ತುಮಕೂರು

ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚಿಗುರುತ್ತಿರುವ ಸಿಪಿಐ

Published On :

ತುಮಕೂರು: ಇದೇ ಮೊದಲ ಬಾರಿಗೆ ತುಮಕೂರು ಲೋಕಸಭಾ ಚುನಾವಣಾ ಅಖಾಡಕ್ಕಿಳಿದಿದ್ದ ಸಿಪಿಐ (ಭಾರತೀಯ ಕಮ್ಯೂನಿಸ್ಟ್ ಪಕ್ಷ) ಚಿಗುರುತ್ತಿರುವ ಸೂಚನೆ ನೀಡಿದೆ.
ಜಿಲ್ಲಾ ರಾಜಕಾರಣದಲ್ಲಿ ತನ್ನ ಅಸ್ತಿತ್ವ ಸಾಬೀತುಪಡಿಸಿದೆ. 16 ನೇ ಲೋಕಸಭೆಯಲ್ಲಿ 10 ಸಾವಿರಕ್ಕಿಂತಲೂ ಹೆಚ್ಚು ಮತ ಪಡೆಯುವುದರ ಮೂಲಕ ಪಕ್ಷ ಜಿಲ್ಲಾ ಮಟ್ಟದಲ್ಲಿರುವುದು ಗೋಚರಿಸಿದೆ.
ಟೌನ್ ಹಾಲ್, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಮಯ - ಸಂದರ್ಭಕ್ಕನುಗುಣವಾಗಿ ವಿಶೇಷವಾಗಿ ಬೆಲೆ ಏರಿಕೆಯಂತಹ ವಿಷಯಗಳನ್ನು ಎತ್ತಿಕೊಂಡು, ಕೆಂಬಾವುಟ ಹಿಡಿದು ಪ್ರತಿಭಟನೆ ಮಾಡಿ, ಘೋಷಣೆ ಕೂಗಿ, ಮನವಿ ಪತ್ರ ನೀಡಲಷ್ಟೇ ಲಾಯಕ್ಕು ಎಂದು ತೀವ್ರ ಲೇವಡಿಗೊಳಗಾಗಿದ್ದ ಸಿಪಿಐ, ಚುನಾವಣಾ ರಾಜಕಾರಣಕ್ಕೂ ಧುಮುಕಿ, ತನ್ನ ಮೇಲಿನ ಈ ಆರೋಪವನ್ನು ತೊಳೆದುಕೊಳ್ಳಲು ಪ್ರಯತ್ನಿಸಿ, ಯಶಸ್ವಿಯೂ ಆಗಿದೆ. ಚುನಾವಣಾ ರಾಜಕಾರಣಕ್ಕೂ ತಾನು ಸಿದ್ಧ ಎಂಬುದನ್ನು ಈ ಮೂಲಕ ತೋರಿಸಿಕೊಟ್ಟಿದೆ.
ವಿಧಾನಸಭೆ, ಲೋಕಸಭೆ, ಜಿಪಂ, ತಾಪಂ, ನಗರಸಭೆ ಸೇರಿದಂತೆ ಯಾವೊಂದು ಚುನಾವಣೆಯಲ್ಲೂ ಸ್ಪರ್ಧಿಸದೆ, ಸಕ್ರಿಯವಾಗಿ ಪಾಲ್ಗೊಳ್ಳದೆ, ಕಾಂಗ್ರೆಸ್, ಬಿಜೆಪಿ ಹೊರತುಪಡಿಸಿ, ಜಾತ್ಯತೀತ ಶಕ್ತಿಗಳನ್ನು ಬೆಂಬಲಿಸಿ ಎಂಬ ಒಂದಂಶದ ಘೋಷಣೆಯನ್ನು ಸುದ್ದಿಗೋಷ್ಠಿಯಲ್ಲಿ, ಪತ್ರಿಕಾ ಹೇಳಿಕೆಗಳನ್ನು ನೀಡುತ್ತಿದ್ದ ಸಿಪಿಐ, ಈ ಬಾರಿ ಸ್ವತಃ ಸ್ಪರ್ಧಿಸುವುದರ ಮೂಲಕ ತನ್ನ ಬಲ ಏನು, ಎಷ್ಟಿದೆ ಎಂಬುದನ್ನು 8 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಂಡು ಕೊಂಡಿದೆ.
