ದೈಹಿಕ ಶಿಕ್ಷಣ ಶಿಕ್ಷಕರ ಸಂಘಕ್ಕೆ ನೂತನ ಪದಾಧಿಕಾರಿಗಳು
ಶಿರಾ: ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಂಘಕ್ಕೆ ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ದೊಡ್ಡಬಾಣಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎಸ್. ಹೊನ್ನಪ್ಪ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ನರಸಿಂಹಮೂರ್ತಿ ಆಯ್ಕೆಯಾದರು. ಕಾರ್ಯದಶಿಯಾಗಿ ಕೋಟೆ ಶಾಲೆಯ ಎಸ್.ಆರ್. ವೆಂಕಟರವಣಪ್ಪ, ಖಜಾಂಚಿಯಾಗಿ ಲಕ್ಷ್ಮೀ ಆಯ್ಕೆಯಾದರು. ಪದಾಧಿಕಾರಿಗಳಾಗಿ ಸಿ.ವೈರಮುಡಿ (ಹುಲಿಕುಂಟೆ), ರಂಗನಾಥ (ಗೌಡಗೆರೆ), ಪರಮೇಶ್ವರ (ಬುಕ್ಕಾಪಟ್ಟಣ), ಸಾವಿತ್ರಮ್ಮ (ಕಳ್ಳಂಬೆಳ್ಳ), ಯತಿರಾಜು (ಕಸಬಾ-1), ವೀರಣ್ಣ (ಕಸಬಾ-2) ಆಯ್ಕೆಮಾಡಲಾಗಿದೆ ಎಂದು ಅಧ್ಯಕ್ಷ ಎಸ್.ಹೊನ್ನಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನಶ್ರೀ ಬಾಂಡ್ ವಿತರಣೆ
ತಿಪಟೂರು: ಭಾರತ ಸರ್ಕಾರ ಮತ್ತು ಎಲ್.ಐ.ಸಿಯ ಸಹಭಾಗಿತ್ವದೊಂದಿಗೆ ಕರ್ನಾಟಕ ಸರ್ಕಾರ ನೀಡುವ ಜನಶ್ರೀ ಬಿಮ ಯೋಜನೆಯ ಬಾಂಡ್ ವಿತರಣಾ ಕಾರ್ಯಕ್ರಮವನ್ನು ಮಾ.16ರ ಭಾನುವಾರ ಬೆಳಗ್ಗೆ 11ಗಂಟೆಗೆ ಪಟ್ಟಣದ ಆರ್ಯಬಾಲಿಕಾ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಡುಗೆ ಸಿಬ್ಬಂದಿಯ ತಾ.ಅಧ್ಯಕ್ಷೆ ನಾಗರತ್ನ ಮತ್ತು ಕಾರ್ಯದರ್ಶಿ ರಾಧಮ್ಮ ತಿಳಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಸಿಬ್ಬಂದಿಗಳಿಗೆ ಜನಶ್ರೀ ಬಾಂಡ್ ವಿತರಣೆ ಮಾಡಲಾಗುವುದು. ಆದ್ದರಿಂದ ತಾಲೂಕಿನ ಬಿಸಿಯೂಟ ತಯಾರಿಸುವ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘ ತಿಳಿಸಿದೆ.
