ತುಮಕೂರು

ಅತಿಭಾರ: ಮಗುಚಿ ಬಿದ್ದ ಸರಕು ಲಾರಿ

Published On :

ಚಿಕ್ಕನಾಯಕನಹಳ್ಳಿ: ಮಿತಿಮೀರಿದ ಸರಕು ತುಂಬಿದ ಪರಿಣಾಮ ಪಟ್ಟಣದ ಜನನಿಬಿಡ ಪ್ರದೇಶವಾದ ಸರ್ಕಲ್ ಬಳಿ ಲಾರಿಯೊಂದು ಪಲ್ಟಿಯಾಗಿದ್ದು, ಸುದೈವದಿಂದ ಯಾವುದೇ ಪ್ರಾಣಹಾನಿಯಾಗಿಲ್ಲ.
ಹತ್ತಿ ಬೇಲುಗಳನ್ನು ತುಂಬಿಕೊಂಡು ಬೆಂಗಳೂರು ಕಡೆಗೆ ಹೋಗುತ್ತಿದ್ದ ಲಾರಿ ಬೆಳಿಗ್ಗೆ 9 ಗಂಟೆ ಸಮಯದಲ್ಲಿ ನೆಹರು ಸರ್ಕಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.
  ಈ ಸಂದರ್ಭದಲ್ಲಿ ಜನರಿಲ್ಲದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಚಾಲಕನಿಗೆ ಸ್ವಲ್ಪ ಪ್ರಮಾಣದಲ್ಲಿ ಗಾಯಗಳಾಗಿವೆ. ಸರಕು ಸಾಗಣೆ ವಾಹನ ಇಂತಿಷ್ಟೇ ತೂಕ ಮತ್ತು ಎತ್ತರದ ಸರಕನ್ನು ತುಂಬಬೇಕೆಂಬ  ನಿಯಮವಿದೆ.
ಆದರೆ ಬಾಡಿಗೆ ಆಸೆಗೆ ಲಾರಿ ಮಾಲೀಕರು ಹೆಚ್ಚಿಗೆ ತೂಕ ಮತ್ತು ಎತ್ತರದ ಸರಕನ್ನು ತುಂಬಿಕೊಂಡು ಹೋಗುವುದರಿಂದ ರಸ್ತೆಯಲ್ಲಿ ಅವಘಡಗಳು ಸಂಭವ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಅಮಾಯಕರು  ದುರಂತಕ್ಕೀಡಾಗುತ್ತಾರೆ.
 ಪೊಲೀಸ್ ಇಲಾಖೆ ಮತ್ತು ಸಾರಿಗೆ ಪ್ರಾಧಿಕಾರ ಇನ್ನು ಮುಂದಾದರು ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.
ವರ್ಷ ಕಳೆದರೂ ಕೂಲಿ ಹಣ ಬಿಡುಗಡೆಯಿಲ್ಲ: ಕಾರ್ಮಿಕರ ಆತಂಕ  
ಪಾವಗಡ: ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಖಾತ್ರಿ ಯೋಜನೆಯಲ್ಲಿ ಸುಮಾರು 1.50 ಕೋಟಿ ರು. ಕಾಮಗಾರಿ ನಿರ್ವಹಿಸಿದ್ದು, ವರ್ಷ ಕಳೆದರೂ ಸರ್ಕಾರದಿಂದ ಹಣ ಬಿಡುಗಡೆಯಾಗದ ಕಾರಣ ಕೂಲಿಕಾರರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
 ಸರ್ಕಾರದ ನಿರ್ದೇಶನ ಮೇರೆಗೆ ಜಿಪಂ ಆದೇಶದಂತೆ 2013 -14ನೇ ಸಾಲಿಗೆ ತಾಲೂಕಿನಾದ್ಯಂತ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿಕಾರರಿಂದ 1.50 ಕೋಟಿ ರು.ಗಳ ಗುಣಮಟ್ಟದ ಕಾಮಗಾರಿಗಳನ್ನು ನಿರ್ವಹಿಸಿದ್ದು ಕೂಲಿಕಾರರ ಜಾಬ್ ಕಾರ್ಡುಗಳು ಸೇರಿದಂತೆ ಸಂಬಂಧಪಟ್ಟ ಎಂಜಿನಿಯರ್‌ಗಳ ಕಾಮಗಾರಿ ಪರಿಶೀಲನೆ ಮತ್ತು ಇತರೆ ಅಗತ್ಯ ದಾಖಲೆಗಳು ಎಂಐಎಸ್‌ಗೆ ಪಿಡ್ ಮಾಡಿ ಅನ್‌ಲೈನ್‌ನಲ್ಲಿ ಕಳುಹಿಸಿದ್ದರೂ ಕೂಲಿಕಾರರ ಹಣ ಬಿಡುಗಡೆಯಾಗಿಲ್ಲ ಎಂದು ಕೂಲಿಕಾರರ ಸಂಘದ ಕಾರ್ಯದರ್ಶಿ ಕೊತ್ತೂರು ಕೊಂಡಯ್ಯ ಆರೋಪಿಸಿದ್ದಾರೆ.
