ಗೆಲ್ಲುವುದೊಂದೆ ನಮ್ಮ ಗುರಿ: ಸುರೇಶ್
ತುಮಕೂರು: ಒಡೆದ ಮನಸ್ಸುಗಳು ಒಂದಾಗಿವೆ. ಈ ಬಾರಿಯ ತುಮಕೂರು ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದೊಂದೆ ನಮ್ಮ ಮುಂದಿರುವ ಗುರಿ, ಕಾರ್ಯಕರ್ತರು ಕಾಯ ವಾಚ ಮನಸಾ ಬಿಜೆಪಿ ಲೋಕಸಭಾ ಅಭ್ಯರ್ಥಿ ಜಿ.ಎಸ್. ಬಸವರಾಜು ಅವರ ಗೆಲವಿಗೆ ಶ್ರಮಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ಕರೆ ನೀಡಿದರು.
ಅವರು ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ತುಮಕೂರು ನಗರದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಲೋಕಸಭಾ ಉಸ್ತುವಾರಿ ವಹಿಸಿರುವ ನಿರ್ಮಲ್ ಕುಮಾರ್ ಸುರಾನ ಮಾತನಾಡಿ ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸಿದ ಯು.ಪಿ.ಎ, ಸರ್ಕಾರ ಮಾಡಿರುವ ಕಳಪೆ ಸಾಧನೆಯಿಂದ ಆಗತ್ಯ ವಸ್ತುಗಳ ಬೆಲೆ ಗಗನಕ್ಕೆರಿದೆ ಜನ ಸಮಾನ್ಯರನ್ನು ಕಷ್ಟದ ಅಂಚಿಗೆ ಯುಪಿಎ ಸರ್ಕಾರ ತಳ್ಳಿದೆ.
ಆಮದು ವಸ್ತುಗಳನ್ನು ನಿಯಂತ್ರಿಸಿ ಸ್ವದೇಶಿ ವಸ್ತುಗಳನ್ನು ರಪ್ತು ಮಾಡುವುದರ ಮೂಲಕ ಗುಜರಾತ್ ಭಾರತದ ಅಭಿವೃದ್ಧಿಯ ರಾಜ್ಯವಾಗಿದೆ. ಇಂತಹ ಸಾಧನೆ ಮಾಡಿದ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡಲು ಅವಿರತವಾಗಿ ಶ್ರಮಿಸಬೇಕೆಂದು ಕಾರ್ಯಕರ್ತರಿಗೆ ತಿಳಿಸಿದರು.
ರಾಜಿಗೆ ಒಳಗಾಗಿಲ್ಲ: ಹಾಲಿ ಸಂಸದರು ಹಾಗೂ ಬಿಜೆಪಿಯ ಲೋಕಸಭಾ ಅಭ್ಯರ್ಥಿ ಜಿ.ಎಸ್. ಬಸವರಾಜು ಮಾತನಾಡಿ ಅಭಿವೃದ್ಧಿ ಕಾರ್ಯದಲ್ಲಿ ಯಾವದೇ ರಾಜಿಗೆ ಒಳಗಾಗಿಲ್ಲ. ರಾಜ್ಯದ ಯಾವುದೇ ಸಂಸದ ಮಾಡದ ಅಭಿವೃದ್ಧಿಯನ್ನು ತುಮಕೂರು ಜಿಲ್ಲೆಗೆ ಸಂಸದನಾಗಿ ಮಾಡಿರುವ ಯೋಜನೆಗಳೆ ಸಾಕ್ಷಿ. ವಿರೋಧ ಪಕ್ಷದವರಿಗೆ ದಾಖಲೆ ಸಮೇತ ಸಾಧನೆಗಳ ಕಿರು ಹೊತ್ತಿಗೆ ಶೀಘ್ರದಲ್ಲೇ ನೀಡುತ್ತೇನೆ. ನನ್ನ ಸಾಧನೆಯನ್ನು ಶೂನ್ಯ ಎನ್ನುವವರು ಕಳೆದ 5 ವರ್ಷಗಳಿಂದ ಎಲ್ಲಿದ್ದರು ಎಂದು ಪ್ರಶ್ನಿಸಿದರು.
ಮತದಾರ ಇವರನ್ನು ಭೇಟಿಯಾಗಲು ರಾಜಧಾನಿಗೆ ಹೋಗಿ ಭೇಟಿ ಮಾಡಬೇಕಾ? ಮತದಾರ ಪ್ರಭು ಜನರ ಮಧ್ಯೆ ಇರುವ ಹಾಗೂ ಜನರಿಗೆ ಸುಲಭವಾಗಿ ಸಿಗುವ ಸಂಸದ ಬೇಕೋ ಎಂದು ಕಾರ್ಯಕರ್ತರು ಜನರ ಬಳಿ ಹೋಗಿ ತಿಳಿಸಿ ಮತ ಯಾಚಿಸಬೇಕೆಂದು ತಿಳಿಸಿದರು.