ಬೈಕ್- ಬಸ್ ಡಿಕ್ಕಿ: ಸವಾರ ಸಾವು
ಕುಣಿಗಲ್: ಬೈಕ್ ಮತ್ತು ಸಾರಿಗೆ ಸಂಸ್ಥೆ ಬಸ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಚಾಲಕ ಸ್ಥಳದಲ್ಲೆ ಮೃತಪಟ್ಟ ಘಟನೆ ಹುಲಿಯೂರುದುರ್ಗ ಪೊಲೀಸ್ ಠಾಣೆಯ ಹೇರೋಹಳ್ಳಿಗೇಟ್ ಬಳಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ಮೃತನನ್ನು ಅಮೃತೂರು ಹೋಬಳಿಯ ವಡ್ಡರಹಳ್ಳಿಯ ಗಿರೀಶ್ (28) ಎಂದು ಗುರುತಿಸಲಾಗಿದ್ದು, ಈತ ಇಪ್ಪಾಡಿ ಗ್ರಾಮದಲ್ಲಿನ ನೆಂಟರಮನೆಗೆ ಬಂದು ವಾಪಸ್ ಹುಲಿಯೂರುದುರ್ಗಕ್ಕೆ ಶುಕ್ರವಾರ ಮಧ್ಯಾಹ್ನ ಮೂರುಗಂಟೆ ಸಮಯದಲ್ಲಿ ಹಿಂದಿರುಗುವಾಗ, ಹೇರೂಹಳ್ಳಿ ಗೇಟ್ ಬಳಿ ಬೆಂಗಳೂರಿನಿಂದ ಹುಲಿಯೂರುದುರ್ಗಕ್ಕೆ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪಾಪಣ್ಣ ಎಂಬಾತ ನೀಡಿನ ದೂರಿನ ಮೇರೆಗೆ ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿ, ಬಸ್ಸನ್ನು, ಚಾಲಕನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ನಾಳೆ ಮಾಸಿಕ ಶಿವಾನುಭವ ಕಾರ್ಯಕ್ರಮ
ತುಮಕೂರು: ಮಾ.16ರಂದು ಶ್ರೀ ಮ.ನಿ.ಪ್ರ.ಸ್ವ. ಅಟವೀ ಶಿವಲಿಂಗ ಮಹಾಸ್ವಾಮಿಗಳವರ ಸನ್ನಿದಾನದಲ್ಲಿ ಮಾಸಿಕ ಶಿವಾನುಭವ ಕಾರ್ಯಕ್ರಮ ಇಲ್ಲಿ ನಡೆಯಲಿದೆ. ಮ.ನಿ.ಪ್ರ.ಸ್ವ. ಅಟವೀ ಶಿವಲಿಂಗ ಮಹಾಸ್ವಾಮಿ, ಮ.ನಿ.ಪ್ರ.ಸ್ವ. ಸಿದ್ಧಲಿಂಗ ಮಹಾಸ್ವಾಮಿ ಸಾನಿಧ್ಯ ವಹಿಸುವರು. ಅಧ್ಯಕ್ಷತೆಯನ್ನು ಕಾರದ ವೀರಬಸವ ಮಹಾಸ್ವಾಮಿಗಳು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಡಿ.ಸಿ. ನಾಗರಾಜು, ವೃತ್ತ ನಿರೀಕ್ಷಕ ಪಿ. ರವಿ, ಸಬ್ಇನ್ಸ್ಪೆಕ್ಟರ್ ಅವಿನಾಶ್, ಪ್ರಮುಖರಾದ ವಿಶ್ವನಾಥಯ್ಯ, ನಿರಂಜನ್, ಸಿ.ಎ. ವಿಶ್ವನಾಥ್, ಡಾ. ಸಿದ್ದಲಿಂಗಯ್ಯ ಇತರರು ಆಗಮಿಸಲಿದ್ದಾರೆ. ಅಂದು ಬೆಳಿಗ್ಗೆ 7 ರಿಂದ ಮಹಾರುದ್ರಾಭಿಷೇಕ ಇತರ ಪೂಜಾ ಕಾರ್ಯಗಳು ನಡೆಯಲಿವೆ.
ಸಮುದಾಯ ಕೊಡುಗೆ ಶ್ಲಾಘನೀಯ: ಸೋಮಣ್ಣ
ತಿಪಟೂರು: ಮಹಾನ್ ವ್ಯಕ್ತಿಗಳ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕೆಂದು ಹಳೇಪಾಳ್ಯ ಚೌಡೇಶ್ವರಿ ಸಹಕಾರ ಸಂಘದ ಅಧ್ಯಕ್ಷರಾದ ಸೋಮಣ್ಣ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಾಲೂಕಿನ ಆಲದಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಂಪ್ಯೂಟರ್ ಕಲಿಕೆಗಾಗಿ ಯು.ಪಿ.ಎಸ್ ಉದ್ಘಾಟಿಸಿ ಮಾತನಾಡಿದ ಅವರು ಶಾಲಾ ಮಕ್ಕಳ ಕಂಪ್ಯೂಟರ್ ಕಲಿಕೆಗೆ ಅನುಕೂಲವಾಗುವಂತೆ ಗ್ರಾಮಸ್ಥರೆಲ್ಲಾ ಸೇರಿ ಶಾಲೆಯಲ್ಲಿನ ಕಂಪ್ಯೂಟರ್ಗೆ ಯು.ಪಿ.ಎಸ್ ಅನ್ನು ದಾನವಾಗಿ ನೀಡಿರುವುದು ಶ್ಲಾಘನೀಯ ಎಂದರು.