ಬರಪೀಡಿತ ಪ್ರದೇಶದ ಪಟ್ಟಿಗೆ ಸೇರಿದ ಈ ತಾಲೂಕಿನಲ್ಲಿ ಕೆಲಸವಿಲ್ಲದೇ ಜೀವನ ಸಾಗಿಸುವುದೇ ಕಷ್ಟಕರ. ಖಾತ್ರಿ ಯೋಜನೆಯಿಂದ ಜೀವನ ಸುಧಾರಣೆ ಆಗಬಹುದೆಂಬ ನಂಬಿಕೆಯಿಂದ ಸರ್ಕಾರದ ನಿಯಮನುಸಾರ ಗುಣಮಟ್ಟದ ಕಾಮಗಾರಿಗಳನ್ನು ನಿರ್ವಹಿಸಿದ್ದು ಕೂಡಲೇ ಕಾಮಗಾರಿಯ ಹಣ ಬಿಡುಗಡೆ ಮಾಡಿ ಕೂಲಿಕಾರರ ಜೀವನ ಸುಧಾರಿಸುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಎನ್‌ಎಸ್‌ಎಸ್ ಗಾಂಧೀಜಿ ಕನಸಿನ ಕೂಸು: ಶಾಸಕ ಷಡಕ್ಷರಿ
ತಿಪಟೂರು: ರಾಷ್ಟ್ರೀಯ ಸೇವಾ ಯೋಜನೆ ಗಾಂಧೀಜಿಯವರ ಕನಸಿನ ಕೂಸು. ಈ ಯೋಜನೆಯ ಮೂಲಕ ವಿದ್ಯಾರ್ಥಿಗಳು ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ಪಟ್ಟಣದ ಕಲ್ಪತರು ಪ್ರಥಮ ದರ್ಜೆ ವಿಜ್ಞಾನ ಕಾಲೇಜು ವತಿಯಿಂದ ತಾ. ಹೊನ್ನವಳ್ಳಿ ಹೋಬಳಿ ಪರುವಗೊಂಡನಹಳ್ಳಿಯಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಎನ್‌ಎಸ್‌ಎಸ್ ಘಟಕ ಇಂದು ರಾಜ್ಯದಾದ್ಯಂತ ಎಲ್ಲಾ ಕಾಲೇಜುಗಳಲ್ಲಿದ್ದು ಅದರ ಮೂಲಕ ಗ್ರಾಮೀಣರಲ್ಲಿ ಆರೋಗ್ಯ, ಕೃಷಿ, ಕಾನೂನಿನ ಅರಿವು ಮೊದಲಾದ ಕಾರ್ಯಕ್ರಮಗಳ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ. ಇದರ ಪ್ರಯೋಜನವನ್ನು ಶಿಬಿರಾರ್ಥಿಗಳು ಪಡೆದುಕೊಳ್ಳಬೇಕೆಂದರು.
