ತುಮಕೂರು

ಸದಸ್ಯರ ಕಿತ್ತಾಟಕ್ಕೆ ಅನುದಾನ ಪಟ್ಟಿಯೇ ರದ್ದು

Published On :

ತುರುವೇಕೆರೆ: ತಾಪಂಗೆ ಬಂದಿದ್ದ 2 ಕೋಟಿ ಅನುದಾನಕ್ಕೆ ಸಂಬಂಧಿಸಿ ತಾಪಂ ಮಾಜಿ ಅಧ್ಯಕ್ಷ ಹಾಗೂ ಸದಸ್ಯರ ನಡುವಿನ ತಿಕ್ಕಾಟದ ಮಧ್ಯೆ ನೀಡಿದ್ದ ಹಳೆ ಪಟ್ಟಿಯನ್ನು ಜಿಪಂ ಸಿಇಒ ಗೋವಿಂದರಾಜು ರದ್ದುಗೊಳಿಸಿದ್ದಾರೆ.
ತಾಪಂಗೆ ಅನಿರ್ಭಂದಿತ ಅನುದಾನದಲ್ಲಿ 100 ಲಕ್ಷ, 13 ನೇ ಹಣಕಾಸು ಯೋಜನೆಯಲ್ಲಿ 52.53 ಲಕ್ಷ ಹಾಗೂ ಲಿಂಕ್ ಡಾಕ್ಯುಮೆಂಟ್ ಪ್ರಕಾರ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲು 2 ಕೋಟಿ ನೀಡಲಾಗಿತ್ತು.
ಹಿಂದಿನ ಅಧ್ಯಕ್ಷ ಕೋಳಾಲ ಗಂಗಾಧರ್ ಅಧ್ಯಕ್ಷತೆಯಲ್ಲಿ ನಡೆದ ಕಾಮಗಾರಿಗಳ ಕ್ರಿಯಾ ಯೋಜನೆ ಕೆಲವು ತಾಪಂ ಸದಸ್ಯರನ್ನು ಕೆರಳಿಸಿತ್ತು. ತಮ್ಮ ಕ್ಷೇತ್ರಗಳಿಗೆ ಹಣ ನೀಡಿಲ್ಲ. ಕೆಲವೇ ಸದಸ್ಯರ ಕ್ಷೇತ್ರಗಳಿಗೆ ಹಣ ನೀಡಲಾಗಿದೆ ಎಂದು ಆಪಾದಿಸಿ ಸದಸ್ಯರು ಬಹಿರಂಗವಾಗೇ ಬೀದಿಗಿಳಿದು ಜಗಳ ಕಾದಿದ್ದರು. ಹಿಂದಿನ ಪಟ್ಟಿಯಂತೆ ಕಾಮಗಾರಿಗಳನ್ನು ಮಂಜೂರು ಮಾಡಿಸಿಯೇ ಸಿದ್ಧ ಎಂದು ಹಿಂದಿನ ಅಧ್ಯಕ್ಷ ಕೋಳಾಲ ಗಂಗಾಧರ್ ಹಾಗೂ ಶಾಸಕ ಎಂ.ಟಿ. ಕೃಷ್ಣಪ್ಪ ಹಠಕ್ಕೆ ಬಿದ್ದಿದ್ದರು. ಇತರೆ ಸದಸ್ಯರು ಪಟ್ಟಿ ಕೈ ಬಿಡಬೇಕು ಎಂದು ಪಟ್ಟು ಹಿಡಿದಿದ್ದರು. ಕಾಮಗಾರಿ ಪಟ್ಟಿಗೆ ಸಂಬಂಧಿಸಿ ಸಚಿವರವರೆಗೂ ಹೋರಾಟ ಮುಂದುವರೆದಿತ್ತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಸೂಚನೆ ಮೇರೆಗೆ ಜಿಪಂ ಸಿಇಒ ಗೋವಿಂದರಾಜ್ ತನಿಖೆಗೆ ಆದೇಶಿಸಿದ್ದರು.