ಕಡೇಗಳಿಗೆಯಲ್ಲಿ: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲೇಬೇಕೆಂದು ಹಠ ಹಿಡಿದು, ಟಿಕೆಟ್ ತಂದು ಸ್ಪರ್ಧಿಸುವಲ್ಲಿ ಯಶಸ್ವಿಯಾದ ಸಿಪಿಐ  ಅಭ್ಯರ್ಥಿ ವಿ. ಚಿನ್ನಪ್ಪನವರಿಗೆ ಟಿಕೆಟ್ ದೊರೆತದ್ದು ಕೂಡ ಕಡೇ ಗಳಿಗೆಯಲ್ಲೇ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಅನುಭವವಿಲ್ಲದ ಪಕ್ಷದ ಇತರ ಮುಖಂಡರಿಗೂ, 16 ನೇ ಲೋಕಸಭಾ ಚುನಾವಣೆ ಹೊಸ ಅನುಭವ ನೀಡಿದೆ. ಅಷ್ಟೇ ಅಲ್ಲ ಮುಂಬರುವ ಜಿಪಂ, ತಾಪಂ, ನಗರಸಭೆ, ಪಪಂ, ಗ್ರಾಪಂ, ವಿಧಾನಸಭಾ ಚುನಾವಣೆಗಳಲ್ಲೂ ಸ್ಪರ್ಧಿಸುವ ಹುಮ್ಮಸ್ಸು ನೀಡಿದೆ. ಈ ಕುರಿತು ಪಕ್ಷದ ಜಿಲ್ಲಾ ಮುಖಂಡರೂ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಸಿಪಿಐ ದಾವಣಗೆರೆ, ಚಿಕ್ಕಮಗಳೂರು, ತುಮಕೂರು ಸೇರಿದಂತೆ 3 ಕಡೆ ಸ್ಪರ್ಧಿಸಿತ್ತು. ದಾವಣಗೆರೆ, ಚಿಕ್ಕಮಗಳೂರು ಸಿಪಿಐ ಅಭ್ಯರ್ಥಿಗಳಿಗಿಂತ ತುಮಕೂರು ಸಿಪಿಐ ಅಭ್ಯರ್ಥಿ ವಿ. ಚಿನ್ನಪ್ಪ ಹೆಚ್ಚಿನ ಮತ ಪಡೆದಿದ್ದು, ಪಕ್ಷದ ರಾಜ್ಯ ಮಂಡಳಿಯಿಂದಲೂ ಪ್ರಶಂಸೆಗೊಳಗಾಗಿದ್ದಾರೆ.     
ದೇಶದ ರಾಜಕಾರಣದಲ್ಲಿ ಈ ಬಾರಿ ತೀವ್ರ ಸೋಲನುಭವಿಸಿ, ಆಘಾತಕ್ಕೀಡಾಗಿರುವ ಸಿಪಿಐ ತುಮಕೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ, ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಯಾವೊಬ್ಬ ಪ್ರತಿನಿಧಿಯಿರದಿದ್ದರೂ ಲೋಕಸಭಾ ಚುನಾವಣೆಯಲ್ಲಿ ಐದಂಕಿ ಓಟು ಪಡೆಯುವುದರ ಮೂಲಕ ಚಿಗುರುತ್ತಿರುವ ಸೂಚನೆ ನೀಡಿರುವುದು ಗಮನಾರ್ಹ.


-ಅದಲಗೆರೆ ನಾಗೇಂದ್ರಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.