ತುಮಕೂರು ವಿವಿ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಉಪನ್ಯಾಸಕ ಶಶಿಕಾಂತ್‌ರಾವ್ ಶಿಬಿರದ ಮಹತ್ವ ತಿಳಿಸಿದರು. ಪ್ರಾಂಶುಪಾಲ ಪ್ರೊ. ಎನ್.ಪರಮೇಶ್ವರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೈಗಾರಿಕಾ ಇಲಾಖೆಯ ಎಂ.ಎಸ್. ಕಿರಣ್ ಜೇನು ಸಾಕಾಣಿಕೆ ಮತ್ತು ಅದರ ಉಪಯೋಗ, ಮಹತ್ವ ವಿವರಿಸಿದರು. ಶಿಬಿರಾರ್ಥಿಗಳು ಗ್ರಾಮದ ಸ್ವಚ್ಚತೆ, ಚರಂಡಿ,ರಸ್ತೆ ಪಕ್ಕದಲ್ಲಿರುವ ಅನಪೇಕ್ಷಿತ ಗಿಡಗಳನ್ನು ತೆಗೆದು ಸ್ವಚ್ಚಗೊಳಿಸಿದರು.
ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎನ್.ಜಗದೀಶ್, ಡಾ.ಶಿವಾನಂದಯ್ಯ, ಶಿಬಿರಾಧಿಕಾರಿ ಪ್ರೊ.ವೈ.ಆರ್. ಸೋಮಶೇಖರಯ್ಯ, ಪ್ರೊ.ಎಂ.ಎಸ್.ತಿಪ್ಪೇಶ್, ಎ.ಆರ್.ಕವಿತಾ, ಸಹಶಿಬಿರಾಧಿಕಾರಿ ಪ್ರೊ. ಬಿ.ಎಂ.ಭೈರಪ್ಪ, ದೀಪಿಕಾ, ಅನಿತ ಮತ್ತಿತರರಿದ್ದರು.
ಮಾಧ್ಯಮ ಮಿತ್ರರ ಸಭೆ 16ರಂದು
ಶಿರಾ: ನಗರದ ಪ್ರೆಸಿಡೆನ್ಸಿ ಶಾಲೆಯಲ್ಲಿ ಮಾ 16 ಭಾನುವಾರ ಬರಹಗಾರರು ಹಾಗೂ ಮಾಧ್ಯಮ ಮಿತ್ರರ ಸಭೆ ಏರ್ಪಡಿಸಲಾಗಿದೆ ಎಂದು ಲೇಖಕ ಡಾ.ಎನ್.ನಂದೀಶ್ವರ್ ತಿಳಿಸಿದ್ದಾರೆ. ಶಿರಾ ತಾಲೂಕು ತನ್ನದೇ ಆದ ಚಾರಿತ್ರಿಕ, ಸಾಂಸ್ಕೃತಿಕ ವೈಶಿಷ್ಟ್ಯವನ್ನು ಹೊಂದಿದ್ದು ವಿವಿಧ ರಂಗಗಳಲ್ಲಿ ಶ್ರೀಮಂತಿಕೆ ಹೊಂದಿದೆ. ಈ ನಿಟ್ಟಿನಲ್ಲಿ ಸಾಹಿತಿಗಳು ಬಹಗಾರರು, ಮಾಧ್ಯಮದವರೆಲ್ಲರನ್ನು ಒಂದೆಡೆ ಸೇರಿಸಿ ಒಕ್ಕೂಟವೊಂದನ್ನು ರಚಿಸುವ ಸಲುವಾಗಿ ಸಭೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ಸಾಹಿತಿ ಕಟಾವೀರನಹಳ್ಳಿ ನಾಗರಾಜು, ಜನ್ನಪ್ಪ, ಡಾ.ಚಿಕ್ಕಣ್ಣ ಯೆಣ್ಣೆಕಟ್ಟೆ ಸೇರಿದಂತೆ ಅನೇಕ ಪ್ರಮುಖರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ತಾಲೂಕಿನ ಲೇಖಕರು ಬರಹಗಾರರು ಪತ್ರಕರ್ತರು ತಪ್ಪದೆ ಸಭೆಗೆ ಆಗಮಿಸುವಂತೆ ಅವರು ಮನವಿ ಮಾಡಿದ್ದಾರೆ.
