ಕನ್ನಡ ಭವನ ನಿರ್ಮಾಣಕ್ಕೆ ಏಕೇಶ್ವರ್ ಪ್ರೇರಣೆ: ಜಯಚಂದ್ರ
ತುಮಕೂರು: ಜಿಲ್ಲಾ ಕಸಾಪ ಕನ್ನಡ ಭವನ ನಿರ್ಮಾಣಕ್ಕೆ ದಿ.ಚಿ.ನಾ.ಏಕೇಶ್ವರ್ ಅವರ ಪ್ರೇರಣೆಯೇ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ದಿ.ಚಿ.ನಾ. ಏಕೇಶ್ವರ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದರು.
ಕಸಾಪ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಜಿಲ್ಲೆಯಲ್ಲಿ ಸಂಘಟಿಸಿ ಸರಕಾರಿ ನೌಕರರ ಒಂದು ದಿನದ ವೇತನದಲ್ಲಿ ಉಳಿದ 30 ಲಕ್ಷ ಹಣದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಪಡೆದು ಕಾಮಗಾರಿಗೆ ಚಾಲನೆ ಕೊಟ್ಟರು.
ಇಂದು ಭವನ ನಿರ್ಮಾಣ ಹಂತದಲ್ಲಿದ್ದು, ಅವರ ಸಮಾಜಮುಖಿ ಚಿಂತನೆ ನಮಗೆಲ್ಲ ಪ್ರೇರಣೆಯಾಗಬೇಕಿದೆ ಎಂದು ಆಶಿಸಿದರು. ಹುಟ್ಟಿದ ಮನುಷ್ಯನಿಗೆ ಸಾವು ಖಚಿತ. ಸಾವನ್ನು ಗೆಲ್ಲಲಾಗದಿರುವುದೇ ವಿಧಿ ದೈವ. ಈ ವಿಧಿಯಾಟದಲ್ಲಿ ಮನುಷ್ಯ ಬದುಕಿರುವ ತನಕ ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಒಳ್ಳೆಯ ರೀತಿ ಜೀವನ ಸಾಗಿಸಬೇಕಿದೆ. ನಿಸ್ವಾರ್ಥ ಜೀವನ ನಡೆಸಿದ ಚಿ.ನಾ. ಏಕೇಶ್ವರ್ ಅವರ ಅಗಲಿಕೆಯ ನೋವನ್ನು ಸಹಿಸುವಂತಹ ಶಕ್ತಿ ಕುಟುಂಬದವರಿಗೆ ದೇವರು ದಯಪಾಲಿಸಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣವೆಂದರು.
ಐಎಫ್ಡಬ್ಲ್ಯೂಜೆ ರಾಷ್ಟ್ರೀಯ ಉಪಾಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಏಕೇಶ್ವರ್ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿ, ಇಂದಿನ ಪತ್ರಿಕಾ ರಂಗ ಸಾಗುತ್ತಿರುವ ರೀತಿಗೂ, ಏಕೇಶ್ವರ್ ಅಂತಹ ಹಿರಿಯರು ಸಾಗಿಬಂದ ರೀತಿಗೂ ಅಗಾಧ ವ್ಯತ್ಯಾಸವಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಸೋ.ಮು.ಭಾಸ್ಕರಚಾರ್ ನುಡಿನಮನ ಸಲ್ಲಿಸಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ತೊ.ಗ. ಅಡವೀಶಪ್ಪ, ಪತ್ರಕರ್ತರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಎಸ್. ಗಟ್ಟಿ, ರಮಾ ಏಕೇಶ್, ಎಚ್.ಎಸ್. ರಾಮಣ್ಣ, ಆರ್. ಕಾಮರಾಜ್ ಮಾತನಾಡಿದರು.
ಸಂಘದ ಅಧ್ಯಕ್ಷ ಸೊಗಡು ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಚಿ.ನಿ.ಪುರುಷೋತ್ತಮ್ ನಿರೂಪಿಸಿದರು. ಸಂಘದ ಖಜಾಂಚಿ ಎಸ್. ಹರೀಶ್ ಆಚಾರ್ಯ ಸ್ವಾಗತಿಸಿದರು.
ಗರುಗದೊಡ್ಡಿ ನಟರಾಜ್ ವಂದಿಸಿದರು. ಸಂಘದ ಮಾಜಿ ಅಧ್ಯಕ್ಷ ಕೆ.ಬಿ.ಚಂದ್ರಮೌಳಿ, ಪದಾಧಿಕಾರಿಗಳಾದ ಎನ್.ಡಿ. ರಂಗರಾಜ್, ಜಿ.ಎಂ.ಶಿವಾನಂದ್, ಪಿ.ಡಿ.ಈರಣ್ಣ, ಎಚ್.ಸಿ. ಹನುಮಂತಯ್ಯ, ಕಲಾವಿದ ಹನುಮಂತಗೌಡ, ಜಿ.ಪಂ ಸದಸ್ಯ ಕೆಂಚಮಾರಯ್ಯ ಸೇರಿ ಸಂಘದ ನಿರ್ದೇಶಕರು ಸದಸ್ಯರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