ಹೊಸಹಳ್ಳಿ ಕ್ಲಸ್ಟರ್ ಸಿ.ಆರ್.ಪಿ. ಎಚ್.ಜೆ. ದಿವಾಕರ್ ಮಾತನಾಡಿ ಸಮುದಾಯದ ಸಹಕಾರವಿದ್ದರೆ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಬಹುದು. ಸರ್ಕಾರ ನೀಡುವ ಅನುದಾನಗಳ ಜೊತೆಗೆ ಗ್ರಾಮಸ್ಥರ ನೆರವು ದೊರೆತಾಗ ಈ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದರು.
ಕೊರಟಗೆರೆಯ ಪಾರಂಪರಿಕ ವೈದ್ಯರಾದ ಗುರುಸಿದ್ದರಾದ್ಯರು ಸ್ಥಳೀಯ ಗಿಡಮೂಲಿಕೆಗಳಿಂದ ಹಲವಾರು ಕಾಯಿಲೆಗಳನ್ನು ಕಡಿಮೆ ಖರ್ಚಿನಲ್ಲಿ ಯಾವ ರೀತಿಯಲ್ಲಿ ಗುಣಪಡಿಸಿಕೊಳ್ಳಬಹುದು ಎಂಬುದನ್ನು ತಿಳಿಸಿದರು. ಅಲ್ಲದೆ ಲೋಳೆಸರದ ಮಹತ್ವವನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು.
ಮುಖ್ಯ ಶಿಕ್ಷಕ ರಮೇಶ್ ಮಾತನಾಡಿ ಮಕ್ಕಳ ಕಂಪ್ಯೂಟರ್ ಕಲಿಕೆಗಾಗಿ ವಿದ್ಯುತ್ ವ್ಯತ್ಯಯದಿಂದ ತೊಂದರೆಯನ್ನ ಮನಗಂಡ ಗ್ರಾಮಸ್ಥರು ಒಗ್ಗೂಡಿ ಶಾಲೆಗೆ ಸುಮಾರು 25ಸಾವಿರ ರು. ಬೆಲೆಯುಳ್ಳ ಯುಪಿಎಸ್ ಮತ್ತು ಕಂಪ್ಯೂಟರ್ ಟೇಬಲ್ಗಳನ್ನು ಶಾಲೆಗೆ ದಾನವಾಗಿ ನೀಡಿದ್ದಾರೆ ಎಂದರು.
ಇಂದಿನಿಂದ ಶಂಕರೇಶ್ವರಸ್ವಾಮಿ ರಥೋತ್ಸವ
ತಿಪಟೂರು: ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಶ್ರೀ ಶಂಕರೇಶ್ವರಸ್ವಾಮಿಯವರ ರಥೋತ್ಸವವು ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಶನಿವಾರ ವಿಜೃಂಭಣೆಯಿಂದ ನಡೆಯಲಿದೆ. ಮಧ್ಯಾಹ್ನ ಶ್ರೀ ಶಂಕರೇಶ್ವರಸ್ವಾಮಿಯವರ ರಥೋತ್ಸವವು ವಿವಿಧ ಜಾನಪದ ಕಲಾತಂಡಗಳೊಂದಿಗೆ ಅದ್ಧೂರಿಯಾಗಿ ನಡೆಯಲಿದ್ದು, ಅಂದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಾ.16ರಂದು ಬೆಳ್ಳಿ ಪಾಲಕಿ ಉತ್ಸವ, ಶಯನೋತ್ಸವ ಹಾಗೂ ರಾತ್ರಿ ಅಗ್ಗುಂದ ಫೈರ್ವರ್ಕ್ಸ್ ಅವರಿಂದ ಮದ್ದಿನ ಪ್ರದರ್ಶನ ಏರ್ಪಡಿಸಲಾಗಿದೆ.
