ಸೋತವರು ಸುಣ್ಣ, ಗೆದ್ದವರೂ ಮಾಯ!
ಮಂಗಳೂರು: ಸ್ಪರ್ಧಿಸಿ ಸೋತವರಿಗಂತೂ ಅದೃಷ್ಟವಿಲ್ಲ, ಗೆದ್ದು ಶಾಸಕರಾದವರಿಗೂ ದುರದೃಷ್ಟ ಬೆಂಬಿಡುವುದಿಲ್ಲ. ಇದು ವಿಟ್ಲ ವಿಧಾನಸಭೆ ಕ್ಷೇತ್ರ ಮಹಾತ್ಮೆ.
1978ರಲ್ಲಿ ಹುಟ್ಟಿ ಪುನರ್ ವಿಂಗಡಣೆ ಪರಿಣಾಮ 2008ರಲ್ಲಿ ವಿಟ್ಲ ಕ್ಷೇತ್ರ ಬಂಟ್ವಾಳ, ಪುತ್ತೂರು, ಮಂಗಳೂರು ಕ್ಷೇತ್ರದಲ್ಲಿ ಹಂಚಿ ಹೋಯಿತು. ಗೆದ್ದವರ ಮತ್ತು ಸೋತವರ ಭವಿಷ್ಯ ಕೂಡಾ...!
ರುಕ್ಮಯ ಪೂಜಾರಿ ಹೊರತುಪಡಿಸಿ ಯಾರೂ ಎರಡು ಬಾರಿ ಗೆದ್ದಿಲ್ಲ. ಗೆದ್ದವರು ಯಾರೂ ಸಚಿವರಾಗಿಲ್ಲ. ವಿಚಿತ್ರ ಎಂದರೆ ಗೆದ್ದವರು ರಾಜಕೀಯದಿಂದ ಮರೆಯಾಗುತ್ತಾರೆ. ಇಲ್ಲವೇ ಅನಿವಾರ್ಯವಾಗಿ ತೆರೆಮರೆಗೆ ಸರಿಯುವ ಸನ್ನಿವೇಶ ಹುಟ್ಟಿಕೊಳ್ಳುತ್ತದೆ. ಇದು ಈ ಕ್ಷೇತ್ರ ವಿಶೇಷ!
1978ರಲ್ಲಿ ಸಿಪಿಐನಿಂದ ಸ್ಪರ್ಧಿಸಿ ಗೆದ್ದ ಬಿ.ವಿ. ಕಕ್ಕಿಲ್ಲಾಯ 83ರಲ್ಲಿ 5ನೇ ಸ್ಥಾನ ಪಡೆದು ಠೇವಣಿ ಕಳೆದುಕೊಂಡರು. ಬಳಿಕ ರಾಜಕೀಯ ನೇಪಥ್ಯಕ್ಕೆ ಸರಿದರು.
1983ರಲ್ಲಿ ಶಾಸಕರಾದವರು ಬಿಜೆಪಿ ರುಕ್ಮಯ ಪೂಜಾರಿ. 2 ವರ್ಷಗಳ ಬಳಿಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಬಿ.ಎ.ಉಮರಬ್ಬ ಎದುರು ಸೋಲುಂಡರು. 89 ಮತ್ತು 94ರಲ್ಲಿ ಗೆಲವು ಸಾಧಿಸಿ, 99ರಲ್ಲಿ ಸೋತರು. (1991ರಲ್ಲಿ ರುಕ್ಮಯ ಪೂಜಾರಿ ಉಡುಪಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ರಾಜೀವಗಾಂಧಿ ಹತ್ಯೆಯಿಂದ ಉಂಟಾದ ಕಾಂಗ್ರೆಸ್ ಅಲೆಯಲ್ಲಿ ಪೂಜಾರಿ ಕೊಚ್ಚಿ ಹೋದರು.) 2004ರಲ್ಲಿ ವಿಟ್ಲದಲ್ಲಿ ಟಿಕೆಟ್ ವಂಚಿತರಾದರು. ಬಳಿಕ ಎಸ್.ಆರ್. ಬಂಗಾರಪ್ಪ ಜತೆ ಗುರುತಿಸಿಕೊಂಡು ಬಿಜೆಪಿ ತ್ಯಜಿಸಿ ಸಮಾಜವಾದಿ ಪಕ್ಷ ಸೇರಿದರು. 2008ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಸೇರಿದರೂ ಮುಂಚೂಣಿ ರಾಜಕೀಯದಿಂದ ಹಿಂದೆ ಸರಿದಿದ್ದಾರೆ.