ದೇಗುಲದಲ್ಲಿ ಕಳವು
ಭಾರತೀನಗರ: ಸಮೀಪದ ದೊಡ್ಡರಸಿನಕೆರೆ ಸಣ್ಣಕ್ಕಿರಾಯಸ್ವಾಮಿದೇವಸ್ಥಾನ ಹಾಗೂ ಮೆಣಸಗೆರೆ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ದುಷ್ಕರ್ಮಿಗಳು ಗೊಲಕ ಒಡೆದು ಹಣ ಅಪಹರಿಸಿರುವ ಘಟನೆ ನಡೆದಿದೆ. ದೊಡ್ಡರಸಿನಕೆರೆ ಸಣ್ಣಕ್ಕಿರಾಯಸ್ವಾಮಿ ದೇವಸ್ಥಾನದಲ್ಲಿ ಒಂದು ಗೊಲಕವನ್ನು ಒಡೆದು ಮತ್ತೊಂದನ್ನು ಹಾಗೂ ದೇವಸ್ಥಾನದ ಬಾಗಿಲನ್ನು ಒಡೆಯಲು ಯತ್ನಿಸಿ ವಿಫಲರಾಗಿದ್ದಾರೆ. ಮೆಣಸಗೆರೆ ಸಿದ್ದಪ್ಪಾಜಿ ದೇವಸ್ಥಾನದ ಗೊಲಕ ಒಡೆದು ಗದ್ದೆ ಬಯಲಿನಲ್ಲಿ ಬಿಸಾಡಿದ ಕಳ್ಳರು ಹಣ ಅಪಹರಿಸಿಕೊಂಡು ಹೋಗಿದ್ದಾರೆಂದು ತಿಳಿದು ಬಂದಿದೆ.
ಪುನಶ್ಚೇತನ ಕಾರ್ಯಾಗಾರ ಉದ್ಘಾಟನೆ
ಗುಬ್ಬಿ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಶಿಸ್ತು ಮತ್ತು ಸೌಹಾರ್ಧತೆ ಕಲಿಸುವ ಮೂಲಕ ಅವರನ್ನು ಸಮಾಜದ ಸತ್ಪ್ರಜೆಗಳನ್ನಾಗಿ ರೂಪಿಸುವತ್ತ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ.ಬಸವರಾಜು ಕರೆನೀಡಿದರು.
ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿಯಲ್ಲಿ ನಡೆದ ಭಾರತ್ ಸ್ಕೌಟ್ಸ್ ಹಾಗೂ ಗೈಡ್ಸ್‌ನ ಒಂದು ದಿನದ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಶೈಕ್ಷಣಿಕ ಅಭ್ಯುದಯಕ್ಕೆ ಶಿಕ್ಷಣ ಇಲಾಖೆ ಹಲವಾರು ಮಹತ್ವದ ಯೋಜನೆಗಳನ್ನು ರೂಪಿಸಿದೆ. ಇವುಗಳನ್ನು ಸಮರ್ಪಕವಾಗಿ ಮಕ್ಕಳಿಗೆ ತಲುಪಿಸುವ ಮೂಲಕ ಅವರನ್ನು ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಪ್ರಗತಿ ಪಥದತ್ತ ಕೊಂಡೊಯ್ಯುವಂತೆ ತಿಳಿಸಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಶಿಕ್ಷಕರಿಗೆ ತಿಳಿಸಿದ ಅವರು ಸ್ಕೌಟ್ಸ್ ಗುಣಾತ್ಮಕ ಶಿಕ್ಷಣ ಕಲಿಸುವ ಮೂಲಕ ಅವರನ್ನು ಆದರ್ಶ ವ್ಯಕ್ತಿಗಳಾನ್ನಾಗಿ ರೂಪಿಸುವತ್ತ ಚಿಂತಿಸಬೇಕೆಂದರು. ಜಿಲ್ಲಾ ಆಯುಕ್ತ ವೇಣುಗೋಪಾಲ್ ಜಿಲ್ಲೆಯಾದ್ಯಂತ ಬಹುತೇಕ ಎಲ್ಲಾ ಶಾಲೆಗಳಲ್ಲೂ ಸ್ಕೌಟ್ಸ್ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಶಿಕ್ಷಕರು ಮಕ್ಕಳಲ್ಲಿ ಶಿಸ್ತು ಮತ್ತು ರಾಷ್ಟ್ರ ಪ್ರೇಮ ಬೆಳೆಸುವಂತಹ ಮಹತ್ವದ ಕೆಲಸ ಮಾಡಬೇಕಿದೆ ಎಂದು ನುಡಿದರು. ಕ್ಷೇತ್ರ ಸಮನ್ವಯಾಧಿಕಾರಿ ನರೇಂದ್ರಕುಮಾರ್, ದೈಹಿಕ ಶಿಕ್ಷಣ ಸಂಯೋಜಕ ಅಶ್ವಥಯ್ಯ, ಡಿ.ಸಿ.ಓ ಕರಿಸಿದ್ದಯ್ಯ, ಲಯನ್ಸ್ ಅಧ್ಯಕ್ಷ ಜಿ.ಆರ್.ಶಿವಕುಮಾರ್, ಮುಖಂಡ ಬಿ.ಆರ್.ಭರತ್‌ಗೌಡ, ಸ್ಕೌಟ್ಸ್ ತಾ. ಕಾರ್ಯದರ್ಶಿ ಸಿ.ಹುಚ್ಚಯ್ಯ ಮುಂತಾದವರು ಇದ್ದರು.
ಇಂದು ಆರೋಗ್ಯ ಉಚಿತ ತಪಾಸಣಾ ಶಿಬಿರ
ಹುಳಿಯಾರು:  ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ಹೋಬಳಿಯ ಯಗಚಿಹಳ್ಳಿಯಲ್ಲಿ ನಡೆಯುತ್ತಿರುವ ಸ್ವಯಂಸೇವಾ ಶಿಬಿರದಲ್ಲಿ ಮಾ.8 ಶನಿವಾರ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ನಡೆಯಲಿದೆ. ಸಿದ್ದಶ್ರೀ ಕ್ಲಿನಿಕ್ ವೈದ್ಯ ವೈ.ಜಿ.ಸಿದ್ದರಾಮಯ್ಯ, ಸ್ವಂದನ ನರ್ಸಿಂಗ್ ಹೋಂನ ವೈದ್ಯ ಕೆ.ಹೆಚ್.ನಾಗರಾಜು, ಚಿ.ನಾ.ಹಳ್ಳಿ ರೋಟರಿ ಅಧ್ಯಕ್ಷ ಪ್ರದೀಪ್‌ಕುಮಾರ್, ವೈದ್ಯ ಪ್ರಶಾಂತಕುಮಾರ್ ಆಗಮಿಸಲಿದ್ದಾರೆ. ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್ ಅಧ್ಯಕ್ಷತೆ ವಹಿಸುವರು.
ವೈದ್ಯ ಸಿದ್ದರಾಮಯ್ಯ ಮಧುಮೇಹ ಹಾಗೂ ರಕ್ತದೊತ್ತಡ ಕಾಯಿಲೆಯ ಮುನ್ನೆಚ್ಚರಿಕೆ ಹಾಗೂ ನಿರ್ವಹಣೆಯ ಬಗ್ಗೆ ಉಪನ್ಯಾಸ ನೀಡುವರು. ಹುಳಿಯಾರು ರೋಟರಿ ಅಧ್ಯಕ್ಷ ಗಂಗಾಧರರಾವ್, ಉಪನ್ಯಾಸಕ ಹನುಮಂತಪ್ಪ, ಜಯಪ್ರಕಾಶ್, ವಿಜಯಮ್ಮ, ವಿನುತಾಶ್ರೀ, ವಿಶ್ವನಾಥಾಚಾರಿ, ರಾಜು, ವೇದಮೂರ್ತಿ, ಎಸ್‌ಡಿಎಂಸಿಯ ತಿಪ್ಪೇಸ್ವಾಮಿ, ಸೋಮನಾಥಗೌಡ, ಕಮಲಮ್ಮ, ಕಾಲೇಜು ಅಭಿವೃದ್ಧಿ ಸಮಿತಿಯ ಶಿವಣ್ಣ,ರಂಗನಾಥ ಶೆಟ್ರು, ರಾಘವೇಂದ್ರ ಭಾಗವಹಿಸುವರೆಂದು ಶಿಬಿರಾಧಿಕಾರಿ ಶಂಕರಲಿಂಗಯ್ಯ ತಿಳಿಸಿದ್ದಾರೆ.