ಇಂದು ವಿದ್ಯಾ ಸಂಸ್ಥೆ ದಿನಾಚರಣೆ
ಮಧುಗಿರಿ : ಮಧುಗಿರಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಮತ್ತು ಕಾಲೇಜು ದಿನಾಚರಣೆ ಕಾರ್ಯಕ್ರಮವನ್ನು ಮಧುಗಿರಿ ವಿದ್ಯಾ ಸಂಸ್ಥೆಯ ಕಾಲೇಜು ಆವರಣದಲ್ಲಿ ಮಾ.15ರಂದು ಮಧ್ಯಾಹ್ನ 3 ಗಂಟೆಗೆ ಏರ್ಪಡಿಸಲಾಗಿದೆ ಎಂದು ಸಿಎಓ ಬಿ.ಎಂ.ಪ್ರೇಮನಾಥ್ ತಿಳಿಸಿದ್ದಾರೆ. ಮಧುಗಿರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ವಿ.ಶ್ರೀನಿವಾಸ್ ಅಧ್ಯಕ್ಷತೆ ವಹಿಸುವರು. ತುಮಕೂರು ವಿವಿ ಉಪ ಕುಲಪತಿ ಪ್ರೊ.ಎ.ಎಚ್. ರಾಜಸಾಬ್ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಕೆ.ಎನ್.ರಾಜಣ್ಣ ಬಹುಮಾನ ವಿತರಿಸುವರು.
ನಾಳೆ ಅಭಿನಂದನಾ ಸಮಾರಂಭ
ತುಮಕೂರು: ಇಲ್ಲಿನ ರೋಟರಿ ತುಮಕೂರು ವತಿಯಿಂದ ರೋಟರಿ ಬಾಲಭವನದಲ್ಲಿ ಮಾ. 16 ರಂದು ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. ಅಧ್ಯಕ್ಷತೆಯನ್ನು ಸುರೇಶ್ ಬಾಬು ಅವರು ವಹಿಲಿದ್ದಾರೆ. ಉದ್ಘಾಟನೆಯನ್ನು ಯೋಗ ಗುರು ಜಿವಿವಿ ಶಾಸ್ತ್ರಿ ನೆರವೇರಿಸುವರು. ನಜೀರ ಅಹ್ಮದ್ ಸವಣೂರ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಕವಿತಾಕೃಷ್ಣ, ಎಚ್ಎಸ್ ರಾಮಣ್ಣ ಅವರನ್ನು ಸನ್ಮಾನಿಸಲಾಗುವುದು.
ಸಾಹಿತ್ಯ ಸಂವಾದ ಪುಸ್ತಕ ಸಿದ್ಧ
ತುಮಕೂರು ವಿವಿ ಸ್ನಾತಕ ಪದವಿಯ 6ನೇ ಸೆಮಿಸ್ಟರ್ ಐಚ್ಛಿಕ ಕನ್ನಡ ಪತ್ರಿಕೆ 7 ಮತ್ತು 8 ಕ್ಕೆ ಸಂಬಂಧಿಸಿದ ಸಾಹಿತ್ಯ ಸಂವಾದ ಪಠ್ಯಪುಸ್ತಕ ವಿಶ್ವವಿದ್ಯಾನಿಲಯ ಗ್ರಂಥಾಲಯದಲ್ಲಿ ಮಾರಾಟಕ್ಕೆ ಲಭ್ಯವಿದೆ. ಆಸಕ್ತ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಬ್ಯಾಂಕ್ನಲ್ಲಿ ಚಲನ್ ಮೂಲಕ ವಿವಿಗೆ ಹಣ ಪಾವತಿಸಿ ಪಠ್ಯ ಪುಸ್ತಕ ಕೊಂಡುಕೊಳ್ಳಬಹುದಾಗಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ 9535889685 ಸಂಪರ್ಕಿಸಬೇಕೆಂದು ತಿಳಿಸಲಾಗಿದೆ.
