ಇ ಟೆಂಡರ್ ವಿರೋಧಿಸಿ ಪ್ರತಿಭಟಿಸಿದ ವರ್ತಕರಿಗೆ ತಿರುಗೇಟು
ತಿಪಟೂರು: ರಾಜ್ಯ ಸರ್ಕಾರ ಕೊಬ್ಬರಿ ಮಾರಾಟಕ್ಕಾಗಿ ನೂತನವಾಗಿ ಜಾರಿಗೆ ತಂದಿದ್ದ ಇ-ಟೆಂಡರ್ ಮಾರಾಟ ವೇದಿಕೆಯನ್ನು ಕಳೆದ 15 ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಉದ್ಘಾಟಿಸಿದ್ದು, ವಿದ್ಯುನ್ಮಾನ ಮಾರಾಟ ವೇದಿಕೆ ವ್ಯಾಪಾರ ವಹಿವಾಟನ್ನು ವಿರೋಧಿಸಿ ಇಲ್ಲಿನ ಕೊಬ್ಬರಿ ಮಾರುಕಟ್ಟೆಯಲ್ಲಿ ಬಹುತೇಕ ವರ್ತಕರು ರೈತಭವನದ ಎದುರು ಬುಧವಾರ ಭಾರೀ ಪ್ರತಿಭಟನೆ ನಡೆಸಿ ವಿರೋಧಿಸಿದ್ದರು.
ಇ-ಟೆಂಡರ್ ಮುಖಾಂತರ ಕೊಬ್ಬರಿ ಖರೀದಿಸಲು ಮುಂದಾಗದ ವರ್ತಕರು ಮಾತನಾಡಿ ಇ-ಟೆಂಡರ್ ಪದ್ಧತಿಯಿಂದ ವರ್ತಕರಿಗೆ ಹೆಚ್ಚಿನ ತೊಂದರೆಗಳಾಗುತ್ತವೆ. ಈ ಪದ್ಧತಿಯಲ್ಲಿ ವ್ಯಾಪಾರ ನಡೆಸುವುದು ಕಷ್ಟ. ಅಲ್ಲದೆ ರಾಜ್ಯದ ತಿಪಟೂರು ಮಾರುಕಟ್ಟೆಯಲ್ಲಿ ಮಾತ್ರ ಇದನ್ನು ಜಾರಿಗೆ ತಂದಿರುವುದು ಸರಿಯಲ್ಲ. ಇತರೆ ಮಾರುಕಟ್ಟೆಗಳಲ್ಲಿ ಎಲ್ಲಾ ವಿಧವಾದ ಕೃಷಿ ಪದಾರ್ಥಗಳನ್ನು ಮಾರಾಟ ಮಾಡಲು ಸರ್ಕಾರ ಮುಂದಾದಲ್ಲಿ ಸರಿ ಹೋಗಬಹುದು.
ಈ ಪದ್ಧತಿಯಲ್ಲಿ ಮಾರಾಟ ಮಾಡಿದ ರೈತನಿಗೆ ಹಣವನ್ನು ಬ್ಯಾಂಕ್ ಖಾತೆಗೆ ಹಾಕಬೇಕಾಗಿದ್ದು, ಇದರಿಂದ ರೈತರಿಗೂ ತೊಂದರೆಯಾಗಬಹುದು. ಹಾಲಿ ಇರುವ ಹರಾಜು ವ್ಯವಸ್ಥೆಯಲ್ಲಿ ವರ್ತಕರು ರೈತರಿಂದ ಕೊಬ್ಬರಿ ಖರೀದಿಸಿದ ತಕ್ಷಣವೇ ಮಾರುಕಟ್ಟೆಯಲ್ಲಿ ಗರಿಷ್ಠ ಹರಾಜು ದರದಲ್ಲಿ ರೈತರಿಗೆ ಹಣ ಪಾವತಿಸಲಾಗುತ್ತಿತ್ತು. ಆದರೆ ಸರ್ಕಾರ ಜಾರಿಗೆ ತಂದಿರುವ ನೂತನ ವ್ಯವಸ್ಥೆಯಿಂದ ಸಣ್ಣ ಹಾಗೂ ಮಧ್ಯಮ ವರ್ತಕರಿಗೆ ತೊಂದರೆಯಾಗುತ್ತಿದೆ. ಇವೆಲ್ಲಾ ನ್ಯೂನ್ಯತೆಗಳನ್ನು ಪರಿಗಣಿಸಿ ಸರ್ಕಾರ ಈ ವ್ಯವಸ್ಥೆಯನ್ನು ಹಿಂದಕ್ಕೆ ಪಡೆಯಬೇಕೆಂದು ವರ್ತಕರು ಒತ್ತಾಯಿಸಿದರು.