ಜಿಪಂ ಮುಖ್ಯ ಯೋಜನಾಧಿಕಾರಿ ಸ್ಥಳ ಪರಿಶೀಲನೆ ಮಾಡಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಕ್ರಿಯಾ ಯೋಜನೆ ತಯಾರಿಸಲು ಸ್ಥಾಯಿ ಸಮಿತಿಯ ಹಣಕಾಸು ಲೆಕ್ಕಪರಿಶೋಧನಾ ಮತ್ತು ಯೋಜನಾ ಸ್ಥಾಯಿ ಸಮಿತಿಯ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸಭೆಗಳಲ್ಲಿ ಮಂಡಿಸದಿರುವುದು, ಜೂನ್ 2 ರಂದು ಹಾಗೂ 6 ರಂದು ನಡೆದ ಸಭೆಗಳಿಗೆ ಸಂಬಂಧಿಸಿ ಸದಸ್ಯರಿಗೆ ಹತ್ತು ದಿನಗಳ ಮೊದಲೇ ನೋಟಿಸ್ ನೀಡದಿರುವುದು, 6 ರಂದು ನಡೆದ ಸಾಮಾನ್ಯ ಸಭೆಗೆ 13 ಸದಸ್ಯರ ಕೋರಂ ಅಗತ್ಯ. ಆದರೆ 12 ಮಂದಿ ಸದಸ್ಯರು ಮಾತ್ರ ಹಾಜರಾಗಿದ್ದಾರೆ. ವಿಧಾನ ಪರಿಷತ್ ಸದಸ್ಯರಿಗೆ 6 ರಂದು ನಡೆದ ಸಭೆಯ ಬಗ್ಗೆ ಸಭಾ ಸೂಚನಾ ಪತ್ರ ಕಳಿಸದಿರುವುದು. ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣಾ ಸಂಬಂಧ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ತಾಪಂ ಸಭೆ ನಡೆಸಿರುವುದು ಕಾನೂನು ಬಾಹಿರ ಎಂದು ಪರಿಗಣಿಸಲಾಗಿದೆ. ಈ ಎಲ್ಲಾ ಮಾಹಿತಿ ಆಧರಿಸಿ ಈ ಹಿಂದೆ ನೀಡಿದ್ದ ಸುಮಾರು 2 ಕೋಟಿ ಕ್ರಿಯಾ ಯೋಜನೆಯ ಕಾಮಗಾರಿಗಳನ್ನು ರದ್ದುಪಡಿಸಿರುವುದಾಗಿ ಜಿಪಂ ಸಿಇಒ ಗೋವಿಂದರಾಜು ಆದೇಶಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಕ್ರಿಯಾ ಯೋಜನೆ ಮಾರ್ಗಸೂಚಿಗಳ ಪ್ರಕಾರ ಸಿದ್ಧಪಡಿಸಿ ನಿಯಾಮಾನುಸಾರ ಸಭೆಗಳನ್ನು ನಡೆಸಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದು ಜಿಪಂಗೆ ಸಲ್ಲಿಸಲು ಗೋವಿಂದರಾಜು ಸೂಚಿಸಿದ್ದಾರೆ.
ಹಿಂದಿನ ತಾಪಂ ಅಧ್ಯಕ್ಷರು, ಶಾಸಕರು ಹಾಗೂ ವಿರೋಧಿ ಸದಸ್ಯರ ನಡುವಿನ ಜಟಾಪಟಿಯಲ್ಲಿ ವಿರೋಧಿ ಬಣದ ಕೈ ಮೇಲಾಗಿದೆ. ಅಂತಿಮ ಆದೇಶ ಹೊರಬಿದ್ದಿರುವುದರಿಂದ ಕಳೆದ 20 ದಿನಗಳಿಂದ ಇದ್ದ ಪಟ್ಟಿಯ ಜಟಾಪಟಿಗೂ ತೆರೆ ಬಿದ್ದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.