ನೀತಿ ಸಂಹಿತೆ ಎಫೆಕ್ಟ್: ಕಾಂಗ್ರೆಸ್ ಕಾರ್ಯಕರ್ತರ ಸಭೆಯಾಗಿ ಮಾರ್ಪಾಡು
ಕುಣಿಗಲ್: ಪಟ್ಟಣದಲ್ಲಿ ಬೆಸ್ಕಾಂ ವತಿಯಿಂದ ಆಯೋಜಿಸಲಾಗಿದ್ದ 30 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭ, ಲೋಕಸಭೆ ಚುನಾವಣೆ ನೀತಿ ಸಂಹಿತೆ ಘೋಷಣೆಯಾದ ಹಿನ್ನೆಲೆಯಲ್ಲಿ ಕೊನೆಕ್ಷಣದಲ್ಲಿ ರದ್ದುಗೊಂಡು, ಕಾರ್ಯಕ್ರಮಕ್ಕೆ ಹಾಕಲಾಗಿದ್ದ ಬೃಹತ್ ವೇದಿಕೆ, ಪೆಂಡಾಲ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಾಗಿ ಮಾರ್ಪಾಡಾಯಿತು.
ಇಂಧನ ಇಲಾಖೆ ವತಿಯಿಂದ ತಾಲೂಕಿನಲ್ಲಿ ಒಂದು ಗ್ರಾಮಾಂತರ ಉಪವಿಭಾಗ, ನಾಲ್ಕು ಸೆಕ್ಷನ್ ಕಚೇರಿ ಎರಡು 66- ಕೆವಿ ಸ್ವೀಕರಣಾ ಕೇಂದ್ರಗಳಿಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರ, ಸಂಸದ ಸುರೇಶ್ ಇತರರ ಸಮ್ಮುಖದಲ್ಲಿ ಶಂಕುಸ್ಥಾಪನೆ ನೆರವೇರಿಸಲು ಬೆಸ್ಕಾಂ ಇಲಾಖೆ ಸಿಬ್ಬಂದಿ ಮಂಗಳವಾರ ಮಧ್ಯಾಹ್ನದಿಂದಲೆ ಅಗತ್ಯ ಸಿದ್ದತೆಗಳನ್ನು ಮಾಡಲಾಗಿತ್ತು. ಲೋಕಸಭೆ ಚುನಾವಣೆ ನೀತಿ ಸಂಹಿತೆ ಘೋಷಣೆಯಾಗುವ ಭಯದಿಂದಲೇ ಕಾರ್ಯಕ್ರಮವನ್ನು ಬುಧವಾರ ಬೆಳಗ್ಗೆ 10 ಗಂಟೆಗೆ ಎಂದು ಆಹ್ವಾನಪತ್ರಿಕೆಗಳಲ್ಲಿ ಮುದ್ರಿಸಲಾಗಿತ್ತು.
ಬುಧವಾರ ಬೆಳಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಹುರುಪಿನಿಂದ ಕಾರ್ಯಕ್ರಮದ ಯಶಸ್ಸಿಗೆ ಇಲಾಖಾ ಸಿಬ್ಬಂದಿಯೊಂದಿಗೆ ತಮ್ಮ ನಾಯಕರನ್ನು ಸ್ವಾಗತಿಸಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಡು ಫ್ಲೆಕ್ಸ್, ಬ್ಯಾನರ್ ಕಾಂಗ್ರೆಸ್ ಬಾವುಟಗಳನ್ನು ಹಾಕಿಕೊಂಡು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದರು.
ಆದರೆ 11 ಗಂಟೆ ವೇಳೆಗೆ ಮಾಧ್ಯಮಗಳಲ್ಲಿ ಲೋಕಸಭೆ ಚುನಾವಣೆ ನೀತಿಸಂಹಿತೆ ಜಾರಿಯಾಗಿರುವ ಸುದ್ದಿ ಹರಡತೊಡಗಿದ್ದು, ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿತು. ಅಧಿಕಾರಿಗಳಿಗೆ ಧರ್ಮಸಂಕಟ ಪ್ರಾರಂಭವಾಯಿತು. ನೀತಿಸಂಹಿತೆ ಜಾರಿಯಾಗಿದೆಯೇ ಇಲ್ಲವೆ ಎಂದು ಸ್ಪಷ್ಟ ಪಡಿಸುವವರು ಯಾರೆಂಬ ಗೊಂದಲಕ್ಕೆ ಬಿದ್ದು ಪ್ರಬಾರ ತಹಸೀಲ್ದಾರ್ ಮಾರೇಗೌಡರಿಗೆ ದುಂಬಾಲು ಬಿದ್ದರು. ತಹಸೀಲ್ದಾರ್ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕಿಸಿ ನೀತಿಸಂಹಿತೆ ಜಾರಿಯಾಗಿರುವಬಗ್ಗೆ ಖಚಿತ ಪಡಿಸಿದರು. ಇಲಾಖೆ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಬೆಸ್ಕಾಂ ಸಿಬ್ಬಂದಿ ವೇದಿಕೆಯಲ್ಲಿ ಹಾಕಲಾಗಿದ್ದ ಬ್ಯಾನರ್, ಶಂಕುಸ್ಥಾಪನೆಗೆ ಇಡಲಾಗಿದ್ದ ಕಲ್ಲುಗಳನ್ನು ತೆರವು ಗೊಳಿಸಿ, ಕೆಲವೇ ಕ್ಷಣದಲ್ಲಿ ಎಲ್ಲಾ ಸಿಬ್ಬಂದಿ ಸ್ಥಳ ಖಾಲಿ ಮಾಡಿದರು. ನಂತರ ಆಗಮಿಸಿದ ಸಂಸದ ಡಿ.ಕೆ.ಸುರೇಶ್, ಸರ್ಕಾರಿ ಕಾರ್ಯಕ್ರಮ ರದ್ದಾದ ಕಾರಣ, ಅನುಮತಿ ಪಡೆದು ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸುವುದೆಂದು ಹೇಳಿದರು. ಕುಣಿಗಲ್ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಸೇರುವುದರಿಂದ ರಾಮನಗರ ಜಿಲ್ಲಾಧಿಕಾರಿ ಸಂಪರ್ಕಿಸಿ, ಒಂದೂವರೆ ತಾಸಿನ ನಂತರ ಕಾರ್ಯಕ್ರಮ ಪ್ರಾರಂಭವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

