ಮಾವ, ಅತ್ತೆ ಪತಿಯ ದಿಕ್ಕು ತಪ್ಪಿಸುತ್ತಿದ್ದಾರೆ, ಪತ್ನಿ ಅಳಲು
ಪಾವಗಡ: ಸತಿ, ಪತಿ ಮಧ್ಯೆ ಭಿನ್ನಾಭಿಪ್ರಾಯಕ್ಕೆ ಸಂಬಂಧಪಟ್ಟಂತೆ ಸಂಸಾರ ಸರಿಪಡಿಸಲು ಇಲ್ಲಿನ ಪಿಎಸ್ಐ ನಟರಾಜ್ ರಾಜಿ ಮಾಡಿ ಮುಚ್ಚಳಿಕೆ ಬರೆಸಿಕೊಂಡರೂ ಕೆಲವರು ತಮ್ಮ ಪತಿಯ ದಿಕ್ಕು ತಪ್ಪಿಸುತ್ತಿದ್ದಾರೆಂದು ಪತ್ನಿ ಮೀನಾಕುಮಾರಿ ಅಳಲು ತೋಡಿಕೊಂಡರು.
ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ವಾಸಿಯಾದ ನಾನು ಕಳೆದ 12 ವರ್ಷಗಳಿಂದ ತಾ. ನೆಲಗಾನಹಳ್ಳಿ ಗ್ರಾಮದ ವಾಸಿ ಶ್ರೀನಿವಾಸ್ ಎಂಬುವರೊಂದಿಗೆ ಸಂಪ್ರದಾಯ ಬದ್ಧವಾಗಿ ವಿವಾಹವಾಗಿದ್ದು ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ. ಪತಿಯ ಜೊತೆ ಪಟ್ಟಣದ ಅದರ್ಶ ನಗರದಲ್ಲಿ ವಾಸವಾಗಿದ್ದು, ಪತಿಯ ತಂದೆ ತಾಯಿ ಹಾಗೂ ಆತನ ಸಹೋದರರು ನಮ್ಮ ಸಂಸಾರದಲ್ಲಿ ಹುಳಿಹಿಂಡಿದ ಪ್ರಯುಕ್ತ ನನ್ನ ಪತಿ ಕಳೆದ 6 ವರ್ಷಗಳಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದರು.
ನಿತ್ಯ ಕಾಟ: ಕಳೆದ 15ದಿನಗಳ ಹಿಂದೆ ಪಾನಮತ್ತರಾಗಿ ವರದಕ್ಷಿಣೆ ತರುವಂತೆ ನಿತ್ಯ ಮನೆಯಲ್ಲಿ ಕಾಟಕೊಡುತ್ತಿದ್ದ ಪತಿ ಹಾಗೂ ಅತ್ತೆ, ಮಾವ, ಮೈದುನರ ಕಿರುಕುಳದ ಬಗ್ಗೆ ದಲಿತ ಸಂಘಟನೆಗಳ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಸಮಸ್ಯೆಗೆ ಪರಿಹಾರ ಸಿಗದೇ ಕುಟುಂಬದಲ್ಲಿ ವರದಕ್ಷಿಣೆ ಕಾಟ ಹೆಚ್ಟಾಗಿದ್ದರಿಂದ ದಲಿತ ಸಂಘಟನೆಗಳ ಬೆಂಬಲ ಪಡೆದು ಪತಿ ಹಾಗೂ ಕುಟುಂಬದ ಸದಸ್ಯರ ವಿರುದ್ಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹಿಳಾ ಸಾಂತ್ವನ ಕೇಂದ್ರ ಮತ್ತು ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿ ಸಂಸಾರ ಸರಿಪಡಿಸಲು ಮನವಿ ಮಾಡಲಾಗಿತ್ತು. ಅನ್ಯಾಯದ ಬಗ್ಗೆ ಕೂಡಲೇ ಕ್ರಮ ಜರುಗಿಸಿದ ಪಾವಗಡ ಪೊಲೀಸ್ ಠಾಣೆ ಪಿಎಸ್ಐ ನಟರಾಜ್, ನನ್ನ ಪತಿ ಹಾಗೂ ಅತ್ತೆ, ಮಾವ ಇತರರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು. ಕುಟುಂಬದ ಬಿನ್ನಾಭಿಪ್ರಾಯಗಳ ಬಗ್ಗೆ ಆಲಿಸಿದ ನಂತರ ಸಂಸಾರ ಸರಿಪಡಿಸುವ ಸಲುವಾಗಿ ದಲಿತ ಸಂಘಟನೆಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ನನ್ನ ಹಾಗೂ ಪತಿ ಶ್ರೀನಿವಾಸ್ ಅವರಿಗೆ ಸಲಹೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ರಾಜಿ ಮಾಡಿದರು. ಆದರೆ ಗ್ರಾಮದ ಕೆಲವರು ಪತಿಯ ದಿಕ್ಕು ತಪ್ಪಿಸುತ್ತಿರುವ ಕಾರಣ ರಾಜಿ ಮಾಡಿದ 3 ದಿನಗಳಲ್ಲಿಯೇ ಮತ್ತೆ ಮನೆಯಲ್ಲಿ ವರದಕ್ಷಿಣೆ ಕಾಟ ಶುರುವಾಗಿದೆ ಎಂದು ಆಕೆ ತಮ್ಮ ಅಳಲು ತೋಡಿಕೊಂಡರು.
ತಾ.ಮಾದಿಗ ದಂಡೋರ ಅಧ್ಯಕ್ಷ ನಾಗೇಶ್ ಮಾತನಾಡಿ ಸಂಸಾರದಲ್ಲಿ ಇತರರು ಹುಳಿ ಹಿಂಡುವುದು ಸರಿಯಲ್ಲ ಎಂದರು.
ಮೀನಾಕುಮಾರಿ, ದಂಡೋರ ಕಾರ್ಯದರ್ಶಿ ಹನುಮಂತರಾಯಪ್ಪ, ವಿಮೋಚನೆ ಸೇನೆಯ ಕಡಪಲಕೆರೆ ನರಸಿಂಹಪ್ಪ ಹಾಗೂ ತಾ.ಡಿಎಸ್ಎಸ್, ಜೀತ ವಿಮುಕ್ತಿ ಕರ್ನಾಟಕ ಹಾಗೂ ಇತರೆ ದಲಿತ ಸಂಘಟನೆಗಳ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