ಮನೆ ಮನೆಗೆ ತೆರಳಿ ಮತಯಾಚಿಸಿ: ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ. ನಂದೀಶ್ ಮಾತನಾಡಿ ಮನೆ ಮನೆಗೆ ತೆರಳಿ ಮತವನ್ನು ಯಾಚಿಸುವ ಜೊತೆಗೆ ಬಿಜೆಪಿ ಸರ್ಕಾರಗಳ ಸಾಧನೆಯನ್ನು ತಲುಪಿಸಿ ಕಡ್ಡಾಯ ಮತದಾನಕ್ಕೆ ಮತದಾರರನ್ನು ಪ್ರೇರೆಪಿಸಬೇಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರತ್ನಮ್ಮ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪ್ರೇಮಾ ಹೆಗ್ಗಡೆ, ಮಹಾನಗರ ಪಾಲಿಕೆ ಸದಸ್ಯರಾದ ಬಾವಿಕಟ್ಟೆ ನಾಗಣ್ಣ, ಕರುಣಾರಾಧ್ಯ, ಡೆಲ್ಟಾ ರವಿ, ವೆಂಕಟೇಶ್, ಬಿಜೆಪಿ ನಗರಾಧ್ಯಕ್ಷ ಕೆ.ಪಿ. ಮಹೇಶ್, ಕೊಪ್ಪಲ್ ನಾಗರಾಜು, ಕಮಲಮ್ಮ, ಎಚ್.ಎಂ. ರವೀಶ್ ಇದ್ದರು.
ಜೆಸಿಎಂ ಬೆಂಬಲ ಅನುಮಾನ
ಚಿಕ್ಕನಾಯಕನಹಳ್ಳಿ: ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಅವರನ್ನು ಯಾವುದೇ ಕಾರಣಕ್ಕೂ ಬೆಂಬಲಿಸಬಾರದೆಂದು ಜೆ.ಸಿ. ಮಾಧುಸ್ವಾಮಿ ಬೆಂಬಲಿಗರು ಸಭೆಯಲ್ಲಿ ಒತ್ತಾಯಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷವನ್ನು ಬೆಂಬಲಿಸಬೇಕೆಂದು ನಿರ್ಣಯ ಕೈಗೊಳ್ಳಲು ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ ಕರೆದಿದ್ದ ಸಭೆಯಲ್ಲಿ ಬಹುತೇಕ ಕಾರ್ಯಕರ್ತರು ಜಿ.ಎಸ್. ಬಸವರಾಜು ಅವರನ್ನು ಬೆಂಬಲಿಸಬಾರದೆಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಾಲ್ಕು ದಶಕಗಳಿಂದಲು ರಾಜಕೀಯದಲ್ಲಿರುವ ಬಸವರಾಜು ಅವರು ಯಾವುದೇ ಉತ್ತಮ ಕಾರ್ಯ ಮಾಡಿಲ್ಲ. ಬದಲಿಗೆ ಜಿಲ್ಲೆಯಲ್ಲಿ ಉತ್ತಮ ರಾಜಕಾರಣಿಗಳು ಬೆಳೆಯದಂತೆ ಕುತಂತ್ರ ಮಾಡಿ ತುಳಿದಿದ್ದಾರೆ. ಹೀಗಿರುವಾಗ ನಾವು ಯಾವ ಪುರುಷಾರ್ಥಕ್ಕೆ ಅವರನ್ನು ಬೆಂಬಲಿಸಬೇಕು ಎಂದು ತಮ್ಮ ನಾಯಕನನ್ನು ಪ್ರಶ್ನಿಸಿದರು.
ಕೆಲವು ಕಾಯಕರ್ತರು ಯಾವುದಾದರೊಂದು ರಾಷ್ಟ್ರೀಯ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಸಲಹೆ ನೀಡಿದರೆ, ಕೆಲವರು ಕಾದು ನೋಡುವ ತಂತ್ರ ಅನುಸರಿಸುವ ಸಲಹೆ ನೀಡಿದರು.
ತಿಮ್ಲಾಪುರದ ಶಂಕರಯ್ಯ ಮಾತನಾಡಿ ನಮ್ಮ ಕಾರ್ಯಕರ್ತರು ನಾಯಕರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು ಎಂದರು. ಇದರಿಂದ ನಮ್ಮ ನಾಯಕರ ವರ್ಚಸ್ಸಿಗೆ ಧಕ್ಕೆ ಬರುತ್ತದೆ ಎಂಬುದನ್ನು ಕಾರ್ಯಕರ್ತರು ಅರಿತು ಕೊಳ್ಳಬೇಕೆಂದರು. ಅಂತಿಮವಾಗಿ ಯಾವುದೇ ನಿರ್ಧಾರಕ್ಕೆ ಬರಲಾಗದೆ ಮುಂದೆ ಮತ್ತೊಂದು ದಿನ ಸಭೆ ಕರೆದು ತೀರ್ಮಾನ ಕೈಗೊಳ್ಳುವ ನಿರ್ಣಯ ಮಾಡಿ ಸಭೆಯನ್ನು ಮುಕ್ತಾಯ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