15 ರಂದು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ
ಪಾವಗಡ: ವರ್ಷದ ನಂತರ ಇಲ್ಲಿನ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಚುನಾವಣೆಗೆ ಹಸಿರು ನಿಶಾನೆ ದೊರೆತಿದ್ದು ಮಾರ್ಚಿ 15ರಂದು ಚುನಾವಣೆ ನಡೆಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡು ಪುರಸಭೆಗೆ ಆದೇಶ ಜಾರಿ ಮಾಡಿದ್ದಾರೆ.
ಸರ್ಕಾರದ ಆದೇಶದಂತೆ ಕಳೆದ ವರ್ಷ 2013, ಫೆಬ್ರವರಿಯಲ್ಲಿ ಇಲ್ಲಿನ ಪುರಸಭೆ ಚುನಾವಣೆ ನಡೆದಿದ್ದು ನ್ಯಾಯಾಲಯ ತಡೆಹಿಡಿದಿದ್ದ ಹಿನ್ನೆಲೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ನಡೆದಿರಲಿಲ್ಲ. ನ್ಯಾಯಾಲಯದ ಆದೇಶ ಜಾರಿಯಾದ ಹಿನ್ನೆಲೆಯಲ್ಲಿ ಮೀಸಲಾತಿ ಹಂಚಿಕೆ ಸೇರಿದಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಚುನಾವಣೆ ನಡೆಸಲು ಕ್ರಮ ಜರುಗಿಸಿ ಮಾರ್ಚಿ 15ರಂದು ಚುನಾವಣೆ ನಡೆಸಲು ಜಿಲ್ಲಾಧಿಕಾರಿಗಳು ಪುರಸಭೆಗೆ ಆದೇಶ ಮಾಡಿದ್ದಾರೆ. ಮಾರ್ಚಿ 15ರಂದು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಗಡುವು ನಿಗದಿಯಾಗಿದೆ.
ಬೆಳಿಗ್ಗೆ 11ರಿಂದ 1ಗಂಟೆಗೆ ನಾಮ ಪತ್ರ ಸಲ್ಲಿಸಲು ಅವಕಾಶ, ಮಧ್ಯಾಹ್ನ 1ಗಂಟೆಗೆ ಚುನಾವಣೆಯ ಸಭೆ ನಡೆಸಲಾಗುವುದು. ಮಧ್ಯಾಹ್ನ 1ರಿಂದ 1.15ರ ವರೆಗೆ ನಾಮ ಪತ್ರ ಪರಿಶೀಲನೆ ಹಾಗೂ ಮಧ್ಯಾಹ್ನ 1.15ರಿಂದ 1.30ಕ್ಕೆ  ನಾಮ ಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ.ಅಗತ್ಯವಿದ್ದಲಿ ಚುನಾವಣೆ ನಡೆಸುವುದು ಮತ್ತು ಫಲಿತಾಂಶವನ್ನು ಮಧ್ಯಾಹ್ನ 2ಗಂಟೆಗೆ ಘೋಷಿಸುವುದಾಗಿ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಇಂದು ಯುಪಿಎಸ್ ಉದ್ಘಾಟನಾ ಸಮಾರಂಭ
ತಿಪಟೂರು: ತಾಲೂಕಿನ ಆಲದಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್ ಕಲಿಕೆಗಾಗಿ ಯುಪಿಎಸ್ ಉದ್ಘಾಟನೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಮ.8 ರಂದು ಬೆಳಿಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ. ಮಕ್ಕಳು ಕಂಪ್ಯೂಟರ್ ಕಲಿಕೆಗಾಗಿ ವಿದ್ಯುತ್ ವ್ಯತ್ಯಯದಿಂದ ತೊಂದರೆ ಆಗುತ್ತಿದ್ದುದನ್ನು ಮನಗಂಡ ಗ್ರಾಮಸ್ಥರು ಶಾಲೆಗೆ ಸುಮಾರು 25 ಸಾವಿರ ರು. ಬೆಲೆಯ ಯುಪಿಎಸ್ ಹಾಗೂ ಕಂಪ್ಯೂಟರ್ ಟೇಬಲ್ ಶಾಲೆಗೆ ದಾನವಾಗಿ ನೀಡಿದ್ದಾರೆ. ವೈದ್ಯರಾದ ಕೊರಟಗೆರೆ ಗುರುಸಿದ್ದರಾಧ್ಯ ಉದ್ಘಾಟಿಸುವರು.                                                                   
