ಕಿಡಿಗೇಡಿಗಳಿಂದ ಅರಣ್ಯಕ್ಕೆ ಬೆಂಕಿ: ನೂರಾರು ಮರಗಳು ನಾಶ
ಅರಕಲಗೂಡು: ಕಿಡಿಗೇಡಿ ಕೃತ್ಯ ಮತ್ತು ನಿರ್ಲಕ್ಷ್ಯ ಧೋರಣೆಯಿಂದಾಗಿ ತಾಲೂಕಿನ ಹಲವೆಡೆ ಬೆಂಕಿ ಅನಾಹುತಗಳು ಬುಧವಾರ ನಡೆದಿದ್ದು, ಭಾರಿ ಪ್ರಮಾಣದ ಅರಣ್ಯ ನಾಶ ಹಾಗೂ ಇನ್ನಿತರೆ ಕೃಷಿ ಸಂಪತ್ತು ನಾಶವಾಗಿದೆ.
ತಾಲೂಕಿನ ಯಲಗತ್ತವಳ್ಳಿ ಗ್ರಾಮದ ಸಮೀಪ ಗುಬ್ಬಿ ಅರಣ್ಯ ಪ್ರದೇಶದಲ್ಲಿ ಕೆಲ ಕಿಡಿಗೇಡಿಗಳು ಬೆಂಕಿ ಹಾಕಿದ ಪರಿಣಾಮ ಸಾವಿರಾರು ಸಂಖ್ಯೆಯಲ್ಲಿದ್ದ ಭಾರಿ ಮರಗಳು ಸುಟ್ಟು ಭಸ್ಮವಾಗಿವೆ. ದಿಢೀರನೆ ಈ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಕೆಲವೇ ಸಮಯದಲ್ಲಿ ಇಡೀ ಕಾಡನ್ನು ಆವರಿಸಿ, ಮರಗಳನ್ನು ಕೆನ್ನಾಲಿಗೆಯಲ್ಲಿ ಸುಟ್ಟು ಭಸ್ಮ ಮಾಡಿತು. ಪರಿಣಾಮ ಅರಣ್ಯ ಪ್ರದೇಶ ಸುಟ್ಟು ಕರುಕಲಾಗಿ ಬರಡು ಭೂಮಿಯಂತಾಯಿತು.
ಜೀವ ಸಂಕುಲ ನಾಶ: ತಾಲೂಕಿನ ಯಗಟಿ, ಅಜ್ಜೂರು, ಯಲಗತ್ತವಳ್ಳಿ, ಹೊಸಳ್ಳಿ ಹಾಗೂ ಜೋಡಿಗುಬ್ಬಿ ಗ್ರಾಮಗಳ ಒಳಭಾಗದಲ್ಲಿ ಸುಮಾರು 2500 ಎಕರೆ ಪ್ರದೇಶ ಅರಣ್ಯದಿಂದ ಕೂಡಿದೆ. ಇಲ್ಲಿ ನೀಲಗಿರಿ,ಅಕೇಶಿಯ, ಸುರಗಿ ಹಾಗೂ ಕಾಡು ಜಾತಿಯ ಮರಗಳು ಇವೆ. ಅಲ್ಲದೇ, ಕಾಡುಹಂದಿ,ನವಿಲುಗಳು ಮೊಲ ಸೇರಿದಂತೆ ಇತರೆ ಪಕ್ಷಿಗಳು ಇಲ್ಲಿ ಅಧಿಕ ಸಂಖ್ಯೆಯಲ್ಲಿ ವಾಸಿಸುತ್ತಿದ್ದವು. ಇಂದು ಕಾಡಿಗೆ ಬಿದ್ದ ಬೆಂಕಿಯಿಂದ ಇಡೀ ಜೀವಸಂಕುಲ, ವನಸಂಪತ್ತು ಬೆಂಕಿಗೆ ಆಹುತಿಯಾಗಿದೆ. ಜನ ವಸತಿ ಪ್ರದೇಶದಿಂದ ಸ್ವಲ್ಪ ದೂರದಲ್ಲಿರುವುದರಿಂದ ಜನರು ಸ್ವಯಂಪ್ರೇರಿತವಾಗಿ ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರಾದರೂ, ಅದು ಸಾಧ್ಯವಾಗಿಲ್ಲ. ಅಲ್ಲದೇ ಅರಣ್ಯ ಪ್ರದೇಶದ ಸುತ್ತ ಮುತ್ತ ಯಾವುದೇ ರೀತಿಯ ಕೆರೆಗಳು ಕೊಳವೇ ಬಾವಿಗಳು ಕೂಡ ಇಲ್ಲವಾದರಿಂದ ಬೆಂಕಿ ನಂದಿಸಲು ಆಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಠಾಣೆ ಸಿಬ್ಬಂದಿ ವಾಹನದೊಂದಿಗೆ ಆಗಮಿಸಿದರೂ ಕೂಡ ಭಾರೀ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ಸಾಧ್ಯವಾಗಿಲ್ಲ.ಅಲ್ಲದೆ ಅರಣ್ಯ ಪ್ರದೇಶದಲ್ಲಿ ವಾಹನ ಹೋಗಲು ಜಾಗವಿಲ್ಲದ ಪರಿಣಾಮ ಕಾಣಿಸಿಕೊಂಡಿ ಬೆಂಕಿಯನ್ನು ಸಕಾಲದಲ್ಲಿ ನಂದಿಸಲು ಹರಸಹಾಸ ಪಡುತ್ತಿದ್ದದ್ದು ಕಂಡುಬಂದಿತು.ಇಷ್ಟೊಂದು ಪ್ರಮಾಣದ ಬೆಂಕಿ ಕಾಣಿಸಿಕೊಂಡು ಗಂಟೆಗಳೇ ಕಳೆದಿದ್ದರೂ ಕೂಡ ಅರಣ್ಯ ಇಲಾಖೆ ಸಿಬ್ಬಂದಿ ಒಬ್ಬರು ಸಹ ಸ್ಥಳದಲ್ಲಿ ಹಾಜರಿರಲಿಲ್ಲ. ರಸ್ತೆ ಪಕ್ಕದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಲು ಯಶಸ್ವಿಯಾದರು. ಇಷ್ಟೊಂದು ಪ್ರಮಾಣದ ಬೆಂಕಿ ಅನಾಹುತ ಅರಣ್ಯದಲ್ಲಿ ಕಂಡುಬಂದರೂ ಕೂಡ ಯಾವುದೇ ಅರಣ್ಯ ಸಿಬ್ಬಂದಿ ಹಾಜರಾಗದೇ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