ಪ್ರತಿಭಟನೆ ನಡೆಸಲು ರೈತ ಭವನದ ಮುಂದೆ ಬಂದಿದ್ದ ವರ್ತಕರ ವಿರುದ್ಧ ತಾಲೂಕು ರೈತ ಸಂಘದ ಮುಖಂಡರು ಮತ್ತು ವರ್ತಕರ ನಡುವೆ ಆಗಾಗ ಮಾತಿನ ಚಕಮಕಿ ನಡೆದೇ ಇತ್ತು. ರೈತ ಸಂಘದ ಪದಾಧಿಕಾರಿಗಳು ವರ್ತಕರು ಬಹಳ ಕಾಲದಿಂದ ಹಳೆ ಪದ್ಧತಿಯಲ್ಲಿ ರೈತರನ್ನು ಸುಲಿಗೆ ಮಾಡುತ್ತಿದ್ದಾರೆ.
ರೈತರನ್ನು ನಾನಾ ವಿಧದಲ್ಲಿ ಶೋಷಿಸುತ್ತಿದ್ದು, ಇದರಿಂದ ಇ-ಟೆಂಡರ್ ಪದ್ಧತಿ ರೈತರಿಗೆ ಲಾಭ ಮಾಡಿಕೊಡಲಿದೆ. ಆದರೆ ವರ್ತಕರ ಹಿಡಿತದಿಂದ ರೈತರು ಹೊರಬರುತ್ತಾರೆಂಬ ಭಾವನೆಯಿಂದ ದಿಕ್ಕೆಟ್ಟ ವರ್ತಕರು ನೂತನ ಪದ್ಧತಿ ಜಾರಿಗೆ ತಂದಿರುವುದನ್ನು ಸುಖಾಸುಮ್ಮನೆ ವಿರೋಧಿಸುತ್ತಿದ್ದು ವರ್ತಕರ ಒತ್ತಾಯಕ್ಕೆ ಮಣಿದು ಸರ್ಕಾರವಾಗಲಿ ಇಲಾಖೆಯಾಗಲಿ ಇ-ಟೆಂಡರ್ ಪದ್ಧತಿಯನ್ನು ಹಿಂಪಡೆಯಲು ಮುಂದಾದಲ್ಲಿ ರಾಜ್ಯ ರೈತ ಸಂಘ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ದೇವರಾಜು ಎಚ್ಚರಿಸಿದರು.
ಈ ಎಲ್ಲಾ ವಿದ್ಯಮಾನಗಳು ಮಾರುಕಟ್ಟೆಯಲ್ಲಿ ನಡೆದರೂ ಇ-ಟೆಂಡರ್ ಪದ್ಧತಿಯಲ್ಲಿ ಟೆಂಡರ್ ಹಾಕುವ ಮೂಲಕ ಕೊಬ್ಬರಿ ಬೆಲೆ ಬುಧವಾರ 8,500 ರು. ಇತ್ತು. ಪ್ರತಿಭಟನೆ ನಂತರ ಎಂದಿನಂತೆ ವ್ಯಾಪಾರ, ವಹಿವಾಟು ಮಾಮೂಲಿನಂತೆ ನಡೆಯಿತು.