ಉಮ್ಮರಬ್ಬ:1985ರರಲ್ಲಿ ಗುಂಡುರಾವ್ ತನ್ನ ಬೆಂಬಲಿಗ ಬಿ.ಎ. ಉಮರಬ್ಬರಿಗೆ ಟಿಕೆಟ್ ನೀಡಿ ಗೆಲ್ಲಿಸಿದರು. 89ರಲ್ಲಿ ಉಮರಬ್ಬ ಪಕ್ಷೇತರರಾಗಿ ಸ್ಪರ್ಧಿಸಿ ನಾಲ್ಕನೇ ಸ್ಥಾನಕ್ಕೆ ಕುಸಿದರು. 1991ರಲ್ಲಿ ಬೆಂಗಳೂರಲ್ಲಿ ಬೈಕ್ ಅಪಘಾತದಲ್ಲಿ ಮೃತಪಟ್ಟರು.
ಸುಂಟಿಕೊಪ್ಪ ಇಬ್ರಾಹಿಂ: ಇಬ್ರಾಹಿಂ ಮಾಸ್ಟರ್ ಸುಂಟಿಕೊಪ್ಪದವರಾದರೂ ಕಾಂಗ್ರೆಸ್ ಟಿಕೆಟ್ ಪಡೆದು ಸತತ ಎರಡು ಗೆಲವು ಕಂಡ ರುಕ್ಮಯ ಪೂಜಾರಿಯನ್ನು ಮಣಿಸಿ ಶಾಸಕರಾದರು. 2004ರಲ್ಲಿ ಪದ್ಮನಾಭ ಕೊಟ್ಟಾರಿ ಎದುರು ಸೋಲನುಭವಿಸಿದರು. ವಿಟ್ಲ ಕ್ಷೇತ್ರ ಹಂಚಿಹೋದಾಗ ಬಂಟ್ವಾಳದಿಂದ ಜೆಡಿಎಸ್ ಟಿಕೆಟ್ನಿಂದ ಸ್ಪರ್ಧಿಸಿ ಸೋತು ಸುಣ್ಣವಾದರು.
ಪದ್ಮನಾಭ ಕೊಟ್ಟಾರಿ: ಗ್ರಾಮ ಪಂಚಾಯ್ತಿಯಿಂದ ಹಿಡಿದು ಎಲ್ಲ ಸ್ಥಳಿಯಾಡಳಿತ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ಪದ್ಮನಾಭ ಕೊಟ್ಟಾರಿ 2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಅಲ್ಪಮತಗಳ ಅಂತರದಿಂದ ಗೆಲವು ಸಾಧಿಸಿದರು. ಬಳಿಕ ವಿಟ್ಲ ಕ್ಷೇತ್ರ ಮಾಯವಾದಾಗ ಅನಿವಾರ್ಯವಾಗಿ ಉಳ್ಳಾಲ (ಮಂಗಳೂರು) ಕ್ಷೇತ್ರದಿಂದ ಸ್ಪರ್ಧಿಸಬೇಕಾಯಿತು. ಕಾಂಗ್ರೆಸ್ ಬಿಗಿ ಹಿಡಿತದಲ್ಲಿದ್ದ ಉಳ್ಳಾಲಕ್ಕೆ ಕೊಟ್ಟಾರಿ ಹೊರಗಿನರು. ಹೀಗಾಗಿ ನಿರೀಕ್ಷೆಯಂತೆ ಅಲ್ಲಿ ಸೋಲುಂಡರು. ಈ ಬಾರಿ ಅವರು ಟಿಕೆಟ್ ಆಕಾಂಕ್ಷಿಯಲ್ಲ!
-ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

