ತುಮಕೂರು

ರು. 289ರ ಚಪ್ಪಲಿಗೆ ರು. 460 ಪ್ಲಸ್ ತೆರಿಗೆ ನೀಡಿ ಖರೀದಿ

Published On :

ಕ.ಪ್ರ.ವಾರ್ತೆ |ತಿಪಟೂರು | ಮೇ 27
ನಗರಸಭೆ ಆರೋಗ್ಯ ಮತ್ತು ಪರಿಸರ ಇಲಾಖೆಯು ಪೌರ ಕಾರ್ಮಿಕರ ಚಪ್ಪಲಿ, ಶೂ ಮತ್ತು ಗ್ಲೌಸ್ ಮತ್ತಿತರೆ ವಸ್ತುಗಳ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆಸಿರುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ ಚರ್ಚೆ ನಡೆದು ಪ್ರಕರಣದ ಬಗ್ಗೆ ವಿವರವಾಗಿ ತನಿಖೆ ನಡೆಯಬೇಕಲ್ಲದೆ ಲೋಕಾಯುಕ್ತಕ್ಕೆ ವಹಿಸಬೇಕೆಂದು ಸದಸ್ಯರು ಅಧ್ಯಕ್ಷೆ ಗೀತಾ ಮತ್ತು ಪೌರಾಯುಕ್ತರನ್ನು ಒತ್ತಾಯಿಸಿದ ಘಟನೆ ನಡೆಯಿತು.
ಅಧ್ಯಕ್ಷೆ ಗೀತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪರಿಸರ ಇಲಾಖೆಗೆ ಸಂಬದಿಸಿದ ಜಮಾ-ಖರ್ಚಿನ 5-6 ವಿಷಯಗಳು  ಚರ್ಚೆಗೆ ಬಂದಾಗ ಮೊದಲಿಗೆ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ  ವಿದ್ಯುತ್ ದೀಪಗಳ ಅಳವಡಿಕೆ ಬಗ್ಗೆ ಮಾತನಾಡಿದ ಸದಸ್ಯರಾದ ಪ್ರಕಾಶ್, ಲಿಂಗರಾಜು, ನಿಜಗುಣ, ರೇಖಾ
ಅನೂಪ ಮತ್ತು ಪ್ರಸನ್ನ ಮುಂತಾದವರು ದೀಪಗಳ ಅಳವಡಿಕೆ ಪರಿಸರ ಎಂಜಿನಿಯರ್ ವ್ಯಾಪ್ತಿಗೆ ಬರದಿದ್ದರೂ ನಗರಸಭೆಯ ಯಾವುದೇ ಅನುಮತಿ ಪಡೆಯದೆ ಲಕ್ಷಾಂತರ ರು. ಖರ್ಚು ಮಾಡಿದ್ದಾರೆ. ಅಲ್ಲದೆ ಇದಕ್ಕೆ ಯಾವುದೇ ಟೆಂಡರ್ ಕರೆಯದೆ ಖರೀದಿಸಿರುವುದು ಕಾನೂನು ಬಾಹಿರ. ಅದೇ ರೀತಿ ಜೆಸಿಬಿ ಚಾಲಕರ ನಿರ್ವಹಣೆಗೂ ಅಕ್ರಮವಾಗಿ ಹಣ ಖರ್ಚು ಮಾಡಲಾಗಿದೆ. ಕಾರುಗಳ ಬಾಡಿಗೆ ವಿಚಾರದಲ್ಲೂ ಅಕ್ರಮವೆಸಗಲಾಗಿದೆ. ನಗರದಲ್ಲಿ ಬೀದಿದೀಪಗಳ ನಿರ್ವಹಣೆ ಕೆಟ್ಟ ರೀತಿಯಲ್ಲಿದ್ದರೂ ತಿಂಗಳಿಗೆ 80ಸಾವಿರ ನೀಡಲಾಗುತ್ತಿರುವುದು ನಾಚಿಕ ತರಿಸುತ್ತಿದೆ. ವೈಟ್ಬೋರ್ಡ್ ಕಾರಿಗೆ ಅಕ್ರಮವಾಗಿ ಬಾಡಿಗೆ ನೀಡಲಾಗಿದ್ದು ಈ ಎಲ್ಲಾ ಅಕ್ರಮಗಳ ಬಗ್ಗೆ ತನಿಖೆಯಾಗಿ ಕಾನೂನು ಬಾಹಿರವಾಗಿ ನೀಡಿರುವ ಹಣವನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ವಸೂಲು ಮಾಡಬೇಕೆಂದು ಸರ್ವ ಸದಸ್ಯರು ಒತ್ತಾಯಿಸಿದರು.
