನು (ಸೆಟ್ಗಳು) ಮುಂಚಿತವಾಗಿಯೇ ಸಿದ್ಧಗೊಳಿಸತಕ್ಕದ್ದು ಎಂದು ಅವರು ಜಿಲ್ಲೆಯ ಯುವಜನ ಸೇವಾ ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರಿಂದ ಯಾವುದೇ ರೀತಿ ಅಡ್ಡಿ ಮತ್ತು ಆತಂಕವಾಗದಂತೆ ನಿಯಂತ್ರಿಸಲು 6 ಜನ ಪೊಲೀಸ್ ಕಾನ್ಸ್ಟೇಬಲ್ ಹಾಗೂ ಅನುಭವವುಳ್ಳ ಒಬ್ಬ ಆರಕ್ಷಕ ನಿರೀಕ್ಷಕರನ್ನು ನಿಯೋಜಿಸುವಂತೆ ಕೋರಿ ಎಸ್ಪಿಗೆ ಪತ್ರ ಬರೆಯುವಂತೆ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಅಬಕಾರಿ ಉಪ ಆಯುಕ್ತರಿಗೆ ಸೂಚಿಸಿದ್ದಾರೆ. ಸಭೆಯಲ್ಲಿ ಅಬಕಾರಿ ಉಪಆಯುಕ್ತ ಎಲ್.ಎನ್. ಮೋಹನ್ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಟಿ.ಎ. ಈಶ್ವರಯ್ಯ, ಯುವಜನ ಸೇವಾ ಕ್ರೀಡಾಧಿಕಾರಿ ಸಿ.ಬಿ. ರಂಗಯ್ಯ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

