ತುಮಕೂರು

ಶೋಷಣೆ ವಿರುದ್ಧ ಸಿಡಿದ ದಿನವೇ ಮೇ ದಿನ

Published On :

ಕ.ಪ್ರ.ವಾರ್ತೆ ್ಣ ತುಮಕೂರು ್ಣ ಮೇ 1
ಮೇ ಡೇ ಅಥವಾ ವಿಶ್ವ ಕಾರ್ಮಿಕರ ದಿನಾಚರಣೆ ಭಾಷೆ, ಜಾತಿ, ಧರ್ಮ, ಪ್ರದೇಶ ಎಲ್ಲವನ್ನೂ ಮೀರಿದ ಹಬ್ಬ. ಕಾರ್ಮಿಕರು ಬಂಡವಾಳಗಾರರಿಗೆ ನಡುಕ ಹುಟ್ಟಿಸಿ, ಸವಾಲಾಗಿ ನಿಂತ ದಿನ ಎಂದು ಸಿಐಟಿಯು ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಮೀನಾಕ್ಷಿ ಸುಂದರಂ ಮಾರ್ಮಿಕವಾಗಿ ನುಡಿದರು.
ಅವರು ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿ ಸಿಐಟಿಯು ಹಾಗೂ ವಿವಿಧ ಕಾರ್ಖಾನೆಗಳ ಕಾರ್ಮಿಕ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶೋಷಣೆಯ ವಿರುದ್ಧ ಹೊರಬರಲು ಕಾರ್ಮಿಕರು ಬಂಡವಾಳಗಾರರಿಗೆ ಸವಾಲಾಗಿ ನಿಂತ ದಿನ. ಈ ದಿನವನ್ನು ನಮ್ಮಲ್ಲಿನ ಒಗ್ಗೂಡಿಕೆಗೆ ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದರು.
ಧನಿಯೆತ್ತದ ಪ್ರಧಾನಿ ಅಭ್ಯರ್ಥಿಗಳು: ದೇಶದಲ್ಲಿ ನಡೆಯುತ್ತಿರುವ 16 ನೇ ಲೋಕಸಭಾ ಚುನಾವಣೆಯ ಪ್ರಮುಖ ವಿಷಯ ಅಭಿವೃದ್ಧಿ ಮತ್ತು ಬಲಿಷ್ಠ ಸರ್ಕಾರ ಎಂಬುದಾಗಿದೆ. ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿಕೊಂಡಿರುವ ಮೋದಿಯಾಗಲಿ, ಪ್ರಧಾನಿಯಾಗಲು ಮುಂದಾಗಿರುವ ರಾಹುಲ್ ಗಾಂಧಿಯಾಗಲಿ ತಾವು ಪ್ರತಿನಿಧಿಸಿರುವ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಕಾರ್ಮಿಕರ ಶೋಷಣೆಗಳನ್ನು ತಡೆಯಲು ಮುಂದಾಗಿಲ್ಲ. ಬದಲಾಗಿ ಬಹುರಾಷ್ಟ್ರೀಯ ಕಂಪನಿಗಳ ಗುಲಾಮರಾಗಿ ನಡೆದುಕೊಳ್ಳುತ್ತಾ ಕಾರ್ಮಿಕರ ಹಿತವನ್ನು ಬಲಿಕೊಟ್ಟಿದ್ದಾರೆ. ಇಂತಹ ವ್ಯಕ್ತಿಗಳಿಂದ ಬಲಿಷ್ಠ ಭಾರತ ನಿರ್ಮಾಣ ಸಾಧ್ಯವೇ ಎಂದು  ಮೀನಾಕ್ಷಿ ಸುಂದರಂ ಪ್ರಶ್ನಿಸಿದರು.
ಅಮೆರಿಕಾದ ದ್ವಂದ್ವ ನೀತಿ: ವಿಶ್ವದ ದೊಡ್ಡಣ್ಣ ಎಂದು ಕರೆಯಿಸಿಕೊಳ್ಳುವ ಹವಣಿಕೆಯಲ್ಲಿರುವ ಅಮೆರಿಕ ತನ್ನ ದೇಶದಲ್ಲಿ ಮಾತ್ರ ಕನಿಷ್ಠ ಕೂಲಿ ಬಗ್ಗೆ ಮಾತನಾಡುತ್ತಿದೆ. ಆದರೆ ಅದೇ ಅಮೆರಿಕದ ಖಾಸಗಿ ಕಂಪನಿಗಳು ಬೇರೆ ದೇಶಗಳಲ್ಲಿ ಬಂಡವಾಳ ಹೂಡಿದಾಗ ಅಲ್ಲಿನ ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡಬೇಕು ಎಂದು ಅಪ್ಪಿತಪ್ಪಿಯೂ ತಾಕೀತು ಮಾಡಿಲ್ಲ. ಕಾರ್ಮಿಕರಲ್ಲಿಯೇ ತಾರತಮ್ಯ ತೋರುವ ಅಮೆರಿಕಾದ ಇಬ್ಬಗೆಯ ನೀತಿಯನ್ನು ನಾವೆಲ್ಲರೂ ಒಪ್ಪಬೇಕೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ನಮಗೆ ಈ ದೇಶದ ಕೃಷಿಗೆ ರಕ್ಷಣೆ ನೀಡುವ, ಅಸಂಘಟಿತ ಕಾರ್ಮಿಕರಿಗೆ ಯೋಗ್ಯ ಬದುಕು ನೀಡುವ, ಕಾಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ, ಜನರ ಮಧ್ಯೆ ಧರ್ಮ, ಜಾತಿ ಹೆಸರಿನಲ್ಲಿ ಒಡಕು ಉಂಟು ಮಾಡದ ಸರಕಾರದ ಅಗತ್ಯವಿದೆ. ಕಾರ್ಮಿಕರು ಇವುಗಳ ಕುರಿತು ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗಿದೆ ಎಂದರು.
ಪಂಕ್ತಿಭೇದ ವಿರುದ್ಧ ಹೋರಾಟಕ್ಕೆ ಬೆಂಬಲ: ಜಾತಿ, ಧರ್ಮದ ಹೆಸರಿನಲ್ಲಿ ಪಂಕ್ತಿಭೇದ ನಡೆಸುತ್ತಿರುವ ಕೆಲವು ದೇವಾಲಯಗಳ ವಿರುದ್ಧ ವಿವಿಧ ಪ್ರಗತಿಪರ ಸಂಘಟನೆಗಳು ಮೇ 5 ರಿಂದ 8 ರವರೆಗೆ ಪ್ರತಿಭಟನೆ ನಡೆಸಲು ಉದ್ದೇಶಿಸಿವೆ. ಈ ಪ್ರತಿಭಟನೆಗೆ ಸಿಐಟಿಯು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದೆ. ಪ್ರಾಣಿಗಳಿಗಿಂತಲೂ ಕೀಳಾಗಿ ಮನುಷ್ಯರನ್ನು ಕಾಣುವ ಇಂತಹ ಅನಿಷ್ಠ ಪದ್ಧತಿ ದೇಶದಿಂದ ತೊಲಗಬೇಕು ಎಂಬುದು ಸಿಐಟಿಯು ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವದ ಎಲ್ಲ ಕಾರ್ಮಿಕರು ಇದಕ್ಕೆ ಬೆಂಬಲ ಸೂಚಿಸಬೇಕೆಂದು ಮೀನಾಕ್ಷಿಸುಂದರಂ ಮನವಿ ಮಾಡಿದರು.
ಧನಿ ಎತ್ತುವ ಜನಪ್ರತಿನಿಧಿಗಳು ಬೇಕಿದೆ: ಹಿರಿಯ ಕಾರ್ಮಿಕ ಮುಖಂಡ ರಾಮಯ್ಯ ಮಾತನಾಡಿ, ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಕಾರ್ಮಿಕರ ಪರವಾಗಿ ದ್ವನಿ ಎತ್ತುವಂತಹ ಜನಪ್ರತಿನಿಧಿಗಳ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕಾರ್ಮಿಕರು ಒಗ್ಗೂಡಿ ಕೆಲಸ ಮಾಡಬೇಕಾಗಿದೆ. ಮುಂದಿನ ಸರ್ಕಾರ ತೃತೀಯ ರಂಗವಾದಲ್ಲಿ ಸರಕಾರ ರಚನೆಯಲ್ಲಿ ಸಿಐಟಿಯು ಪ್ರಮುಖ ಪಾತ್ರ ವಹಿಸುತ್ತದೆ. ದಲಿತರು, ರೈತರ ಪರ ಕಾಳಜಿ ಹೊಂದಿರುವ, ಜನರಿಗೆ ಅಗತ್ಯ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್ ಒದಗಿಸುವ ಕುರಿತು ನಾವೆಲ್ಲರೂ ಹೋರಾಟ ಮಾಡಬೇಕಾಗಿದೆ ಎಂದರು.
ಅಧ್ಯಕ್ಷತೆಯನ್ನು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ವಹಿಸಿದ್ದರು. ಕಾರ್ಮಿಕ ಮುಖಂಡರಾದ  ಎನ್. ಕೆ . ಸುಬ್ರಹ್ಮಣ್ಯ, ಪ್ರೇಮಕುಮಾರ್, ಗುಲ್ಜಾರ್ ಬಾನು, ಎ.ದೇವರಾಜು, ಬಿ. ಉಮೇಶ್, ರಾಘವೇಂದ್ರ, ನೌಷಾದ್ ಸೆಹಗನ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಟೌನ್‌ಹಾಲ್ ವೃತ್ತದಿಂದ ಬೃಹತ್ ಮೆರವಣಿಗೆಯನ್ನು ನಗರದ ವಿವಿಧ ರಸ್ತೆಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.