ತುಮಕೂರು

ಬಿಎಸ್‌ವೈ ಬಿಜೆಪಿಯ ಹರಕೆಯ ಕುರಿ

Published On :

ತುರುವೇಕೆರೆ: ಯಡಿಯೂರಪ್ಪನವರೇ, ನಿಮ್ಮನ್ನು ನಂಬಿ ಲಕ್ಷಾಂತರ ಕಾರ್ಯಕರ್ತರು ನಿಮ್ಮ ಹಿಂದೆ ಬಂದರು. ನೀವು ಬಿಜೆಪಿಗೆ ಹೋಗುವಾಗ ನಿಮ್ಮನ್ನು ಮಾತ್ರ ಆದರದಿಂದ ಸ್ವಾಗತಿಸಿದ ಬಿಜೆಪಿ ನಾಯಕರು ತಮ್ಮೊಂದಿಗಿದ್ದ ಲಕ್ಷಾಂತರ ಕಾರ್ಯಕರ್ತರು ಹಾಗೂ ಮುಖಂಡರನ್ನು ಕಡೆಗಣಿಸಿದರು. ಪಕ್ಷದಲ್ಲಿ ನಿಮ್ಮೊಂದಿಗಿದ್ದ  ಕಾರ್ಯಕರ್ತರನ್ನೂ ನೀವೂ ಮರೆತಿರಿ ಎಂದು ವಿಧಾನ ಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ್ ಟೀಕಿಸಿದರು.
 ಈಗ ರತ್ನಗಂಬಳಿ ಹಾಸಿ ನಿಮ್ಮನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಬಿಜೆಪಿ ಮುಖಂಡರು ತಮ್ಮನ್ನು ಮೂಲೆ ಗುಂಪು ಮಾಡುವುದು ನಿಶ್ಚಿತ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿಮ್ಮನ್ನು ಮತ್ತು ಶೋಭಾ ಕರಂದಾಜ್ಲೆಯವರನ್ನು ಅಖಾಡಕ್ಕೆ ಇಳಿಸಿ ಸೋಲಿಸುವುದು ಖಚಿತ. ನೀವು ಬಿಜೆಪಿಯ ಹರಕೆಯ ಕುರಿಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ಪಟ್ಟಣದ ವಿರಕ್ತ ಮಠದ ಕಲ್ಯಾಣ ಮಂಟಪದಲ್ಲಿ ತಮ್ಮ ಬೆಂಬಲಿಗರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ತಾವು ಯಡಿಯೂರಪ್ಪನವರೊಂದಿಗೆ ಇದ್ದ ಸ್ನೇಹವನ್ನು ಕಳೆದುಕೊಂಡು ಕಾಂಗ್ರೆಸ್‌ನತ್ತ ಹೆಜ್ಜೆ ಇಡುತ್ತಿರುವುದನ್ನು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡುವ ವೇಳೆ ಅವರಿಂದ ಈ ಮಾತು ಬಂತು.
ಯಡಿಯೂರಪ್ಪನವರು ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬರುತ್ತದೆ. ತಾವು ಕೇಂದ್ರ ಮಂತ್ರಿ ಆಗುತ್ತೇನೆ ಎಂದು ಕನಸು ಕಾಣುತ್ತಿದ್ದಾರೆ. ಅದು ಖಂಡಿತ ಸಾಧ್ಯವಿಲ್ಲ. ಏಕೆಂದರೆ ಇವರಿಗೆ ಮಂತ್ರಿ ಸ್ಥಾನ ತಪ್ಪಿಸಲು ಅನೇಕಾನೇಕ ಬಿಜೆಪಿ ನಾಯಕರು ತುದಿಗಾಲಲ್ಲಿ ನಿಂತಿದ್ದಾರೆ. ಬಿಜೆಪಿಯ ಮುಖಂಡರು ನೀಡಿರುವ ಬಣ್ಣ ಬಣ್ಣದ ಮಾತಿಗೆ ಮರುಳಾಗಿರುವ ಯಡಿಯೂರಪ್ಪನವರು ರಾಜಕೀಯವಾಗಿ ಬೆಳೆಯಲು ಮುಖಂಡರು ಖಂಡಿತವಾಗಿಯೂ ತೊಡರುಗಾಲು ಹಾಕುತ್ತಾರೆ ಎಂದು ಭವಿಷ್ಯ ನುಡಿದರು ಎಂ.ಡಿ.ಲಕ್ಷ್ಮೀನಾರಾಯಣ್.
