ನಿರ್ಮಿತಿ ಕೇಂದ್ರಕ್ಕೆ ಪುಗಸಟ್ಟೆ ಹಣ ಸಂದಾಯ
ತುರುವೇಕೆರೆ: ಕಾಮಗಾರಿಗಾಗಿ ಕಳೆದ ಎರಡು ವರ್ಷಗಳ ಹಿಂದೆಯೇ ನಿರ್ಮಿತಿ ಕೇಂದ್ರಕ್ಕೆ ಸ್ಥಳೀಯ ಪಟ್ಟಣ ಪಂಚಾಯ್ತಿ ವತಿಯಿಂದ ಲಕ್ಷಾಂತರ ರುಪಾಯಿ ನೀಡಲಾಗಿದೆ. ಆದರೆ ಇದುವರೆಗೂ ಹಲವಾರು ಕಾಮಗಾರಿಗಳನ್ನು ನಿರ್ಮಿಸದೆ ಹಣ ಗುಳುಂ ಮಾಡಿರುವ ಸಂಗತಿ ಮಾಹಿತಿ ಹಕ್ಕಿನಡಿ ಬಹಿರಂಗಗೊಂಡಿದೆ.
2012, ಅ.31ರಂದು 2011-12 ನೇ ಸಾಲಿನ ಎಸ್‌ಎಫ್‌ಸಿ (ಮುಕ್ತ ನಿಧಿ) ಮತ್ತು 2010-11 ಹಾಗೂ 2011-12ನೇ ಸಾಲಿನ 13ನೇ ಹಣಕಾಸು ಯೋಜನೆಯ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ಪಟ್ಣಣದ ವಾರ್ಡ್ ನಂ.1ರಿಂದ 14ನೇ ವಾರ್ಡ್‌ನಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆಂದು 62.35 ಲಕ್ಷ, ಇತರೆ ಕಾಮಗಾರಿಗಳಿಗೆಂದು 49.11 ಲಕ್ಷ ಯೋಜನೆಯನ್ನು ತಯಾರಿಸಲಾಗಿದೆ. ಇದಕ್ಕೆ ಸಂಬಂದಿಸಿದಂತೆ 2012, ನ.29ರಂದು ಸುಮಾರು 55 ಲಕ್ಷ ಚೆಕ್‌ನ್ನು ನಿರ್ಮಿತಿ ಕೇಂದ್ರದ ಪರವಾಗಿ ವೆಂಕಟಮ್ಮ ಎಂಬವರಿಗೆ, ಪುನಃ 2013, ಫೆ.18ರಂದು 49,27,000 ಚೆಕ್‌ನ್ನು ನಿರ್ಮಿತಿ ಕೇಂದ್ರದ ಪರವಾಗಿ ಮಾರ ಎಂಬವರಿಗೆ ನೀಡಲಾಗಿದೆ.
ಚನ್ನಕೇಶವ ದೇವಾಲಯದ ಬಳಿ ಉದ್ಯಾನ ವನ ನಿರ್ಮಾಣ ಮಾಡಲು ಸಾಕಷ್ಟು ಜಾಗವೇ ಇಲ್ಲದಿದ್ದರೂ ಉದ್ಯಾನ ವನ ನಿರ್ಮಾಣಕ್ಕೆಂದು ಸುಮಾರು 7.24 ಲಕ್ಷ ನಿಗದಿ ಮಾಡಲಾಗಿತ್ತು. ವಿಷಯ ತಿಳಿದ ಸಾರ್ವಜನಿಕರು ಆಕ್ಷೇಪಣೆ ಮಾಡಿದ್ದರಿಂದ ಉದ್ಯಾನ ವನಕ್ಕೆಂದು ಮೀಸಲಿಟ್ಟಿದ್ದ ಹಣವನ್ನು ತಡೆ ಹಿಡಿಯಲಾಗಿದೆ. ಬೇಟೇರಾಯಸ್ವಾಮಿ ದೇವಾಲಯದ ಬಳಿ ಸುಮಾರು 3.35 ಲಕ್ಷ ವೆಚ್ಚದಲ್ಲಿ ನಿರ್ಮಿಸಬೇಕಿದ್ದ ಹೈಮಾಸ್ಕ್ ಬೀದಿ ದೀಪದ ಕಾಮಗಾರಿ, ಜಲಶುಧ್ಧೀಕರಣ ಘಟಕಕ್ಕೆ ಸಬ್ ಮರ್ಸಿಬಲ್ ಪಂಪ್ ಅಳವಡಿಕೆ, ಬಾಣಸಂದ್ರ ರಸ್ತೆಯಲ್ಲಿ ಸಂತೆ ಮೈದಾನದಿಂದ ಪಟ್ಟಣದ ಸ್ವಾಗತ ಫಲಕದವರೆಗೆ ಸಿಎಫ್‌ಎಲ್ ಎಲ್‌ಇಡಿ ಬೀದಿ ದೀಪಗಳ ಅಳವಡಿಸುವ ಕಾಮಗಾರಿ ನಡೆದೇ ಇಲ್ಲ ಎಂದು ಪಟ್ಟಣ ಪಂಚಾಯ್ತಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಮಾಹಿತಿ ಹಕ್ಕುದಾರ ಟಿ.ಎಸ್.ಹರೀಶ್ ಅವರಿಗೆ ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ.
ಅಂದರೆ 10.98 ಲಕ್ಷ ಕಾಮಗಾರಿಯನ್ನು ಮಾಡದೇ ಇದ್ದರೂ ಪಪಂನಿಂದ ಹಣ ಪಡೆಯಲಾಗಿದೆ. ಹಣ ಪಡೆದು ಒಂದೂವರೆ ವರ್ಷ ಕಳೆದರೂ ಕಾಮಗಾರಿ ಆಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವೊಬ್ಬ ಅಧಿಕಾರಿಯಾಗಲಿ, ಜನಪ್ರತಿನಿಧಿಗಳಾಗಲಿ ವಿಚಾರಣೆ ಮಾಡಿಲ್ಲ. ಕಾಮಗಾರಿ ಆಗದಿರುವ ಹಿನ್ನೆಲೆಯಲ್ಲಿ ಹಣವನ್ನು ವಸೂಲು ಮಾಡಲು ಪಂಚಾಯ್ತಿಯವರು ಯಾವುದೇ ಕ್ರಮ ಕೈಗೊಂಡಿಲ್ಲ.
ಲೋಕಾಯುಕ್ತಕ್ಕೆ ದೂರು: ಪಟ್ಟಣ ಪಂಚಾಯ್ತಿಯಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ನಡೆದಿರುವ ಎಲ್ಲಾ ಕಾಮಗಾರಿಗಳ ಗುಣಮಟ್ಟ ಹಾಗೂ ಕಾಮಗಾರಿ ಆಗದೆಯೂ ಹಣ ಬಿಡುಗಡೆ ಮಾಡಿಸಿಕೊಂಡಿರುವ ಸಂಬಂಧ ಲೋಕಾಯುಕ್ತರಿಗೆ ದೂರು ಸಲ್ಲಿಸುತ್ತಿರುವುದಾಗಿ ಮಾಹಿತಿ ಹಕ್ಕುದಾರ ಟಿ.ಎಸ್.ಹರೀಶ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