ಇಂದು ಕೋಟೆ ಕುಮಾರ್ ಚಿತ್ರಕಲಾ ಪ್ರದರ್ಶನ
ತುಮಕೂರು: ಇಲ್ಲಿನ ರವೀಂದ್ರ ಕಲಾನಿಕೇತನದಲ್ಲಿ ಕಲಾವಿದ ಕೋಟೆ ಕುಮಾರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಾ. 8 ರಿಂದ 10 ರವರೆಗೆ ಹಮ್ಮಿಕೊಳ್ಳಲಾಗಿದೆ. ಸಮಾರಂಭವನ್ನು ಮಾ. 8 ರಂದು ಬೆಳಗ್ಗೆ 11 ಗಂಟೆಗೆ ಹಿರಿಯ ಕಲಾವಿದ ಕೆ.ಟಿ. ಶಿವಪ್ರಸಾದ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಬಿ.ಟಿ.ಮುನಿರಾಜಯ್ಯ, ಸಾಹಿತಿ ನಟರಾಜ್ ಬೂದಾಳ್, ಭೂಮಿ ಬಳಗದ ಅಧ್ಯಕ್ಷ ಜಿ.ಎಸ್. ಸೋಮಶೇಖರ್, ರವೀಂದ್ರ ಕಲಾನಿಕೇತನದ ಪ್ರಿನ್ಸಿಪಾಲ್ ಬಾಬುರಾವ್ ಕಂದಗೋಳ್, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಡಿ. ಭೂತಯ್ಯ ಪಾಲ್ಗೊಳ್ಳಲ್ಲಿದ್ದಾರೆ. ಅಧ್ಯಕ್ಷತೆಯನ್ನು ಬಾಪೂಜಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಂ. ಬಸವಯ್ಯ ವಹಿಸಲಿದ್ದಾರೆ.
ಶಿಬಿರಾರ್ಥಿಗಳಿಗೆ ಕಾನೂನು ಪಾಲನೆಯ ಬಗ್ಗೆ ತಿಳಿವಳಿಕೆ
ಹುಳಿಯಾರು: ಜಿಲ್ಲಾ ಸೇವಾ ಕಾನೂನು ಸೇವಾ ಪ್ರಾಧಿಕಾರ, ಚಿ.ನಾ.ಹಳ್ಳಿ ವಕೀಲರ ಸಂಘದ ವತಿಯಿಂದ ಇಲ್ಲಿನ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಹೋಬಳಿಯ ಯಗಚಿಹಳ್ಳಿಯಲ್ಲಿ ಹಮ್ಮಿಕೊಡಿದ್ದ ಶಿಬಿರದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಂ.ರಾಜಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ವಕೀಲರಾದ ಮಂಜುನಾಥ ಹಾಗೂ ಗೋಪಾಲಕೃಷ್ಣ ಮಹಿಳಾ ದೌರ್ಜನ್ಯ ತಡೆಕಾಯ್ದೆ ಬಗ್ಗೆ ಉಪನ್ಯಾಸ ನೀಡಿದರು. ಪ್ರಾಧ್ಯಾಪಕ ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ತಾ. ವಕೀಲ ಸಂಘದ ಅಧ್ಯಕ್ಷ ವಿಶ್ವನಾಥ್, ವಕೀಲರಾದ ಲೋಕೇಶ್ವರ್, ಚಿಕಣ್ಣ, ಶಿಬಿರಾಧಿಕಾರಿ ಶಂಕರಲಿಂಗಯ್ಯ, ಸೈಯ್ಯದ್ ಇಬ್ರಾಹಿಂ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.