ಕುಣಿಗಲ್ ಪುರಸಭೆಗೆ ಚುನಾವಣೆ 24 ರಂದು
ಕುಣಿಗಲ್ : ಪುರಸಭೆಗೆ ಚುನಾವಣೆ ನಡೆದು ವರ್ಷ ಕಳೆದರೂ, ನ್ಯಾಯಾಲಯ ಮತ್ತು ಜಿಲ್ಲಾಧಿಕಾರಿಗಳು ಸೂಕ್ತ ಆದೇಶ ನೀಡಿದ್ದರೂ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಪತ್ರಿಕೆಯಲ್ಲಿ 13ರಂದು ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಜಿಲ್ಲಾಡಳಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಈಗ ಮಾ. 24ರಂದು ಕುಣಿಗಲ್ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಲು ಸಿದ್ಧತೆ ನಡೆಸಲಾಗಿದೆ ಎಂದು ಪ್ರಭಾರ ತಹಸೀಲ್ದಾರ್ ಮತ್ತು ಚುನಾವಣೆ ಶಿರಸ್ತೇದಾರ್ ತಿಮ್ಮಯ್ಯ ತಿಳಿಸಿದ್ದಾರೆ.
ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳಾಪಟ್ಟಿ ಪ್ರಕಟಿಸಲು ಅಗತ್ಯ ಸಿದ್ಧತೆ ನಡೆಸಲಾಗುತ್ತಿದ್ದು, ಪೂರ್ವಭಾವಿ ಸಿದ್ಧತೆಗೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗುವುದೆಂದಿದ್ದಾರೆ.
ಮನೆಯಲ್ಲಿ ಆಕಸ್ಮಿಕ ಬೆಂಕಿ: ತಪ್ಪಿದ ಭಾರಿ ಅನಾಹುತ
ಕುಣಿಗಲ್: ಮನೆಯ ಉರುವಲುಗಾಗಿ ಮನೆಯ ತಾರಸಿ ಮೇಲೆ ಸಂಗ್ರಹಿಸಲಾಗಿದ್ದ ತೆಂಗಿನಸಿಪ್ಪೆಯ ರಾಶಿಗೆ ಆಕಸ್ಮಿಕ ಬೆಂಕಿಯಿಂದ ಸ್ವಲ್ಪ ಪ್ರಮಾಣದ ನಷ್ಟವಾಗಿದೆ.
ಅಗ್ನಿಶಾಮಕ ಇಲಾಖಾ ಸಿಬ್ಬಂದಿಯ ಸಕಾಲಿಕ ಕ್ರಮದಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ. ಶುಕ್ರವಾರ ಮಧ್ಯಾಹ್ನ ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.
ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ
ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶುಕ್ರವಾರ ಮತದಾನ ಜಾಗೃತಿ ಜಾಥಾ ನಡೆಸಿದರು. ಪಟ್ಟಣದ ಪುರಸಭೆ ಆವರಣದಿಂದ ಮತದಾನ ಜಾಗೃತಿ ಜಾಥಾಗೆ ಪುರಸಭೆ ಮುಖ್ಯಾಧಿಕಾರಿ ಚಾಲನೆ ನೀಡಿದರು. ಮುಂಬರುವ ಲೋಕಸಭಾ ಚುಣಾವಣೆಯಲ್ಲಿ ಸುಭದ್ರ ಮತ್ತು ಸದೃಢ ಸರ್ಕಾರಕ್ಕಾಗಿ ಪ್ರತಿಯೊಬ್ಬ ಪ್ರಜೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಬೇಕು ಎಂದು ಘೋಷಣೆ ಕೂಗಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮತದಾನದ ಮಹತ್ವ ಕುರಿತ ಬ್ಯಾನರರ್ಹಿಡಿದು, ಮತದಾನದ ಮಹತ್ವ ಕುರಿತ ಕರ ಪತ್ರಗಳನ್ನು ಮನೆ ಮನೆಗೆ ಹಂಚಿ, ಮರವಣಿಗೆ ನಡೆಸಿ ಸಾರ್ವಜನಿಕರಲ್ಲಿ ಮತದಾನದ ಅರಿವು ಮೂಡಿಸಿ ಗಮನ ಸೆಳೆದರು.