ಚಪ್ಪಲಿಯಲ್ಲೂ ಲೂಟಿ: ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯ ಮಾಡುವಾಗ ಅವರ ಆರೋಗ್ಯದ ಹಿತಕಾಯಲು ಚಪ್ಪಲಿ, ಶೂ, ಗ್ಲೌಸ್ ಮತ್ತಿತರೆ ಅಗತ್ಯ ವಸ್ತುಗಳನ್ನು ಆರೋಗ್ಯ ಮತ್ತು ಪರಿಸರ ಇಲಾಖೆ ಖರೀದಿಸಿದ್ದು ಇದರಲ್ಲಿ ಒಂದಕ್ಕೆರಡರಷ್ಟು ಹಣ ನುಂಗಲಾಗಿದೆ. ಈ ಬಗ್ಗೆ ವಿವರ ನೀಡಿ ಎಂದು ಸದಸ್ಯರು ಪೌರಾಯುಕ್ತರನ್ನು ಒತ್ತಾಯಿಸಿದಾಗ ಸಂಬಂಧಿಸಿದ ಕಡತ ಮತ್ತು ಖರೀದಿಸಲಾಗಿರುವ ಚಪ್ಪಲಿ, ಶೂ, ಗ್ಲೌಸ್ ಮತ್ತಿತರೆ ವಸ್ತುಗಳನ್ನು
ಸದಸ್ಯರ ವೀಕ್ಷಣೆಗೆ ನೀಡಲಾಯಿತು. ಚಪ್ಪಲಿಗಳನ್ನು ಸಭೆಯಲ್ಲಿ ಸದಸ್ಯರು ಕೈಯಲ್ಲಿಡಿದು ಪ್ರದರ್ಶಿಸಿ, ಪರೀಕ್ಷಿಸಿದಾಗ 1ಜೊತೆ ಚಪ್ಪಲಿ ಗೆ ರು.460 ಪ್ಲಸ್ ಶೇ.14 ತೆರಿಗೆಯಂತೆ  ಖರೀದಿಸಿದರುವುದು ಬೆಳಕಿಗೆ ಬಂತು.
ಆದರೆ ಚಪ್ಪಲಿ ಬಾಕ್ ಮೇಲೆ ರು.289 ಎಂದು ನಮೂದಿಸಲಾಗಿತ್ತು. ಅಲ್ಲದೆ ಆ ಚಪ್ಪಲಿಗಳು ಐ.ಎಸ್.ಐ  ಗುರುತು  ಹೊಂದಿರಲಿಲ್ಲ. ಶೂ ಜೊತೆಗೆ ರು.490 ಪ್ಲಸ್ ಶೇ.14ತೆರಿಗೆಯಂತೆ ಲೋಕಲ್ ತಯಾರಿಕೆಯಿಂದ ಹಾಗೆಯೇ ಹ್ಯಾಂಡ್ ಗ್ಲೌಸ್ಗೆ 160 ಪ್ಲಸ್ ಶೇ.14ತೆರಿಗೆಯಂತೆ ಲೋಕಲ್ ತಯಾರಿಕೆಯಿಂದ ಖರೀದಿಸಿ ಎಲ್ಲದಕ್ಕೂ ಕಾನೂನು ಬಾಹಿರವಾಗಿ ಶೇ.14ತೆರಿಗೆ ಹಾಕಿ ಖರೀದಿಸಿದ್ದು ಬೆಳಕಿಗೆ ಬಂತು. ಆದರೆ ಸಂಬಂಧಿಸಿದ ಅಧಿಕಾರಿ ಇಂದು ಬೇಕೆಂದೇ ಸಭೆಗೆ ಬಾರದೆ ತಪ್ಪಿಸಿಕೊಂಡಿದ್ದು, ಆ ಅಧಿಕಾರಿಯನ್ನು ಮೊದಲು ಅಮಾನತ್ತುಗೊಳಿಸಿ ನಂತರ ತನಿಖೆ ಮಾಡಬೇಕೆಂದು ಪಕ್ಷಭೇದ ಮರೆತು 31ಸದಸ್ಯರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಬೇಕೆಂದು ತೀರ್ಮಾನಿಸಿದರು.
ನಗರಸಭೆಗೆ ಅಧ್ಯಕ್ಷರ ಆಯ್ಕೆ ನಡೆದಿದ್ದು ಅವರು ಅಧಿಕಾರ ವಹಸಿಕೊಂಡು ತಿಂಗಳುಗಳೇ ಆಗಿದ್ದರೂ ಹಣಕಾಸು ಅಥವಾ ಯಾವುದೇ ಪ್ರಮುಖ ಕಡತಗಳನ್ನು ಅವರ ಅರಿವಿಗೆ ಬಾರದಂತೆ ನಿಭಾಯಿಸುತ್ತಿರುವ ಬಗ್ಗೆ ಸದಸ್ಯರು  ಪೌರಾಯುಕ್ತರನ್ನು ಪ್ರಶ್ನಿಸಿದಾಗ ಅದು ನಿಜವಾಗಿದ್ದು ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಉತ್ತರ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.