ತುಮಕೂರು

ಚುನಾವಣೆ ಶಕ್ತಿ ಕೇಂದ್ರ ಯಾರ ಬಳಿ?

Published On :

ತುಮಕೂರು: ಲೋಕಸಭಾ ಚುನಾವಣೆ ದಿನೇ ದಿನೇ ರಂಗು ಪಡೆಯುತ್ತಿದ್ದು ಹಲವಾರು ಲೆಕ್ಕಾಚಾರಗಳು ಆರಂಭವಾಗಿದೆ.
8 ವಿಧಾನಸಭಾ  ಕ್ಷೇತ್ರಗಳನ್ನೊಳಗೊಂಡ ತುಮಕೂರು ಲೋಕಸಭೆಯಲ್ಲಿ ಜಿ.ಪಂ., ಪುರಸಭೆ, ಪಟ್ಟಣ ಪಂಚಾಯತ್ ನಲ್ಲಿ ಜೆಡಿಎಸ್ ಪಾರುಪತ್ಯ ಮೆರೆದಿದೆ. ಹಾಗೆಯೇ ನಗರಸಭೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದರೆ ಕಾಂಗ್ರೆಸ್ ಮಹಾನಗರ ಪಾಲಿಕೆಯ ಅಧಿಕಾರ ಹಿಡಿದಿದೆ.
ತುಮಕೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಅತಿ ಹೆಚ್ಚು ಸ್ಥಾನ  ಗೆದ್ದಿದ್ದರೂ ಅಧಿಕಾರ ಹಿಡಿದಿರುವುದು ಕಾಂಗ್ರೆಸ್. ಜೆಡಿಎಸ್ 12 ಸ್ಥಾನ ಗಳಿಸಿತ್ತು. ಕಾಂಗ್ರೆಸ್ 11 ಸ್ಥಾನ ಗಳಿಸಿತ್ತು. ಆದರೆ ಕೆಜೆಪಿ ಬೆಂಬಲದೊಂದಿಗೆ ತುಮಕೂರು ಪಾಲಿಕೆ ಕಾಂಗ್ರೆಸ್ ಪಾಲಾಗಿದೆ. ಇನ್ನು ತುಮಕೂರು ತಾ.ಪಂ. ಬಿಜೆಪಿ ಕೈವಶದಲ್ಲಿದೆ. ಇಲ್ಲಿರುವುದು ಕಾಂಗ್ರೆಸ್ ಶಾಸಕ.
ಇನ್ನು ತಿಪಟೂರು ನಗರಸಭೆ ಹಾಗೂ ತಾಲೂಕು ಪಂಚಾಯತ್ ಗಳೆರೆಡೂ ಬಿಜೆಪಿ ಪಾಲಾಗಿದೆ. ಆದರೆ ತಿಪಟೂರಿನಲ್ಲಿರುವುದು ಕಾಂಗ್ರೆಸ್ ಶಾಸಕರು. ಇನ್ನು ಜೆಡಿಎಸ್‌ನ ಎಸ್.ಆರ್. ಶ್ರೀನಿವಾಸ್ ಗುಬ್ಬಿ ಶಾಸಕರಾಗಿದ್ದು ಇಲ್ಲಿನ ಪಟ್ಟಣ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಜಾತ್ಯತೀತ ಜನತಾದಳದ ವಶದಲ್ಲಿದೆ. ಕೊರಟಗೆರೆ ಪಟ್ಟಣ ಪಂಚಾಯತ್ ವಿಷಯಕ್ಕೆ ಬಂದರೆ ಇಲ್ಲಿರುವುದು ಜೆಡಿಎಸ್‌ನ ಸುಧಾಕರಲಾಲ್ ಶಾಸಕರು. ಹಾಗೆಯೇ ಪಟ್ಟಣ ಪಂಚಾಯತ್ ಕಾಂಗ್ರೆಸ್ ತೆಕ್ಕೆಯಲ್ಲಿದ್ದರೆ ತಾಲೂಕು ಪಂಚಾಯತ್ ಜೆಡಿಎಸ್ ವಶದಲ್ಲಿದೆ.
