ಕೂಲಿಕಾರ್ಮಿಕರಿಗೆ ಸೂರಿಲ್ಲದಿರುವುದು ದುರದೃಷ್ಟ
ಕ.ಪ್ರ.ವಾರ್ತೆ ್ಣ ತಿಪಟೂರು ್ಣ ಮೇ 1
ಕಾರ್ಮಿಕ ವರ್ಗಗಳ ಹಿತರಕ್ಷಣೆಗೆ ಸಂಘಟನೆ ಬಹುಮುಖ್ಯ. ಸಂಘಟನೆ ಇಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ಕಾರ್ಮಿಕನೂ ತಮ್ಮ ಹಕ್ಕುಗಳನ್ನು ಪಡೆಯಲು ಸಂಘಟಿತರಾಗಬೇಕೆಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ನಡೆದ ಕಲ್ಪತರು ಕಟ್ಟಡ ಕಾರ್ಮಿಕರ ಸಂಘದ 3ನೇ ವರ್ಷದ ಕಟ್ಟಡ ಕಾರ್ಮಿಕರ ದಿನಾಚರಣೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಣ್ಣು ಕೋರೈಸುವ ಭವ್ಯವಾದ ಕಟ್ಟಡಗಳ ಹಿಂದೆ ಕಾರ್ಮಿಕರ ಪರಿಶ್ರಮವಿದೆ ಎಂಬುದನ್ನು ಯಾರೂ ಮರೆಯಬಾರದು. ಕಾರ್ಮಿಕರು ಯಾವಾಗಲೂ ಕತ್ತುಬಗ್ಗಿಸುವ ಕೆಲಸ ಮಾಡದೆ ಸಮಾಜ ಗುರುತಿಸುವಂತಹ ಕೆಲಸ ಮಾಡಬೇಕು. ಹಕ್ಕಿ-ಪಕ್ಷಿಗಳಿಗೂ ಗೂಡಿದೆ. ಆದರೆ ನಿಜವಾದ ಕೂಲಿಕಾರ್ಮಿಕರಿಗೆ ಸೂರಿಲ್ಲದಿರುವುದು ದುರದೃಷ್ಟಕರ ಸಂಗತಿ. ಈ ನಿಟ್ಟಿನಲ್ಲಿ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ನೆರವು ನೀಡುವುದಾಗಿ ತಿಳಿಸಿದರು.
ಬಿಜೆಪಿ ಮುಖಂಡ ಲೋಕೇಶ್ವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿಶ್ವಕಾರ್ಮಿಕರ ಹೋರಾಟಕ್ಕೆ ಜಯ ತಂದ ದಿನವನ್ನು ಕಾರ್ಮಿಕ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ದೇಶದಲ್ಲಿ ಸುಮಾರು 53ಕೋಟಿಗಿಂತ ಹೆಚ್ಚಿನ ಜನ ಕಾರ್ಮಿಕರಾಗಿ ದುಡಿಯುತ್ತಿದ್ದು, ಅದರಲ್ಲೂ ಶೇ.60ಕ್ಕಿಂತ ಹೆಚ್ಚು ಮಹಿಳೆಯರೇ ಇದ್ದಾರೆ. ಕಾರ್ಮಿಕರ ಹಿತಕಾಯುವಲ್ಲಿ 60ವರ್ಷ ಹಳೆಯದಾದ 157ಕ್ಕಿಂತ ಹೆಚ್ಚಿನ ಕಾಯ್ದೆಗಳಿವೆ. ಇಂದಿನ ಕಾಲಮಾನಕ್ಕೆ ತಕ್ಕಂತೆ ಕಾರ್ಮಿಕರ ರಕ್ಷಣೆ ಕಾಪಾಡುವ ಕಾನೂನುಗಳ ಅಗತ್ಯವಿದೆ. ಯಾವುದೇ ಸರ್ಕಾರ ಬಂದರೂ ಸಂಪೂರ್ಣ ಪ್ರಮಾಣದಲ್ಲಿ ಕಾರ್ಮಿಕರಿಗೆ ಸೌಲಭ್ಯಕೊಡುವಲ್ಲಿ ವಿಫಲವಾಗಿದ್ದು, ಸುಮಾರು 600 ಕೋಟಿಯಷ್ಟು ಕಟ್ಟಡ ಕಾರ್ಮಿಕರ ನಿಧಿ ಕೇಂದ್ರ ಸರ್ಕಾರದಿಂದ ಸದ್ಬಳಕೆಯಾಗದೆ ಇರುವುದು ದುರಂತ. ಕಾರ್ಮಿಕ ವರ್ಗ ಎಂದೆಂದೂ ಶ್ರಮಜೀವಿಯಾಗಿದ್ದು, ಈ ವರ್ಗದ ಬೆನ್ನೆಲುಬಾಗಿ ನಾನು ನಿಲ್ಲಲಿದ್ದೇನೆ ಎಂದು ಲೋಕೇಶ್ವರ ತಿಳಿಸಿದರು.
