ಧರೆಗುರುಳಿದ ದಶಕಗಳ ಸಾಲು ಮರ
ಹುಳಿಯಾರು: ಪಟ್ಟಣದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ರಸ್ತೆ ಅಗಲಿಕರಣದ
ಹಿನ್ನೆಲೆಯಲ್ಲಿ ರಸ್ತೆ ಬದಿಯ ಎರಡೂ ಸಾಲುಗಳಲ್ಲಿ ಹೆಮ್ಮರವಾಗಿ ಬೆಳೆದು ನೆರಳು ನೀಡುತ್ತಿದ್ದ ಐದಾರು ದಶಕಗಳ ಮರಗಳನ್ನು ಕಡಿಯುವ ಮೂಲಕ ಮರಗಳ ಮಾರಣಹೋಮ ಕಳೆದೊಂದು ವಾರದಿಂದ ನಡೆಯುತ್ತಿದೆ.
ಮಂಗಳೂರುನಿಂದ ತಮಿಳುನಾಡಿನ ವಿಲ್ಲುಪುರಂಗೆ ರಾಷ್ಟ್ರೀಯ ಹೆದ್ದಾರಿ 234 ರ ಅಗಲಿಕರಣ ಹಾಗೂ ಉನ್ನತಿಕರಣಕ್ಕೆ ಯೋಜನೆ ಮಂಜೂರಾಗಿದ್ದು, ಈ ರಸ್ತೆ ಮಂಗಳೂರಿನಿಂದ ಮೂಡಿಗೆರೆ-ಹುಳಿಯಾರು-ಸಿರಾ-ಮಧುಗಿರಿ- ಚಿಂತಾಮಣಿ- ಆಂಧ್ರದ ವಿ.ಕೋಟ- ತಮಿಳಿನಾಡಿನ ವೆಲ್ಲೂರು ಮಾರ್ಗವಾಗಿ ವಿಲ್ಲುಪುರಂವರೆಗೆ ಹಾದು ಹೋಗಲಿದೆ.
ಇದಕ್ಕಾಗಿ ಎರಡು ಮೂರು ಬಾರಿ ಸರ್ವೆ ಕಾರ್ಯ ನಡೆದು ಯೋಜನೆ ಪ್ರಗತಿಯಲ್ಲಿದ್ದು ಈ ಹೆದ್ದಾರಿ ಹುಳಿಯಾರಿನ ಹೃದಯಭಾಗದಲ್ಲಿ ಹಾದು ಹೋಗಲಿದೆ. ಈಗಾಗಲೇ ಬಾಣಾವರದಿಂದ ಕಾಮಗಾರಿ ಆರಂಭಗೊಂಡಿದ್ದು ಸದ್ಯ ಪಂಚನಹಳ್ಳಿ-ಹುಳಿಯಾರು ನಡುವಿನ ರಸ್ತೆ ಕಾಮಗಾರಿ ನಡೆಯುತ್ತಿದೆ. ರಸ್ತೆ ನಡುವಿನಲ್ಲಿ ಬರುವ ಸೇತುವೆ ಹಾಗು ಅಲ್ಲಲ್ಲಿ ಕೆಲ ಕಿ.ಮೀ ಮಾತ್ರ ಹೊಸ ರಸ್ತೆ ಮಾಡಿದ್ದು, ಬೆಸ್ಕಾಂನಿಂದ ರಸ್ತೆ ಬದಿಯ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿದ್ದನ್ನು ಬಿಟ್ಟರೆ ಹೆಚ್ಚಿನ ಪ್ರಗತಿಯಾಗಿಲ್ಲ.