'ಹೈಕೋರ್ಟ್ ನಿರ್ದೇಶನ, ದುರ್ಬಲ ವರ್ಗಕ್ಕೆ ಆಶಾಕಿರಣ'
ಮಳವಳ್ಳಿ: ರಾಜ್ಯಾದ್ಯಂತ ಇರುವ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರನ್ನು ಕಾಯಂಗೊಳಿಸುವಂತೆ ರಾಜ್ಯ ಹೈಕೋರ್ಟ್ ನೀಡಿರುವ ನಿರ್ದೇಶನ ದುರ್ಬಲ ವರ್ಗಕ್ಕೆ ಆಶಾಕಿರಣವಾಗಲಿದೆ ಎಂದು ಪುರಸಭಾ ಮಾಜಿ ಅಧ್ಯಕ್ಷ ದೊಡ್ಡಯ್ಯ ತಿಳಿಸಿದ್ದಾರೆ. ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ನಗರ ಪಾಲಿಕೆಗಳಲ್ಲಿ ಹಲವಾರು ವರ್ಷಗಳಿಂದ ಗುತ್ತಿಗೆ ಆದಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೌರ ಕಾರ್ಮಿಕರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿ ತುಂಬಾ ಕಷ್ಟ ಅನುಭವಿಸುತ್ತಿದ್ದರು. ಹೈಕೋರ್ಟ್ ಆದೇಶದಿಂದ ಇವರ ಬಾಳಿಗೆ ಹೊಸ ಜೀವನ ಬಂದಿದ್ದು, ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಮೈಸೂರಿನ ಮಾಜಿ ಮೇಯರ್ ನಾಗರಾಜ್ ಅಭಿನಂದನಾರ್ಹರು ಎಂದು ತಿಳಿಸಿದ್ದಾರೆ. ಸಂತಾಪ: ಲೋಕಸಭೆ ಮಾಜಿ ಉಪಸಭಾಪತಿ ಎಸ್.ಮಲ್ಲಿಕಾರ್ಜುನಯ್ಯ ನಿಧನಕ್ಕೆ ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃದು ಸ್ವಭಾವದವರಾಗಿದ್ದ ಇವರ ನಿಧನ ದು:ಓ ತಂದಿದೆ ಎಂದು ಹೇಳಿದ್ದಾರೆ.
ನಿಯಂತ್ರಣ ಕೊಠಡಿ ಸ್ಥಾಪನೆ
ಮಂಡ್ಯ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಚಟುವಟಿಕೆಗಳ ದೂರುಗಳನ್ನು ಮಾಹಿತಿಗಳನ್ನು ಸ್ವೀಕರಿಸುವ ಸಲುವಾಗಿ ಅಬಕಾರಿ ಇಲಾಖೆಯಿಂದ ನಿಯಂತ್ರಣಾ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್ರವರ ಕಚೇರಿ, ಮಂಡ್ಯ, ದೂ-08232-220313 225657, ಅಬಕಾರಿ ನಿರೀಕ್ಷಕರ ಕಚೇರಿ, ಮದ್ದೂರು ವಲಯ, ಮೊ-9986818285, ಅಬಕಾರಿ ನಿರೀಕ್ಷಕರ ಕಚೇರಿ, ಮಳವಳ್ಳಿ ವಲಯ, ದೂ-243938, ಅಬಕಾರಿ ಉಪ ಅಧೀಕ್ಷಕರವರ ಕಚೇರಿ, ಪಾಂಡವಪುರ ಉಪ ವಿಭಾಗ, ದೂ-255651, ಅಬಕಾರಿ ನಿರೀಕ್ಷಕರ ಕಚೇರಿ, ಶ್ರೀರಂಗಪಟ್ಟಣ ವಲಯ, ದೂ-252559, ಅಬಕಾರಿ ನಿರೀಕ್ಷಕರ ಕಚೇರಿ, ಕೆ.ಆರ್.ಪೇಟೆ ವಲಯ, ದೂ-263524, ಅಬಕಾರಿ ನಿರೀಕ್ಷಕರ ಕಚೇರಿ ನಾಗಮಂಗಲ ವಲಯ, ಮೊ-9740866619.
ಪುಸ್ತಕ ಬಿಡುಗಡೆ
ಮೈಸೂರು: ಐಬಿಎಚ್ ಪ್ರಕಾಶನ ಹೊರತಂದಿರುವ ಪ್ರೊ.ಎಂ. ರಾಮರಾವ್ ವಿರಚಿತ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭವನ್ನು ಮಾ.16ರ ಬೆಳಗ್ಗೆ 11ಕ್ಕೆ ವಿವಿ ಮೊಹಲ್ಲಾದ 3ನೇ ಮುಖ್ಯರಸ್ತೆಯಲ್ಲಿರುವ 2907ರ ನಿವಾಸದಲ್ಲಿ ಏರ್ಪಡಿಸಿದ್ದು, ಹಿರಿಯ ಪತ್ರಕರ್ತ ಕೃಷ್ಣವಟ್ಟಂ ಭಾಗವಹಿಸುವರು.
