ತುಮಕೂರು

ಹೊನ್ನಗೊಂಡನಹಳ್ಳಿಯಲ್ಲಿ ಸಂಭ್ರಮದ ರಥೋತ್ಸವ

Published On :

ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಹೊನ್ನಗೊಂಡನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ಕದರಿನರಸಿಂಹಸ್ವಾಮಿ, ಶ್ರೀ ಲಕ್ಕದಾಸಗೊಂಡಸ್ವಾಮಿ ಮತ್ತು ಶ್ರೀ ಈರಮುದ್ದಣ್ಣಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಭಕ್ತರು ದೇವಾಲಯದ ಪ್ರಾಂಗಣದಲ್ಲಿ ಸೇರಿ ಭಕ್ತಿ ಸಮರ್ಪಣೆ ಮಾಡಿದರು. ಬೃಹತ್ ಹೂವಿನ ಹಾರ, ಬಣ್ಣ ಬಣ್ಣದ ವಸ್ತ್ರಗಳಿಂದ ರಥವನ್ನು ಶೃಂಗರಿಸಲಾಗಿತ್ತು. ವಿಶೇಷ ಪೂಜಾ ವಿಧಿ-ವಿಧಾನಗಳ ನಂತರ ನೆರೆದ ಭಕ್ತರು ಘೋಷಣೆ ಕೂಗುತ್ತಾ ರಥ ಎಳೆದರು.
ರಥೋತ್ಸವದ ಮೇಲೆ ಹೋವು, ಬಾಳೆ ಹಣ್ಣು, ಪುರಿಯನ್ನು ಎಸೆಯುವ ಮೂಲಕ ಭಕ್ತರು ಸಂತೋಷ ಪಟ್ಟರು. ಬೆಳಿಗ್ಗೆಯಿಂದ ಉಪವಾಸದಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ, ಪಾನಕಗಳ ಸೇವಾರ್ಥ ಕಾರ್ಯಕ್ರಮಗಳು ನಡೆದವು.
ಬೆಂಗಳೂರು, ಚಿತ್ರದುರ್ಗ, ಬಳ್ಳಾರಿ, ಸೇರಿದಂತೆ ವಿವಿಧ ಜಿಲ್ಲೆ ಹಾಗೂ ಆಂಧ್ರಪ್ರದೇಶಗಳಿಂದ ಭಕ್ತರು, ಗೌಡರು, ಪೂಜಾರಪ್ಪ, ಯಜಮಾನರು, ದಳವಾಯಿಗಳು, ಅಣ್ಣ-ತಮ್ಮಂದಿರು ಮತ್ತು ನೆಂಟರಿಷ್ಟರು ಸಾವಿರಾರರು ಮಂದಿ ಭಕ್ತರು ಭಾಗವಹಿಸಿದ್ದರು.
ಚಿತ್ರದುರ್ಗದ ಅಖಿಲ ಭಾರತ ಯಾದವ ಮಹಾಸಂಸ್ಥಾನದ ಶ್ರೀಕೃಷ್ಣ ಯಾದವಾನಂದ ಮಹಾಸ್ವಾಮೀಜಿ, ನೂತನ ದೇವಸ್ಥಾನದ ಕಟ್ಟಡ ಸಮಿತಿಯ ಅಧ್ಯಕ್ಷ ಮತ್ತು ನಿವೃತ್ತ ಐಎಫ್‌ಎಸ್ ಅಧಿಕಾರಿ ಬಿ.ಚಿಕ್ಕಪ್ಪಯ್ಯ ಮತ್ತಿತರರು ಪಾಲಗೊಂಡಿದ್ದರು.
ನಂತರ ರಾತ್ರಿ ಶ್ರೀ ಜುಂಜಪ್ಪಸ್ವಾಮಿ ಕಾವ್ಯ ಗಾಯಕರಾದ ಕೊರಲೆ ತಿಮ್ಮಯ್ಯ ಅವರಿಂದ ಗಣೆ ವಾದನ,