ಮುಖ್ಯಮಂತ್ರಿಗಳಿಂದ ಭರವಸೆ: ತಾವು ವಿಧಾನ ಪರಿಷತ್ ಸದಸ್ಯರಾಗಿದ್ದು ಹಾಗೂ ನೇಕಾರ ಸಮುದಾಯದ ಪ್ರಮುಖ ಮುಖಂಡರೂ ಆಗಿರುವ ಕಾರಣ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತಮ್ಮನ್ನು ಕಾಂಗ್ರೆಸ್ ಸೇರ್ಪಡೆಗೆ ಆಹ್ವಾನ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇರುವುದರಿಂದ ತಾವು ತಮ್ಮ ಬೆಂಬಲಿಗರೆಲ್ಲರೂ ಕಾಂಗ್ರೆಸ್ ಸೇರ್ಪಡೆಯಾಗುವುದು ಸೂಕ್ತ ಎಂಬ ನಿರ್ಣಯಕ್ಕೆ ಬಂದಿರುವುದಾಗಿ ಎಂ.ಡಿ.ಲಕ್ಷ್ಮೀನಾರಾಯಣ್ ಪ್ರಕಟಿಸಿದರು.
ಮಸಾಲಾ ಜಯರಾಂ ಸಹ ಕಾಂಗ್ರೆಸ್‌ಗೆ: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸುಮಾರು 55 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡಿದಿದ್ದ ಮಸಾಲಾ ಜಯರಾಂ ಅವರನ್ನೂ ಸಹ ಕಾಂಗ್ರೆಸ್‌ಗೆ ಸೇರ್ಪಡೆ ಗೊಳ್ಳುತ್ತಿರುವುದಾಗಿ ಎಂ.ಡಿ.ಎಲ್ ಹೇಳಿದರು. ಮಸಾಲಾ ಜಯರಾಂ ಮಾತನಾಡಿ ಎಂ.ಡಿ.ಎಲ್ ಹಾಗೂ ಕಾರ್ಯಕರ್ತರ ಅಭಿಪ್ರಾಯದ ಪ್ರಕಾರ ತಾವು ಕಾಂಗ್ರೆಸ್‌ಗೆ ಸೇರ್ಪಡೆಯಾಗುವುದಾಗಿ ನೆರೆದಿದ್ದ ಕಾರ್ಯಕರ್ತರ ಸಮ್ಮುಖ ಪ್ರಕಟಿಸಿದರು.
ಬುಧವಾರ ಸೇರ್ಪಡೆ : ಎಂ.ಡಿ.ಎಲ್, ಮಸಾಲಾ ಜಯರಾಂ ಹಾಗೂ ಇತರ ಸಾವಿರಾರು ಮಂದಿ ಮುಖಂಡರು, ಕಾರ್ಯಕರ್ತರು ಬುಧವಾರ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದಾಗಿ ವಕೀಲ ಮುದ್ದೇಗೌಡ ಪ್ರಕಟಿಸಿದರು.
ಸಭೆಯಲ್ಲಿ ಮಾಚೇನಹಳ್ಳಿ ರಾಮಣ್ಣ, ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಎಚ್.ಆರ್.ರಾಮೇಗೌಡ, ತಾವರೇಕೆರೆ ರಾಜಣ್ಣ, ದೊಡ್ಡೇರಿ ರಾಜಣ್ಣ, ಇಂತಿಯಾಜ್, ಬಳ್ಳಾರಿಯ ಕೈಗಾರಿಕೋದ್ಯಮಿ ಹಾಗೂ ಕೆಜೆಪಿಯ ಹಿಂದುಳಿದ ವರ್ಗಗಳ ಮುಖಂಡ ದೇವಾನಂದ್, ಮುದಿಗೆರೆ ಕೆಂಪೇಗೌಡ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿ.ಕೆ.ಶಂಕರ್, ಬ್ಯಾಲಹಳ್ಳಿ ಶಂಕರ್, ತ್ರೈಲೋಕಿ, ಮಾಯಸಂದ್ರ ಯಶೋಧರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.