ವಲಯ ಜಾಗೃತಿ
ಮೈಸೂರು: ರೋಟರಿ ಮೈಸೂರು ಮಿಡ್ಟೌನ್ನಿಂದ ಮಾ.16ರ ಬೆಳಗ್ಗೆ 10ಕ್ಕೆ ಕೆಆರ್ಎಸ್ ರಸ್ತೆಯಲ್ಲಿರುವ ರೋಟರಿ ಪ್ರೌಢಶಾಲೆ ಸಭಾಂಗಣದಲ್ಲಿ ಮಾಹಿತಿ ಹಕ್ಕಿನ ಕಾಯ್ದೆ ಕುರಿತ ವಲಯ ಜಾಗೃತಿ ಕಾರ್ಯಕ್ರಮ ಏರ್ಪಡಿಸಿದ್ದು, ಎಸ್. ಗುರುರಾಜ್, ಡಾ.ಆರ್. ಬಾಲಸುಬ್ರಹ್ಮಣ್ಯಂ, ಪುಂಡಲೀಕ ಮರಾತೆ ಭಾಗವಹಿಸುವರು.
ಬೇಟೇರಾಯಸ್ವಾಮಿ ರಥೋತ್ಸವ
ತುರುವೇಕೆರೆ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಕ್ಷ್ಮಿ ಸಹಿತ ವರದ ಬೇಟೇರಾಯಸ್ವಾಮಿಯವರ ಬ್ರಹ್ಮ ರಥೋತ್ಸವ ಬಹಳ ವಿಜೃಂಭಣೆಯಿಂದ ಶುಕ್ರವಾರ ನಡೆಯಿತು.
ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಪೂಜೆಗಳ ನಂತರ ಉತ್ವವ ಮೂರ್ತಿಯನ್ನು ದೇವಾಲಯದಿಂದ ಹೊರತಂದು ದೇವಾಲಯದ ಪ್ರಾಂಗಣದಲ್ಲಿ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ರಥದ ಬಳಿಗೆ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ತರುತ್ತಿದ್ದಂತೆ ಗರುಡಪಕ್ಷಿಯ ಆಗಮನವಾಗಿ ಭಕ್ತರೆಲ್ಲಾ ಪುಳಕಿತರಾದರು. ರಥದ ಮೇಲೆ ಬೇಟೇರಾಯಸ್ವಾಮಿ ಉತ್ಸವ ಮೂರ್ತಿಯನ್ನು ಇಟ್ಟು ಭಕ್ತರಿಗೆ ವಿಶೇಷ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಶಾಸಕ ಎಂ.ಟಿ.ಕೃಷ್ಣಪ್ಪ, ಪಟ್ಟಣ ಪಂಚಾಯ್ತಿ ಸದಸ್ಯರಾದ ಟಿ.ಎನ್.ಶಶಿಕುಮಾರ್, ಪಟ್ಟಣ ಬ್ಯಾಂಕ್ನ ಅಧ್ಯಕ್ಷ ಟಿ.ಎನ್.ಶಿವರಾಜು, ಬೇಟೇರಾಯಸ್ವಾಮಿ ದೇವಾಲಯದ ಸಂಚಾಲಕರಾದ ಟಿ.ಬಿ.ಶಾಮಣ್ಣ, ಮುಖಂಡರಾದ ಕೃಷ್ಣಮೂರ್ತಿ, ಚಂದ್ರಶೇಖರ್, ಬ್ಯಾಂಕ್ ಶ್ರೀನಿವಾಸ್ ಮೊದಲಾದವರು ಭಾಗವಹಿಸಿದ್ದರು. ಸಾವಿರಾರು ಮಂದಿ ಭಕ್ತಾದಿಗಳು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಭಗವಂತನ ಸೇವೆ ಮಾಡಿದರು. ತು.ಬ್ಯಾ.ಶ್ರೀನಿವಾಸ್ ಪ್ರಸಾದ್ ರವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

