ಮತದಾರರ ಋಣ ತೀರಿಸಲು ಸದಾ ಸಿದ್ಧ
ಕ,ಪ್ರ,ವಾರ್ತೆ ಮಧುಗಿರಿ ಮಾ. 28
ತುಮಕೂರು ಲೋಕಸಭಾ ಕ್ಷೇತ್ರದ ಸಂಸದನಾಗಿ ಕ್ಷೇತ್ರದ ಹತ್ತು ಹಲವು ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ 1ಲಕ್ಷ 25 ಸಾವಿರ ಕೋಟಿ ರು.ಅನುದಾನ ಪಡೆದಿದ್ದೇನೆ. ಮತದಾರರ ಋಣ ತಿರೀಸಲು ಸದಾ ಸಿದ್ಧನಿದ್ದೇನೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಹೇಳಿದರು.
ಇಲ್ಲಿನ ಎಂಎನ್ಕೆ ಸಮುದಾಯ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆ ನಂತರ ತಾ. ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಈ ವಿಷಯ ತಿಳಿಸಿದ ಅವರು, ಪ್ರಧಾನಿ ಅಭ್ಯರ್ಥಿ ನಮೋ ಶಕ್ತಿ ಏನು ಎಂಬುದನ್ನು ಅರಿತ ಮಧುಗಿರಿ ಕ್ಷೇತ್ರದ ಜನತೆ ಕೂಡ ಕಳೆದ ಸಲಕ್ಕಿಂತ ಈ ಬಾರಿ ಅತ್ಯಧಿಕ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಜೆಡಿಎಸ್ ಅಭ್ಯರ್ಥಿ ಈ ಕ್ಷೇತ್ರಕ್ಕೆ ಸಂಬಂಧ ಪಟ್ಟವರೇ ಅಲ್ಲ, ಇನ್ನು ಕಾಂಗ್ರೆಸ್ ಅಭ್ಯರ್ಥಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವವರು. ಈ ಇಬ್ಬರು ಅಭ್ಯರ್ಥಿಗಳು ಹಣ, ಜಾತಿ ಆಧಾರದ ಮೇಲೆ ಸ್ಪರ್ಧಿಸಿದ್ದಾರೆ. ಆದರೆ ಬಿಜೆಪಿ ಭ್ರಷ್ಟಾಚಾರ ನಿರ್ಮೂಲನೆ, ಭಾರತಕ್ಕಾಗಿ ಮತ ಹಾಗೂ ಮೋದಿ ಈ ದೇಶದ ಪ್ರಧಾನಿಯಾಗಲಿ ಎಂಬ ಧ್ಯೇಯೋದ್ದೇಶದಿಂದ ಚುನಾವಣೆಗೆ ಸಜ್ಜಾಗಿದ್ದೇವೆ ಎಂದು ಬಸವರಾಜು ತಿಳಿಸಿದರು. ಮಧುಗಿರಿ ಮಾರ್ಗ ಅಂತಾರಾಜ್ಯ ಸಂಪರ್ಕ ಕಲ್ಪಿಸುವ ರಸ್ತೆ ಅಬಿವೃದ್ಧಿ ಕಾಮಗಾರಿಗೆ 950 ಕೋಟಿ ರು.ಯೋಜನೆ ಸಿದ್ಧವಿದ್ದು ಕೇಂದ್ರದ ಅನುಮೋದನೆ ಪಡೆಯುವ ಮುನ್ನ ಚುನಾವಣೆ ಘೋಷಣೆ ಆದ ಹಿನ್ನೆಲೆಯಲ್ಲಿ ಈ ಯೋಜನೆ ಅನುಷ್ಠಾನ ತಡವಾಗಿದೆ. ಆಂಧ್ರದ ಅನಂತಪುರದಿಂದ-ಮಧುಗಿರಿ ಮಾರ್ಗ ಕೇರಳದ ತ್ರಿವೇಂಡ್ರಂಗೆ ಕಲ್ಪಿಸುವ ರಸ್ತೆ ಇದಾಗಿದ್ದು ಈ ರಸ್ತೆ ನಿರ್ಮಾಣವಾದರೆ ಆಂಧ್ರ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಸಂಪರ್ಕ ಸುಲಭವಾಗಲಿದೆ ಎಂದರು.
ಕಾಮಗಾರಿ ಕೈಗೊಳ್ಳಬೇಕಿದೆ: ತುಮಕೂರು-ರಾಯದುರ್ಗ ರೇಲ್ವೆ ಕಾಮಗಾರಿ ಆಂಧ್ರದಲ್ಲಿ ಪ್ರಗತಿಯಲ್ಲಿದ್ದು ಕರ್ನಾಟಕದಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಹಣ ಮೀಸಲಿದ್ದು ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ಅದೇ ರೀತಿ ಶಿರಾ-ಗೌರಿಬಿದನೂರು ಮಧ್ಯೆ 74 ಕಿಮೀ.ರೇಲ್ವೆ ಸಂಪರ್ಕದ ಯೋಜನೆಯಿದ್ದು ಇದರಿಂದ ಗೌರಿಬಿದನೂರು-ಮಧುಗಿರಿ-ಶಿರಾ ಈ 3 ನಗರಗಳಲ್ಲಿ ರೇಲ್ವೆ ಜಂಕ್ಷನ್ಗಳು ಆಗುವುದರಿಂದ ಕೈಗಾರಿಕಾ ಪ್ರದೇಶಗಳಿಗೆ ಅನುಕೂಲವಾಗಲಿದೆ. ಮಧುಗಿರಿಯಲ್ಲಿ 100 ಎಕರೆ ಜಾಗದಲ್ಲಿ ಜವಳಿ ಪಾರ್ಕ್ ಆಗಲದೆ. ಇದರಿಂದ 4 ಸಾವಿರ ಮಂದಿಗೆ ಉದ್ಯೋಗ ದೊರೆಯಲಿದೆ ಎಂದ ಬಸವರಾಜು ನೀರಾವರಿ ಹೋರಾಟ ಕೈಗೆತ್ತಿಕೊಳ್ಳಲು ಜಿ.ಎಸ್.ಪರಮಶಿವಯ್ಯ ವರದಿ ಯಥಾವತ್ತು ಜಾರಿಗೆ ಡಾ. ಶಿವಕುಮಾರಸ್ವಾಮೀಜಿ ಅಧ್ಯಕ್ಷತೆಯಲ್ಲಿ ಹೋರಾಟ ಸಮಿತಿ ರಚಿಸಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

