ಶಾಸಕರು ಉದ್ಘಾಟಿಸುವವರೆಗೂ ನೀರು ಬಿಡದಿರಿ: ಗ್ರಾಪಂ ಸದಸ್ಯ ರಚ್ಚೆ
ಚಿಕ್ಕನಾಯಕನಹಳ್ಳಿ: ಶಾಸಕರು ಬಂದು ಉದ್ಘಾಟಿಸುವವರೆಗೂ ಕುಡಿಯುವ ನೀರಿನ ಮೋಟಾರು ಚಾಲೂ ಮಾಡಬಾರದೆಂದು ಶಾಸಕರ ಬೆಂಬಲಿಗ ಗ್ರಾಪಂ ಸದಸ್ಯರೊಬ್ಬರು ರಚ್ಚೆ ಹಿಡಿದು ಕುಳಿತ ಘಟನೆ ತಾಲೂಕಿನ ದುಗಡೀಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ.
ಬುಧವಾರ ತಾಪಂ ಸಭಾಂಗಣದಲ್ಲಿ ಕುಡಿಯುವ ನೀರಿನ ಅಭಾವದ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಯ ಮುಂದೆ ದುಗಡೀಹಳ್ಳಿ ಗ್ರಾಪಂ ಅಧ್ಯಕ್ಷರು ತಮ್ಮ ಅಳಲನ್ನು ತೋಡಿಕೊಂಡರು.
ಗ್ರಾಪಂ ವ್ಯಾಪ್ತಿಯ ಚುಂಗನಹಳ್ಳಿ, ಗಂಟಿಗನಪಾಳ್ಯ, ಮೇಗಳಪಾಳ್ಯ ಗ್ರಾಮಗಳಿಗೆ ಕುಡಿಯುವ ನೀರಿನ ಅಭಾವ ತೀವ್ರವಾಗಿದ್ದು, ಸಮಸ್ಯೆ ಪರಿಹಾರಕ್ಕಾಗಿ ಕೊಳವೆ ಬಾವಿ ಕೊರೆಸಲಾಗಿದೆ. ವ್ಯಾಪ್ತಿಯ ಜನರು ಈಗಾಗಲೇ ನೀರಿಗಾಗಿ ಹಲವಾರು ಬಾರಿ ಗ್ರಾಪಂ ಮತ್ತು ತಾಲೂಕು ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡಿದ್ದರು. ಹೀಗಿದ್ದರೂ ನೀರನ್ನು ಬಿಡಲು ಸಿಬ್ಬಂದಿ ಹೋದರೆ ಈ ವ್ಯಾಪ್ತಿಯ ಸದಸ್ಯರು ಶಾಸಕರಿಂದ ಉದ್ಘಾಟನೆಯಾಗುವವರೆಗೂ ನೀರು ಬಿಡುವಂತಿಲ್ಲವೆಂದು ಅಡ್ಡಿ ಪಡಿಸುತ್ತಿದ್ದಾರೆ ಎಂದು ಅವರು ಸಭೆಯಲ್ಲಿ ಅಲವತ್ತು ಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಗ್ರಾಪಂ ಸದಸ್ಯರ ಈ ವರ್ತನೆ ಸರಿಯಲ್ಲ. ಕಾಮಗಾರಿಗೆ ಬಳಕೆಯಾಗಿರುವುದು ಖಾಸಗಿ ಅನುದಾನವಲ್ಲ, ಸರ್ಕಾರದ ಅನುದಾನ. ಅದನ್ನು ಬಳಸಕೊಡದೆಂದು ಹೇಳಲು ಯಾರಿಗೂ ಹಕ್ಕಿಲ್ಲ. ಅವರಿಗೆ ಶಾಸಕರ ಮೇಲಿರುವ ಅಭಿಮಾನದಿಂದ ಸಾರ್ವಜನಿಕರಿಗೆ ತೊಂದರೆ ಕೊಡುವುದು ಯಾವನ್ಯಾಯ. ಶೀಘ್ರದಲ್ಲೇ ಲೋಕ ಚುನಾವಣೆ ನೀತಿಸಂಹಿತೆ ಜಾರಿಯಾಗಲಿದೆ. ಆದ್ದರಿಂದ ರಾಜಕಾರಣಿಗಳಿಂದ ಯಾವುದೇ ಸರ್ಕಾರಿ ಯೋಜನೆಗಳ ಉದ್ಘಾಟನೆ ಮಾಡುವಂತಿಲ್ಲ.
ಆದ್ದರಿಂದ ಸದಸ್ಯರ ಮನವೊಲಿಸಿ, ಆಗದಿದ್ದರೆ ಕಾನೂನು ಕ್ರಮ ಜರುಗಿಸಿ ಸಮಸ್ಯೆ ಪರಿಹರಿಸುವಂತೆ ಕಾರ್ಯನಿರ್ವಾಹಣಾಧಿಕಾರಿಗೆ ಸೂಚಿಸಿದರು. ಇನ್ನುಳಿದ ತಾಪಂ ಸದಸ್ಯರು ಮೂರು ಗ್ರಾಮಗಳ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗುವುದರಿಂದ ಸಮಸ್ಯೆ ಶೀಘ್ರ ಪರಿಹಾರಕ್ಕೆ ತಮ್ಮ ಸಹಮತ ವ್ಯಕ್ತಪಡಿಸಿದರು.
ತಾಪಂ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣಾನಾಯ್ಕ್ ಸಭೆಯಲ್ಲಿ ಮಾತನಾಡಿ, ್ರಾಮಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿಗಳು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಸಮಸ್ಯೆಗೆ ಸೂಕ್ತಪರಿಹಾರ ಕಂಡುಹಿಡಿಯಲು ಸಾಧ್ಯ.ಅದನ್ನು ಬಿಟ್ಟು ಹೆಚ್ಚುಗಾರಿಕೆ ಯಾರೆಂಬ ಪ್ರತಿಷ್ಟೆಗೆ ಬಿದ್ದರೆ ತೊಂದರೆಗೆ ಸಿಲುಕುವುದು ಜನಸಾಮಾನ್ಯರು. ಮೂಲಭೂತ ಸೌಲಭ್ಯಗಳ ಕೊರತೆಯಾದಾಗ ಜನ ಬೀದಿಗಿಳಿಯುತ್ತಾರೆ.ಅದಕ್ಕೆ ಆಸ್ಪದ ಕೊಡಬಾರದು. ಎಲ್ಲರು ಒಟ್ಟಾಗಿ ಸಮಸ್ಯೆ ಎದುರಿಸೋಣ ಎಂದು ಪರಿಸ್ಥಿತಿ ತಿಳಿಗೊಳಿಸಿದರು. ತಾಪಂ ಅಧ್ಯಕ್ಷ ಕೆಂಕೆರೆ ನವೀನ್,ಉಪಾಧ್ಯಕ್ಷ ಜಯಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ವಸಂತಕುಮಾರ್, ಕೃಷ್ಣಾನಾಯ್ಕ್, ಮಾಜಿ ಅಧ್ಯಕ್ಷ ಎಂ.ಎಂ.ಜಗದೀಶ್, ಎಚ್.ಆರ್.ಶಶಿಧರ್ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