ಹಾಗೆಯೇ ಚಿಕ್ಕನಾಯಕನಹಳ್ಳಿಯಲ್ಲಿ ಜೆಡಿಎಸ್‌ನ ಸುರೇಶ್ ಬಾಬು ಶಾಸಕರು. ಇಲ್ಲಿನ ಪುರಸಭೆ   ಅನಾದಿಕಾಲದಿಂದಲೂ ಜೆಡಿಎಸ್ ವಶದಲ್ಲಿದೆ. ಹಾಗೆಯೇ ತಾಲೂಕು ಪಂಚಾಯತ್ ನಲ್ಲಿ ಅತಿ ಹೆಚ್ಚು ಸದಸ್ಯರು ಜೆಡಿಎಸ್ ಪಕ್ಷದವರು.
ಮಧುಗಿರಿಯಲ್ಲಿ ಕಾಂಗ್ರೆಸ್‌ನ ಕೆ.ಎನ್. ರಾಜಣ್ಣ ಶಾಸಕರು. ಇಲ್ಲಿ ಪುರಸಭೆ ಮತ್ತು ತಾಲೂಕು ಪಂಚಾಯತ್ ಕಾಂಗ್ರೆಸ್ ವಶದಲ್ಲಿದೆ. ಹಾಗೆಯೇ ತುರುವೇಕೆರೆಯಲ್ಲಿ ಜೆಡಿಎಸ್‌ನ ಎಂ.ಟಿ. ಕೃಷ್ಣಪ್ಪ ಶಾಸಕರು. ಇಲ್ಲಿನ ತಾ.ಪಂ. ಜೆಡಿಎಸ್ ವಶದಲ್ಲಿದೆ. ಪಟ್ಟಣ ಪಂಚಾಯತ್ ನಲ್ಲಿ ಅತಿ ಹೆಚ್ಚು ಸದಸ್ಯರಿರುವುದು ಜೆಡಿಎಸ್ ಪಕ್ಷದವರು.
ಇನ್ನು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯ ಸುರೇಶ್‌ಗೌಡ ಶಾಸಕರು.
4 ರಲ್ಲಿ ಜೆಡಿಎಸ್ ಶಾಸಕರು: ಸ್ಥಳೀಯ ಸಂಸ್ಥೆಗೆ ಆಯ್ಕೆಯಾಗಿರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಜೆಡಿಎಸ್ ತುಸು ಮುಂದಿದೆ. ತುಮಕೂರು ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ 4 ರಲ್ಲಿ ಜೆಡಿಎಸ್ ಶಾಸಕರಿದ್ದಾರೆ, ಮೂರರಲ್ಲಿ ಕಾಂಗ್ರೆಸ್ ಇದ್ದರೆ ಬಿಜೆಪಿ ಯಲ್ಲಿ ಒಬ್ಬರು ಮಾತ್ರ ಇದ್ದಾರೆ.
ಉಳಿದಂತೆ ತುಮಕೂರು ಜಿ.ಪಂ. ಕೂಡ ಜೆಡಿಎಸ್ ವಶದಲ್ಲಿದೆ. ಜಿ.ಪಂ. ಅಧ್ಯಕ್ಷ, ಉಪಾಧ್ಯಕ್ಷರಿಬ್ಬರು ಜೆಡಿಎಸ್‌ನವರೇ ಆಗಿದ್ದಾರೆ. ಇಷ್ಟೆಲ್ಲಾ ಇದ್ದರೂ ಸತತ ಎರಡು ಬಾರಿ ಲೋಕಸಭೆಗೆ  ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದಾರೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಥರೇವಾರಿ ಲೆಕ್ಕಾಚಾರಗಳು ನಡೆಯುತ್ತಿವೆ. ಈ ಪೈಕಿ ಸ್ಥಳೀಯ ಸಂಸ್ಥೆಗಳು ಯಾರ ವಶದಲ್ಲಿದೆ ಎಂಬ ಚರ್ಚೆಯಲ್ಲಿ ರಾಜಕೀಯ ಪಕ್ಷಗಳು ಮುಳುಗಿವೆ.

ಉಗಮ ಶ್ರೀನಿವಾಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.