ತುಮಕೂರು

ಸ್ವಾತಂತ್ರ್ಯ ಚೌಕದಿಂದ ಪ್ರಚಾರ ಆರಂಭಿಸಿದ ಸಿಪಿಐ

Published On :

ತುಮಕೂರು:  ಸ್ವಾತಂತ್ರ್ಯಚೌಕದಲ್ಲಿ ಹುತಾತ್ಮರ ಸ್ಮಾರಕಕ್ಕೆ ನಮನ ಸಲ್ಲಿಸುವುದರ ಮೂಲಕ ಸಿಪಿಐ ಲೋಕಸಭಾ ಚುನಾವಣಾ ಪ್ರಚಾರವನ್ನು ನಗರದಲ್ಲಿ ಆರಂಭಿಸಿತು.
ಸ್ವಾತಂತ್ರ್ಯ ಹೋರಾಟದ ತ್ಯಾಗ, ಬಲಿದಾನಗಳನ್ನೇ ಸ್ಫೂರ್ತಿಯಾಗಿಸಿಕೊಂಡು,  ಜಿಲ್ಲೆಯ ರೈತರು, ಕಾರ್ಮಿಕರು, ಹಿಂದುಳಿದವರು, ಅಲ್ಪಸಂಖ್ಯಾತರು, ಸಾಮಾನ್ಯರು ಸೇರಿದಂತೆ ಎಲ್ಲ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು, ಜಾತ್ಯತೀತ ನೆಲೆಗಟ್ಟಿನಲ್ಲಿ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಭರವಸೆಯೊಂದಿಗೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾಗಿ ಸಿಪಿಐ ತಿಳಿಸಿದೆ.
ಭಾರತ ಬ್ರಿಟಿಷರ ದಾಸ್ಯದಲ್ಲಿದ್ದಾಗ, 1925 ರಲ್ಲಿ ಸ್ಥಾಪಿತವಾದ ಕಮ್ಯೂನಿಸ್ಟ್ ಪಕ್ಷ, ಬ್ರಿಟಿಷರ ವಿರುದ್ಧ ತ್ಯಾಗ,  ಬಲಿದಾನಗಳ ಮುಖಾಂತರ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಸಿಪಿಐ ಪಕ್ಷದ ಮುಖಂಡರು ಪ್ರಮುಖ ಪಾತ್ರ ವಹಿಸಿದ್ದು, ಅಂದಿನಿಂದ ಇಂದಿನವರೆಗೆ, ರೈತ, ಕಾರ್ಮಿಕ, ದೀನ-ದಲಿತರ ಹೋರಾಟಗಳು, ಶೋಷಿತ ವರ್ಗದವರ ಪರವಾಗಿ ಧ್ವನಿ, ಭೂ ಮಾಲೀಕರ ವಿರುದ್ಧ ಹೋರಾಟ, ಸ್ತ್ರೀ ಸಬಲೀಕರಣಕ್ಕಾಗಿ, ಸಣ್ಣ ಕೈಗಾರಿಕೆಗಳ ಉಳಿವಿಗಾಗಿ, ವಿದ್ಯಾರ್ಥಿ-ಯುವಜನತೆಯ ಪರವಾಗಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧವಾಗಿ, ಭ್ರಷ್ಟಾಚಾರದ ವಿರುದ್ಧ, ಪಾಶ್ಚಿಮಾತ್ಯ ಓಲೈಕೆ ವಿದೇಶಾಂಗ ನೀತಿ, ಎಫ್‌ಡಿಐ ವಿರುದ್ಧ ನಿರಂತರ ಹೋರಾಟ ನಡೆಸುತ್ತಲೇ ಬಂದಿದೆ.
1969 ರಲ್ಲಿ ಬ್ಯಾಂಕ್ ರಾಷ್ಟ್ರೀಕರಣ, ಟೆನೆನ್ಸಿ ಕಾಯ್ದೆ, ರಾಜಧನ ಪದ್ಧತಿ ರದ್ದತಿ, 1995 ರಲ್ಲಿ ಅಸಂಘಟಿತ ಕಾರ್ಮಿಕರಿಗೆ ಸಮಗ್ರ ಶಾಸನ, 2004 ರಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, 2005 ರಲ್ಲಿ ಬಂದ ಮಾಹಿತಿ ಹಕ್ಕು ಕಾಯ್ದೆ, ಅರಣ್ಯ ಹಕ್ಕು ಕಾಯ್ಗೆ, ಹೀಗೆ ಹತ್ತು ಹಲವು ಯೋಜನೆಗಳು ಎಡಪಕ್ಷಗಳ ಪ್ರಣಾಳಿಕೆ ಮತ್ತು ಸರ್ಕಾರಕ್ಕೆ ಬಾಹ್ಯ ಬೆಂಬಲ ಷರತ್ತಿನಿಂದ ಬಂದ ಯೋಜನೆಗಳಾಗಿವೆ ಎಂಬುದು ಗಮನಾರ್ಹ ಎಂದು ಸಿಪಿಐ ತಿಳಿಸಿದೆ.
2 ಲಕ್ಷಕ್ಕಿಂತಲೂ ಹೆಚ್ಚು ಕಾರ್ಮಿಕರು: ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಿಪಿಐ ರಾಜ್ಯ ಮುಖಂಡ ಹಾಗೂ ಎಐಟಿಯೂಸಿ ರಾಜ್ಯ ಉಪಾಧ್ಯಕ್ಷ  ಶಿವಣ್ಣ, ತುಮಕೂರು ನಗರವೊಂದರಲ್ಲೇ, ಎಲ್ಲ ವಿಭಾಗಗಳಿಂದಲೂ 2 ಲಕ್ಷಕ್ಕಿಂತಲೂ ಹೆಚ್ಚು ಕಾರ್ಮಿಕ ವರ್ಗದವರಿದ್ದಾರೆ. ಜತೆಗೆ ಅವರ ಕುಟುಂಬದ ವರ್ಗದವರೂ ಇದ್ದಾರೆ. ವಿಶೇಷವಾಗಿ ಕಾರ್ಮಿಕ ವರ್ಗದವರೆಲ್ಲಾ ಒಗ್ಗೂಡಿ ಮತ ಚಲಾಯಿಸಿದಲ್ಲಿ, ಸಿಪಿಐ ಅಭ್ಯರ್ಥಿ ವಿ. ಚಿನ್ನಪ್ಪನವರ ಗೆಲವು ಖಚಿತ. ಕಾರ್ಮಿಕರು ಒಗ್ಗೂಡುವ ಸಮಯ ಬಂದೊದಗಿದೆ. ಅಷ್ಟೇ ಅಲ್ಲ ರೈತರೂ, ಸಾಮಾನ್ಯ ಜನತೆ ಒಗ್ಗೂಡಿ ಮತ ಚಲಾಯಿಸಿ, ಚಿನ್ನಪ್ಪನವರನ್ನು ಗೆಲ್ಲಿಸುವಂತೆ ಶಿವಣ್ಣ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.