ಕರ್ನಾಟಕ ಜನಪದ ವಿಶ್ವವಿದ್ಯಾನಿಲಯದ ಸೋಬಾನೆ ಹಾಡುಗಾರ ಮತ್ತು ಜನಪದ ಕಲಾವಿದ ಮೋಹನ್ ಕುಮಾರ್ ಅವರಿಂದ ಜುಂಜಪ್ಪಸ್ವಾಮಿಯ ಪದಗಳನ್ನು ವಾಚಿಸಿದರು. ಕೋಲಾಟ, ಗಣೆ, ಸೋಬಾನೆ ಪದಗಳು, ಕೋಲಾಟ ಮತ್ತಿತರರ ಕಾರ್ಯಕ್ರಮಗಳು ನಡೆದವು.
ಶ್ರೀರಂಗನಾಥಸ್ವಾಮಿ ಬ್ರಹ್ಮರಥೋತ್ಸವ
ಹುಳಿಯಾರು: ಹೋಬಳಿಯ ಕಾರೆಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿಯ ಮೂಲಸ್ಥಾನದಲ್ಲಿ ದನಗಳ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಮಾ.14ರ ಶುಕ್ರವಾರದಂದು ಸಂಭ್ರಮ ಹಾಗೂ ವೈಭವಯುತವಾಗಿ ಭಕ್ತರ ಹರ್ಷೋದ್ಘಾರದೊಂದಿಗೆ ಜರುಗಿತು.
 ಕಳೆದ ಮೂರುದಿನಗಳಿಂದ ಜಾತ್ರೆ ಅಂಗವಾಗಿ ಕಂಕಣ, ಅಂಕುರಾರ್ಪಣೆ, ಧ್ವಜಾರೋಹಣ,  ಉಯ್ಯಾಲೋತ್ಸವ, ಗಜಾರೋಹಣ, ಗರುಡ ವಾಹನೋತ್ಸವ, ಅನ್ನಸಂತರ್ಪಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದಿದ್ದು ಮುಂಜಾನೆಯಿಂದಲೆ ರಥೋತ್ಸವದ ಪೂಜಾ ಕೈಂಕರ್ಯ ನಡೆದು, ವಿಪ್ರರು  ಸ್ವಾಮಿಯನ್ನು ಮೂಲ ದೇವಸ್ಥಾನದಿಂದ ಮಂಗಳವಾಧ್ಯ ಹಾಗೂ ಪೂರ್ಣಕುಂಭದೊಂದಿಗೆ  ಸಹಸ್ರಾರು ಭಕ್ತರು ಉದ್ಘೋಷದೊಂದಿಗೆ ಕರೆತಂದು ವೈಭವಯುತವಾಗಿ ಅಲಂಕರಿಸಿದ್ದ ರಥದಲ್ಲಿ ಶ್ರೀ ಸ್ವಾಮಿಯವರನ್ನು ಕುಳ್ಳಿರಿಸಿದರು. ರಥದ ಮುಂದಿನ ಅಂಬನ್ನು ತುಂಡರಿಸುವ ಮೂಲಕ ಭಕ್ತರ ಜೈಕಾರದೊಂದಿಗೆ, ಬೆನಕನಹಳ್ಳಿ ರಂಗನಾಥಸ್ವಾಮಿ, ಹೊಯ್ಸಲಕಟ್ಟೆ ಕರಿಯಮ್ಮ ಯರೆಹಳ್ಳಿ ಕರಿಯಮ್ಮ ಹಾಗೂ ಇತರ ದೇವರ ಸಮ್ಮುಖದಲ್ಲಿ ರಥವನ್ನು ಎಳೆಯುವ ಮೂಲಕ ರಥೋತ್ಸವ ನೆರವೇರಿಸಲಾಯಿತು. ಸುಡುವ ಬಿಸಿಲನ್ನೂ ಲೆಕ್ಕಿಸದೆ ಬೆಳಿಗ್ಗೆಯಿಂದಲೇ ಕಿಕ್ಕಿರಿದು ನೆರೆದಿದ್ದ ಭಕ್ತರು ರಥದ ಮೇಲೆ  ಸರ್ವಾಲಂಕೃತಗೊಂಡಿದ್ದ ಸ್ವಾಮಿಯನ್ನು ಕಂಡು ಕೈಮುಗಿದು ತಮ್ಮ ಭಕ್ತಿಯನ್ನು ಸಮರ್ಪಿಸಿದರೆ ಕೆಲವರು  ತೇರಿಗೆ ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.