ಎಪಿಎಂಸಿ ಕಾರ್ಯದರ್ಶಿ ಸಿದ್ದುನ್ಯಾಮಗೌಡರ ಪ್ರತಿಕ್ರಿಯೆ: ಪ್ರತಿಭಟನೆ ನಂತರ ಎಪಿಎಂಸಿ ಕಾರ್ಯದರ್ಶಿ ಸಿದ್ದುನ್ಯಾಮಗೌಡರು ಪತ್ರಿಕೆಯೊಂದಿಗೆ ಮಾತನಾಡಿ ಇ-ಟೆಂಡರ್ ಪದ್ಧತಿಯಲ್ಲಿ ರೈತರು ಕೊಬ್ಬರಿ ಮಾರಾಟ ಮಾಡಲು ಈಗಾಗಲೆ ಸಾಕಷ್ಟು ಸಂಖ್ಯೆಯಲ್ಲಿ ತಮ್ಮ ಹೆಸರು ನೋಂದಾಯಿಸಿ ಕೊಂಡಿದ್ದು, ಸರ್ಕಾರದ ಈ ಪದ್ಧತಿಯಿಂದ ಖುಷಿ ಪಟ್ಟಿದ್ದಾರೆ. ಆದರೆ ವರ್ತಕರು ತಪ್ಪು ತಿಳಿವಳಿಕೆಯಿಂದ ಪ್ರತಿಭಟಿಸಿದ್ದಾರೆ ಎಂದರು.
ರಾಜ್ಯದ ಇತರೆ ಮಾರುಕಟ್ಟೆಗಳಲ್ಲಿ ಅರಿಶಿನ ಸೇರಿದಂತೆ ಇತರೆ ಉತ್ಪನ್ನಗಳನ್ನು ಮಾರಾಟ ಮಾಡುವ ಕ್ರಿಯೆಗೆ ಚಾಲನೆ ನೀಡಲಾಗಿದ್ದು, ಇಲ್ಲಿನ ವರ್ತಕರು ಮಾತ್ರ ಪ್ರತಿಭಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದೆಲ್ಲಾ ಸರಿ ಹೋಗಲಿದ್ದು, ಈವರೆಗೂ ಮಧ್ಯವರ್ತಿಗಳ ಹಿಂಸೆಯಿಂದ ನಲುಗಿದ್ದ ರೈತರು ನೆಮ್ಮದಿಯಿಂದ ತಮ್ಮ ಉತ್ಪನ್ನಗಳನ್ನು ಉತ್ತಮ ಧಾರಣೆಗೆ ಮಾರಾಟ ಮಾಡುವಂತಾಗಲಿದೆ ಎಂದು ತಿಳಿಸಿದರು.
ಕೊಬ್ಬರಿ ರವಾನೆದಾರ, ಮಾಜಿ ಶಾಸಕ ಬಿ.ನಂಜಾಮರಿ ಪ್ರತಿಕ್ರಿಯೆ
ಹತ್ತಾರು ವರ್ಷಗಳಿಂದ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲವೆಂಬ ಕೊರಗನ್ನು ನೀಗಿಸುವ ಉದ್ದೇಶದಿಂದ ಸರ್ಕಾರ ಮತ್ತು ಇಲಾಖೆಗಳನ್ನು ಇ-ಟೆಂಡರ್ನಂತಹ ವೈಜ್ಞಾನಿಕ ಪದ್ಧತಿಗಳನ್ನು ರೈತರ ಪರವಾಗಿ ಜಾರಿಗೆ ತಂದಿದ್ದು, ಇದನ್ನು ವರ್ತಕರು ವಿರೋಧಿವಲ್ಲಿ ಅರ್ಥವಿಲ್ಲ. ವರ್ತಕರಿಗೆ ನೂತನ ಯೋಜನೆಗಳೊಂದಿಗೆ ಬದಲಾವಣೆಯಾಗಿ, ರೈತರ ಹಿತ ಕಾಪಾಡಬೇಕೆಂಬ ಪ್ರಾಮಾಣಿಕತ ಇಲ್ಲದಿರುವುದು ಮತ್ತು ತಪ್ಪು ತಿಳಿವಳಿಕೆಯಿಂದ ಬಂದ್ ಹಮ್ಮಿಕೊಳ್ಳುತ್ತಿದ್ದು, ಇದಕ್ಕೆ ಯಾರೂ ಸ್ಪಂದಿಸಬಾರದು ಎಂಬುದು ನನ್ನ ಕಳಕಳಿಯ ಮನವಿ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