ಪರಿಶ್ರಮ ಕಾರಣ: ನಗರಸಭೆ ಮಾಜಿ ಅಧ್ಯಕ್ಷ ಆರ್.ಡಿ.ಬಾಬು ಮಾತನಾಡಿ ಇಂದು ನೆಮ್ಮದಿಯ ಸೂರಿನಲ್ಲಿ ನಾವೆಲ್ಲಾ ಕೂತಿದ್ದೇವೆಂದರೆ ಕಾರ್ಮಿಕರ ಪರಿಶ್ರಮವೇ ಕಾರಣ. ಬೆವರು ಸುರಿಸಿ ಮನೆಕಟ್ಟಿದ ಕಾರ್ಮಿಕರಿಗೆ ಇಂದು ನೆಲೆ ಇಲ್ಲವಾಗಿದೆ. ಆದ್ದರಿಂದ ಕಾರ್ಮಿಕರು ತಮ್ಮ ದೈನಂದಿನ ದುಡಿಮೆಯ ಒಂದು ಭಾಗವನ್ನು ತಮ್ಮದೇ ಆದ ಸಹಕಾರಿ ಬ್ಯಾಂಕ್ ಅನ್ನು ಸ್ಥಾಪಿಸಿಕೊಂಡು ತಮ್ಮ ಜೀವನವನ್ನು ಸುಖಮಯವಾಗಿ ರೂಪಿಸಿಕೊಳ್ಳಬೇಕೆಂದರು.
ಎಪಿಎಂಸಿ ಅಧ್ಯಕ್ಷ ಮಾದಿಹಳ್ಳಿ ಪ್ರಕಾಶ್ ಮಾತನಾಡಿ ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಮಾಡುವ ಕಾರ್ಯಗಳು ಮಾತ್ರ ಶಾಶ್ವತವಾಗಿದ್ದು, ನೂರಾರು ಕೆಲಸ ಕಾರ್ಯಗಳನ್ನು ಮಾಡುವ ಕಾರ್ಮಿಕರ ಜೀವನ ನೆಮ್ಮದಿಯಿಂದಿರಲಿ ಎಂದರು.
ಹೆಚ್ಚಿನ ಅವಕಾಶ ನೀಡಿ: ಡಾ.ಶ್ರೀಧರ್ ಮಾತನಾಡಿ ಪುರುಷರ ಜೊತೆಯಲ್ಲಿ ಸರಿಸಮಾನವಾಗಿ ಕಾರ್ಯನಿರ್ವಹಿಸುವ ಮಹಿಳೆಯರ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪೂರಕವಾಗುತ್ತದೆ. ಆದ್ದರಿಂದ ಸ್ತ್ರೀಯರಿಗೆ ಇಂತಹ ಸಮಾರಂಭಗಳಲ್ಲಿ ಹೆಚ್ಚಿನ ಅವಕಾಶ ನೀಡಬೇಕೆಂದರು.
ಕಾರ್ಮಿಕ ಸಂಘದ ಉಪಾಧ್ಯಕ್ಷ ಎಚ್.ಎಲ್.ರಂಗಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸರ್ಕಾರ ಕೇವಲ ಆಶ್ವಾ ಸನೆಗಳನ್ನು ನೀಡುತ್ತಾ ಬಂದಿದ್ದು, ನಮಗೆ ಯಾವುದೇ ಸೌಲಭ್ಯಗಳನ್ನು ನೀಡದೆ ತಾರತಮ್ಯ ಮಾಡುತ್ತಿದ್ದು, ಸರ್ಕಾರವೇ ಕಾರ್ಮಿಕರ ಜಯಂತಿಯನ್ನು ಆಚರಿಸಲು ಮುಂದಾಗಬೇಕೆಂದು ಕರೆ ನೀಡಿದರು. ನಗರಸಭೆ ಅಧ್ಯಕ್ಷೆ ಗೀತಾ ದಿಲೀಪ್, ಸಂಘದ ಅಧ್ಯಕ್ಷ ಟಿ.ಎನ್. ವೆಂಕಟೇಶ್ ಸೇರಿದಂತೆ ಪದಾಧಿಕಾರಿಗಳು ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