ಎಂದು ಪ್ರಾರಂಭ?: ಆರಂಭಗೊಂಡ ಕಾಮಗಾರಿಯನ್ನು ಒಂದೆಡೆಯಿಂದ ಪೂರ್ಣಗೊಳಿಸದೆ ಇದೀಗ ದಿಢೀರನೇ ರಸ್ತೆ ಬದಿಯ ಸಾಲುಮರಗಳನ್ನು ಕಡಿಯಲು ಮುಂದಾಗಿದ್ದಾರೆ. ಸದ್ಯಕ್ಕೆ ಮರ ಕಡಿಯುವ ಇರಾದೆ ಮಾತ್ರ ಇವರಿಗಿದ್ದು ಕಾಮಗಾರಿ ಎಂದು ಪ್ರಾರಂಭಗೊಳ್ಳುತ್ತದೊ ತಿಳಿಯದಾಗಿದೆ. ಸದ್ಯ ಪಟ್ಟಣದಲ್ಲಿ ಬೇಸಿಗೆಯ ಕಾವು ಏರಿದ್ದು ಮಧ್ಯಾಹ್ನದ ಸಮಯದಲ್ಲಿ ಮನೆಯಿಂದ ಆಚೆ ಬರುವುದೆ ದುಸ್ಥರವಾಗಿದೆ ಇದುವರೆಗು ಹೆಮ್ಮರವಾಗಿ ಬೆಳೆದಿದ್ದ ಮರದಿಂದ ಬೇಸಿಗೆಯಲ್ಲಿ ಅಷ್ಟೋ ಇಷ್ಟು ನೆರಳು ಸಿಗುತ್ತಿದ್ದು ಆ ಮರಗಳು ಧರೆಗುರುಳುತ್ತಿರುವುದರಿಂದ ಬೇಸಿಗೆಯ ದಗೆ ಇನ್ನಷ್ಟು ಏರಲಿದೆ.
ಸರ್ವೆ ಮಾಡಲು ಬಂದವರು ಒಮ್ಮೆ ರಸ್ತೆ ಮಧ್ಯದಿಂದ ಎರಡು ಕಡೆ 70 ಅಡಿ ಎಂದರೆ, ಮತ್ತೆ ಕೆಲವರು 60 ಅಡಿ ಎಂದು ತಮಗಿಷ್ಟ ಬಂದಂತೆ ಹೇಳುತ್ತಿದ್ದಾರೆ. ಈ ಬಗ್ಗೆ ಇಲ್ಲಿನ ಯಾರೊಬ್ಬರಿಗೂ ಸ್ಪಷ್ಟ ಮಾಹಿತಿಯಿಲ್ಲದ ಕಾರಣ ರಸ್ತೆ ಬದಿಯ ನಿವೇಶನದಲ್ಲಿ ಹೊಸದಾಗಿ ಮನೆ ನಿರ್ಮಾಣ ಮಾಡುವವರಿಗೆ ಒಂದು ರೀತಿ ಸಮಸ್ಯೆಯಾದರೆ, ಹಾಲಿ ವಾಸವಿರುವವರಿಗೆ ಮತ್ತೊಂದು ರೀತಿಯ ಸಮಸ್ಯೆ ಎದುರಾಗಿದೆ. ರಸ್ತೆ ಬದಿಯ ಮನೆಯವರು, ಅಂಗಡಿ ಮಳಿಗೆಯವರು, ನಿವೇಶನದಾರರು ತಮ್ಮ ಜಾಗವನ್ನು ತೆರವುಗೊಳಿಸಬೇಕೋ, ಬೇಡವೋ ಎಂಬ ಗಲಿಬಿಲಿಯಲಿದ್ದಾರೆ.
ಪಟ್ಟಣದ ಹೊರ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳ ಹಿಂದೆ ಮರಗಳನ್ನು ಕಡಿದಿದ್ದು ಬಿಟ್ಟರೆ ಯಾವುದೇ ರಸ್ತೆ ಕಾರ್ಯ ಕಂಡುಬಂದಿಲ್ಲ. ಮರದ ಬುಡಗಳಿಗೆ ಬೇಕಾಬಿಟ್ಟಿ ಬೆಂಕಿಯಿಟ್ಟು ಪರಿಸರ ಹಾನಿಗೆ ಕಾರಣರಾಗಿದ್ದಾರೆ.
ರಸ್ತೆ ಆಗಲಿಕರಣ ಬಗ್ಗೆ ಗೊಂದಲದಲ್ಲಿರುವ ಜನತೆಗೆ ಸಂಬಂಧಪಟ್ಟ ಇಲಾಖೆಯವರು ಸ್ಪಷ್ಟ ಮಾಹಿತಿ ಒದಗಿಸಿ ನಂತರ ಕಾಮಗಾರಿ ಪ್ರಾರಂಭಿಸಿ ಜನರ ಆತಂಕ ದೂರಮಾಡಬೇಕಾಗಿದೆ.
ಡಿ.ಆರ್.ನರೇಂದ್ರಬಾಬು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

