ತುಮಕೂರು

ಜಿಲ್ಲಾ ಸಚಿವರಿಗೆ ಕೇವಲ ಒಂಬತ್ತು ತಿಂಗಳಲ್ಲಿಯೇ ಜನರ ಹಿಡಿ ಶಾಪ

Published On :

ಶಿರಾ: ಶಿರಾ ಕ್ಷೇತ್ರ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಜಿಲ್ಲಾ ಸಚಿವರ ಅಸಮರ್ಥ ಆಡಳಿತದಿಂದಾಗಿ ಜನತೆ ಬೇಸತ್ತಿದ್ದು, ಜಿಲ್ಲಾ ಸಚಿವರಿಗೆ ಕೇವಲ 9 ತಿಂಗಳಲ್ಲಿಯೇ ಜನರು ಹಿಡಿ ಶಾಪ ಹಾಕುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಜಿಲ್ಲಾ ಜೆಡಿಎಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಜಿ.ಪಂ. ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ ಕಟುವಾಗಿ ಟೀಕಿಸಿದ್ದಾರೆ.
 ಅವರು ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ 30 ವರ್ಷಗಳ ರಾಜಕಾರಣದ ಅವಧಿಯಲ್ಲಿ ಇಷ್ಟೊಂದು ಏಕಚಕ್ರಾಧಿಪತ್ಯದ ರಾಜಕಾರಣವನ್ನು ನಿಜಕ್ಕೂ ಕಂಡಿಲ್ಲ ಎಂದು ತಿಳಿಸಿ ಜಿಲ್ಲಾಧಿಕಾರಿಗಳು ಒಂದು ಪಕ್ಷದ ವಕ್ತಾರರಂತೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾ ಸಚಿವರ ಕೈಗೊಂಬೆಯಂತೆ ಅವರು ಕಾರ್ಯ ನಿರ್ವಹಿಸುತ್ತಿದ್ದು, ಜನಸಾಮಾನ್ಯರ ಮೂಲಭೂತ ಅವಶ್ಯಕತೆಗಳ ಬಗ್ಗೆ ಯಾವುದೇ ಅಧಿಕಾರಿಗಳು ತಲೆಕೆಡಿಸಿಕೊಳ್ಳದೆ ಜಿಲ್ಲಾಡಳಿತ ಜಿಡ್ಡುಗಟ್ಟಿ ಕುಳಿತಿದೆ ಎಂದು ಅವರು ಆರೋಪಿಸಿದರು.
ವಿಪರ್ಯಾಸ: ಶಿರಾ ಕ್ಷೇತ್ರ ಸೇರಿದಂತೆ ಟಿ.ಬಿ.ಜಯಚಂದ್ರ ಅವರ ಆಪ್ತ ಸಹಾಯಕರಾದ ರವಿ ಎನ್ನುವವರು ಸರ್ವಾಧಿಕಾರಿಯಂತೆ ವರ್ತಿಸುತ್ತ, ಜಿಲ್ಲೆಯ ಅಧಿಕಾರಿಗಳ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಈ ಆಪ್ತ ಸಹಾಯಕರ ಅಣತಿಯಂತೆ ಅಧಿಕಾರಿಗಳು ನಡೆಯುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಹಿಂದೆ ಜಿಲ್ಲಾ ಪಂಚಾಯ್ತಿ ಆಡಳಿತದ ಯಾವುದೇ ಅವಧಿಯಲ್ಲಿ ಶಾಸಕರು ಕಾಮಗಾರಿಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡಿರಲಿಲ್ಲ. ಆದರೆ ಜಿಲ್ಲಾ ಸಚಿವರ ಈ ಆಪ್ತ ಸಹಾಯಕ ಜಿ.ಪಂ. ಕುಡಿಯುವ ನೀರಿನ ಅನುದಾನದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ, ಮುಖಂಡರಿಗೆ ಅಧಿಕಾರಿಗಳ ಮೇಲೆ ಒತ್ತಡ ತಂದು ಕಾಮಗಾರಿಗಳನ್ನು ಕೊಡಿಸುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ ಎಂದರು.
ಕ್ರಮಕಾಗೊಂಡಿಲ್ಲ: ಜಿಲ್ಲೆಯ ಉದ್ಯೋಗ ಖಾತರಿ ಯೋಜನೆಯ ಪೂರ್ಣಗೊಂಡ ಕಾಮಗಾರಿಗಳ ಸುಮಾರು 100 ಕೋಟಿ ರು.ಗಳಿಗೂ ಅಧಿಕ ಹಣ ಕೂಲಿಕಾರರಿಗೆ ಸಿಗಬೇಕಿದ್ದು. ಈ ಬಗ್ಗೆ ಜಿಲ್ಲಾ ಸಚಿವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಕಳೆದ 9 ತಿಂಗಳಿಂದಲೂ ನಾವು ಜಿಲ್ಲಾ ಸಚಿವರ ಆಡಳಿತ ವೈಖರಿಯನ್ನು ನೋಡಿ ಮಾತಾಡೋಣ ಎಂದು ಸುಮ್ಮನಿದ್ದೆವು. ಆದರೆ ಸಚಿವರು ತಮಗೆ ದಕ್ಕಿದ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಳ್ಳದಿರುವಾಗ ಇನ್ನು ಸುಮ್ಮನಿದ್ದರೆ ಜನಸಾಮಾನ್ಯರ ಸ್ಥಿತಿ ಚಿಂತಾಜನಕವಾಗುತ್ತದೆ ಎಂದು ಅವರ ವಿರುದ್ಧ ವಾಗ್ದಾಳಿ ಶುರುಮಾಡಿದ್ದೇವೆ ಎಂದು ಮುದಿಮಡು ರಂಗಶಾಮಯ್ಯ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ತಾ.ಪಂ. ಉಪಾಧ್ಯಕ್ಷ ಉದಯಶಂಕರ್, ಎಸ್.ಎಲ್. ಗೋವಿಂದರಾಜು, ನಗರಸಭಾ ಸದಸ್ಯರಾದ ಆರ್.ಉಗ್ರೇಶ್, ಅಂಜಿನಪ್ಪ, ಮಂಜುನಾಥ್,  ಜೆಡಿಎಸ್ ಮುಖಂಡರಾದ ಅರೆಹಳ್ಳಿ ಬಾಬು, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ದೇವರಾಜು, ರಂಗನಾಥಪ್ಪ, ಸೋಮಶೇಖರ್ ಮತ್ತಿತರರು ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.